ಬೆಂಗ​ಳೂರು[ಜ.12]: ಬಹು ​ಭಾಷಾ ನಟ ಪ್ರಕಾಶ್‌ ರೈ ಅವರು ಬೆಂಗ​ಳೂರು ಕೇಂದ್ರ ಲೋಕ​ಸಭಾ ಕ್ಷೇತ್ರ​ದಿಂದ ಸ್ಪರ್ಧಿಸಲು ಸಜ್ಜಾ​ಗಿ​ದ್ದರೂ, ಅವ​ರಿಗೆ ಕಾಂಗ್ರೆ​ಸ್‌ನ ಬೆಂಬಲ ಈ ಕ್ಷೇತ್ರ​ದಲ್ಲಿ ದೊರೆ​ಯುವ ಯಾವುದೇ ಸಾಧ್ಯತೆಯಿಲ್ಲ.

ಏಕೆಂದರೆ, ಕಾಂಗ್ರೆ​ಸ್‌​ ಈ ಬಾರಿ ತಾನು ಗೆಲ್ಲುವ ಸಾಧ್ಯತೆ ಹೊಂದಿ​ರುವ ಕ್ಷೇತ್ರ​ಗ​ಳಲ್ಲಿ ಬೆಂಗ​ಳೂರು ಕೇಂದ್ರವೂ ಒಂದು ಎಂದು ಭಾವಿ​ಸಿದೆ. ಅಷ್ಟೇ ಅಲ್ಲ, ಬಿಜೆಪಿಯ ಪಿ.ಸಿ.ಮೋಹನ್‌ ಹಾಲಿ ಸಂಸದರಾಗಿರುವ ಈ ಕ್ಷೇತ್ರ​ದಲ್ಲಿ ಕಾಂಗ್ರೆ​ಸ್‌​ನಿಂದ ಸ್ಪರ್ಧಿ​ಸಲು ಘಟಾ​ನು​ಘ​ಟಿ​ಗಳು ಸಜ್ಜಾ​ಗಿ​ದ್ದಾ​ರೆ.

ಬೆಂಗ​ಳೂರು ಕೇಂದ್ರ ಕ್ಷೇತ್ರ​ದಲ್ಲಿ ಈ ಬಾರಿ ಕಾಂಗ್ರೆಸ್‌ ಟಿಕೆ​ಟ್‌ಗೆ ಭಾರಿ ಪೈಪೋಟಿಯಿದೆ. ಮಾಜಿ ಸಚಿವ ಹಾಗೂ ಹಾಲಿ ಶಾಸಕ ರೋಷನ್‌ ಬೇಗ್‌ ಅವರು ಈ ಕ್ಷೇತ್ರ​ದಿಂದ ಸ್ಪರ್ಧಿ​ಸಲು ತೀವ್ರ ಪೈಪೋಟಿ ನಡೆ​ಸಿ​ದ್ದರೆ, ಕಳೆದ ಬಾರಿಯ ಪರಾ​ಜಿತ ಅಭ್ಯರ್ಥಿ ಹಾಗೂ ಹಾಲಿ ವಿಧಾ​ನ​ಪ​ರಿ​ಷತ್‌ ಸದಸ್ಯ ರಿಜ್ವಾನ್‌ ಅರ್ಷದ್‌ ಕೂಡ ಭರ್ಜರಿ ಲಾಬಿ ನಡೆ​ಸಿ​ದ್ದಾರೆ. ಜತೆಗೆ, ಹೈಕ​ಮಾಂಡ್‌​ನಲ್ಲಿ ಪ್ರಭಾ​ವಿ​ಯಾ​ಗಿ​ರುವ ಬಿ.ಕೆ. ಹರಿ​ಪ್ರ​ಸಾದ್‌, ಸಲೀಂ ಅಹ್ಮದ್‌ ಅವರು ತೀವ್ರ ಕೂಡ ಲಾಬಿ​ಯಲ್ಲಿ ಹಿಂದೆ ಬಿದ್ದಿ​ಲ್ಲ.

ಇವ​ರೆ​ಲ್ಲರ ನಡುವೆ, ನೇರವಾಗಿ ಸೋನಿ​ಯಾ​ ಗಾಂಧಿ ಕುಟುಂಬ​ದೊಂದಿಗೆ ಸಂಪ​ರ್ಕ ಹೊಂದಿ​ರು​ವ ನಿವೃತ್ತ ಪೊಲೀಸ್‌ ಅಧಿ​ಕಾರಿ ಸಾಂಗ್ಲಿ​ಯಾನ ಅವರು ಇದೇ ಕ್ಷೇತ್ರ​ದಿಂದ ಟಿಕೆಟ್‌ ಬಯ​ಸಿ​ದ್ದಾರೆ. ಇಷ್ಟೊಂದು ಮಂದಿ ಪ್ರಭಾ​ವಿ​ಗಳು ಟಿಕೆ​ಟ್‌​ಗಾಗಿ ಪೈಪೋಟಿ ನಡೆ​ಸಿ​ರುವ ಈ ಕ್ಷೇತ್ರ​ವನ್ನು ಕಾಂಗ್ರೆಸ್‌ ಬೇರೆ ಯಾರಿಗೂ ಬಿಟ್ಟು​ಕೊ​ಡುವ ಸಾಧ್ಯ​ತೆಯೇ ಇಲ್ಲ ಎಂದು ಮೂಲ​ಗಳು ಹೇಳು​ತ್ತವೆ.

