ಲಸಿಕೆಯನ್ನು ಖಾಸಗಿ ಆಸ್ಪತ್ರೆಗಳ ಮೂಲಕ ದುಬಾರಿ ಬೆಲೆಗೆ ಮಾರಾಟ   ದಂಧೆಯಲ್ಲಿ ಆಡಳಿತ ಪಕ್ಷದ ಶಾಸಕರು ಹಾಗೂ ಸಂಸದರು ಭಾಗಿ ಆರೋಪ ತನಿಖೆ ಉಸ್ತುವಾರಿ ವಹಿಸುವಂತೆ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗೆ ಮನವಿ

 ಬೆಂಗಳೂರು (ಮೇ.30):  ಸರ್ಕಾರ ಖರೀದಿಸಿದ ಲಸಿಕೆಯನ್ನು ಖಾಸಗಿ ಆಸ್ಪತ್ರೆಗಳ ಮೂಲಕ ದುಬಾರಿ ಬೆಲೆಗೆ ಮಾರಾಟ ಮಾಡುವ ದಂಧೆಯಲ್ಲಿ ಆಡಳಿತ ಪಕ್ಷದ ಶಾಸಕರು ಹಾಗೂ ಸಂಸದರು ಭಾಗಿಯಾಗಿದ್ದಾರೆ ಎಂಬ ಗಂಭೀರ ಆರೋಪ ಮಾಡಿರುವ ರಾಜ್ಯ ಕಾಂಗ್ರೆಸ್‌ ನಾಯಕರು, ಈ ವಿಚಾರದ ಬಗ್ಗೆ ಮಧ್ಯಪ್ರವೇಶಿಸಿ ತನಿಖೆ ಉಸ್ತುವಾರಿ ವಹಿಸುವಂತೆ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅವರನ್ನು ಕೋರಿದ್ದಾರೆ.

ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರ ಲಸಿಕೆ ಅವ್ಯವಹಾರ ನಡೆಸುತ್ತಿದೆ ಎಂದು ತೀವ್ರವಾಗಿ ಕಿಡಿಕಾರಿದರು.

ಡಿ.ಕೆ. ಶಿವಕುಮಾರ್‌ ಮಾತನಾಡಿ, ಸರ್ಕಾರದಿಂದ ಖರೀದಿಸಿದ ಲಸಿಕೆಯನ್ನು ಖಾಸಗಿ ಆಸ್ಪತ್ರೆಗೆ ಕಳುಹಿಸಿ ಅದನ್ನು 900ರಿಂದ 1,200 ರು.ಗಳಿಗೆ ಮಾರಾಟ ಮಾಡಲಾಗುತ್ತಿದೆ. ಇದರಲ್ಲಿ ಆಡಳಿತ ಪಕ್ಷದ ಶಾಸಕರು, ಸಂಸದರೇ ಶಾಮೀಲಾಗಿದ್ದಾರೆ. ಈ ವಿಚಾರದಲ್ಲಿ ಹೈಕೋರ್ಟ್‌ ನ್ಯಾಯಮೂರ್ತಿಗಳು ಮಧ್ಯಪ್ರವೇಶಿಸಿ ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಜನಸಾಮಾನ್ಯರಿಗೆ ಕೋವಿಡ್  ಲಸಿಕೆ ಸಿಗುತ್ತಿಲ್ಲ. ಸರ್ಕಾರವು ಖಾಸಗಿ ಆಸ್ಪತ್ರೆಗಳೊಂದಿಗೆ ಶಾಮೀಲಾಗಿದ್ದು, ಖಾಸಗಿ ಆಸ್ಪತ್ರೆಗಳು ಜನರ ಸುಲಿಗೆ ಮಾಡಲು ಸಂಸದರೇ ರಾಯಭಾರ ವಹಿಸುತ್ತಿದ್ದಾರೆ. ಹೀಗಾಗಿ ಲಸಿಕೆಗೆ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲೂ ಏಕರೂಪ ದರ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.

ಬೆಡ್‌ ಹಗರಣ ಬೆಳಕಿಗೆ ಬಂತು. ಬಿಜೆಪಿ ನಾಯಕರು ಒಂದು ಸಮುದಾಯವನ್ನು ಗುರಿಯಾಗಿಸಿ ಟೀಕೆ ಮಾಡಿದ್ದರು. ಆದರೆ ಈ ಹಗರಣಕ್ಕೆ ಸಂಬಂಧಿಸಿದಂತೆ ಈಗ ಬಂಧನ ಆಗಿರುವವರು ಯಾರು ಎಂಬುದನ್ನು ಅವರೇ ಹೇಳಬೇಕು ಎಂದು ಶಿವಕುಮಾರ್‌ ಹೇಳಿದರು.

ದೇಶದಲ್ಲಿ ಲಸಿಕೆ ಅಭಿಯಾನ; ಭಾರತ ಸೋಲ್ತಾ, ಗೆಲ್ತಾ? ...

