Asianet Suvarna News Asianet Suvarna News

ಕೊಡಗು ಕಾಳಗ ಸದ್ಯಕ್ಕೆ ರದ್ದು: ನಿಷೇಧಾಜ್ಞೆ ಜಾರಿ ಮಾಡಿರುವುದರಿಂದ ಪ್ರತಿಭಟನೆ ಮಾಡಲ್ಲ

ಬಿಜೆಪಿ ಸರ್ಕಾರದ ಮೇಲೆ ನಿಷ್ಕ್ರಿಯತೆ, ಭದ್ರತಾ ವೈಫಲ್ಯದ ಆರೋಪ ಹೊರಿಸಿ ಹಾಗೂ ಹಾಗೂ ಬಿಜೆಪಿ ಶಾಸಕರು ಭ್ರಷ್ಟಾಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ, ಮಡಿಕೇರಿಯಲ್ಲಿ ಆಗಸ್ವ್‌ 26ರಂದು ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಯನ್ನು ಕಾಂಗ್ರೆಸ್‌ ಪಕ್ಷ ಮುಂದೂಡಿದೆ. 

congress postpones protest in kodagu as section 144 imposed gvd
Author
Bangalore, First Published Aug 24, 2022, 7:16 AM IST

ಬೆಂಗಳೂರು (ಆ.24): ಬಿಜೆಪಿ ಸರ್ಕಾರದ ಮೇಲೆ ನಿಷ್ಕ್ರಿಯತೆ, ಭದ್ರತಾ ವೈಫಲ್ಯದ ಆರೋಪ ಹೊರಿಸಿ ಹಾಗೂ ಹಾಗೂ ಬಿಜೆಪಿ ಶಾಸಕರು ಭ್ರಷ್ಟಾಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ, ಮಡಿಕೇರಿಯಲ್ಲಿ ಆಗಸ್ವ್‌ 26ರಂದು ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಯನ್ನು ಕಾಂಗ್ರೆಸ್‌ ಪಕ್ಷ ಮುಂದೂಡಿದೆ. ‘ಮಡಿಕೇರಿ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಪ್ರತಿಭಟನೆ ಮುಂದೂಡಲಾಗಿದೆ’ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಆದರೆ, ಪ್ರತಿಭಟನೆ ಬದಲಿಗೆ ಗಣೇಶ ಹಬ್ಬದ ಬಳಿಕ ಮಡಿಕೇರಿಯಲ್ಲಿ ಬೃಹತ್‌ ಸಾರ್ವಜನಿಕ ಸಭೆ ನಡೆಸಲು ಪಕ್ಷ ನಿರ್ಧರಿಸಿದೆ. ತನ್ಮೂಲಕ ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿದ್ದಾಗ ಕೊಡಗು ಜಿಲ್ಲೆಗೆ ನೀಡಿರುವ ಕೊಡುಗೆ ಹಾಗೂ ಮಳೆ ಪರಿಹಾರ ಕಾರ್ಯಕ್ರಮಗಳನ್ನು ಜನರಿಗೆ ಮುಟ್ಟಿಸುವುದು ಸೇರಿದಂತೆ ಬಿಜೆಪಿ ಸರ್ಕಾರದ ವೈಫಲ್ಯಗಳ ಬಗ್ಗೆ ಪ್ರಸ್ತಾಪ ಮಾಡುವುದು ಕಾಂಗ್ರೆಸ್‌ ಉದ್ದೇಶವಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಇತ್ತೀಚೆಗೆ ಸಿದ್ದರಾಮಯ್ಯ ಮಡಿಕೇರಿಗೆ ಹೋದಾಗ ಅವರ ಮೇಲೆ ಮೊಟ್ಟೆಎಸೆಯಲಾಗಿತ್ತು. ಇದು ಕಾಂಗ್ರೆಸ್ಸಿಗರಿಗೆ ಆಕ್ರೋಶ ತರಿಸಿತ್ತು. ಇದರ ಬೆನ್ನಲ್ಲೇ ಬಿಜೆಪಿ ಸರ್ಕಾರದ ವಿರುದ್ಧ ಮಡಿಕೇರಿಯಲ್ಲೇ ಪ್ರತಿಭಟನೆ ಮಾಡುವುದಾಗಿ ಪಕ್ಷ ಘೋಷಿಸಿತ್ತು.

