ಕೇಂದ್ರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ರಾಜಕೀಯ ಸ್ಟಂಟ್: ಬಿಜೆಪಿ
ತೆರಿಗೆ ಹಂಚಿಕೆ ಹಾಗೂ ಅನುದಾನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿರುವ ರಾಜ್ಯ ಬಿಜೆಪಿ ನಾಯಕರು, ಸಿದ್ದರಾಮಯ್ಯ ಲೋಕಸಭೆ ಚುನಾವಣೆ ನಂತರ ಗ್ಯಾರಂಟಿ ಯೋಜನೆಗಳನ್ನು ಕೈಬಿಡಲು ಈಗಿನಿಂದಲೇ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ದೆಹಲಿಯಲ್ಲಿ ಪ್ರತಿಭಟನೆ ನಡೆಸುವುದು ಕೇವಲ ರಾಜಕೀಯ ಸ್ಟಂಟ್ ಎಂದು ಹೇಳಿದ್ದಾರೆ.
ಬೆಂಗಳೂರು (ಫೆ.6) : ತೆರಿಗೆ ಹಂಚಿಕೆ ಹಾಗೂ ಅನುದಾನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿರುವ ರಾಜ್ಯ ಬಿಜೆಪಿ ನಾಯಕರು, ಸಿದ್ದರಾಮಯ್ಯ ಲೋಕಸಭೆ ಚುನಾವಣೆ ನಂತರ ಗ್ಯಾರಂಟಿ ಯೋಜನೆಗಳನ್ನು ಕೈಬಿಡಲು ಈಗಿನಿಂದಲೇ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ದೆಹಲಿಯಲ್ಲಿ ಪ್ರತಿಭಟನೆ ನಡೆಸುವುದು ಕೇವಲ ರಾಜಕೀಯ ಸ್ಟಂಟ್ ಎಂದು ಹೇಳಿದ್ದಾರೆ.
ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಪ್ರತ್ಯೇಕವಾಗಿ ಈ ಕುರಿತು ಹೇಳಿಕೆ ನೀಡಿದ್ದಾರೆ.ಲೋಕಸಭೆ ಚುನಾವಣೆಯ ನಂತರ ಗ್ಯಾರಂಟಿ ಯೋಜನೆಗಳನ್ನು ಕೈಬಿಡುವ ಸ್ಪಷ್ಟವಾದ ವಿಚಾರವನ್ನು ಸಿದ್ದರಾಮಯ್ಯ ಹೊಂದಿದ್ದಾರೆ. ಅದಕ್ಕೆ ಪೂರಕವಾಗಿ ಇಂದು ಕೇಂದ್ರದ ಮೇಲೆ ಗೂಬೆ ಕೂರಿಸುವ ಮೂಲಕ ಅದಕ್ಕೆ ಒಂದು ತಳಹದಿಯನ್ನು ಹಾಕಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಿಡಿಕಾರಿದ್ದಾರೆ.ಅನುತ್ಪಾದಕ ಗ್ಯಾರಂಟಿಗಳಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಸಿದ್ದರಾಮಯ್ಯ ಅವರ ಕೈಮೀರಿ ಹೋಗಿದೆ. ಸರ್ಕಾರ ಎಲ್ಲ ರಂಗಗಳಲ್ಲಿ ವಿಫಲವಾಗಿದೆ. ಗ್ಯಾರಂಟಿ ಯೋಜನೆಗಳು ಲೋಕಸಭೆ ಚುನಾವಣೆಯಲ್ಲಿ ಕೈಹಿಡಿಯುವುದಿಲ್ಲ ಎಂಬ ಸತ್ಯದ ಅರಿವಾಗಿದೆ. ಪದೇ ಪದೇ ಸುಳ್ಳು ಹೇಳಿ ಸತ್ಯವನ್ನು ಮುಚ್ಚಿಡಬಹುದು ಎಂದುಕೊಂಡಿದ್ದಾರೆ. ಆದರೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಬಗ್ಗೆ ಸೂಕ್ತ ಉತ್ತರವನ್ನು ನೀಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬರಪರಿಹಾರಕ್ಕೆ ಶಬರಿಯಂತೆ ಕಾದರೂ ಪ್ರಯೋಜನವಾಗಿಲ್ಲ; ಕೇಂದ್ರದಿಂದ ಕರ್ನಾಟಕದ ಜನರ ಶೋಷಣೆ ಆಗ್ತಿದೆ: ಸಿಎಂ ಕಿಡಿ
