Asianet Suvarna News Asianet Suvarna News

ಸಿದ್ದು ಜನ್ಮದಿನ ವ್ಯಕ್ತಿ ಕೇಂದ್ರಿತ ಆಗದಂತೆ ನಿಗಾ, ಸಿದ್ದರಾಮೋತ್ಸವ ಪದ ಬಳಸದಿರಲು ತೀರ್ಮಾನ

  • ಸಿದ್ದರಾಮಯ್ಯ ಅವರ ಜನ್ಮ ದಿನದ ಅಮೃತ ಮಹೋತ್ಸವ
  •  ‘ಸಿದ್ದರಾಮೋತ್ಸವ’ ಪದ ಬಳಸದಂತೆ ತೀರ್ಮಾನ 
  • ಪೂರ್ವಭಾವಿ ಸಭೆಯಲ್ಲಿ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಅಭಿಪ್ರಾಯ
congress all set to celebrate Siddaramaiah birthday on August 12 in Davangere gow
Author
Bengaluru, First Published Jul 14, 2022, 5:56 AM IST

ಬೆಂಗಳೂರು (ಜು.14): ಸಿದ್ದರಾಮಯ್ಯ ಅವರ 75ನೇ ಜನ್ಮದಿನ ಅಮೃತ ಮಹೋತ್ಸವವು 2023ರಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಪೂರಕವಾಗಬೇಕು. ಯಾವುದೇ ಕಾರಣಕ್ಕೂ ‘ಸಿದ್ದರಾಮೋತ್ಸವ’ ಎಂಬ ಪದ ಬಳಕೆ ಮಾಡದೆ ಸಿದ್ದರಾಮಯ್ಯ ಅವರ ವ್ಯಕ್ತಿತ್ವ ಹಾಗೂ ಆಡಳಿತದ ವಿಶ್ಲೇಷಣೆ ಮಾಡಬೇಕು. ರಾಜ್ಯದ ಮೂಲೆ-ಮೂಲೆಯಿಂದ ಬರುವ ಲಕ್ಷಾಂತರ ಮಂದಿಗೆ ಯಾವುದೇ ಸಮಸ್ಯೆಯಾಗದಂತೆ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಬೇಕು. ದಾವಣಗೆರೆಯಲ್ಲಿ ಆ.3 ರಂದು ಹಮ್ಮಿಕೊಂಡಿರುವ ಸಿದ್ದರಾಮಯ್ಯ ಅವರ ಜನ್ಮದಿನೋತ್ಸವದ ಪೂರ್ವ ಸಿದ್ಧತೆಗಾಗಿ ಹಮ್ಮಿಕೊಂಡಿದ್ದ ಬೃಹತ್‌ ಪೂರ್ವಭಾವಿ ಸಭೆಯಲ್ಲಿ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಕಾಂಗ್ರೆಸ್‌ ನಾಯಕರು, ಪದಾಧಿಕಾರಿಗಳು ಹಾಗೂ ಆಹ್ವಾನಿತರ ಒಟ್ಟಾರೆ ಅಭಿಪ್ರಾಯವಿದು. ಸಿದ್ದರಾಮಯ್ಯ ಅವರ ಉಪಸ್ಥಿತಿಯಲ್ಲೇ ನಡೆದ ಸಭೆಯಲ್ಲಿ ಪ್ರತಿಯೊಬ್ಬರೂ ‘ಸಿದ್ದರಾಮೋತ್ಸವ’ ಎಂಬ ಪದ ಬಳಕೆ ಕಾರ್ಯಕ್ರಮವನ್ನು ವ್ಯಕ್ತಿ ಕೇಂದ್ರೀತ ಮಾಡಲಿದೆ. ಹೀಗೆ ಮಾಡದೇ ಪಕ್ಷವು ಸಿದ್ದರಾಮಯ್ಯ ಅವರ ಜನ್ಮ ದಿನದ ಅಮೃತ ಮಹೋತ್ಸವವನ್ನು ಸಂಭ್ರಮಿಸುವ ಮೂಲಕ ಅದು ಮುಂದಿನ ಚುನಾವಣೆಯಲ್ಲಿ ಪಕ್ಷಕೆ ಪೂರಕವಾಗುವಂತೆ ಆಚರಿಸಬೇಕು ಎಂದು ಅಭಿಪ್ರಾಯಪಟ್ಟರು.

