ಬೆಂಗಳೂರು (ಫೆ.19):  ಕಾಂಗ್ರೆಸ್‌ ಪರವಾಗಿ ಹಿಂದುಳಿದ ಹಾಗೂ ದಲಿತ ಜಾತಿಗಳನ್ನು ಸಂಘಟಿಸುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ‘ಹಿಂದ’ ಹೋರಾಟಕ್ಕೆ ಮುನ್ನುಡಿಯಾಗಿ ಕುರುಬ ಸಮುದಾಯವನ್ನು ಎಸ್‌.ಟಿ.ಗೆ ಸೇರ್ಪಡೆ ಮಾಡುವಂತೆ ಒತ್ತಾಯಿಸಲು ನಗರದಲ್ಲಿ ಇಂದು ಪ್ರತಿಭಟನೆ ನಡೆಯಲಿದೆ.

ಕರ್ನಾಟಕ ಪ್ರದೇಶ ಕುರುಬರ ಸಂಘ ಆಯೋಜಿಸಿರುವ ಈ ಪ್ರತಿಭಟನೆಯಲ್ಲಿ ಸಿದ್ದರಾಮಯ್ಯ ಹಾಗೂ ಅವರ ಆಪ್ತರು ನೇರವಾಗಿ ಪಾಲ್ಗೊಳ್ಳುವುದಿಲ್ಲ. ಆದರೆ, ಇಡೀ ಹೋರಾಟದ ರೂಪರೇಷೆಯನ್ನು ಸಿದ್ದರಾಮಯ್ಯ ಆಪ್ತ ಬಣ ರೂಪಿಸಿದೆ.

ಈ ಪ್ರತಿಭಟನೆಯ ನಂತರ ಮಾ.21ರಂದು ಕಲಬುರಗಿಯಲ್ಲಿ ಕುರುಬ ಸಮುದಾಯದ ಉಪ ಪಂಗಡಗಳಾದ ಗೊಂಡ, ರಾಜಗೊಂಡ ಜೊತೆಗೆ ಕೋಳಿ ಸಮಾಜದವರನ್ನು ಒಳಗೊಂಡ ಬೃಹತ್‌ ಸಮಾವೇಶ ನಡೆಯಲಿದೆ. ಈ ಸಮಾವೇಶದಲ್ಲಿ ಸಿದ್ದರಾಮಯ್ಯ ನೇರವಾಗಿ ಪಾಲ್ಗೊಳ್ಳಲಿದ್ದಾರೆ. ಈ ಬೃಹತ್‌ ಸಮಾವೇಶ ನಡೆದ ಕೆಲವೇ ದಿನಗಳಲ್ಲಿ ಕಲಬುರಗಿಯಲ್ಲೇ ಕುರುಬ ಸಮುದಾಯದವರು ಸೇರಿದಂತೆ ಹಿಂದುಳಿದ ಜಾತಿಗಳಿಗೆ ಸೇರಿದ ನೂತನ ಗ್ರಾಮ ಪಂಚಾಯ್ತಿ ಸದಸ್ಯರ ಸನ್ಮಾನ ಕಾರ್ಯಕ್ರಮ ಜರುಗಲಿದೆ.

ಹಿಂದ ಹೋರಾಟಕ್ಕೆ ವಿರೋಧ: ಸಿದ್ದರಾಮಯ್ಯ ನೇತೃತ್ವದಲ್ಲೇ ಕುರುಬರ ಸಮಾವೇಶ

ಜಾತಿ ಸಂಘಟನೆಗಳನ್ನು ಜತೆಯಲ್ಲಿಟ್ಟುಕೊಳ್ಳಲು ಇಂತಹ ಸಮಾವೇಶ ನಡೆಸಲು ಹೈಕಮಾಂಡ್‌ನಿಂದ ಒಪ್ಪಿಗೆ ಪಡೆದಿರುವ ಸಿದ್ದರಾಮಯ್ಯ ಹಾಗೂ ಅವರ ಆಪ್ತ ಪಡೆ ತುರುಸಿನಿಂದ ಸಮಾವೇಶಗಳನ್ನು ರೂಪಿಸುತ್ತಿದೆ. ವಾಸ್ತವವಾಗಿ ಗೊಂಡ, ರಾಜಗೊಂಡ, ಕೋಳಿ ಸಮುದಾಯದ ಸಮಾವೇಶವನ್ನು ಮಾ.13ರಂದು ಆಯೋಜಿಸಲು ಸಿದ್ದರಾಮಯ್ಯ ಆಪ್ತರು ನಿರ್ಧರಿಸಿದ್ದರು. ಕಲಬುರಗಿಯ ನಾಯಕರು ಸಮಾವೇಶದ ಸಿದ್ಧತೆಗಾಗಿ ಸಮಯಾವಕಾಶ ಕೋರಿದ್ದರಿಂದ ಮಾ.21ಕ್ಕೆ ಮರು ನಿಗದಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಎಸ್‌.ಟಿ. ಸೇರ್ಪಡೆಗೆ ಒತ್ತಾಯ:

