Asianet Suvarna News Asianet Suvarna News

ಗುಪ್ತಚರ ಇಲಾಖೆ ಐಸಿಯುನಲ್ಲಿದೆ, ಸರ್ಕಾರ ಸತ್ತಿದೆ: ಕಾಂಗ್ರೆಸ್‌ ಕಿಡಿ

ಗೃಹ ಸಚಿವ ಆರಗ ಜ್ಞಾನೇಂದ್ರ ಹೊತ್ತಿರುವ ಜವಾಬ್ದಾರಿ ಕಾನೂನು-ಸುವ್ಯವಸ್ಥೆ ಕಾಪಾಡುವುದೋ ಅಥವಾ ಗೂಂಡಾ ಪಡೆ ಪೋಷಣೆ ಮಾಡುವುದೋ? ರಾಜ್ಯ ಬಿಜೆಪಿಯ ಗೂಂಡಾ ಪಡೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮೇಲೆ ಎರಡೆರಡು ಬಾರಿ ಮೊಟ್ಟೆ ಎಸೆಯಲು ಪೊಲೀಸರು ಅವಕಾಶ ಕೊಡುತ್ತಾರೆ ಎಂದರೆ ಇದು ಸರ್ಕಾರಿ ಪ್ರಾಯೋಜಿತ ದಾಳಿಯಲ್ಲವೇ?

congress slams to bjp government over egg pelting on siddaramaiah gvd
Author
Bangalore, First Published Aug 20, 2022, 3:15 AM IST

ಬೆಂಗಳೂರು (ಆ.20): ಗೃಹ ಸಚಿವ ಆರಗ ಜ್ಞಾನೇಂದ್ರ ಹೊತ್ತಿರುವ ಜವಾಬ್ದಾರಿ ಕಾನೂನು-ಸುವ್ಯವಸ್ಥೆ ಕಾಪಾಡುವುದೋ ಅಥವಾ ಗೂಂಡಾ ಪಡೆ ಪೋಷಣೆ ಮಾಡುವುದೋ? ರಾಜ್ಯ ಬಿಜೆಪಿಯ ಗೂಂಡಾ ಪಡೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮೇಲೆ ಎರಡೆರಡು ಬಾರಿ ಮೊಟ್ಟೆ ಎಸೆಯಲು ಪೊಲೀಸರು ಅವಕಾಶ ಕೊಡುತ್ತಾರೆ ಎಂದರೆ ಇದು ಸರ್ಕಾರಿ ಪ್ರಾಯೋಜಿತ ದಾಳಿಯಲ್ಲವೇ? ಗುಪ್ತಚರ ಇಲಾಖೆ ಐಸಿಯುನಲ್ಲಿದೆ, ಸರ್ಕಾರ ಸತ್ತಿದೆ ಎಂದರ್ಥವಲ್ಲವೇ ಎಂದು ರಾಜ್ಯ ಕಾಂಗ್ರೆಸ್‌ ಕಿಡಿಕಾರಿದೆ. 

ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ಸಿದ್ದರಾಮಯ್ಯ ಅವರ ರಕ್ಷಣೆ ಸರ್ಕಾರದ ಮುಖ್ಯ ಜವಾಬ್ದಾರಿಗಳಲ್ಲಿ ಒಂದು. ಅತಿವೃಷ್ಟಿಹಾನಿ ವೀಕ್ಷಣೆಗೆ ತೆರಳಿದ್ದ ವಿಪಕ್ಷ ನಾಯಕರಿಗೆ ರಕ್ಷಣೆ ಇಲ್ಲ ಎಂದಾದರೆ ಜನಸಾಮಾನ್ಯರ ರಕ್ಷಣೆ ಈ ಸರ್ಕಾರದಿಂದ ಸಾಧ್ಯವೇ? ಗೃಹಸಚಿವರು ಇನ್ನೂ ಹುದ್ದೆಯಲ್ಲಿರಲು ಅರ್ಹರೇ? ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಪ್ರಶ್ನಿಸಿದೆ.

