ಅಪೆಕ್ಸ್ ಬ್ಯಾಂಕ್‌ ಅಧ್ಯಕ್ಷ ಸ್ಥಾನಕ್ಕಾಗಿ ಕೆ.ಎನ್‌.ರಾಜಣ್ಣ ಹಾಗೂ ಪರಿಷತ್‌ ಸದಸ್ಯ ಎಸ್‌. ರವಿ ಪಟ್ಟು ಹಿಡಿದಿರುವ ಹಿನ್ನೆಲೆಯಲ್ಲಿ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಕಾಂಗ್ರೆಸ್‌ನಲ್ಲಿ ಒಮ್ಮತ ಮೂಡಿಲ್ಲ. ಈ ಹಿನ್ನೆಲೆಯಲ್ಲಿ ಗುರುವಾರ ನಡೆಯಬೇಕಿದ್ದ ಅಧ್ಯಕ್ಷ ಸ್ಥಾನದ ಚುನಾವಣೆಯನ್ನು ಮುಂದೂಡಲಾಗಿದೆ.

ಬೆಂಗಳೂರು : ಅಪೆಕ್ಸ್ ಬ್ಯಾಂಕ್‌ ಅಧ್ಯಕ್ಷ ಸ್ಥಾನಕ್ಕಾಗಿ ಮಾಜಿ ಸಚಿವ ಕೆ.ಎನ್‌.ರಾಜಣ್ಣ ಹಾಗೂ ಪರಿಷತ್‌ ಸದಸ್ಯ ಎಸ್‌. ರವಿ ಪಟ್ಟು ಹಿಡಿದಿರುವ ಹಿನ್ನೆಲೆಯಲ್ಲಿ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಕಾಂಗ್ರೆಸ್‌ನಲ್ಲಿ ಒಮ್ಮತ ಮೂಡಿಲ್ಲ. ಈ ಹಿನ್ನೆಲೆಯಲ್ಲಿ ಗುರುವಾರ ನಡೆಯಬೇಕಿದ್ದ ಅಧ್ಯಕ್ಷ ಸ್ಥಾನದ ಚುನಾವಣೆಯನ್ನು ಕೊನೇ ಕ್ಷಣದಲ್ಲಿ ಮುಂದೂಡಲಾಗಿದೆ.

ಅಧ್ಯಕ್ಷ ಸ್ಥಾನಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಣದ ಕೆ.ಎನ್‌.ರಾಜಣ್ಣ ಹಾಗೂ ಡಿ.ಕೆ. ಶಿವಕುಮಾರ್‌ ಸೋದರ ಸಂಬಂಧಿ ಎಸ್‌. ರವಿ ನಡುವೆ ತೀವ್ರ ಪೈಪೋಟಿ ಉಂಟಾಗಿತ್ತು. ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡಲು ನಡೆಸಿದ ಕಸರತ್ತು ವಿಫಲವಾಯಿತು.

ಈ ಹಿನ್ನೆಲೆಯಲ್ಲಿ ಮಧ್ಯಪ್ರವೇಶಿಸಿರುವ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲ ಹೈಕಮಾಂಡ್‌, ‘ಅಗತ್ಯವಾದರೆ ಇಬ್ಬರನ್ನು ಬಿಟ್ಟು ಬೇರೆಯವರಿಗೆ ಅವಕಾಶ ನೀಡಿ. ಆದರೆ ಪಕ್ಷದ ಒಗ್ಗಟ್ಟು ಮುರಿಯದಂತೆ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಿ’ ಎಂದು ಸೂಚಿಸಿರುವುದಾಗಿ ತಿಳಿದುಬಂದಿದೆ. ಇದೇ ಕಾರಣಕ್ಕೆ ಚುನಾವಣೆ ಮುಂದೂಡುವಂತಾಗಿದೆ ಎಂದು ತಿಳಿದುಬಂದಿದೆ.

