ತಮ್ಮನ್ನು ‘ಕಾನ್ವೆಂಟ್‌ ದಲಿತ’ ಎಂದು ಟೀಕಿಸಿರುವ ಸಚಿವ ಸುನಿಲ್‌ ಕುಮಾರ್‌ ವಿರುದ್ಧ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದು, ‘ದಲಿತರು ಕಾನ್ವೆಂಟ್‌ನಲ್ಲಿ ಓದಬಾರದೆ? ದಲಿತರು ಇಂಗ್ಲೀಷ್‌ ಕಲಿಯಬಾರದೆ?

ಬೆಂಗಳೂರು (ಜೂ.07): ತಮ್ಮನ್ನು ‘ಕಾನ್ವೆಂಟ್‌ ದಲಿತ’ ಎಂದು ಟೀಕಿಸಿರುವ ಸಚಿವ ಸುನಿಲ್‌ ಕುಮಾರ್‌ ವಿರುದ್ಧ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದು, ‘ದಲಿತರು ಕಾನ್ವೆಂಟ್‌ನಲ್ಲಿ ಓದಬಾರದೆ? ದಲಿತರು ಇಂಗ್ಲೀಷ್‌ ಕಲಿಯಬಾರದೆ? ಬಿಜೆಪಿಯವರಿಗೆ ಮಲ ಹೊರುವ, ಕಾಲು ಒತ್ತುವ, ಚರಂಡಿ ಸ್ವಚ್ಛ ಮಾಡುವ ದಲಿತರೆಂದರೆ ಮಾತ್ರ ಪ್ರೀತಿಯೇ?’ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಇದೇ ವೇಳೆ, ‘ನನ್ನ ಸಾಮರ್ಥ್ಯದ ಬಗ್ಗೆ ಪ್ರಶ್ನೆ ಮಾಡುವ ನಿಮಗೆ ಸವಾಲು ಹಾಕುತ್ತೇನೆ. ಷಿಕಾಗೋದಿಂದ ಚಿತ್ತಾಪುರವರೆಗೆ ನೀವು ಯಾವುದೇ ವೇದಿಕೆ ಸಜ್ಜು ಮಾಡಿ, ಯಾವುದೇ ವಿಷಯ ಆಯ್ಕೆ ಮಾಡಿ ನಾನು ಆ ಬಗ್ಗೆ ಮಾತನಾಡುತ್ತೇನೆ. ಈ ಸವಾಲು ಸ್ವೀಕರಿಸಲು ನೀವು ಸಿದ್ಧರಿದ್ದೀರಾ? ಇಬ್ಬರ ಸಾಮರ್ಥ್ಯದ ಪರೀಕ್ಷೆ ಆಗಿಯೇ ಬಿಡಲಿ’ ಎಂದು ಸವಾಲು ಎಸೆದಿದ್ದಾರೆ.

Textbook Revision Row: ಚಕ್ರತೀರ್ಥ ಎದುರು ಸಿಎಂ ಬೊಮ್ಮಾಯಿ ಶರಣಾಗಿದ್ದೇಕೆ?: ಪ್ರಿಯಾಂಕ್‌ ಖರ್ಗೆ

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭಾನುವಾರ ಸುನಿಲ್‌ಕುಮಾರ್‌ ಅವರು ನನ್ನನ್ನು ಕಾನ್ವೆಂಟ್‌ ದಲಿತ ಎಂದು ವೈಯಕ್ತಿಕವಾಗಿ ಟೀಕಿಸಿದ್ದಾರೆ. ಇಂತಹ ಹೇಳಿಕೆಗಳನ್ನು ಸಚಿವರಿಗೆ ಬಿಜೆಪಿ ಐಟಿ ಸೆಲ್‌ನವರು ಹೇಳಿಕೊಡುತ್ತಾರೋ ಅಥವಾ ಅವರ ಪ್ರಬುದ್ಧತೆಯೇ ಈ ಮಟ್ಟಕ್ಕಿದೆಯೋ ಗೊತ್ತಿಲ್ಲ. ದಲಿತರು ಬೆಂಗಳೂರಿನಲ್ಲಿ ಹುಟ್ಟಬಾರದೆ? ಕಾನ್ವೆಂಟ್‌ನಲ್ಲಿ ಕಲಿಯಬಾರದೇ? ಹಾಗಂತ ನಿಯಮಗಳಿವೆಯೇ? ಎಂದು ಕಿಡಿ ಕಾರಿದರು.

