ಸ್ಥಳೀಯ, ಸಂಸತ್ ಚುನಾವಣೆ ಗೆಲ್ಲಲು ‘ಕೈ’ ಪಣ; ಕೆಲವು ಸಚಿವರ ಬದಲಾವಣೆ ಸಾಧ್ಯತೆ!
‘ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 20 ಸ್ಥಾನ ಗೆಲ್ಲುವುದಾಗಿ ಹೈಕಮಾಂಡ್‌ಗೆ ಭರವಸೆ ನೀಡಿದ್ದೇವೆ. ಮೈಮರೆಯದೆ ಕೆಲಸ ಮಾಡಿ ಅದಕ್ಕೂ ಹೆಚ್ಚು ಸ್ಥಾನ ಗೆಲ್ಲಬೇಕು. ಇದಕ್ಕಾಗಿ ಗ್ಯಾರಂಟಿ ಯೋಜನೆಗಳ ಶಕ್ತಿಯನ್ನು ಸಮರ್ಪಕವಾಗಿ ಬಳಸಿಕೊಳ್ಳಿ’ ಎಂದು ಕೆಪಿಸಿಸಿ ಸರ್ವ ಸದಸ್ಯರ ಸಭೆಯಲ್ಲಿ ಕಾಂಗ್ರೆಸ್ ನಾಯಕರು ಕರೆ ನೀಡಿದ್ದಾರೆ

ಬೆಂಗಳೂರು (ಆ.15) : ‘ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 20 ಸ್ಥಾನ ಗೆಲ್ಲುವುದಾಗಿ ಹೈಕಮಾಂಡ್‌ಗೆ ಭರವಸೆ ನೀಡಿದ್ದೇವೆ. ಮೈಮರೆಯದೆ ಕೆಲಸ ಮಾಡಿ ಅದಕ್ಕೂ ಹೆಚ್ಚು ಸ್ಥಾನ ಗೆಲ್ಲಬೇಕು. ಇದಕ್ಕಾಗಿ ಗ್ಯಾರಂಟಿ ಯೋಜನೆಗಳ ಶಕ್ತಿಯನ್ನು ಸಮರ್ಪಕವಾಗಿ ಬಳಸಿಕೊಳ್ಳಿ’ ಎಂದು ಕೆಪಿಸಿಸಿ ಸರ್ವ ಸದಸ್ಯರ ಸಭೆಯಲ್ಲಿ ಕಾಂಗ್ರೆಸ್ ನಾಯಕರು ಕರೆ ನೀಡಿದ್ದಾರೆ.
ಅಲ್ಲದೆ, ‘ಪಕ್ಷದ ಹಿತದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಕೆಪಿಸಿಸಿಯಲ್ಲಿ ಬದಲಾವಣೆ ಮಾಡುತ್ತೇವೆ. ಕೆಲವು ಮಂತ್ರಿಗಳನ್ನು ಬದಲಾಯಿಸಬೇಕಾಗುತ್ತದೆ. ಪಕ್ಷಕ್ಕೆ ಕೊಡುಗೆ ನೀಡದವರನ್ನು ಮುಂದುವರೆಸಲ್ಲ. ಬ್ಲಾಕ್, ಜಿಲ್ಲಾ ಮಟ್ಟದಿಂದ ಕೆಪಿಸಿಸಿ ಮಟ್ಟದವರೆಗೂ ಪದಾಧಿಕಾರಿಗಳ ಬದಲಾವಣೆ ಮಾಡುತ್ತೇವೆ’ ಎಂದೂ ಹೇಳಿದ್ದಾರೆ.
ಇಂದಿರಾಗಾಂಧಿ ಭವನದಲ್ಲಿನ ಭಾರತ್ ಜೋಡೋ ಸಭಾಂಗಣದಲ್ಲಿ ಸೋಮವಾರ ನಡೆದ ಕೆಪಿಸಿಸಿ ಸರ್ವ ಸದಸ್ಯರ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ‘2024ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸೋಲುವುದರಲ್ಲಿ ಯಾವುದೇ ಉತ್ಪ್ರೇಕ್ಷೆಯಿಲ್ಲ. ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಬೇಕು. ಗ್ಯಾರಂಟಿ ಯೋಜನೆಗಳ ಯಶಸ್ಸನ್ನು ಜನರಿಗೆ ತಲುಪಿಸುವ ಮೂಲಕ ಸ್ಥಳೀಯ ಸಂಸ್ಥೆಗಳು, ಪಾಲಿಕೆ, ಪಂಚಾಯ್ತಿಗಳಲ್ಲೂ ಗೆಲುವು ಸಾಧಿಸಬೇಕು’ ಎಂದು ಕರೆ ನೀಡಿದರು.
ಸಿಎಂ ಸಿದ್ದರಾಮಯ್ಯ, ಡಿಕೆಶಿ ಸೇರಿ ಹಲವರ ವಿರುದ್ಧದ ಒಟ್ಟು 9 ಕ್ರಿಮಿನಲ್ ಕೇಸ್ ರದ್ದು
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ‘34 ವರ್ಷಗಳ ಬಳಿಕ ದೊರೆತಿರುವ ಅಭೂತಪೂರ್ವ ಗೆಲುವನ್ನು ಕಾರ್ಯಕರ್ತರಿಗೆ ಅರ್ಪಿಸುತ್ತೇವೆ. ರಾಜ್ಯಾದ್ಯಂತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರೋಡ್ ಶೋ ನಡೆಸಿದ ಕ್ಷೇತ್ರಗಳನ್ನೆಲ್ಲಾ ಬಿಜೆಪಿ ಸೋತಿದೆ. ರಾಹುಲ್‌ಗಾಂಧಿ ಭಾರತ್ ಜೋಡೋ ಯಾತ್ರೆ ನಡೆಸಿದ ಕ್ಷೇತ್ರಗಳನ್ನೆಲ್ಲಾ ಕಾಂಗ್ರೆಸ್ ಗೆದ್ದಿದೆ. ಇದು ಕೇಂದ್ರದಲ್ಲಿ ಬಿಜೆಪಿಯ ಭವಿಷ್ಯವನ್ನು ತಿಳಿಸುತ್ತದೆ’ ಎಂದರು.