ಧರ್ಮ ಒಡೆಯಲು ಹೋಗಿ ತಪ್ಪು ಮಾಡಿದೆ, ರಂಭಾಪುರಿ ಶ್ರೀ ಎದುರು ಸಿದ್ಧು ಪಶ್ಚಾತ್ತಾಪದ ಮಾತು!

ಪ್ರಾಣ ಹಾನಿ ಪ್ರಯತ್ನ: ಸಿದ್ದರಾಮಯ್ಯ ಅವರ ಮೇಲೆ ದಾಳಿ ಮಾಡಿದ್ದ ಬಂಧಿತ ಗೂಂಡಾಗಳನ್ನು ರಾತ್ರೋರಾತ್ರಿ ಶಾಸಕ ಅಪ್ಪಚ್ಚು ರಂಜನ್‌ ಬಿಡಿಸಿಕೊಂಡು ಬಂದಿದ್ದಾರೆ. ದಾಳಿಕೋರರ ಮೇಲೆ ಗಂಭೀರ ಪ್ರಕರಣ ದಾಖಲಿಸದಿರುವುದೇಕೆ? ಇದು ಸರ್ಕಾರಿ ಪ್ರಾಯೋಜಿತ ಕೃತ್ಯವಲ್ಲವೇ? ಇದು ಪ್ರತಿಪಕ್ಷ ನಾಯಕರ ಪ್ರಾಣ ಹಾನಿಯ ಪ್ರಯತ್ನ ಅಲ್ಲವೇ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ವಿರುದ್ಧ ಆರೋಪಿಸಿದೆ.

ಸಿದ್ದರಾಮಯ್ಯ ಅವರು ಸಾಗುವ ದಾರಿಯಲ್ಲಿ ಹಾಗೂ ಅವರು ಆಗಮಿಸುವ ಸ್ಥಳದಲ್ಲೇ ಬಿಜೆಪಿ ಗೂಂಡಾಗಳು ಜಮಾಯಿಸಿದ್ದರೂ, ಈ ಬಗ್ಗೆ ಮುನ್ಸೂಚನೆ ಇದ್ದರೂ ಪೊಲೀಸರು ಅವರನ್ನು ವಶಕ್ಕೆ ಪಡೆಯದೆ ಅವರ ರಕ್ಷಣೆಗೆ ನಿಂತಿದ್ದರು. ಗೂಂಡಾಗಳಿಗೆ ರಕ್ಷಣೆ ನೀಡುವುದು ಸರ್ಕಾರದ ನಿರ್ದೇಶನವಾಗಿತ್ತೇ? ಕರ್ತವ್ಯಲೋಪವೆಸಗಿದ ಕೊಡಗು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯನ್ನು ಕೂಡಲೇ ಅಮಾನತುಗೊಳಿಸಿ ಎಂದು ಒತ್ತಾಯಿಸಿದೆ.

ಮತ್ತಷ್ಟು ಪ್ರತಿಭಟನೆ ಎದುರಿಸಲು ರೆಡಿಯಾಗಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಮೊಟ್ಟೆ ಎಸೆದು ಪ್ರತಿಭಟನೆ ಮಾಡಿ ಎಂದು ಯಾರು ಹೇಳಿ ಕೊಟ್ಟಿಲ್ಲ. ಜನರ ಮನಸ್ಸಿನಲ್ಲಿರುವ ಭಾವನೆಗಳು ಸ್ಫೋಟಗೊಂಡಾಗ ಈ ರೀತಿ ಪ್ರತಿಭಟನೆ ಆಗುತ್ತದೆ ಎಂದು ಇಂಧನ ಸಚಿವ ಸುನೀಲ್ ಕುಮಾರ್ ಹೇಳಿದರು. ಅವರು ಶುಕ್ರವಾರ ಮಣಿಪಾಲದ ಕಂಟ್ರಿ ಇನ್ ಹೋಟೆಲಿನಲ್ಲಿ ಪತ್ರಕರ್ತ ಪ್ರಶ್ನೆಗೆ ಉತ್ತರಿಸಿದರು. ಸಿದ್ದರಾಮಯ್ಯ ಸಾವರ್ಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಾ ಬಂದಿದ್ದಾರೆ. 