26ರಂದು ಸಿದ್ದರಾಮಯ್ಯ ಕೊಡಗಿಗೆ ಬರಲಿ ನೋಡೋಣ: ಬೋಪಯ್ಯ

ಕಾನೂನು ಉಲ್ಲಂಘಿಸಲ್ಲ- ಸಿದ್ದು: ಬೆಂಗಳೂರಲ್ಲಿ ಮಂಗಳವಾರ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ವಿರೋಧ ಪಕ್ಷದ ನಾಯಕನಾಗಿ, ಮಾಜಿ ಮುಖ್ಯಮಂತ್ರಿಯಾಗಿ ನಾನು ಕಾನೂನನ್ನು ಉಲ್ಲಂಘಿಸುವ ತಪ್ಪು ಮಾಡಲ್ಲ. ನಮ್ಮ ಪಕ್ಷ ಕಾನೂನು ಮೀರುವುದನ್ನು ಬಯಸುವುದಿಲ್ಲ. ಇದು ಪಕ್ಷದ ಕಾರ್ಯಕ್ರಮ. ಪಕ್ಷದ ಮುಖಂಡರೊಂದಿಗೆ ಚರ್ಚೆ ಮಾಡಿ ‘ಮಡಿಕೇರಿ ಚಲೋ’ ಮುಂದೂಡುವ ನಿರ್ಧಾರ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಮತ್ತೆ ಮುಖಂಡರೊಂದಿಗೆ ಚರ್ಚಿಸಿ ಪ್ರತಿಭಟನೆ ಮಾಡುವ ಬಗ್ಗೆ ತೀರ್ಮಾನ ಮಾಡುತ್ತೇನೆ’ ಎಂದು ತಿಳಿಸಿದರು.

‘ನಾವು ಪ್ರತಿಭಟನೆ ಘೋಷಿಸಿದ ಮರುದಿನವೇ ಬಿಜೆಪಿಯವರು ದ್ವೇಷ ರಾಜಕಾರಣಕ್ಕಾಗಿ ತಾವೂ ಒಂದು ಜಾಗೃತಿ ಸಮಾವೇಶ ಮಾಡುತ್ತೇವೆ ಎಂದು ಘೋಷಿಸಿದರು. ಪ್ರತಿಭಟನೆ ನಮ್ಮ ಸಂವಿಧಾನಾತ್ಮಕ ಹಕ್ಕು. ಆದರೆ ಸರ್ಕಾರ ಅದಕ್ಕೂ ಅವಕಾಶ ನೀಡುತ್ತಿಲ್ಲ. ಡಿಸಿ ಮತ್ತು ಎಸ್‌ಪಿ ಅವರು ಕೊಡಗಿನಲ್ಲಿ ನಾವು ಪ್ರತಿಭಟನೆಗೆ ಅನುಮತಿ ನೀಡುವುದಿಲ್ಲ ಎಂದು 144 ಸೆಕ್ಷನ್‌ ಹಾಕಿದ್ದಾರೆ. ಇದನ್ನು ಮೀರಿಯೂ ನಾವು ಪ್ರತಿಭಟನೆ ಮಾಡಬಹುದು. ಆದರೆ, ಪ್ರತಿಪಕ್ಷದ ನಾಯಕನಾಗಿ, ಮಾಜಿ ಮುಖ್ಯಮಂತ್ರಿಯಾಗಿ ನಾನು ಕಾನೂನನ್ನು ಉಲ್ಲಂಘಿಸುವ ತಪ್ಪು ಮಾಡಲ್ಲ. ಹಾಗಾಗಿ ಪಕ್ಷದ ಮುಖಂಡರನ್ನು ಕರೆದು ಚರ್ಚಿಸಿ ಮಡಿಕೇರಿ ಚಲೊ ಮುಂದೂಡುವ ನಿರ್ಧಾರ ಕೈಗೊಂಡಿದ್ದೇವೆ’ ಎಂದರು.

ಚಲೋ ಬೇಡ-ಕೆಪಿಸಿಸಿಯಿಂದಲೇ ಕಾಂಗ್ರೆಸ್‌ ಹೈಕಮಾಂಡ್‌ಗೆ ಪತ್ರ: ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆ ಹತ್ತಿರವಾಗುತ್ತಿರುವ ಈ ಸಂದರ್ಭದಲ್ಲಿ ಕೊಡಗು ಚಲೋದಂತಹ ಪ್ರತಿಭಟನೆಗಿಂತ ‘ಬೃಹತ್‌ ಸಾರ್ವಜನಿಕ ಸಭೆ’ ನಡೆಸುವುದು ಸೂಕ್ತ. ಹಾಗಾಗಿ ಪ್ರತಿಭಟನೆ ಕೈಬಿಡುವಂತೆ ಸಿದ್ದರಾಮಯ್ಯ ಅವರ ಮನವೊಲಿಸಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್‌.ಎ.ಹುಸೇನ್‌ ಹೈಕಮಾಂಡ್‌ ನಾಯಕರಿಗೆ ಪತ್ರ ಬರೆದಿದ್ದರು. 