2024, 28ರ ಚುನಾವಣೆಯೇ ಗುರಿ:
ಡಿ.ಕೆ.ಶಿವಕುಮಾರ್ ಮಾತನಾಡಿ,ನಮ್ಮ ಮುಂದೆ ಕೇವಲ 2024ರ ಲೋಕಸಭೆ ಚುನಾವಣೆ ಜತೆಗೆ 2028ರ ವಿಧಾನಸಭೆ ಚುನಾವಣೆ ಗುರಿಯೂ ಇದೆ. ಜಿಲ್ಲಾ, ತಾಲೂಕು ಪಂಚಾಯ್ತಿ, ಪಾಲಿಕೆ ಚುನಾವಣೆಗೂ ಸಿದ್ಧತೆ ನಡೆಸಬೇಕು. ನ್ಯಾಯಾಲಯದಿಂದ ಅನುಮತಿ ಸಿಕ್ಕಿದರೆ ಇವೆಲ್ಲ ಚುನಾವಣೆ ನಡೆಸಲೂ ಸಿದ್ಧವಾಗಿದ್ದೇವೆ. ಹೀಗಾಗಿ ಕಾರ್ಯಕರ್ತರೂ ಸನ್ನದ್ಧರಾಗಬೇಕು. ಈ ನಿಟ್ಟಿನಲ್ಲಿ ಪಕ್ಷಕ್ಕೆ ದುಡಿಯದ ಸಚಿವರು, ಕೆಪಿಸಿಸಿ ಪದಾಧಿಕಾರಿಗಳನ್ನು ಬದಲಿಸುತ್ತೇವೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ಸಚಿವರಾದ ಕೆ.ಜೆ. ಜಾಜ್‌ರ್, ಕೆ.ಎಚ್. ಮುನಿಯಪ್ಪ, ರಾಮಲಿಂಗಾರೆಡ್ಡಿ, ಈಶ್ವರ್ ಖಂಡ್ರೆ ಸೇರಿ ಹಲವರು ಹಾಜರಿದ್ದರು.
ಭ್ರಷ್ಟಾಚಾರ ಆರೋಪ ಸುಳ್ಳು: ಡಿಕೆಶಿ
ಗ್ಯಾರಂಟಿ ಯೋಜನೆಗಳನ್ನು ಸಹಿಸಲಾಗದೆ ಬಿಜೆಪಿಯವರು ಸುಳ್ಳು ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ. ನಾನು ಎಂದಿಗೂ ಪಕ್ಷ, ಸರ್ಕಾರ, ಕಾರ್ಯಕರ್ತರ ಸ್ವಾಭಿಮಾನಕ್ಕೆ ಧಕ್ಕೆ ತರುವ ಕೆಲಸ ಮಾಡಲ್ಲ. ನಾನು ಹಾಗೆ ಮಾಡುವುದಾದರೆ ಸೋನಿಯಾಗಾಂಧಿ ಅವರು ಜೈಲಿಗೆ ಬಂದು ನನಗೆ ಧೈರ್ಯ ತುಂಬುತ್ತಿದ್ದರಾ ಎಂದು ಡಿ.ಕೆ. ಶಿವಕುಮಾರ್ ಬಾವುಕರಾಗಿ ನುಡಿದರು.
ಸಚಿವರು ನಿರ್ಲಕ್ಷ್ಯ ಮಾಡಿದರೆ ನನಗೆ ದೂರು ಕೊಡಿ, ಪತ್ರ ಬರೆದು ಬಹಿರಂಗ ಹೇಳಿಕೆ ಬೇಡ: ಸಿಎಂ
ಬ್ಲಾಕ್ ಮಟ್ಟದಲ್ಲಿ ಪಕ್ಷದ ಕಚೇರಿ ಕಡ್ಡಾಯ
ಪ್ರತಿ ಬ್ಲಾಕ್‌ನಲ್ಲಿ ಪಕ್ಷದ ಕಚೇರಿ ಇರಲೇಬೇಕು ಎಂದು ಸೂಚಿಸಿದ್ದೇನೆ. ನೀವು ಜಮೀನು ಖರೀದಿಸುತ್ತೀರೋ ಏನು ಮಾಡುತ್ತೀರೋ ಗೊತ್ತಿಲ್ಲ. ಕಾಂಗ್ರೆಸ್ ಕಚೇರಿ ನಿರ್ಮಾಣ ಮಾಡಲೇಬೇಕು. ಮುಖ್ಯಮಂತ್ರಿಗಳು, ಸಚಿವರು ಯಾವುದೇ ಜಿಲ್ಲಾ ಪ್ರವಾಸ ಮಾಡಿದರೂ ಅಲ್ಲಿನ ಜಿಲ್ಲಾಧ್ಯಕ್ಷರೂ ಇರಬೇಕು. ಇದರಲ್ಲಿ ರಾಜಿಯಿಲ್ಲ ಎಂದು ಶಿವಕುಮಾರ್ ತಿಳಿಸಿದರು.