ನಾವು ಹೊಗಳುಭಟರಲ್ಲ: ಮಾಜಿ ಸಚಿವ ಹಾಗೂ ಸ್ವಾಗತ ಸಮಿತಿ ಅಧ್ಯಕ್ಷ ಎಚ್‌.ಸಿ. ಮಹದೇವಪ್ಪ ಮಾತನಾಡಿ, ‘ನಾವ್ಯಾರೂ ಹೊಗಳುಭಟ್ಟರಲ್ಲ, ವ್ಯಕ್ತಿ ಪೂಜೆ ಮಾಡುವವರೂ ಅಲ್ಲ. ವ್ಯಕ್ತಿಪೂಜೆ ಸರ್ವಾಧಿಕಾರಿ ಧೋರಣೆಗೆ ಅವಕಾಶ ನೀಡುತ್ತದೆ ಎಂದು ಡಾ.ಬಿ.ಆರ್‌. ಅಂಬೇಡ್ಕರ್‌ ಹೇಳಿದ್ದರು. ಹೀಗಾಗಿ ಸಿದ್ದರಾಮಯ್ಯ ಅವರ ಜನ್ಮದಿನಾಚರಣೆಯನ್ನು ವ್ಯಕ್ತಿ ಕೇಂದ್ರಿತವಾಗಿ ಮಾಡುತ್ತಿಲ್ಲ. ಬದಲಿಗೆ ಬಡ ಕುಟುಂಬದಿಂದ ಬಂದ ವ್ಯಕ್ತಿ ಮುಖ್ಯಮಂತ್ರಿಗೆ ಹುದ್ದೆಗೇರಿದ್ದು, 5 ವರ್ಷದ ಆಡಳಿತ ವೈಖರಿ ಹಾಗೂ ವಿವಿಧ ಸರ್ಕಾರಗಳಲ್ಲಿ ಮಂಡಿಸಿದ 13 ಬಜೆಟ್‌ಗಳನ್ನು ವಿಶ್ಲೇಷಿಸುವುದು ಮುಖ್ಯ ಉದ್ದೇಶ. ಜತೆಗೆ ಅವರ ಅವಧಿಯಲ್ಲಿ ಕಾಂಗ್ರೆಸ್‌ ಪಕ್ಷ ಜನರಿಗೆ ನೀಡಿರುವ ಕೊಡುಗೆಗಳನ್ನು ನೆನಪಿಸುವ ಮೂಲಕ ಪಕ್ಷಕ್ಕೆ ಪೂರಕವಾದ ವಾತಾವರಣ ನಿರ್ಮಿಸುವ ಬಯಕೆ ಹೊಂದಿರುವುದಾಗಿ ಹೇಳಿದರು.

‘ವಾಸ್ತವವಾಗಿ ಸಿದ್ದರಾಮಯ್ಯ ಅವರಿಗೆ ಜನ್ಮದಿನಾಚರಣೆ ಆಚರಿಸುವುದು ಇಷ್ಟವಿರಲಿಲ್ಲ. ಈವರೆಗೆ ಯಾವುದೇ ನಾಯಕನ ಜನ್ಮ ದಿನಾಚರಣೆ ಪಕ್ಷದಿಂದ ಮಾಡಿದ ಉದಾಹರಣೆಯೂ ಇಲ್ಲ. ಆರಂಭದಲ್ಲಿ ಸ್ವಲ್ಪ ಮುಜುಗರ, ಸ್ವಲ್ಪ ಗುಸು ಗುಸುಗೆ ಅವಕಾಶವಾದರೂ ಈಗ ಎಲ್ಲವೂ ತಿಳಿಯಾಗಿ ಅಂತಿಮ ಹಂತಕ್ಕೆ ಬಂದಿದ್ದೇವೆ. ಇದನ್ನು ಜನಾಂದೋಲನ ರೀತಿಯಲ್ಲಿ ಮಾಡಲಾಗುವುದು’ ಎಂದು ಹೇಳಿದರು.

ಸಿದ್ದು ಅವರನ್ನು ಮನೆಗೆ ಕಳಿಸುವ ಉತ್ಸವ ಸಿದ್ದರಾಮೋತ್ಸವ: ಅಶ್ವತ್ಥ್‌ ನಾರಾಯಣ್‌

ಸಮಿತಿ ಅಧ್ಯಕ್ಷ ಕೆ.ಎನ್‌. ರಾಜಣ್ಣ ಮಾತನಾಡಿ, ಸಿದ್ದರಾಮಯ್ಯ ಅವರ ಜನ್ಮದಿನಾಚರಣೆಗೆ ಯಾವುದೇ ಕಾರಣಕ್ಕೂ ‘ಸಿದ್ದರಾಮೋತ್ಸವ’ ಎಂಬ ಪದ ಬಳಸದಂತೆ ಈಗಾಗಲೇ ಸೂಚಿಸಲಾಗಿದೆ. ಪಕ್ಷವನ್ನು 2023ಕ್ಕೆ ಅಧಿಕಾರಕ್ಕೆ ತರಬೇಕಿರುವುದು ನಮ್ಮೆಲ್ಲರ ಕರ್ತವ್ಯ. ಕೇಂದ್ರದಲ್ಲಿ ಮತ್ತೊಮ್ಮೆ ಕಾಂಗ್ರೆಸ್‌ ಅಧಿಕಾರಕ್ಕೆ ಬರಬೇಕು. 2023 ಕರ್ನಾಟಕ ವಿಧಾನಸಭೆ ಚುನಾವಣೆ ಇದಕ್ಕೆ ದಿಕ್ಸೂಚಿಯಾಗಲಿದೆ. ಹೀಗಾಗಿ ಪಕ್ಷವನ್ನು ಅಧಿಕಾರಕ್ಕೆ ತರಲು ಪೂರಕವಾಗಿಯೇ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ ಎಂದರು.

40 ಎಕರೆಯಲ್ಲಿ ಅಚ್ಚುಕಟ್ಟಾದ ವ್ಯವಸ್ಥೆ: ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್‌. ಶಂಕರ್‌ ಮಾತನಾಡಿ, ದಾವಣಗೆರೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರ 40 ಎಕರೆ ಜಮೀನಿನಲ್ಲಿ ಈಗಾಗಲೇ ಪೆಂಡಾಲ್‌ ವ್ಯವಸ್ಥೆ ಮಾಡಲಾಗುತ್ತಿದೆ. ರಾಜ್ಯದ ಮೂಲೆ-ಮೂಲೆಯಿಂದ ಲಕ್ಷಾಂತರ ಜನರು ಭಾಗವಹಿಸಬೇಕು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರನ್ನು ಸಂಚಾಲಕರನ್ನಾಗಿ ಹಾಗೂ ಶಾಸಕರು, ಮಾಜಿ ಸಚಿವರನ್ನು ಗೌರವ ಸದಸ್ಯರನ್ನಾಗಿ ಮಾಡಿದ್ದು, ಆಯಾ ಜಿಲ್ಲೆಗಳಿಂದ ಭಾರೀ ಪ್ರಮಾಣದಲ್ಲಿ ಕಾರ್ಯಕರ್ತರನ್ನು ಕಾರ್ಯಕ್ರಮಕ್ಕೆ ಕರೆ ತರಬೇಕು. ಕಾರ್ಯಕ್ರಮದಲ್ಲಿ ನೂಕುನುಗ್ಗಲು ಉಂಟಾಗದಂತೆ, ಊಟ ಸೇರಿದಂತೆ ಎಲ್ಲಾ ರೀತಿಯ ವ್ಯವಸ್ಥೆಯನ್ನೂ ಅಚ್ಚುಕಟ್ಟಾಗಿ ಮಾಡಬೇಕು ಎಂದು ಹೇಳಿದರು.

ಪೂರ್ವ ಸಿದ್ಧತಾ ಸಭೆಯಲ್ಲಿ ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌, ಸಮಿತಿ ಗೌರವಾಧ್ಯಕ್ಷರಾದ ಆರ್‌.ವಿ. ದೇಶಪಾಂಡೆ, ಕೆಪಿಸಿಸಿ ಮಾಜಿ ಅಧ್ಯಕ್ಷರಾದ ಅಲ್ಲಂ ವೀರಭದ್ರಪ್ಪ, ದಿನೇಶ್‌ಗುಂಡರಾವ್‌, ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸತೀಶ್‌ ಜಾರಕಿಹೊಳಿ, ಧ್ರುವನಾರಾಯಣ, ಈಶ್ವರಖಂಡ್ರೆ, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್‌ ಸೇರಿದಂತೆ ಹಲವರು ಹಾಜರಿದ್ದರು.

ಸಿದ್ದರಾಮೋತ್ಸವದಿಂದ ತಪ್ಪು ಸಂದೇಶ ರವಾನೆ ಬೇಡ: ಸಂಸದ ಡಿ.ಕೆ.ಸುರೇಶ್‌

ಡಿಕೆಶಿ, ಬಿ.ಕೆ. ಹರಿಪ್ರಸಾದ್‌ ಗೈರು:  ಸಿದ್ದು ಜನ್ಮದಿನ ಪೂರ್ವಭಾವಿ ಸಭೆಗೆ ಆಹ್ವಾನವಿದ್ದರೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಪರಿಷತ್‌ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌ ಗೈರುಹಾಜರಾಗಿದ್ದರು. ಈ ಕುರಿತು ಕಾರ್ಯಕ್ರಮ ಆರಂಭದಲ್ಲಿ ಸ್ಪಷ್ಟನೆ ನೀಡಿದ ಮಾಜಿ ಸಚಿವ ಬಸವರಾಜ ರಾಯರೆಡ್ಡಿ, ಡಿ.ಕೆ. ಸಿವಕುಮಾರ್‌ ಹಾಗೂ ಇತರ ಮುಖಂಡರಿಗೆ ಸಾಂಕೇತಿಕ್ವಾಗಿ ಆಹ್ವಾನ ಕೊಟ್ಟಿದ್ದೇವೆ. ಆದರೆ ಇದು ಪೂರ್ವಭಾವಿ ಸಭೆ ಆಗಿರುವುದರಿಂದ ಅವರು ಯಾರೂ ಬರಲ್ಲ. ಆ.3ರ ಕಾರ್ಯಕ್ರಮಕ್ಕೆ ಅವರೆಲ್ಲರೂ ಬರುತ್ತಾರೆ ಎಂದರು.

Follow Us:
Download App:
  • android
  • ios