ಹದಿನೈದನೇ ಹಣಕಾಸು ಆಯೋಗದ ವರದಿಯಲ್ಲಿ ರಾಜ್ಯ ಸರ್ಕಾರದ ಪಾಲು ಇಳಿಯಲು ನೇರವಾಗಿ ಸಿದ್ದರಾಮಯ್ಯ ಸರ್ಕಾರವೇ ಕಾರಣ. ಆಗ ವರದಿ ತಯಾರಿ ಮಾಡುವಾಗ ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಇತ್ತು. ರಾಜ್ಯದ ವಾಸ್ತವ ಆರ್ಥಿಕ ಸ್ಥಿತಿಯನ್ನು ಬಿಂಬಿಸಲು ವಿಫಲವಾಗಿ ಹಣಕಾಸಿನ ಆಯೋಗಕ್ಕೆ ಮನವರಿಕೆ ಮಾಡಿಕೊಡಲು ಸೋತಿದ್ದರಿಂದ ರಾಜ್ಯಕ್ಕೆ ಹಿನ್ನಡೆಯಾಗಿದೆ. 15 ನೇ ಹಣಕಾಸು ಆಯೋಗದಲ್ಲಿ ಕಳೆದ ಮೂರು ವರ್ಷಗಳಲ್ಲಿ ರಾಜ್ಯಕ್ಕೆ ಈಗಾಗಲೇ 13985 ಕೋಟಿ ರು. ಬಿಡುಗಡೆಯಾಗಿರುತ್ತದೆ. ಈ ವರ್ಷ ಇನ್ನೂ ಸುಮಾರು 3500 ಕೋಟಿ ರು. ಅನುದಾನ ರಾಜ್ಯ ಸರ್ಕಾರಕ್ಕೆ ಬರಲಿದೆ. ಇಷ್ಟೆಲ್ಲ ಮಾಹಿತಿಗಳನ್ನು ಮುಚ್ಚಿಟ್ಟು ಸಿದ್ದರಾಮಯ್ಯ ಅವರು ಅರ್ಧ ಸತ್ಯವನ್ನು ಮಾತ್ರ ಹೇಳಿದ್ದಾರೆ ಎಂದು ಯಡಿಯೂರಪ್ಪ ವಿವರಿಸಿದ್ದಾರೆ.
ಪ್ರತಿಭಟನೆ ರಾಜಕೀಯ ಸ್ಟಂಟ್:
ಇದೇ ವೇಳೆ ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಸರ್ಕಾರ ತನ್ನ ತಪ್ಪು ಮುಚ್ಚಿಕೊಳ್ಳಲು ದೆಹಲಿಯಲ್ಲಿ ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟನೆ ಮಾಡುವ ರಾಜಕೀಯ ಸ್ಟಂಟ್ ಮಾಡುತ್ತಿದೆ. ಅವರು ತಮ್ಮ ಹಳೆ ಚಾಳಿ ಬಿಟ್ಟಿಲ್ಲ ಎಂದು ಕಿಡಿಕಾರಿದ್ದಾರೆ.
ರಾಯಚೂರಿಗೆ ಏಮ್ಸ್ ಮಂಜೂರು ಮಾಡಲು ಕೇಂದ್ರ ಸಚಿವೆ ಸೀತಾರಾಮನ್‌ಗೆ ಪತ್ರ ಬರೆದ ಸಿಎಂ
ರಾಜಸ್ವ ಸ್ವೀಕೃತಿ ಕುಸಿತ:
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ರಾಜಸ್ವ ಸ್ವೀಕೃತಿ ಗುರಿ (ರೆವಿನ್ಯೂ ರಿಸೀಟ್) 2.38 ಲಕ್ಷ ಕೋಟಿ ಇದ್ದು, ಡಿಸೆಂಬರ್ ಅಂತ್ಯಕ್ಕೆ 1.61 ಲಕ್ಷ ಕೋಟಿ ರಾಜಸ್ವ ಮಾತ್ರ ಸ್ವೀಕಾರ ಆಗಿದೆ. ಕೇವಲ ಶೇ.67 ಮಾತ್ರ ಇವರ ಸಾಧನೆ. ನಮ್ಮ ಸರ್ಕಾರ ಇದ್ದಾಗ ಡಿಸೆಂಬರ್ ವೇಳೆಗೆ ಶೇ.82 ಗುರಿ ಸಾಧಿಸಿದ್ದೆವು. ಸಿದ್ದರಾಮಯ್ಯ ಅವರಿಗೆ ಗುರಿ ಸಾಧಿಸಲು ಸಾಧ್ಯವಾಗಿಲ್ಲ. ಶೇ.82ರಿಂದ ಶೇ. 67ಕ್ಕೆ ಇಳಿದಿದ್ದಕ್ಕೆ ಪ್ರಧಾನಿ ಮೋದಿ ಅವರ ಮೇಲೆ ಆರೋಪ ಮಾಡುವುದನ್ನು ಬಿಟ್ಟು, ಯಾಕಾಗಿ ಗುರಿ ಮುಟ್ಟಲು ಸಾಧ್ಯವಾಗಿಲ್ಲ ಎನ್ನುವುದನ್ನು ಜನರಿಗೆ ಉತ್ತರಿಸಿ ಎಂದು ಹೇಳಿದರು.