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಪಕ್ಷದ ಪ್ರಮುಖ ಕೇಂದ್ರ ನಾಯಕರ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೂ ಪತ್ರ ಬರೆದಿದ್ದ ಹುಸೇನ್‌, ಕೊಡಗಿನ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ್ದಾಗ ಸಿದ್ದರಾಮಯ್ಯ ವಿರುದ್ಧ ನಡೆದ ಪ್ರತಿಭಟನೆ ಹಾಗೂ ಅವರ ಕಾರಿನ ಮೇಲೆ ಮೊಟ್ಟೆಎಸೆತ ಘಟನೆಯನ್ನು ಖಂಡಿಸುತ್ತೇನೆ. ಆದರೆ, ಈ ಸಂದರ್ಭದಲ್ಲಿ ಈ ಘಟನೆಗೆ ಪ್ರತಿಯಾಗಿ ಮಡಿಕೇರಿ ಚಲೋದಂತಹ ಪ್ರತಿಭಟನೆ ನಡೆಸುವುದು ಸೂಕ್ತವಲ್ಲ ಎಂದು ಹೇಳಿದ್ದರು.

ಬಿಜೆಪಿ ರ್ಯಾಲಿಯೂ ರದ್ದಾಗುವ ಸಾಧ್ಯತೆ: ಜಿಲ್ಲಾ ಬಿಜೆಪಿಯಿಂದ ಆ.26ರಂದು ಜನಜಾಗೃತಿ ಸಮಾವೇಶಕ್ಕೆ ಬಹುತೇಕ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ಜಿಲ್ಲೆಯಲ್ಲಿ ಸೆಕ್ಷನ್‌ 144 ಜಾರಿಯಲ್ಲಿರುವುದರಿಂದ ಸಮಾವೇಶ ಬಹುತೇಕ ರದ್ದಾಗುವ ಸಾಧ್ಯತೆ ಇದೆ ಎಂದು ಮಡಿಕೇರಿ ಬಿಜೆಪಿ ನಗರಾಧ್ಯಕ್ಷ ಮನು ಮಂಜುನಾಥ್‌ ತಿಳಿಸಿದ್ದಾರೆ.

ಗುಪ್ತಚರ ಇಲಾಖೆ ಐಸಿಯುನಲ್ಲಿದೆ, ಸರ್ಕಾರ ಸತ್ತಿದೆ: ಕಾಂಗ್ರೆಸ್‌ ಕಿಡಿ

ಬೋಪಯ್ಯಗೆ ಸವಾಲು
26ರಂದು ಪ್ರತಿಭಟನೆ ನಡೆಸುವುದಾಗಿ ನಾನು ಘೋಷಿಸಿದ ಬಳಿಕ ಸ್ಥಳೀಯ ಶಾಸಕ ಬೋಪಯ್ಯ ಅವರು ನನಗೆ ‘ಕೊಡಗಿಗೆ ಬರಲಿ ನೋಡ್ಕೋತೀವಿ’ ಎಂದು ಸವಾಲು ಹಾಕಿದರು. ಇದೇ ರೀತಿ ಈ ಹಿಂದೆ ರೆಡ್ಡಿ ಸಹೋದರರು ಸವಾಲು ಹಾಕಿದ್ದಕ್ಕೆ ಪ್ರತಿಯಾಗಿ ಅಕ್ರಮ ಗಣಿಗಾರಿಕೆ, ರೆಡ್ಡಿ ಸಹೋದರರ ಸರ್ವಾಧಿಕಾರದ ವಿರುದ್ಧ ಬಳ್ಳಾರಿಗೆ ಪಾದಯಾತ್ರೆ ಮಾಡಿದವನು ನಾನು. ಎಚ್ಚರಿಕೆ ಇರಲಿ.
-ಸಿದ್ದರಾಮಯ್ಯ, ವಿಧಾನಸಭೆ ಪ್ರತಿಪಕ್ಷ ನಾಯಕ

Follow Us:
Download App:
  • android
  • ios