ಡಿಕೆ ಶಿವಕುಮಾರ್  ಸಿಎಂ ಸಿದ್ದರಾಮಯ್ಯ ವಿರುದ್ಧದ ಮೇಕೆದಾಟು ಕೇಸ್‌ ರದ್ದು, ಸಂಪುಟ ಸಭೆ ನಿರ್ಣಯ ಒಟ್ಟು 9 ಪ್ರಕರಣಗಳ ರದ್ದುಗೆ ಅಸ್ತು. ಮೇಕೆದಾಟು ಪಾದಯಾತ್ರೆ ವೇಳೆ ದಾಖಲಾಗಿದ್ದ ಕೇಸ್‌.

ಬೆಂಗಳೂರು (ಆ.11): ಮೇಕೆದಾಟು ಪಾದಯಾತ್ರೆ ವೇಳೆ ಕೊರೋನಾ ಮಾರ್ಗಸೂಚಿ ಉಲ್ಲಂಘಿಸಿದ್ದಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌, ಸಂಸದ ಡಿ.ಕೆ. ಸುರೇಶ್‌ ಸೇರಿದಂತೆ ಇನ್ನಿತರರ ವಿರುದ್ಧ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿದ್ದ 9 ಪ್ರಕರಣಗಳನ್ನು ರದ್ದು ಮಾಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಯಿತು.

ಮೇಕೆದಾಟು ಯೋಜನೆಗಾಗಿ 2022ರ ಜನವರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಮೇಕೆದಾಟುವಿನಿಂದ ಬೆಂಗಳೂರಿನವರೆಗೆ ರಾಜ್ಯ ಸರ್ಕಾರ ಪ್ರಕಟಿಸಿದ್ದ ಕೊರೋನಾ ಮಾರ್ಗಸೂಚಿ ಉಲ್ಲಂಘಿಸಿ ಪಾದಯಾತ್ರೆ ಮಾಡಲಾಗಿತ್ತು. ಆ ಹಿನ್ನೆಲೆಯಲ್ಲಿ ಪಾದಯಾತ್ರೆ ಸಾಗಿದ ಆಯಾ ತಾಲೂಕಿನ ತಹಶೀಲ್ದಾರ್‌ಗಳು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ಸೇರಿದಂತೆ ಮತ್ತಿತರ ವಿರುದ್ಧ 9 ಪೊಲೀಸ್‌ ಠಾಣೆಗಳಲ್ಲಿ ಪ್ರಕರಣ ದಾಖಲಿಸಿದ್ದರು. ಇದೀಗ ಆ ಪ್ರಕರಣಗಳನ್ನು ಕೈ ಬಿಡುವಂತೆ ಆಡಳಿತ ಪಕ್ಷದ ಮುಖ್ಯ ಸಚೇತಕ ಅಶೋಕ್‌ ಪಟ್ಟಣ ಅವರು ಅರ್ಜಿ ಸಲ್ಲಿಸಿದ್ದರು. ಆ ಹಿನ್ನೆಲೆಯಲ್ಲಿ ಮೇಕೆದಾಟು ಪಾದಯಾತ್ರೆ ವೇಳೆ ದಾಖಲಾಗಿದ್ದ ಪ್ರಕರಣಗಳನ್ನು ಕೈಬಿಡಲು ನಿರ್ಧರಿಸಲಾಗಿದೆ.

ಸೈಬರ್‌ ಭದ್ರತೆಗಾಗಿ ರಾಜ್ಯಕ್ಕೆ ಪ್ರತ್ಯೇಕ ಸೈಬರ್‌ ನೀತಿ, ಬಸ್‌ಗಳಲ್ಲಿ ವೆಹಿಕಲ್‌ ಟ್ರ್ಯಾಕಿಂಗ್‌ ವ್ಯವಸ್ಥೆ