ಇಷ್ಟಕ್ಕೂ ನಾನು ಓದಿರುವುದು ಕಾರ್ಕಳ ಸಮೀಪದಲ್ಲಿರುವ ಮಠದ ಪೂರ್ಣಪ್ರಜ್ಞ ಶಾಲೆಯಲ್ಲೇ ಹೊರತು ಕಾನ್ವೆಂಟ್‌ನಲ್ಲಿ ಅಲ್ಲ. ದಲಿತರು ಕಾನ್ವೆಂಟ್‌ನಲ್ಲಿ ಓದಬಾರದು, ಇಂಗ್ಲೀಷ್‌ ಮಾತನಾಡಬಾರದು ಎಂಬುದು ನಿಮಗೆ ಮಾತ್ರ ಸಮಸ್ಯೆಯೇ? ಅಥವಾ ಇಡೀ ಪಕ್ಷಕ್ಕೇ ಸಮಸ್ಯೆಯೇ? ಎಂದು ಪ್ರಶ್ನಿಸಿದರು.

ದಲಿತರು ಚತುರ್ವರ್ಣದಲ್ಲಿ ಹೇಳಿರುವಂತೆ ಇರಬೇಕು ಎನ್ನುವ ರೀತಿಯಲ್ಲಿ ಸುನಿಲ್‌ಕುಮಾರ್‌, ಪ್ರತಾಪ್‌ಸಿಂಹ ಮಾತನಾಡಿದ್ದಾರೆ. ಬಿಜೆಪಿಯ 2 ರು. ಟ್ರೋಲ್‌ ಬಾಡಿಗೆ ಭಾಷಣಕಾರರು, ನಿನ್ನೆ ಮೊನ್ನೆ ಸಂಸದರಾದವರು ನೆಹರು, ಮನಮೋಹನ್‌ಸಿಂಗ್‌, ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡುತ್ತಾರೆ. ನಾನು ನಿಮ್ಮ ಮುಖ್ಯಮಂತ್ರಿ ಆಡಳಿತ ವೈಫಲ್ಯಗಳ ಬಗ್ಗೆ ಮಾತನಾಡಬಾರದೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಎಂ ಯಾರು, ನಿಮಗಿಂತಲೂ ಚಕ್ರತೀರ್ಥ ದೊಡ್ಡೋರಾ? ಬೊಮ್ಮಾಯಿ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ

ನಿಮಗೆ ಆರ್‌ಎಸ್‌ಎಸ್‌, ಬಿಜೆಪಿ ವಿರುದ್ಧ ಮಾತನಾಡಲು ಗೊತ್ತಿಲ್ಲ. ನಾರಾಯಣಗುರುಗಳ ಸ್ತಬ್ಧಚಿತ್ರ ನಿರಾಕರಿಸಿದಾಗ ನೀವು ಸುಮ್ಮನಿದ್ದೀರಿ? ನಾರಾಯಣಗುರುಗಳ ಹೆಸರು ಹೇಳಿ ಅದೇ ಕೋಟಾದಲ್ಲಿ ಸಚಿವಗಿರಿ ಪಡೆದವರು ಅಲ್ಲವೇ? ನಾರಾಯಣಗುರುಗಳ ಪಠ್ಯ ಕೈ ಬಿಟ್ಟಿರುವಾಗ ಏಕೆ ಮಾತನಾಡುತ್ತಿಲ್ಲ. ಈ ವಿಚಾರದಲ್ಲಿ ಮಾತನಾಡಲು ಬಾಯಿಗೆ ಹೊಲಿಗೆ ಹಾಕಿಕೊಂಡಿದ್ದೀರಾ? ಎಂದು ಟೀಕಿಸಿದರು.