ಸಾವರ್ಕರ್ ಅವಹೇಳನ ಸಹಿಸಿಕೊಳ್ಳಲು ಯುವ ಸಮುದಾಯ ಸಿದ್ಧವಿಲ್ಲ, ಸಿದ್ದರಾಮಯ್ಯಗೆ ಹಣೆ ಮೇಲೆ ಕುಂಕುಮ ಇಟ್ಟವರನ್ನು ಕಂಡರೆ ಆಗುವುದಿಲ್ಲ, ಸಾವರ್ಕರ್ ಫೋಟೋ ಕಂಡರೆ ಆಗಲ್ಲ, ತನ್ನ ನಡವಳಿಕೆ, ಹೇಳಿಕೆ, ಆಡಳಿತದಲ್ಲಿ ಪ್ರತ್ಯೇಕತೆಯ ಭಾವನೆ ತೋರಿಸುತ್ತಾರೆ ಇದನ್ನು ಕರ್ನಾಟಕದ ಜನ ಸಹಿಸುವುದಿಲ್ಲ, ಪ್ರತಿಭಟಿಸುತ್ತಿದ್ದಾರೆ ಎಂದರು. ಸಾವರ್ಕರ್ ಬಗ್ಗೆ ಹೇಳಿಕೆ ಕೊಡುವಾಗ ಪ್ರತಿಭಟನೆಯನ್ನು ಸಹಿಸುವ ಶಕ್ತಿಯೂ ಇರಬೇಕು, ಏನು ಬೇಕಾದರೂ ಹೇಳಿಕೆ ಕೊಟ್ಟು ಜೀರ್ಣ ಮಾಡಿಕೊಳ್ಳುತ್ತೇನೆ ಎನ್ನುವ ಕಾಲ ಹೊರಟು ಹೋಗಿದೆ. ಹೋರಾಟದ ಕಾರಣಕ್ಕೆ ಸಾವರ್ಕರ್ ಅವರನ್ನು ವೀರ ಸಾವರ್ಕರ್ ಎಂದು ಕರೆದಿದ್ದಾರೆ, 

ಟೈರ್‌ಗೆ ಬೆಂಕಿ ಹಚ್ಚಿ ಪುಂಡಾಟ ಮೆರೆದ ಕಾಂಗ್ರೆಸ್ ಕಾರ್ಯಕರ್ತರು; ಪೊಲೀಸರಿಗೂ ಡೋಂಟ್ ಕೇರ್!

ಸಾವರ್ಕರ್ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ ಅಂದರೆ ಇತಿಹಾಸದ ಬಗ್ಗೆ ಅರ್ಧಂಬದ ತಿಳಿದುಕೊಂಡಿದ್ದಾರೆ ಎಂದರ್ಥ, ಸಾವರ್ಕರ್ ಅಂತಸತ್ವ ತಿಳಿದಿರುವ ಯಾರು ಅವರನ್ನು ಟೀಕಿಸಲು ಸಾಧ್ಯವಿಲ್ಲ ಎಂದರು. ಸಿದ್ದರಾಮಯ್ಯನವರೇ ದಯಮಾಡಿ ಅಂಡಮಾನಿನ ಸೆಲ್ಯೂಲರ್ ಜೈಲು ನೋಡಿಕೊಂಡು ಬನ್ನಿ, ಸಮಾಜವಾದಿ ಎಂದು ಹೇಳಿಕೊಂಡು ಲಕ್ಷಾಂತರ ಜನರನ್ನು ಸೇರಿಸಿ ಹುಟ್ಟು ಹಬ್ಬ ಮಾಡುತ್ತೀರಿ. ಸಾವರ್ಕರ್ ಇದ್ದ ಜೈಲನ್ನು ನೋಡಿದರೆ ಕಣ್ಣಲ್ಲಿ ನೀರು ಬರುತ್ತದೆ, ಅವರು ನಡೆಸಿದ ಹೋರಾಟ ಮತ್ತು ಬ್ರಿಟಿಷರ ಕ್ರೂರತೆ ಯಾವ ರೀತಿ ಇತ್ತು ಅನ್ನೋದು ಗೊತ್ತಾಗುತ್ತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Follow Us:
Download App:
  • android
  • ios