ಕೇಂದ್ರದಲ್ಲಿ 2028ಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮಹಿಳೆಯರಿಗೆ ಶೇ.50 ಮೀಸಲಾತಿ ಕೊಡ್ತೇವೆ: ಸಿದ್ದರಾಮಯ್ಯ!
ಬಿಜೆಪಿಯ ಯಾವ ನಾಯಕರೂ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿಲ್ಲ, ಮಹಿಳಾ ಮೀಸಲಾತಿಯನ್ನು ಮೋದಿ ನೀಡುವುದಿಲ್ಲ. 2028ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ನೀಡಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರು (ನ.19): ಬಿಜೆಪಿಯವರು ದೇಶಭಕ್ತಿಯ ಬಗ್ಗೆ ಮಾತನಾಡುತ್ತಾರೆ. ಬಿಜೆಪಿಯ ಯಾವುದಾದರೂ ಒಬ್ಬ ನಾಯಕರು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿಲ್ಲ. ಮೋದಿಯವರು ಮಹಿಳೆಯರಿಗೆ ಮೀಸಲಾತಿ ಕೊಡುವುದಿಲ್ಲ. 2028ಕ್ಕೆ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಮಹಿಳೆಯರಿಗೆ ಶೇ.50 ಮೀಸಲಾತಿಯನ್ನು ಕೊಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರಿನ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಕೇಂದ್ರ ಕಚೇರಿಯಲ್ಲಿ ನಡೆದ ಇಂದಿರಾಗಾಂಧಿ ಜಯಂತಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ಜನತೆಗೆ ನೀಡುತ್ತಿದ್ದ 7 ಕೆಜಿ ಅಕ್ಕಿಯನ್ನ ಬಿಜೆಪಿಯವರು 5 ಕೆಜಿಗೆ ಇಳಿಸಿದರು. ಬಡವರ ಪರವಾಗಿ ಇರೋದು ನಾವು. ಗ್ಯಾರಂಟಿ ಯೋಜನೆ ಮಾಡಿದ್ದು ನಾವು. ಇಂದಿರಾ ಕ್ಯಾಂಟೀನ್ ಮಾಡಿದ್ದು ನಾವು. ಬಿಜೆಪಿ ಅಧಿಕಾರ ಇರೋ ರಾಜ್ಯಗಳಲ್ಲಿ ಇದ್ಯಾ? ಎಸ್‌ಸಿಎಸ್‌ಪಿ ಟಿಎಸ್‌ಪಿ ಹಣ ಇಟ್ಟಿದ್ದೇವೆ. ರಾಜ್ಯದ 1.22 ಕೋಟಿ ಕುಟುಂಬಗಳ ಮನೆ ಯಜಮಾನಿಯರಿಗೆ ತಲಾ 2000 ರೂ. ಹಣ ಕೊಡ್ತಾ ಇದ್ದೀವಿ. ಗೃಹ ಲಕ್ಷ್ಮಿ ಯೋಜನೆಗೆ 32 ಸಾವಿರ ಕೋಟಿ ಖರ್ಚು ಮಾಡ್ತಾ ಇದ್ದೀವಿ. ಒಟ್ಟಾರೆ ಗ್ಯಾರಂಟಿ ಯೋಜನೆಗಳಿಗೆ ವಾರ್ಷಿಕ 56 ಸಾವಿರ ಕೋಟಿ ರೂ. ಖರ್ಚು ಮಾಡ್ತಾ ಇದ್ದೀವಿ ಎಂದು ಹೇಳಿದರು.
ನಮ್ಮ ಭಾರತ ದೇಶಕ್ಕೆ ಬಿಜೆಪಿಯವರು ಯಾರಾದರೂ ಪ್ರಾಣ ಕೊಟ್ಟಿದ್ದಾರಾ? ಈಗ ದೇಶಭಕ್ತಿ ಬಗ್ಗೆ ಮಾತಾಡ್ತಾರೆ. ನಾವು ಇಂದಿರಾ ಗಾಂಧಿಯನ್ನ ನೆನೆಯಬೇಕು. ಮೋದಿಯವರು ಮಹಿಳೆಯರಿಗೆ ಸ್ಥಾನ ಕೊಡಬೇಕು ಅಂದ್ರೆ 2028ಕ್ಕೆ ಗೊತ್ತಾಗುತ್ತದೆ. ರಾಜಕೀಯ ಇಚ್ಚಾ ಶಕ್ತಿ ಇರಬೇಕು. ಮುಖ್ಯವಾಗಿ 2028ಕ್ಕೆ ಇವರೇನು ಇರಲ್ಲ ಅಂತ ಅಂದುಕೊಂಡಿದ್ದೇವೆ. ನಾವೇ ಅಧಿಕಾರಿಕಾರಕ್ಕೆ ಬಂದು ಮಹಿಳೆಯರಿಗೆ ಕೇಂದ್ರದಲ್ಲಿ ಮೀಸಲಾತಿ ಮಾಡಬೇಕು. ದೇಶದಲ್ಲಿ ಮೀಸಲಾತಿ 50 ಪರ್ಸೆಂಟ್ ಮಾಡಲು ವಿರೋಧ ಇಲ್ಲ. ನಾವು ಎಂಪಿ ಚುನಾವಣೆಯಲ್ಲಿ 5 ಮಹಿಳೆಯರಿಗೆ ಟಿಕೆಟ್ ಕೊಟ್ಟಿದ್ದೇವೆ. ಬಿಜೆಪಿ ಅವರು ಎಷ್ಟು ಜನರಿಗೆ ಕೊಟ್ಟರು. ಮಹಿಳೆಯರಿಗೆ ಶೇ.50 ಮೀಸಲಾತಿ ಬಂದರೆ ಸ್ಥಳೀಯ ಚುನಾವಣೆಗಳಲ್ಲಿ ಕೊಡಲ್ಲ ಅನ್ನೋಕೆ ಆಗುತ್ತಾ? ನನ್ನದೇನು ತಕರಾರು ಇಲ್ಲ ಎಂದು ತಿಳಿಸಿದರು.
ಇದನ್ನೂ ಓದಿ: ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದುಬಾರಿ; ಜನತೆಗೆ ಮತ್ತೊಂದು ಬರೆ ಎಳೆದ ಸರ್ಕಾರ
ವಿಪಕ್ಷಗಳು ಬಿಪಿಎಲ್ ಕಾರ್ಡ್ ರದ್ದು ಆಗಿವೆ ಎಂದರು. ಆದರೆ, ಯಾವುದೇ ಕಾರಣಕ್ಕೂ ಅರ್ಹ ಬಿಪಿಎಲ್ ಫಲಾನುಭವಿಗಳಿಗೆ ಕಾರ್ಡ್ ರದ್ದು ಆಗಬಾರದು. ಒಂದಿಬ್ಬರು ಅನರ್ಹರು ಸೇರಿಕೊಂಡರೂ ಪರವಾಗಿಲ್ಲ, ಅರ್ಹರಿಗೆ ಅನ್ಯಾಯ ಆಗಬಾರದು. ಬಡವರು ಆತಂಕ ಪಡುವ ಅಗತ್ಯ ಇಲ್ಲ. ನಾವು ಬಡವರ ಪರವಾಗಿಯೇ ಇರೋದು. ನಾನು ಮುನಿಯಪ್ಪ ಅವರಿಗೆ ಹೇಳಿದ್ದೇನೆ. ಒಬ್ಬನೇ ಒಬ್ಬ ಬಿಪಿಎಲ್ ಕಾರ್ಡ್‌ದಾರರನ್ನ ರದ್ದು ಮಾಡಬಾರದು ಅಂತ ಹೇಳಿದ್ದೇನೆ. ಅರ್ಹರಿಗೆ ರದ್ದಾಗಿದ್ದರೆ ಮತ್ತೆ ಅವರಿಗೆ ಕೊಡಬೇಕು ಅಂತ ಹೇಳಿದ್ದೇನೆ. ನಾವು ಬಿಜೆಪಿಯಿಂದ ಪಾಠ ಕಲಿಯಬೇಕಿಲ್ಲ.ಅವರು ಮೇಲ್ಜಾತಿಯ, ಶ್ರೀಮಂತರ ಪರ ಇರೋದು. ಅವರು ಬಡವರ, ಮೀಸಲಾತಿಯ ಪರ ಮಾತನಾಡುತ್ತಿದ್ದಾರಾ? ಎಂದು ಪ್ರಶ್ನೆ ಮಾಡಿದರು.