ರಾಜ್ಯದಲ್ಲಿ ರಮೇಶ್ ಜಾರಕಿಹೊಳಿ ಸೀಡಿ ವಿಚಾರ ಸಾಕಷ್ಟು ಸದ್ದಾಗುತ್ತಿದ್ದು ಇದೀಗ ಸದನದಲ್ಲೂ ಪ್ರತಿದ್ವನಿಸಿದೆ. ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅಸಮಾಧಾನ ಹೊರಹಾಕಿದ್ದಾರೆ.
ವಿಧಾನಸಭೆ (ಮಾ.23): ‘ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸಿ.ಡಿ. ಪ್ರಕರಣದಲ್ಲಿ ಸಂತ್ರಸ್ತೆಗೆ ನ್ಯಾಯ ಒದಗಿಸುವುದಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ಷಡ್ಯಂತ್ರ ಎಂದು ಬಿಂಬಿಸಲು ಸರ್ಕಾರ ಹಾಗೂ ಎಸ್‌ಐಟಿ ಪ್ರಯತ್ನಿಸುತ್ತಿದೆ. ಆ ವ್ಯಕ್ತಿಗೆ ಪ್ಯಾಂಟ್ ಬಿಚ್ಚಲು, ಜಿಪ್ ಬಿಚ್ಚಲು ಕಾಂಗ್ರೆಸ್‌ನವರು ಹೇಳಿದ್ದರೇ?’ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಸದಸ್ಯ ಡಿ.ಕೆ. ಶಿವಕುಮಾರ್ ಕಿಡಿಕಾರಿದ್ದಾರೆ.
ಮೊದಲು ಸಿ.ಡಿ.ಯನ್ನು ಸೈಬರ್ ವಿಭಾಗದಿಂದ ತನಿಖೆ ನಡೆಸಿ ಸಿ.ಡಿ. ಅಸಲಿಯೇ ಅಥವಾ ನಕಲಿ ಸೃಷ್ಟಿಯೇ ಎಂಬುದನ್ನು ತಿಳಿಸಲಿ. ಒಂದು ವೇಳೆ ಸಿ.ಡಿ. ಅಸಲಿಯಾದರೆ ಇಂತಹ ನೀಚ ರಾಜಕಾರಣಿಗಳು ಇದ್ದಾರೆ ಎಂಬುದನ್ನು ಹೊರಗಡೆ ತಂದಿರುವುದಕ್ಕೆ ಅವರನ್ನು ಪ್ರಶಂಸಿಸುತ್ತೇನೆ ಎಂದು ಹೇಳಿದರು.
ಸೋಮವಾರ ಅಧಿವೇಶನದಲ್ಲಿ ಸಿ.ಡಿ. ಕುರಿತ ನಿಲುವಳಿ ಸೂಚನೆ ಮೇಲೆ ಚರ್ಚೆ ನಡೆಸಿದ ಅವರು, ಸಿ.ಡಿ.ಯಲ್ಲಿ ಕೇವಲ ಮಂಚದ ಕತೆ ಮಾತ್ರ ಇಲ್ಲ. ರಮೇಶ್ ಜಾರಕಿಹೊಳಿ ಅವರು ಕನ್ನಡಿಗರನ್ನು ಕೀಳು ಭಾಷೆಯಲ್ಲಿ ಟೀಕಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಅತಿ ಭ್ರಷ್ಟಎಂದು ಆರೋಪಿಸಿದ್ದಾರೆ. ಸಿದ್ದರಾಮಯ್ಯ ಎರಡು ದಿನಕ್ಕೊಮ್ಮೆ ಕರೆ ಮಾಡುತ್ತಾರೆ ಎಂದು ಹೇಳಿದ್ದಾರೆ. ಮಂಚದಲ್ಲಿ ಮಂಚದ ಕೆಲಸ ಮಾಡಬೇಕು. ರಾಜಕಾರಣ ಮಾತನಾಡಿ ಎಂದು ನಾವು ಹೇಳಿದ್ದೆವಾ? ಈ ಬಗ್ಗೆ ಸಂಪೂರ್ಣ ತನಿಖೆ ಆಗುವುದು ಬೇಡವೇ ಎಂದು ಪ್ರಶ್ನಿಸಿದರು.
ರಾಸಲೀಲೆ ಸಿಡಿ ಕೇಸ್ : ಮತ್ತೊಂದು ವಿಡಿಯೋ ರಿಲೀಸ್ ...
