ಕಾಂಗ್ರೆಸ್ ಸರ್ಕಾರದಿಂದ ಹೊಸ ರೂಲ್ಸ್ ಜಾರಿ! ರಸ್ತೆ ನಿರ್ಮಿಸಿದ ಗುತ್ತಿಗೆದಾರರೇ 5 ವರ್ಷ ನಿರ್ವಹಣೆ ಮಾಡಬೇಕು
ಇನ್ನುಮುಂದೆ ರಸ್ತೆಗಳನ್ನು ಅಭಿವೃದ್ಧಿ ಮಾಡುವ ಗುತ್ತಿಗೆದಾರರೇ ಆಯಾ ರಸ್ತೆಗಳನ್ನು 5 ವರ್ಷಗಳ ಕಾಲ ನಿರ್ವಹಣೆ ಮಾಡಬೇಕು ಎಂದು ಕಾಂಗ್ರೆಸ್ ಸರ್ಕಾರ ಹೊಸ ರೂಲ್ಸ್ ಜಾರಿ ಮಾಡುತ್ತಿದೆ.

ಬೆಂಗಳೂರು (ಸೆ.14): ರಾಜ್ಯದಲ್ಲಿ ರಸ್ತೆ ಗುಣಮಟ್ಟವನ್ನು ಕಾಪಾಡುವ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರದಿಂದ ಹೊಸ ನಿಯಮವನ್ನು ಜಾರಿಗೆ ತರಲಾಗುತ್ತಿದೆ. ಯಾವುದೇ ರಸ್ತೆಗಳನ್ನು ಅಭಿವೃದ್ಧಿ ಮಾಡುವ ಹಾಗೂ ನಿರ್ಮಿಸುವ ಗುತ್ತಿಗೆದಾರರೇ 5 ವರ್ಷಗಳ ಕಾಲ ನಿರ್ವಹಣೆ ಮಾಡಬೇಕು. ಇನ್ನು ರಸ್ತೆಗಳ ಗುಣಮಟ್ಟದ ಬಗ್ಗೆ ನಿಗಾವಹಿಸಲು ಸರ್ಕಾರದಿಂದ ಪ್ರತ್ಯೇಕ ಆ್ಯಪ್ ಅಭಿವೃದ್ಧಿ ಮಾಡುತ್ತಿದ್ದು, ಸ್ಥಳೀಯರೇ ರಸ್ತೆ ಕಾಮಗಾರಿಯ ಗುಣಮಟ್ಟದ ಬಗ್ಗೆ ಫೋಟೋ ತೆಗೆದು ಇಲಾಖೆಗೆ ಕಳುಹಿಸಬಹುದು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಇಲಾಖೆಯಲ್ಲಿ ಆ್ಯಪ್ ಸಿದ್ಧವಾಗುತ್ತಿದ್ದು, ಈಗ ಅದು ಟ್ರಯಲ್ ನಲ್ಲಿದೆ. ಇನ್ನು ರಾಜ್ಯದಲ್ಲಿ ರಸ್ತೆ ಗುಣಮಟ್ಟದ ಬಗ್ಗೆ ಕಾಳಜಿವಹಿಸಲು ಪ್ರತ್ಯೇಕ ಆ್ಯಪ್ ಅಭಿವೃದ್ಧಿ ಮಾಡುವುದು ಬಹಳ ಅವಶ್ಯಕತೆಯಿದೆ. ಇನ್ನು ನಮ್ಮ ಸರ್ಕಾರದ ಅಧಿಕಾರಕ್ಕೆ ಬಂದ ನಂತರ ಇಲಾಖೆಯಲ್ಲಿ ಸುಧಾರಣೆ ಮಾಡ್ತಾ ಇದ್ದೇವೆ. ರಸ್ತೆಗಳ ರಕ್ಷಣೆ ಮೈಲಿಗೋಲಿ ಎಂದು ಕರೆಯುತ್ತಿದ್ದರು. ಇದು 30 ವರ್ಷಗಳ ಹಿಂದೆ ಇತ್ತು. ಅದನ್ನು ವಾಪಸ್ ಜಾರಿ ಮಾಡ್ತಾ ಇದ್ದೇವೆ ಎಂದು ತಿಳಿಸಿದರು.
ರಾಜ್ಯಾದ್ಯಂತ 2000 ಜನ ಮೈಲ್‌ಗೋಲಿ ನೇಮಕಾತಿ: ಪ್ರತಿ 20 ಕಿಲೋಮೀಟರ್‌ಗೆ ಒಬ್ಬರಂತೆ ರಾಜ್ಯಾದ್ಯಂತ 2000 ಜನ ಕೂಡಲೇ ಅಟೆಂಡ್ ಮಾಡಲು ವ್ಯವಸ್ಥೆ ಮಾಡಲಾಗುತ್ತದೆ. ಮಳೆ ಬಂದರೆ ರಸ್ತೆ ಗುಂಡಿ ಮುಚ್ಚಲು ಮೈಲ್‌ಗೋಲಿ ವ್ಯವಸ್ಥೆ ಮಾಡ್ತಾ ಇದ್ದೇವೆ. ಈ ಹಿಂದೆ ಈ ಹುದ್ದೆಯು ಖಾಯಂ ಹುದ್ದೆಯಾಗಿತ್ತು. ಈಗ ಹೊರಗುತ್ತಿಗೆ ಆಧಾರಿತವಾಗಿ ಮಾಡ್ತಾ ಇದ್ದೇವೆ. ನಮ್ಮ ಪರಿವೀಕ್ಷಣಾ ಮಂದಿರಗಳ (ಐಬಿ) ನಿರ್ವಹಣೆ ಮಾಡಲು ಇಬ್ಬರು, ಮೂವರು ಜನ ಸೇವೆಗೆ ಗುತ್ತಿಗೆದಾರ ಆಧಾರಿತ ನೇಮಕ ಮಾಡ್ತೇವೆ ಎಂದು ಹೇಳಿದರು.
ರಸ್ತೆ ನಿರ್ವಹಣೆಗೆ ಟೆಂಡರ್ ಕರೆಯುವ ಅವಶ್ಯಕತೆಯಿಲ್ಲ: ರಾಜ್ಯದಲ್ಲಿ ರಸ್ತೆ ಅಭಿವೃದ್ಧಿ ಮಾಡುವಾಗ ಕಳಪೆಯಾಗಿ ಮಾಡುತ್ತಾರೆ ಎಂಬ ಆರೋಪಗಳು ಹೆಚ್ಚಾಗಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ನಮ್ಮ ರಸ್ತೆಗಳನ್ನು ಅಭಿವೃದ್ಧಿ ಮಾಡಿದ ಗುತ್ತಿಗೆದಾರರೇ 5 ವರ್ಷಗಳ ಕಾಲ ತಾವು ಅಭಿವೃದ್ಧಿ ಮಾಡಿದ ರಸ್ತೆಗಳನ್ನು ನಿರ್ವಹಣೆ ಮಾಡಬೇಕು. ರಾಜ್ಯದಲ್ಲಿ ಇಲ್ಲಿಯವರೆಗೆ ಈ ನಿಯಮ ಜಾರಿಯಲ್ಲಿರಲಿಲ್ಲ. ಈಗ ಹೊಸದಾಗಿ ಈ ನಿಯಮ ಜಾರಿ ಮಾಡ್ತಾ ಇದ್ದೇವೆ. ಹಾಗಾಗಿ, ರಸ್ತೆಗಳ ನಿರ್ವಹಣೆಗಾಗಿ ಇನ್ನುಮುಂದೆ ಟೆಂಡರ್ ಕರೆಯುವ ಅವಶ್ಯಕತೆಯೂ ಇರುವುದಿಲ್ಲ. ಆದಾಯ ಬರುವ ಕಡೆ ಇನ್ವೆಸ್ಟ್ ಮಾಡಲು ಅವಕಾಶ ಇದೆ ಎಂದರು.
ಕಾಲಜ್ಞಾನದ 'ಕಟ್ಟಿಗೆ ಹಾಡ್ತದೆ, ಕಬ್ಬಿಣ ಓಡ್ತದೆ, ಗಾಳಿ ಮಾತನಾಡ್ತದೆ' ಭವಿಷ್ಯ ನಿಜವಾಗಿದೆ! ಕೋಡಿಶ್ರೀ
325 ತೂಗು ಸೇತುವೆ ನಿರ್ಮಾಣ: ಇನ್ನು ಲೋಕೋಪಯೋಗಿ ಇಲಾಖೆಯ ಸ್ಥಳಗಳಲ್ಲಿ ಕಮರ್ಷಿಯಲ್ (ವಾಣಿಜ್ಯಾತ್ಮಕ) ಚಟುವಟಿಕೆ ಆರಂಭಿಸಲು ಮುಂದಾಗಿದ್ದೇವೆ. ಮಲೆನಾಡಿನ ಪ್ರದೇಶಗಳಲ್ಲಿ ತೂಗು ಸೇತುವೆಗಳ ಸಮಸ್ಯೆಗಳಿವೆ. ಶಾಲಾ ಮಕ್ಕಳಿಗೆ ಸಮಸ್ಯೆಯಿದೆ. ಇದಕ್ಕೆ ಪರಿಹಾರ ಕಲ್ಪಿಸುವ ನಿಟ್ಟಿಲ್ಲಿ ಒಟ್ಟು 325 ತೂಗು ಸೇತುವೆ ನಿರ್ಮಾಣ ಮಾಡ್ತಾ ಇದ್ದೇವೆ. ಕಾರವಾರ, ಶಿವಮೊಗ್ಗ, ಮಂಗಳೂರು, ಉಡುಪಿ ಕಡೆಗಳಲ್ಲಿ ಮಾಡ್ತಾ ಇದ್ದೇವೆ ಎಂದು ಸಚಿವ ಸತೀಶ್ ಜಾರಕಿಹೊಳಿ ಮಾಹಿತಿ ನೀಡಿದರು.