ಕರ್ನಾಟಕ ಪ್ರದೇಶ ಕುರುಬರ ಸಂಘವು ಶುಕ್ರವಾರ ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಮೌರ್ಯ ವೃತ್ತದ ಬಳಿ ಕುರುಬ ಸಮುದಾಯವನ್ನು ಎಸ್‌.ಟಿ.ಗೆ ಸೇರಿಸಬೇಕು ಎಂದು ಒತ್ತಾಯಿಸಿ ಬೃಹತ್‌ ಪ್ರತಿಭಟನೆ ಹಮ್ಮಿಕೊಂಡಿದೆ.

ಜೊತೆಗೆ ಕರ್ನಾಟಕ ರಾಜ್ಯದಲ್ಲಿ ಜಿಲ್ಲಾ ಜಾತಿ ಪರಿಶೀಲನಾ ಸಮಿತಿಗಳು ಜಾತಿ ಸಿಂಧುತ್ವ ಪ್ರಮಾಣಪತ್ರ ನೀಡುವ ಮೊದಲು ರಾಜ್ಯ ಸರ್ಕಾರದ ಸಂಸ್ಥೆಯಾದ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ವರದಿ ಪಡೆದು ಜಾತಿ ಸಿಂಧುತ್ವ ಪ್ರಮಾಣಪತ್ರಗಳನ್ನು ನೀಡಬೇಕು ಎಂದು ರಾಜ್ಯ ಸರ್ಕಾರ ಆದೇಶಿಸಿದೆ. ಈ ಆದೇಶವನ್ನು ಕೂಡಲೇ ಹಿಂಪಡೆಯಬೇಕು.

ಜೊತೆಗೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾಗಿದ್ದ ಎಚ್‌.ಕಾಂತರಾಜು ಅವರು ನೀಡಿರುವ ಜಾತಿ ಜನಗಣತಿ ಸಮೀಕ್ಷೆ ವರದಿಯನ್ನೂ ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು.

2-ಎ ಮೀಸಲಾತಿ ಪಟ್ಟಿಗೆ ಯಾವುದೇ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಮುಂದುವರೆದ ಜಾತಿಗಳನ್ನು ಸೇರಿಸಬಾರದು. ಕುರುಬರ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿ 500 ಕೋಟಿ ರು. ಅನುದಾನ ಮೀಸಲಿಡಬೇಕು ಎಂದು ಒತ್ತಾಯಿಸುತ್ತಿದ್ದೇವೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಡಿ. ವೆಂಕಟೇಶಮೂರ್ತಿ ತಿಳಿಸಿದರು.

ಸಿದ್ದರಾಮಯ್ಯಗೂ ಹೋರಾಟಕ್ಕೂ ಸಂಬಂಧವಿಲ್ಲ:  ಶುಕ್ರವಾರ ನಡೆಯಲಿರುವ ಕುರುಬರ ಹೋರಾಟಕ್ಕೂ ಸಿದ್ದರಾಮಯ್ಯ ಅವರಿಗೂ ಸಂಬಂಧವಿಲ್ಲ. ಎಲ್ಲಾ ಪಕ್ಷಗಳ ಮುಖಂಡರನ್ನು ಸೇರಿಸಿಕೊಂಡು ಪ್ರತಿಭಟನೆ ನಡೆಸುತ್ತಿದ್ದೇವೆ. ಹೋರಾಟದಲ್ಲಿ ಎಲ್ಲಾ ಪಕ್ಷಗಳ ಸಮುದಾಯದ ನಾಯಕರು, ಶಾಸಕರು, ಬಿಬಿಎಂಪಿ ಸದಸ್ಯರು, ಕುರುಬ ಸಂಘದ ಪದಾಧಿಕಾರಿಗಳೂ ಭಾಗವಹಿಸುತ್ತಾರೆ ಎಂದು ಡಿ.ವೆಂಕಟೇಶಮೂರ್ತಿ ಸ್ಪಷ್ಟನೆ ನೀಡಿದರು.

ಪಂಚಮಸಾಲಿ, ವಾಲ್ಮೀಕಿ ಸಮುದಾಯದ ಮೀಸಲಾತಿ ಹೋರಾಟದ ಬಗ್ಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಾತನಾಡುತ್ತಾರೆ. ಆದರೆ ಕುರುಬರ ಹೋರಾಟದ ಬಗ್ಗೆ ಮಾತನಾಡುತ್ತಿಲ್ಲ. ಹೀಗಾಗಿ ಹೋರಾಟ ಮಾಡಲು ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದರು.