Asianet Suvarna News Asianet Suvarna News

ಬಂದೂಕು ವಾಪಸ್‌ ಕೇಳಿದರೆ ಪರಿಗಣನೆ: ಸರ್ಕಾರ

ತಮ್ಮ ಬಂದೂಕು ಹಿಂದಿರುಗಿಸಲು ಅರ್ಜಿದಾರರು ಮನವಿ ಸಲ್ಲಿಸಿದರೆ, ಅದನ್ನು ಪರಿಗಣಿಸಿ ಎರಡು ದಿನಗಳಲ್ಲಿ ಸೂಕ್ತ ಆದೇಶ ಹೊರಡಿಸಬೇಕು ಎಂದು ಸರ್ಕಾರಕ್ಕೆ ಸೂಚಿಸಿದ ಹೈಕೋರ್ಟ್ 

Consideration of Request to Return the Gun to the Protection Says Government of Karnataka grg
Author
First Published Apr 11, 2024, 6:32 AM IST

ಬೆಂಗಳೂರು(ಏ.11):  ಕಾಡು ಪ್ರಾಣಿಗಳಿಂದ ರಕ್ಷಣೆಗೆ ಅಗತ್ಯವಿರುವ ಹಿನ್ನೆಲೆಯಲ್ಲಿ ಸರ್ಕಾರದ ಸುಪರ್ದಿಗೆ ನೀಡಿರುವ ಬಂದೂಕನ್ನು ಹಿಂದಿರುಗಿಸಲು ಪರವಾನಗಿದಾರರು ಮನವಿ ಸಲ್ಲಿಸಿದರೆ, ಅದನ್ನು ಪರಿಗಣಿಸಲಾಗುವುದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಭರವಸೆ ನೀಡಿದೆ.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪರವಾನಗಿ ಹೊಂದಿರುವ ಬಂದೂಕುಗಳನ್ನು ಸರ್ಕಾರಕ್ಕೆ ಸುಪರ್ದಿಗೆ ಒಪ್ಪಿಸಲು ಚುನಾವಣಾ ಆಯೋಗ (ಸ್ಥಳೀಯ ಜಿಲ್ಲಾಧಿಕಾರಿ) ಹೊರಡಿಸಿರುವ ಆದೇಶ ಪ್ರಶ್ನಿಸಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಐವರನಾಡು ಗ್ರಾಮದ ಕೃಷಿಕ ಕೆ.ವಿ.ಪ್ರಸಾದ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠಕ್ಕೆ ಸರ್ಕಾರದ ಪರ ಅಡ್ವೋಕೇಟ್‌ ಜನರಲ್‌ ಶಶಿಕಿರಣ್‌ ಶೆಟ್ಟಿ ಈ ಭರವಸೆ ನೀಡಿದ್ದಾರೆ.
ಈ ಹೇಳಿಕೆ ದಾಖಲಿಸಿಕೊಂಡ ಹೈಕೋರ್ಟ್, ತಮ್ಮ ಬಂದೂಕು ಹಿಂದಿರುಗಿಸಲು ಅರ್ಜಿದಾರರು ಮನವಿ ಸಲ್ಲಿಸಿದರೆ, ಅದನ್ನು ಪರಿಗಣಿಸಿ ಎರಡು ದಿನಗಳಲ್ಲಿ ಸೂಕ್ತ ಆದೇಶ ಹೊರಡಿಸಬೇಕು ಎಂದು ಸರ್ಕಾರಕ್ಕೆ ಸೂಚಿಸಿದೆ.

ಲೋಕಸಭೆ ಚುನಾವಣೆ 2024: ಗನ್‌ ಇಟ್ಕೊಂಡ ವ್ಯಕ್ತಿ ಸಿದ್ದರಾಮಯ್ಯಗೆ ಹಾರ ಹಾಕಿದ..!

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಪ್ರಾಣಿಗಳಿಂದ ಆತ್ಮರಕ್ಷಣೆಗೆ ಬಂದೂಕಿನ ಅಗತ್ಯವಿರುವುದರಿಂದ ಸರ್ಕಾರದ ವಶಕ್ಕೆ ನೀಡಿರುವ ಬಂದೂಕು ಹಿಂದಿರುಗಿಸಲು ಅರ್ಜಿದಾರರು ಮನವಿ ಸಲ್ಲಿಸಿದ್ದರು. ಅದನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ. ಆಯೋಗದ ಈ ಆದೇಶ ಶಸ್ತ್ರಾಸ್ತ್ರ ಕಾಯ್ದೆ-1959 ಮತ್ತು ಅದರ ನಿಯಮಗಳಿಗೆ ವಿರುದ್ಧವಾಗಿದೆ ಹಾಗೂ ಸಂವಿಧಾನ ಬಾಹಿರವಾಗಿದೆ. ಜತೆಗೆ, ಅರ್ಜಿದಾರರು ಯಾವುದೇ ಕ್ರಿಮಿನಲ್ ಪ್ರಕರಣ ಹೊಂದಿಲ್ಲ. ಆದ್ದರಿಂದ ಆಯೋಗದ ಆದೇಶ ರದ್ದುಪಡಿಸಬೇಕು ಎಂದು ಕೋರಿದರು.

ಅದಕ್ಕೆ ಉತ್ತರಿಸಿದ ಅಡ್ವೋಕೇಟ್‌ ಜನರಲ್‌ ಅವರು, ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗ ಹೊರಡಿಸಿರುವ ಮಾರ್ಗದರ್ಶಿ ಸೂತ್ರದ ಅನುಸಾರ ಪರವಾನಗಿ ಹೊಂದಿದ ಬಂದೂಕನ್ನು ಸರ್ಕಾರದ ಸುಪರ್ದಿಗೆ ನೀಡಲು ಜಿಲ್ಲಾಧಿಕಾರಿಗಳು ಹೊರಡಿಸಿದ್ದಾರೆ. ಕಾಡು ಪ್ರಾಣಿಗಳಿಂದ ಆತ್ಮ ರಕ್ಷಣೆಗೆ ಅಗತ್ಯದ್ದಲ್ಲಿ ಬಂದೂಕುಗಳನ್ನು ಹಿಂದಿರುಗಿಸುವಂತೆ ಕೋರಿ ಅಧಿಕೃತ ಪರವಾನಗಿದಾರರು ಮನವಿ ಸಲ್ಲಿಸಬಹುದು. ಅಂತಹ ಮನವಿಗಳ ಕಾನೂನು ಬದ್ಧತೆ ಪರಿಗಣಿಸಿ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಜರುಗಿಸಲಿದ್ದಾರೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

Follow Us:
Download App:
  • android
  • ios