ರಾಮನಗರ: ವಿಜಯನಗರ ಕ್ಷೇತ್ರ ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಒಳಗಾಗಿರುವ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಅವರನ್ನು ಬಂಧಿಸಲು ತೆರಳಿದ್ದ ಬಿಡದಿ ಪೊಲೀಸರು ಬರಿಗೈಯಲ್ಲಿ ವಾಪಸ್ಸಾಗಿದ್ದಾರೆ. 

ಶಾಸಕ ಗಣೇಶ್ ಅವರನ್ನು ವಶಕ್ಕೆ ಪಡೆಯುವ ಸಲುವಾಗಿ ನಾಲ್ಕು ತನಿಖಾ ತಂಡಗಳನ್ನು ರಚನೆ ಮಾಡಲಾಗಿತ್ತು. 

ಕಳೆದ ಏಳು ದಿನಗಳಿಂದ ತನಿಖಾ ತಂಡಗಳು ಮುಂಬೈ, ಪುಣೆ, ಬೆಂಗಳೂರು ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಕಾರ್ಯಾಚರಣೆ ನಡೆಸಿತ್ತು. ಆದರೆ ತಲೆ ಮರೆಸಿಕೊಂಡಿರುವ ಶಾಸಕ ಗಣೇಶ್ ಬಗ್ಗೆ ಸುಳಿವು ಕೂಡ ಸಿಗದೆ ಪೊಲೀಸರು ಬರಿಗೈಯಲ್ಲಿ ವಾಪಸ್ ಬಂದಿದ್ದಾರೆ.