ಸಚಿವ ಸ್ಥಾನ ಕಳೆದುಕೊಂಡ ಕೆ.ಎನ್. ರಾಜಣ್ಣ ರಾಹುಲ್ ಗಾಂಧಿಗೆ ಬರೆದ ಪತ್ರದ ಸಂಪೂರ್ಣ ವಿವರ. ಡಿ.ಕೆ.ಶಿವಕುಮಾರ್ ವಿರುದ್ಧ ಅಸಮಾಧಾನಕ್ಕೆ ಕಾರಣವೇನು? ಪತ್ರದ ಸ್ಫೋಟಕ ಅಂಶಗಳನ್ನು ತಿಳಿಯಲು ಓದಿ.

ತುಮಕೂರು (ಡಿ.23): ರಾಜ್ಯದಲ್ಲಿ ಸಹಕಾರ ಇಲಾಖೆ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೆ.ಎನ್. ರಾಜಣ್ಣ ಅವರು ಒಂದೇ ಒಂದು ಹೇಳಿಕೆಯಿಂದಾಗಿ ಸಚಿವ ಸ್ಥಾನದಿಂದ ವಜಾಗೊಂಡು, ಅಧಿಕಾರ ಕಳೆದುಕೊಂಡಿದ್ದರು. ಇದರ ಬೆನ್ನಲ್ಲೇ ತೀವ್ರ ಅಸಮಾಧಾನಗೊಂಡಿರುವ ಹಿರಿಯ ನಾಯಕ ಕೆ.ಎನ್. ರಾಜಣ್ಣ, ಕಾಂಗ್ರೆಸ್ ಅಗ್ರ ನಾಯಕ ರಾಹುಲ್ ಗಾಂಧಿ ಅವರಿಗೆ 8 ಪುಟಗಳ ಸುದೀರ್ಘ ಪತ್ರ ಬರೆದಿದ್ದಾರೆ. ತಮ್ಮ ಹೇಳಿಕೆಯನ್ನು ತಿರುಚಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗೂ ದೆಹಲಿಗೆ ಬಂದು ನೇರವಾಗಿ ಮಾತನಾಡಲು ಅವಕಾಶ ನೀಡುವಂತೆ ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪತ್ರದ ಒಕ್ಕಣೆಯಲ್ಲಿ ಏನಿದೆ?

ಕಳೆದ ತಿಂಗಳ 17ರಂದು ಇ-ಮೇಲ್ ಮೂಲಕ ಈ ಪತ್ರ ರವಾನಿಸಿರುವ ರಾಜಣ್ಣ, ಮಾಧ್ಯಮಗಳ ಮುಂದೆ ತಾವಾಡಿದ ಮಾತುಗಳು ಮತ್ತು ಅದಕ್ಕೆ ಬಂದ ಪ್ರಶ್ನೆಗಳನ್ನು ವಿವರವಾಗಿ ಉಲ್ಲೇಖಿಸಿದ್ದಾರೆ. "ನನ್ನ ಹೇಳಿಕೆಯ ಹಿಂದಿರುವ ಸತ್ಯವನ್ನು ತಿರುಚಿ ನಿಮ್ಮ ಮುಂದೆ ತಪ್ಪು ಮಾಹಿತಿಯನ್ನು ನೀಡಲಾಗಿದೆ. ಈ ಪಿತೂರಿಯ ಹಿಂದೆ ಇರುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು" ಎಂದು ಅವರು ಒತ್ತಾಯಿಸಿದ್ದಾರೆ.

ಕೆಪಿಸಿಸಿ ಮತ್ತು ಡಿ.ಕೆ. ಶಿವಕುಮಾರ್ ವಿರುದ್ಧ ಅಸಮಾಧಾನ

ಪತ್ರದಲ್ಲಿ ಸಂಘಟನಾತ್ಮಕ ಲೋಪಗಳ ಬಗ್ಗೆಯೂ ರಾಜಣ್ಣ ಗಂಭೀರವಾಗಿ ಪ್ರಸ್ತಾಪಿಸಿದ್ದಾರೆ. 'ಕೆಪಿಸಿಸಿ ನೇಮಿಸಿದ ಬಿಎಲ್‌ಎಗಳು (Booth Level Agents) ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿಲ್ಲ. ಈ ಲೋಪಗಳ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಸರಿಯಾದ ಗಮನ ಹರಿಸಿದ್ದರೆ ಫಲಿತಾಂಶ ಬೇರೆಯೇ ಇರುತ್ತಿತ್ತು. ಈ ಲೋಪಗಳನ್ನು ಸರಿಪಡಿಸಿದ್ದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಇನ್ನೂ 8 ರಿಂದ 10 ಹೆಚ್ಚುವರಿ ಸ್ಥಾನಗಳನ್ನು ಸುಲಭವಾಗಿ ಪಡೆಯುತ್ತಿತ್ತು' ಎಂದು ರಾಜಣ್ಣ ಪತ್ರದಲ್ಲಿ ವಿಶ್ಲೇಷಿಸಿದ್ದಾರೆ.

ನೇರ ಭೇಟಿಗೆ ರಾಜಣ್ಣ ಪಟ್ಟು

ತಮ್ಮ ವಿರುದ್ಧ ಹೈಕಮಾಂಡ್‌ಗೆ ದೂರು ನೀಡಿ ಸಚಿವ ಸ್ಥಾನ ತಪ್ಪುವಂತೆ ಮಾಡಿದವರ ಮುಖವಾಡ ಕಳಚಲು ರಾಜಣ್ಣ ತುದಿಗಾಲಲ್ಲಿ ನಿಂತಿದ್ದಾರೆ. 'ನನ್ನ ಹೇಳಿಕೆಯ ಉದ್ದೇಶ ಪಕ್ಷವನ್ನು ಬಲಪಡಿಸುವುದೇ ಹೊರತು ಹಾನಿ ಮಾಡುವುದಲ್ಲ. ಈ ಎಲ್ಲ ವಿಷಯಗಳ ಬಗ್ಗೆ ನಾನು ನೇರವಾಗಿ ನಿಮ್ಮೊಂದಿಗೆ ಚರ್ಚಿಸಬೇಕಿದೆ. ದೆಹಲಿಗೆ ಬಂದು ಮಾತನಾಡಲು ಸಮಯ ನಿಗದಿಪಡಿಸಿ' ಎಂದು ರಾಹುಲ್ ಗಾಂಧಿಯವರಲ್ಲಿ ವಿನಂತಿಸಿದ್ದಾರೆ. ಸಚಿವ ಸ್ಥಾನ ಕಳೆದುಕೊಂಡ ನಂತರ ರಾಜಣ್ಣ ಅವರ ಈ ನಡೆ ರಾಜ್ಯ ರಾಜಕಾರಣದಲ್ಲಿ, ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್ ಪಾಳಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಡಿ.ಕೆ. ಶಿವಕುಮಾರ್ ಅವರ ಕಾರ್ಯವೈಖರಿಯ ಬಗ್ಗೆಯೇ ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿರುವುದು ಹೈಕಮಾಂಡ್ ಇದನ್ನು ಹೇಗೆ ಸ್ವೀಕರಿಸುತ್ತದೆ ಎಂಬ ಚರ್ಚೆ ಶುರುವಾಗಿದೆ.