ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ ಮೈತ್ರಿಗೆ ಗೆÜಲುವು ನಿಶ್ಚಿತ: ಖರ್ಗೆ| ಗೆಲ್ಲುವ ಸೂಕ್ತ ಅಭ್ಯರ್ಥಿ ಹುಡುಕಿ ಕಣಕ್ಕಿಳಿಸಿದ್ದೇವೆ| ಉಸ್ತುವಾರಿ ಮಲ್ಲಿಕಾರ್ಜುನ ಖರ್ಗೆ ವಿಶ್ವಾಸ

ಕಲಬುರಗಿ[ಅ.09]: 

ಮಹಾರಾಷ್ಟ್ರ ವಿಧಾನಸಭೆ ಚನಾವಣೆಯಲ್ಲಿ ಗೆಲ್ಲುವವರನ್ನ ಆಯ್ಕೆ ಮಾಡಿ ಕಣಕ್ಕಿಳಿಸಲಾಗಿದ್ದು, ಕಾಂಗ್ರೆಸ್‌ ಮೈತ್ರಿ ಕೂಟ ಗೆಲುವು ಸಾಧಿಸಲಿದೆ ಎಂದು ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಮಹಾರಾಷ್ಟ್ರ ಕಾಂಗ್ರೆಸ್‌ ಉಸ್ತುವಾರಿ ಡಾ.ಮಲ್ಲಿಕಾರ್ಜುನ್‌ ಖರ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲವು ಪಕ್ಷಗಳೊಂದಿಗೆ ಸೇರಿಕೊಂಡು ಚುನಾವಣೆ ಎದುರಿಸಲಾಗುತ್ತಿದೆ. ಅನೇಕ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ಚುನಾವಣೆ ಎದುರಿಸುತ್ತಿರುವುದರಿಂದ ಸೂಕ್ತ ಅಭ್ಯರ್ಥಿಗಳನ್ನು ಹುಡುಕಿ ಟಿಕೆಟ್‌ ನೀಡಲಾಗಿದೆ ಎಂದರು.

ಕೆಲವರಿಗೆ ನಾನೇ ಟಿಕೆಟ್‌ ತಪ್ಪಿಸಿದೆ ಅನ್ನೋ ಶಂಕೆ ಕಾಡುತ್ತಿದೆ ಎಂದು ಭಿನ್ನ ಹೇಳಿಕೆ ನೀಡುತ್ತಿರುವ ಕೆಲವರ ವಿರುದ್ಧ ಡಾ. ಖರ್ಗೆ ಆಕ್ರೋಶ ಭರಿತರಾಗಿ ಮಾತನಾಡಿದರು. ಯಾರಿಗೆ ಟಿಕೆಟ್‌ ನೀಡಬೇಕು ಅನ್ನೋದನ್ನ ಏಕವ್ಯಕ್ತಿ ಕೈಗೊಳ್ಳುವ ನಿರ್ಧಾರವಂತೂ ಅಲ್ಲ, ಸಮಿತಿಯೇ ನಿರ್ಧರಿಸುತ್ತದೆ. ಯಾರೋ ಒಬ್ಬರು ಅಸಮಾಧಾನ ಹೊರಹಾಕಿದರು ಎಂದರೆ ಅದು ಎಲ್ಲರ ಅಸಮಾಧಾನ ಆಗಿರೋದಿಲ್ಲ. ಇಂತಹ ಆರೋಪಗಳ ಬಗ್ಗೆ ಪಕ್ಷದ ನಾಯಕರು ನೋಡಿಕೊಳ್ಳುತ್ತಾರೆಂದರು.

ಕೈ ಬಂಡಾಯದ ಅಭ್ಯರ್ಥಿ ತಮ್ಮ ವಿರುದ್ಧ ಮಾಡಿರುವ ಆರೋಪಗಳನ್ನು ಶುದ್ಧ ಸುಳ್ಳು ಎಂದು ಅಲ್ಲಗಳೆದ ಡಾ. ಖರ್ಗೆ ಒಬ್ಬ ವ್ಯಕ್ತಿಯ ಅಸಮಾಧಾನವೇ ಎಲ್ಲರ ಅಸಮಾಧಾನ ಅಲ್ಲವೇ ಅಲ್ಲ ಎಂದು ತಮ್ಮ ಮೇಲಿನ ಆರೋಪಗಳನ್ನು ಸಾರಾಸಾಗಟಾಗಿ ತಳ್ಳಿ ಹಾಕಿದರು.