‘ಚುನಾವಣಾ ಸಾಮೀಪ್ಯ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರ 75ನೇ ಜನ್ಮ ದಿನಾಚರಣೆ ಕಾರ್ಯಕ್ರಮದಿಂದ ತಪ್ಪು ಸಂದೇಶ ರವಾನೆಯಾಗಬಾರದು. ಯಾರಿಗೋ ನಾಯಕತ್ವ ನೀಡಿದಂತೆ ಬಿಂಬಿತವಾಗಬಾರದು. ಇಷ್ಟಕ್ಕೂ ಸಿದ್ದರಾಮಯ್ಯ ಅವರಿಗೆ ವ್ಯಕ್ತಿ ಪೂಜೆ ಇಷ್ಟವಿದೆಯೋ ಇಲ್ಲವೋ ಆದರೆ ಕೆಲವರು ಅದನ್ನು ಮಾಡುತ್ತಿದ್ದಾರೆ.’
ಬೆಂಗಳೂರು (ಜು.14): ‘ಚುನಾವಣಾ ಸಾಮೀಪ್ಯ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರ 75ನೇ ಜನ್ಮ ದಿನಾಚರಣೆ ಕಾರ್ಯಕ್ರಮದಿಂದ ತಪ್ಪು ಸಂದೇಶ ರವಾನೆಯಾಗಬಾರದು. ಯಾರಿಗೋ ನಾಯಕತ್ವ ನೀಡಿದಂತೆ ಬಿಂಬಿತವಾಗಬಾರದು. ಇಷ್ಟಕ್ಕೂ ಸಿದ್ದರಾಮಯ್ಯ ಅವರಿಗೆ ವ್ಯಕ್ತಿ ಪೂಜೆ ಇಷ್ಟವಿದೆಯೋ ಇಲ್ಲವೋ ಆದರೆ ಕೆಲವರು ಅದನ್ನು ಮಾಡುತ್ತಿದ್ದಾರೆ.’
ಹೀಗಂತ ಕಾಂಗ್ರೆಸ್ ನಾಯಕ ಹಾಗೂ ಸಂಸದ ಡಿ.ಕೆ. ಸುರೇಶ್ ಅವರು ಸಿದ್ದರಾಮಯ್ಯ ಜನ್ಮ ದಿನದ ಅಮೃತ ಮಹೋತ್ಸವ ಪೂರ್ವ ಸಿದ್ಧತಾ ಸಭೆಯಲ್ಲೇ ಟಾಂಗ್ ನೀಡಿದರು. ಜತೆಗೆ, ‘ಸಿದ್ದರಾಮಯ್ಯ ಅವರ 75ನೇ ವರ್ಷದ ಜನ್ಮ ದಿನೋತ್ಸವ ಸಮಯದಲ್ಲೇ ಸ್ವಾತಂತ್ರ್ಯ ಅಮೃತ ಮಹೋತ್ಸವವೂ ಇದೆ. ಸಿದ್ದರಾಮಯ್ಯ ಜನ್ಮದಿನ ಮಾತ್ರ ಬಿಂಬಿಸುವ ಬದಲು ಇವೆರಡನ್ನೂ ಜತೆಯಲ್ಲಿ ಬಿಂಬಿಸುತ್ತಾ ಕಾರ್ಯಕ್ರಮ ಮಾಡುವುದು ಸೂಕ್ತ’ ಎಂದು ಸಲಹೆ ನೀಡಿದರು.