ಇಷ್ಟಕ್ಕೂ ಈ ಕ್ಷೇತ್ರ ಕಾಂಗ್ರೆ​ಸ್‌ ಗೆಲ್ಲುವ ನೆಚ್ಚಿನ ಕ್ಷೇತ್ರ​ಗಳ ಪೈಕಿಯೊಂದು. ಮುಸ್ಲಿ​ಮರು ಹಾಗೂ ಕ್ರೈಸ್ತರು ಹೆಚ್ಚಿನ ಸಂಖ್ಯೆ​ಯಲ್ಲಿ ಇರುವ ಈ ಲೋಕ​ಸಭಾ ಕ್ಷೇತ್ರದ ವ್ಯಾಪ್ತಿ​ಯಲ್ಲಿ ಬರುವ ಗಾಂಧಿ​ನ​ಗರ, ಶಿವಾ​ಜಿ​ನ​ಗರ, ಸರ್ವಜ್ಞ ನಗರ, ಚಾಮ​ರಾ​ಜ​ಪೇಟೆ ಹಾಗೂ ಶಾಂತಿ​ನ​ಗ​ರ ವಿಧಾ​ನ​ಸಭಾ ಕ್ಷೇತ್ರ​ಗಳಲ್ಲಿ ಕಾಂಗ್ರೆ​ಸ್‌ ಗೆದ್ದಿದೆ ಮತ್ತು ಗೆದ್ದಿರುವ ಈ ಐವ​ರಲ್ಲಿ ದಿನೇಶ್‌ ಗುಂಡೂ​ರಾವ್‌ ಕೆಪಿ​ಸಿಸಿ ಅಧ್ಯ​ಕ್ಷ​ರಾ​ಗಿ​ದ್ದರೆ, ಕೆ.ಜೆ. ಜಾಜ್‌ರ್‍ ಹಾಗೂ ಜಮೀರ್‌ ಅಹ್ಮದ್‌ ಸಚಿ​ವ​ರಾ​ಗಿ​ದ್ದಾರೆ. ಇನ್ನು ಶಾಂತಿ​ನ​ಗ​ರದ ಎನ್‌.ಎ. ಹ್ಯಾರಿಸ್‌ ಬಿಎಂಟಿಸಿ ಅಧ್ಯ​ಕ್ಷ​ರಾ​ಗಿ​ದ್ದಾರೆ. ಇಂತಹ ಪ್ರಭಾ​ವಿ​ಗ​ಳನ್ನು ಹೊಂದಿ​ರುವ ಕಾರ​ಣಕ್ಕೆ ಈ ಬಾರಿ ಕ್ಷೇತ್ರ​ದಲ್ಲಿ ಗೆಲ್ಲುವ ನಂಬಿಕೆ ಕಾಂಗ್ರೆ​ಸ್‌​ನ​ದ್ದು.

ಹೀಗಾ​ಗಿಯೇ ಘಟಾ​ನು​ಘ​ಟಿ​ಗಳು ಈ ಕ್ಷೇತ್ರ​ದಲ್ಲಿ ಸ್ಪರ್ಧಿ​ಸಲು ಪಕ್ಷದ ಟಿಕೆ​ಟ್‌​ಗಾಗಿ ತೀವ್ರ ಪೈಪೋಟಿ ನಡೆ​ಸಿ​ದ್ದಾರೆ. ಇಂತಹ ಪರಿ​ಸ್ಥಿ​ತಿ​ಯಿ​ರು​ವಾಗ ಸ್ವತಂತ್ರ ಅಭ್ಯ​ರ್ಥಿ​ಯಾಗಿ ಸ್ಪರ್ಧಿ​ಸಿ​ರುವ ಪ್ರಕಾಶ್‌ ರೈ ಅವ​ರಿಗೆ ಕಾಂಗ್ರೆಸ್‌ ಈ ಕ್ಷೇತ್ರ​ವನ್ನು ಬಿಟ್ಟು​ಕೊ​ಡುವ ಅಥವಾ ಪರೋ​ಕ್ಷ​ವಾಗಿ ಬೆಂಬಲ ನೀಡುವ ಯಾವುದೇ ಸಾಧ್ಯತೆ ಇಲ್ಲ ಎಂದು ಮೂಲ​ಗಳು ಹೇಳಿ​ವೆ.