ಕಾಂಗ್ರೆಸ್‌ಗೆ ಅಧ್ಯಕ್ಷ ಸ್ಥಾನ ಖಚಿತ:

ಒಟ್ಟು 21 ನಿರ್ದೇಶಕರ ಪೈಕಿ, ಮೈಸೂರು–ಚಾಮರಾಜನಗರ, ಬಾಗಲಕೋಟೆ ಮತ್ತು ಕೋಲಾರ ಜಿಲ್ಲಾ ಸಹಕಾರಿ ಕೇಂದ್ರ (ಡಿಸಿಸಿ) ಬ್ಯಾಂಕುಗಳನ್ನು ಹೊರತುಪಡಿಸಿ, ಉಳಿದ 18 ‌ಡಿಸಿಸಿ ‌ಬ್ಯಾಂಕುಗಳು‌ ನಾಮನಿರ್ದೇಶಿತರನ್ನು ನಿಯೋಜಿಸಿವೆ. ಈ ಪೈಕಿ 15 ಮಂದಿ ಕಾಂಗ್ರೆಸ್‌ ಬೆಂಬಲಿಗರಾಗಿದ್ದು, ಇಬ್ಬರು ಬಿಜೆಪಿ (ಕೊಡಗು-ಕೊಡಂದೇರ ಪಿ.ಗಣಪತಿ ಮತ್ತು ಚಿಕ್ಕಮಗಳೂರು- ಬೆಳ್ಳಿಪ್ರಕಾಶ್) ಮತ್ತು ಒಬ್ಬ ಜೆಡಿಎಸ್‌ (ಹಾಸನ– ಆರ್‌. ಸೂರಜ್‌) ಬೆಂಬಲಿತರಿದ್ದಾರೆ. ಹೀಗಾಗಿ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ ಪಾಲಾಗುವುದು ಖಚಿತ.

ಚುನಾವಣೆ ಮುಂದೂಡಿದ್ದು ಯಾಕೆ?

ಬೆಳಗ್ಗೆ 11 ಗಂಟೆಗೆ ನಾಮಪತ್ರ ಪ್ರಕ್ರಿಯೆ ಆರಂಭವಾದಾಗ ಮಾಜಿ ಶಾಸಕ ಬಿಜೆಪಿಯ ಬೆಳ್ಳಿ ಪ್ರಕಾಶ್‌ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಶರಣಗೌಡ ಬಯ್ಯಾಪುರ ನಾಮಪತ್ರ ಸಲ್ಲಿಸಿದ್ದರು. ಆದರೆ, ಕೆ.ಎನ್‌. ರಾಜಣ್ಣ ಹಾಗೂ ಎಸ್‌.ರವಿ ಅವರ ನಡುವೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಲ್ಲಿ ಗೊಂದಲ ಸೃಷ್ಟಿಯಾಯಿತು. ಹೀಗಾಗಿ ಕಾಂಗ್ರೆಸ್‌ನಿಂದ ಯಾರೂ ನಾಮಪತ್ರ ಸಲ್ಲಿಸಲಿಲ್ಲ. ಕೊನೆಗೆ ಮಧ್ಯಪ್ರವೇಶ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬೆಳ್ಳಿ ಪ್ರಕಾಶ್ ಹಾಗೂ ಶರಣಗೌಡ ಅವರ ಮನವೊಲಿಸಿ ನಾಮಪತ್ರ ಹಿಂಪಡೆಯುವಂತೆ ಮಾಡಿದರು. ಮಧ್ಯಾಹ್ನ 12.30 ಗಂಟೆಗೆ ಇಬ್ಬರೂ ನಾಮಪತ್ರ ಹಿಂಪಡೆದರು.

ಚುನಾವಣಾ ಕಣದಲ್ಲಿ ಯಾರೂ ಇಲ್ಲದ ಕಾರಣ ಕೊನೇ ಕ್ಷಣದಲ್ಲಿ ಚುನಾವಣೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು. ಎರಡೂ ಬಣಗಳ ಸಂಘರ್ಷ ತಪ್ಪಿಸಿ, ಅವಿರೋಧ ಆಯ್ಕೆ ಸುಗಮಗೊಳಿಸಲು ಮುಂದೆ ಪಕ್ಷ ಕಾರ್ಯತಂತ್ರ ಹೆಣೆಯಲಿದೆ. ಅಗತ್ಯವಾದರೆ ಮೂರನೇ ವ್ಯಕ್ತಿಗೂ ಅವಕಾಶ ದೊರೆಯಬಹುದು ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.