ಸೂಟು ಬೂಟು ಹೊಲಿಸಿಕೊಂಡವರೆಲ್ಲ ಸಿಎಂ ಆಗಲ್ಲ: ಡಿಕೆ ಬ್ರದರ್ಸ್ ವಿರುದ್ಧ ಅಶ್ವತ್ಥ ನಾರಾಯಣ ಕಿಡಿ
‘ವ್ಯಕ್ತಿ ಪೂಜೆ ಸಿದ್ದರಾಮಯ್ಯ ಅವರಿಗೆ ಇಷ್ಟವಿದೆಯೋ ಇಲ್ಲವೋ ಆದರೆ ಕೆಲವರು ಮಾಡುತ್ತಿದ್ದಾರೆ. ಯಾರಿಗೋ ಒಬ್ಬರಿಗೆ ನಾಯಕತ್ವ ನೀಡುತ್ತಿದ್ದೀರಿ ಎಂದಲ್ಲ. ಮುಂದೆ ಚುನಾವಣೆ ಇರುವುದರಿಂದ ಕೆಟ್ಟಸಂದೇಶ ಹೋಗದಂತೆ ಆಚರಣೆ ಮಾಡಬೇಕು’ ಎಂದು ಈ ವೇಳೆ ಸಲಹೆ ನೀಡಿದರು. ‘ನಮಗೆ ಇಷ್ಟಇದೆಯೋ ಇಲ್ಲವೋ ಇದನ್ನು ಸಿದ್ದರಾಮೋತ್ಸವ ಎನ್ನುತ್ತಿದ್ದಾರೆ. ಇದನ್ನು ಅಮೃತ ಮಹೋತ್ಸವ ಸಮಿತಿಯು ಯಾರಿಗೋ ಅಂಜಿ ಅಲ್ಲಗೆಳೆಯಬಾರದು. ನೀವು ಇದನ್ನು ಸಿದ್ದರಾಮೋತ್ಸವ ಎಂದು ಒಪ್ಪಿಕೊಳ್ಳಬೇಕು. ಜತೆಗೆ ಸ್ವಾತಂತ್ರ್ಯ 75ನೇ ಅಮೃತ ಮಹೋತ್ಸವವನ್ನೂ ಆಚರಿಸಬೇಕು’ ಎಂದರು.
‘ಈ ಕಾರ್ಯಕ್ರಮದ ಮೂಲಕ ಇಲ್ಲಿ ಯಾರನ್ನೂ ವೈಭವೀಕರಿಸುತ್ತಿಲ್ಲ. ಯಾರಿಗೋ ನಾಯಕತ್ವ ನೀಡುತ್ತಿದ್ದೀರಿ ಎಂದೂ ಅಲ್ಲ. ಆದರೆ, ಸಿದ್ದರಾಮಯ್ಯ ಅವರಿಗೆ ಇಷ್ಟವಿಲ್ಲದಿದ್ದರೂ ಕೆಲವರು ವ್ಯಕ್ತಿಪೂಜೆ ಮಾಡುತ್ತಿದ್ದಾರೆ. ಇದರಿಂದ ಕೆಟ್ಟಸಂದೇಶ ರವಾನೆಯಾಗಬಹುದು. ಚುನಾವಣೆ ಸಾಮೀಪ್ಯದಲ್ಲಿ ಸಮಾಜಕ್ಕೆ ಇಂತಹ ಸಂದೇಶ ರವಾನೆಯಾಗದಂತೆ ಎಚ್ಚರವಹಿಸಬೇಕು’ ಎಂದು ಮನವಿ ಮಾಡಿದರು.
ರಾಮನಗರ: ಕೃಷಿ ಅಧಿಕಾರಿಗಳ ಮೈ ಚಳಿ ಬಿಡಿಸಿದ ಸಂಸದ ಡಿ.ಕೆ.ಸುರೇಶ್..!
‘ಸಿದ್ದರಾಮಯ್ಯನವರ ಸಾಧನೆ ಬಗ್ಗೆ ಎಲ್ಲರೂ ಮಾತನಾಡೋಣ. ಇಂದು 75 ವರ್ಷ ಬದುಕುವುದೇ ಕಷ್ಟ. ಸಿದ್ದರಾಮಯ್ಯ ಅವರು 75 ವರ್ಷ ಪೂರೈಸಿದ್ದಾರೆ. 40 ವರ್ಷ ಸಾರ್ಥಕ ರಾಜಕಾರಣ ಮಾಡಿ ಮುಖ್ಯಮಂತ್ರಿಗಳಾಗಿದ್ದಾಗ ಬಡವರ ಪರ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಇದಕ್ಕೆ ಅವರು ಅನುಭವಿಸಿದ ಬಡತನ, ನೋವು ಸಹ ಕಾರಣ. ಇವೆಲ್ಲವನ್ನೂ ಕಾರ್ಯಕ್ರಮದ ಮೂಲಕ ತಿಳಿಸುವ ಕೆಲಸ ಆಗಬೇಕು’ ಎಂದು ಕರೆ ನೀಡಿದರು.
