ಬೆಂಗಳೂರು(ಸೆ.29): ಹಿಂದೆ ಕಾಂಗ್ರೆಸ್‌ ಪಕ್ಷವೇ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿತ್ತು ಎಂದು ಹರಿಹಾಯ್ದಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ರಿಯಲನ್ಸ್‌ನಂತಹ ದೊಡ್ಡ ದೊಡ್ಡ ಕಂಪನಿಗಳಿಗೆ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ಕೊಟ್ಟವರು ಯಾರು ಎಂಬುದನ್ನು ಕಾಂಗ್ರೆಸ್‌ ನಾಯಕರು ಹೇಳಬೇಕು ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಸೋಮವಾರ ತಮ್ಮ ಗೃಹ ಕಚೇರಿಯಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಅವರು, ನಾನು ಕೂಡ ಎಪಿಎಂಸಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದೇನೆ. ಏನು ನಡೆಯುತ್ತದೆ ಎಂಬುದು ಗೊತ್ತಿದೆ. ಕಾಂಗ್ರೆಸ್‌ ಸೇರಿದಂತೆ ಪ್ರತಿಪಕ್ಷಗಳ ನಾಯಕರಿಗೂ ಇದು ಗೊತ್ತಿದೆ. ಆದರೆ, ರಾಜಕೀಯ ದುರುದ್ದೇಶದಿಂದ ರೈತರನ್ನು ಪ್ರಚೋದಿಸುತ್ತಿದ್ದಾರೆ. ರೈತರಿಂದಲೇ ನಾನು ಮುಖ್ಯಮಂತ್ರಿ ಸ್ಥಾನದಲ್ಲಿ ಬಂದು ಕುಳಿತಿದ್ದೇನೆ. ರೈತ ಸಮುದಾಯಕ್ಕೆ ಯಾವುದೇ ಕಾರಣಕ್ಕೂ ಅನ್ಯಾಯವಾಗುವುದಕ್ಕೆ ಬಿಡುವುದಿಲ್ಲ. ಚಳವಳಿ ಬಳಿಕ ರೈತರು ಬರಲಿ, ಅವರೊಂದಿಗೆ ಕುಳಿತು ಚರ್ಚೆ ನಡೆಸಿ ರೈತರ ಅನುಕೂಲಕ್ಕೆ ಅಗತ್ಯ ಮಾರ್ಪಾಡು ಮಾಡಲು ಸಿದ್ಧನಿದ್ದೇನೆ ಎಂದು ಭರವಸೆ ನೀಡಿದರು.

ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಗುಡುಗಿದ ಸಿದ್ದರಾಮಯ್ಯ..!

ರಾಜ್ಯ ಪ್ರವಾಸ ಕೈಗೊಂಡು ಕಾಯ್ದೆಯಿಂದಾಗುವ ಅನುಕೂಲ ಮತ್ತು ಕಾಂಗ್ರೆಸ್‌ನ ದ್ವಿಮುಖ ನೀತಿ ಕುರಿತು ರೈತರಿಗೆ ಮನವರಿಕೆ ಮಾಡಿಕೊಡಲಾಗುವುದು. ಮುಂಬರುವ ಉಪಚುನಾವಣೆಯಲ್ಲಿ ಎಪಿಎಂಸಿ ಮತ್ತು ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ವಿಚಾರವನ್ನು ಮುಂದಿಟ್ಟುಕೊಂಡು ಪ್ರಚಾರ ಕೈಗೊಳ್ಳುತ್ತೇವೆ. ಅಖಾಡಕ್ಕೆ ಕಾಂಗ್ರೆಸ್‌ನವರೂ ಬರಲಿ ಎಂದು ಮತ್ತೊಮ್ಮೆ ಸವಾಲು ಎಸೆದರು.

ರೈತರಿಗಾಗಿ ಹಲವು ಯೋಜನೆಗಳನ್ನು ರೂಪಿಸಲಾಗುತ್ತಿದೆ. ರೈತರನ್ನು ಕರೆದು ಚರ್ಚೆ ನಡೆಸಲಾಗಿದೆ. ಆದರೆ, ಅವರು ಸತ್ಯಾಗ್ರಹ ಮಾಡಲು ನಿರ್ಧಾರ ಮಾಡಿದ್ದರು. ನನ್ನಿಂದ ರೈತ ಸಮುದಾಯಕ್ಕೆ ಅನ್ಯಾಯವಾಗಲ್ಲ. ಚಳವಳಿ ಮಾಡಲಿ. ನಂತರ ಬಂದು ಚರ್ಚೆಗೆ ಬರಲಿ. ರೈತರ ಅನುಕೂಲಕ್ಕೆ ಅಗತ್ಯ ಮಾರ್ಪಾಡು ಮಾಡಲು ಸಿದ್ಧನಿದ್ದೇನೆ. 25 ಲಕ್ಷ ರು.ಗಳಿಗಿಂತ ಕಡಿಮೆ ಆದಾಯ ಇಲ್ಲದ ಐದು ಜನರ ಕುಟುಂಬಕ್ಕೆ ಭೂಮಿ ಖರೀದಿಸುವ ಹಕ್ಕಿತ್ತು. ಈಗ ಆ ನಿಬಂಧನೆ ತೆಗೆದು ಹಾಕಿದ್ದೇವೆ ಎಂದು ಹೇಳಿದರು.