ರಮೇಶ್ ಜಾರಕಿಹೊಳಿ ಅವರು, ಹನಿಟ್ರ್ಯಾಪ್ ಆಗಿದೆ ಎನ್ನುತ್ತಾರೆ. ನಾಲ್ಕು ತಿಂಗಳ ಹಿಂದೆ ಬ್ಲ್ಯಾಕ್‌ಮೇಲ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನುತ್ತಾರೆ. ಹಾಗಾದರೆ ದೂರು ಏಕೆ ನೀಡಿಲ್ಲ? ಹನಿಟ್ರ್ಯಾಪ್ ಆಗಿದೆ ಎಂದಾದರೆ ಹನಿ ತಿಂದಿದ್ದೀರಿ ಅಂತ ತಾನೇ? ಎಂದು ಪ್ರಶ್ನಿಸಿದರು.
ಸಿಎಂಗೆ ಬ್ಲ್ಯಾಕ್‌ಮೇಲ್: ರಾಜಕಾರಣಿಗಳನ್ನು ಯಾರೂ ಸಹ ಮನೆಗೆ ಕರೆದು ಊಟ ಹಾಕುವ ಪರಿಸ್ಥಿತಿ ಇಲ್ಲ. ಈ ಪ್ರಕರಣ ಇಡೀ ರಾಜಕೀಯ ಕುಟುಂಬಕ್ಕೆ ಕಪ್ಪು ಚುಕ್ಕೆ. ಪ್ರಕರಣದಲ್ಲಿ 100 ಕೋಟಿ ರು., 5 ಕೋಟಿ ರು. ಡೀಲ್ ಆಗಿದೆ ಎನ್ನುತ್ತಾರೆ. ಸಿ.ಡಿ. ಬಳಸಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಬ್ಲ್ಯಾಕ್ ಮೇಲ್ ಮಾಡಲಾಗುತ್ತಿದೆ ಎಂದು ಬಿಜೆಪಿಯ ಎಚ್. ವಿಶ್ವನಾಥ್, ಬಸನಗೌಡ ಯತ್ನಾಳ್ ಆರೋಪಿಸಿದ್ದಾರೆ. ಆಡಳಿತ ಪಕ್ಷದ ಯತ್ನಾಳ್ ಅವರೇ ಇನ್ನೂ 400 ಸಿ.ಡಿ. ಇದೆ ಎಂದು ಹೇಳಿದ್ದಾರೆ. ರಮೇಶ್ ಜಾರಕಿಹೊಳಿ ಅವರು ಸರ್ಕಾರ ರಚನೆಗೆ ಸಿ.ಪಿ. ಯೋಗೀಶ್ವರ್ 9 ಕೋಟಿ ರು. ಸಾಲ ಮಾಡಿದ್ದಾರೆ ಎಂದು ಹೇಳಿದ್ದಾರೆ. ಕೋಲಾರ ಶಾಸಕ ಶ್ರೀನಿವಾಸಗೌಡ ಅವರು 5 ಕೋಟಿ ರು. ನಮ್ಮ ಮನೆಗೆ ತಂದಿದ್ದಾರೆ ಎಂದಿದ್ದರು. ಇಷ್ಟಾದರೂ ಎಸಿಬಿ, ಐಟಿ, ಇಡಿ ಎಲ್ಲವೂ ಎಕೆ ಬಾಯಿ ಮುಚ್ಚಿ ಕುಳಿತಿವೆ? ನನ್ನ ಮನೆಯಲ್ಲಿ 41 ಲಕ್ಷ ರು. ನಗದು ಸಿಕ್ಕಿದೆ ಎಂದು ಹಾಕಬಾರದ ಕೇಸೆಲ್ಲಾ ಹಾಕಿ ಚಿತ್ರಹಿಂಸೆ ಕೊಟ್ಟಿರಿ. ಕೋಟಿ-ಕೋಟಿ ಅವ್ಯವಹಾರ ನಡೆಯುತ್ತಿದ್ದರೂ ನಿಮ್ಮ ಗಮನಕ್ಕೆ ಬಂದಿಲ್ಲವೇ ಎಂದು ಕಿಡಿ ಕಾರಿದರು. ಇದೆಲ್ಲವನ್ನೂ ಸಮಗ್ರವಾಗಿ ತನಿಖೆ ನಡೆಸಿ ಎಂದು ಒತ್ತಾಯಿಸಿದರು.