ಸಿದ್ದರಾಮಯ್ಯ ಮಾತನಾಡಿ, ಲಸಿಕೆ ವಿಚಾರದಲ್ಲಿ ಪಾರದರ್ಶಕ ವ್ಯವಸ್ಥೆ ಅನುಸರಿಸುತ್ತಿಲ್ಲ. ಏಕರೂಪದ ದರ ಎಲ್ಲೂ ನಿಗದಿ ಮಾಡಿಲ್ಲ. ಖಾಸಗಿ ಆಸ್ಪತ್ರೆಗಳೊಂದಿಗೆ ಶಾಮೀಲಾಗಿ ದುಡ್ಡು ಹೊಡೆಯಲು ಅವಕಾಶ ಮಾಡಿಕೊಟ್ಟಿದ್ದಾರೆ. ಸ್ವತಃ ಸಚಿವರು, ಶಾಸಕರು, ಸಂಸದರೇ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯುವಂತೆ ಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಶಾಸಕರ ನಿಧಿಯಿಂದ 100 ಕೋಟಿ ರು. ಮೊತ್ತದ ಲಸಿಕೆ ಉಚಿತವಾಗಿ ನೀಡುತ್ತೇವೆ ಎಂದರೂ ಅವಕಾಶ ನೀಡಲಿಲ್ಲ. ಪತ್ರ ಬರೆದು ಮನವಿ ಮಾಡಿದರೂ ಉತ್ತರ ನೀಡಿಲ್ಲ ಎಂದು ಕಿಡಿಕಾರಿದರು.

ನರಹಂತಕ ಸರ್ಕಾರ:ರಾಜ್ಯದಲ್ಲಿರುವುದು ನರಹಂತಕ ಸರ್ಕಾರ. ದೇಶದಲ್ಲೇ ಯಡಿಯೂರಪ್ಪ ಅತ್ಯಂತ ಅಸಮರ್ಥ ಮುಖ್ಯಮಂತ್ರಿ. ರಾಜ್ಯದಲ್ಲಿ ಲಸಿಕೆ ಸಿಗುತ್ತಿಲ್ಲ, ಆಕ್ಸಿಜನ್‌ ಸಿಗುತ್ತಿಲ್ಲ, ಬ್ಲಾ ್ಯಕ್‌ ಫಂಗಸ್‌ ಔಷಧ ಸಿಗುತ್ತಿಲ್ಲ. ಯಾವ ಕ್ರಮಗಳನ್ನೂ ಕೈಗೊಳ್ಳದೆ ಸರ್ಕಾರವೇ ಜನರನ್ನು ಸಾಯಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು

ಮಾಜಿ ಶಾಸಕ ಚಿಮ್ಮನಕಟ್ಟಿಪತ್ನಿಗೆ ಚಿಕಿತ್ಸೆ ಕೊಡಿಸಲು ನಾನೇ ಹರಸಾಹಸ ಪಟ್ಟಿದ್ದೇನೆ. ಆರ್‌. ಅಶೋಕ್‌, ಡಾ.ಕೆ. ಸುಧಾಕರ್‌, ಸರ್ಕಾರದ ಮುಖ್ಯ ಕಾರ್ಯದರ್ಶಿ ಎಲ್ಲರನ್ನೂ ಸಂಪರ್ಕಿಸಿ ಅಗತ್ಯವಿದ್ದ 58 ಇಂಜೆಕ್ಷನ್‌ ಕೊಡಿಸಲು ಸಾಕಾಗಿ ಹೋಯಿತು. ಇನ್ನು ಜನ ಸಾಮಾನ್ಯರ ಪಾಡೇನು? ಎಂದು ಪ್ರಶ್ನಿಸಿದರು.

3ನೇ ಅಲೆಗೆ ಸಿದ್ಧತೆ ಇಲ್ಲ: ಮೂರನೇ ಅಲೆ ಮಕ್ಕಳನ್ನು ಬಾಧಿಸುತ್ತದೆ ಎಂದು ತಜ್ಞರು ಹೇಳುತ್ತಿದ್ದರೂ ರಾಜ್ಯ ಸರ್ಕಾರ ಯಾವುದೇ ಸಿದ್ಧತೆ ಮಾಡಿಕೊಂಡಿಲ್ಲ. ಮೊದಲ, 2ನೇ ಅಲೆಯ ಮಾದರಿಯಲ್ಲೇ ಈಗಲೂ ನಿರ್ಲಕ್ಷ್ಯ ತಾಳುತ್ತಿದೆ. ಇನ್ನಾದರೂ ಎಚ್ಚೆತ್ತುಕೊಂಡು ಲಸಿಕೆ ಉತ್ಪಾದಕರಿಂದ ಸೂಕ್ತ ಪ್ರಮಾಣದಲ್ಲಿ ಲಸಿಕೆ ಖರೀದಿ ಮಾಡಲಿ. 3ನೇ ಅಲೆಗೆ ವ್ಯವಸ್ಥೆ ಮಾಡಿಕೊಳ್ಳಲಿ ಎಂದು ಸಲಹೆ ನೀಡಿದರು.