ಎಪಿಎಂಸಿ ತಿದ್ದುಪಡಿಯಿಂದ ರೈತರು ತಾವು ಬೆಳದæ ಬೆಳೆಯನ್ನು ಎಲ್ಲಿ ಬೇಕಾದಾರೂ ಮಾರಾಟ ಮಾಡಬಹುದು. ರಾಜ್ಯ ಮತ್ತು ದೇಶದ ಯಾವುದೇ ಮೂಲೆಗೆ ಹೋಗಿ ನೇರವಾಗಿ ಮಾರಾಟ ಮಾಡಬಹುದು. ಅದಕ್ಕೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಒಂದು ಕಾಲದಲ್ಲಿ ಮತ್ತೊಂದು ಜಿಲ್ಲೆಗೆ ಹೋಗಿ ಮಾರಾಟ ಮಾಡಿದರೆ ಪ್ರಕರಣ ದಾಖಲಿಸಲಾಗುತ್ತಿತ್ತು. ಈ ಬಂಧನದಿಂದ ಬಿಡುಗಡೆ ಮಾಡಿ, ರೈತ ಎಲ್ಲಿ ಬೇಕಾದರೂ ಮಾರಾಟ ಮಾಡುವ ಅವಕಾಶ ಮಾಡಿಕೊಡಲಾಗಿದೆ. ಎಪಿಎಂಸಿಗಳನ್ನು ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ. ರೈತರನ್ನು ದಲ್ಲಾಳಿಗಳಿಂದ ತಪ್ಪಿಸಲು ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಮುಂದಿನ 6 ತಿಂಗಳು ಅಥವಾ 1 ವರ್ಷಗಳ ಕಾಲ ನೋಡಿ ಹೇಗೆ ಉಪಯೋಗವಾಗುತ್ತದೆ ಎಂಬುದನ್ನು ಗಮನಿಸಬೇಕು. ಎಷ್ಟುಉಪಯೋಗವಾಗಲಿದೆ ಎಂಬುದು ಗೊತ್ತಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.

ಕರ್ನಾಟಕ ಬಂದ್ ಯಶಸ್ವಿ: ರೈತ ವಿರೋಧಿ ನೀತಿಗಳಿಗೆ ಧಿಕ್ಕಾರ ಕೂಗಿದ ಕೃಷಿ ತಪಸ್ವಿ

ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯೂ ಸಹ ರೈತರ ಪರವಾಗಿದೆ. ರಾಜ್ಯದಲ್ಲಿ 18-20 ಲಕ್ಷ ಎಕರೆ ಕೃಷಿ ಜಮೀನು ಸಾಗುವಳಿಯಾಗದೆ ಪಾಳು ಬೀಳುತ್ತಿದೆ. ಸರ್ಕಾರ ತಂದಿರುವ ತಿದ್ದುಪಡಿಯಿಂದ ಯಾರು ಬೇಕಾದರೂ ಜಮೀನು ಖರೀದಿಸಲು ಅವಕಾಶ ಒದಗಿಸಲಿದೆ. ಇದರಿಂದಾಗಿ ಕೃಷಿ ಹೆಚ್ಚಾಗಲಿದೆ. ಕೃಷಿಗೆ ಉಪಯೋಗ ಇಲ್ಲದ ಭೂಮಿಯಲ್ಲಿ ಕೈಗಾರಿಕೆಗಳನ್ನು ಮಾಡುವರಿಂದ ಸಾವಿರಾರು ಜನರಿಗೆ ಉದ್ಯೋಗ ಸಿಗಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ನೀರಾವರಿ ಭೂಮಿಯನ್ನು ಯಾರಾದರೂ ಖರೀದಿಸಿದರೆ ಕೃಷಿಗೇ ಉಪಯೋಗಿಸಬೇಕು. ಎಸ್‌ಸಿ/ಎಸ್‌ಟಿ ಜಮೀನು ಖರೀದಿ ಮಾಡಲು ಯಾರಿಗೂ ಅಧಿಕಾರ ಇಲ್ಲ. ಸಣ್ಣ ಮತ್ತು ಅತಿ ಸಣ್ಣ ರೈತರ ಜಮೀನು ಖರೀದಿಗೂ ಅವಕಾಶ ಇಲ್ಲ. ರೈತರಲ್ಲಿ ಅನಗತ್ಯವಾಗಿ ಗೊಂದಲವನ್ನುಂಟು ಮಾಡಲಾಗುತ್ತಿದೆ ಎಂದು ಯಡಿಯೂರಪ್ಪ ತಿಳಿಸಿದರು.