ಶಿಕ್ಷೆಗೆ ಒಳಗಾದ 4 ಅಧಿಕಾರಿಗಳು ವಜಾ: ಲೋಕಾಯುಕ್ತ ದಾಳಿ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿರುವ ನಾಲ್ವರು ಅಧಿಕಾರಿಗಳನ್ನು ಕಡ್ಡಾಯ ರಜೆ ಅಥವಾ ಕರ್ತವ್ಯದಿಂದ ವಜಾಗೊಳಿಸಲಾಗಿದೆ. ಈ ಸಂಬಂಧ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಹಣಕಾಸು ದುರ್ಬಳಕೆ ಹಿನ್ನೆಲೆಯಲ್ಲಿ ಸೆಷನ್ಸ್‌ ನ್ಯಾಯಾಲಯದಿಂದ 5 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ಡಾ. ಎಂ.ಎಚ್‌.ನಾಗೇಶ್‌ ಹಾಗೂ ಪೊಕ್ಸೋ ಪ್ರಕರಣದ ಅಡಿಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಆರೋಪಿ ಎಂದು ಸಾಬೀತಾದ ಗದಗ ಜಿಲ್ಲೆ ಮುಂಡರಗಿಯ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌.ಎನ್‌. ಹಳ್ಳಿಗುಡಿ ಅವರನ್ನು ಸೇವೆಯಿಂದ ವಜಾ ಮಾಡಲಾಗಿದೆ. ಲೋಕಾಯುಕ್ತ ದಾಳಿಗೆ ತುತ್ತಾಗಿ ಇಲಾಖಾ ವಿಚಾರಣೆಯಲ್ಲಿ ಆರೋಪಿ ಎಂದು ಸಾಬೀತಾಗಿರುವ ರಾಮನಗರ ಜಿಲ್ಲಾ ಆಸ್ಪತ್ರೆಯ ವೈದ್ಯೆ ಡಾ. ಉಷಾ ಕುಂದರಗಿ ಹಾಗೂ ಬೆಂಗಳೂರಿನ ಸಿವಿ ರಾಮನ್‌ ಆಸ್ಪತ್ರೆಯ ವೈದ್ಯೆ ಡಾ. ಎಸ್‌.ಟಿ.ನಾಗಮಣಿ ಅವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಲು ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.

ಗುತ್ತಿಗೆದಾರರ ಕಮಿಶನ್‌ ಆರೋಪ ಸುಳ್ಳು, ಪ್ರಾಮಾಣಿಕ ಕೆಲಸಗಾರರಿಗೆ ಶೀಘ್ರ ನ್ಯಾಯ: 4 ಸಚಿವರಿಂದ ಸ್ಪಷ್ಟನೆ

ಕರಾವಳಿ ಮಂಡಳಿಗೆ ಉ.ಕ., ಉಡುಪಿ, ಚಿಕ್ಕಮಗಳೂರು ಸೇರ್ಪಡೆ:
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಹೆಸರು ಬದಲಿ ಕರಾವಳಿ ಪ್ರದೇಶಾಭಿವೃದ್ಧಿ ಮಂಡಳಿ ಎಂದು ಮರುನಾಮಕರಣ ಮಾಡಲು ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಲಾಗಿದೆ. ಮಂಡಳಿ ವ್ಯಾಪ್ತಿಗೆ ಉತ್ತರ ಕನ್ನಡ, ಉಡುಪಿ ಹಾಗೂ ಚಿಕ್ಕಮಗಳೂರನ್ನು ಸೇರ್ಪಡೆ ಮಾಡಲಾಗಿದೆ. ಜತೆಗೆ ಮಲೆನಾಡು ಅಭಿವೃದ್ಧಿ ಮಂಡಳಿಯಲ್ಲಿದ್ದ 23 ತಾಲೂಕುಗಳನ್ನು ಕರಾವಳಿ ಪ್ರದೇಶಾಭಿವೃದ್ಧಿ ಮಂಡಳಿ ವ್ಯಾಪ್ತಿಗೆ ತರಲು ಅನುಮೋದಿಸಲಾಗಿದೆ.

ರಾಜ್ಯ ಸಹಕಾರಿ ಕೃಷಿ ಗ್ರಾಮೀಣ ಬ್ಯಾಂಕ್‌ ನಬಾರ್ಡ್‌ ಮೂಲಕ 1,600 ಕೋಟಿ ರು. ಪಡೆಯಲು ಸರ್ಕಾರ ಖಾತ್ರಿ ನೀಡುವುದನ್ನು ವಿಸ್ತರಿಸಿ ಘಟನೋತ್ತರ ಅನುಮೋದನೆ ನೀಡಲಾಗಿದೆ. ಜತೆಗೆ ಸಹಕಾರಿ ಕೃಷಿ ಗ್ರಾಮೀಣ ಬ್ಯಾಂಕ್‌ನಿಂದ ರಾಜ್ಯ ಸರ್ಕಾರಕ್ಕೆ ಪಾವತಿಸಬೇಕಿರುವ ಶೇ. 1ರಷ್ಟುಗ್ಯಾರಂಟಿ ಚಾಜ್‌ರ್‍ನ್ನು ಮನ್ನಾ ಮಾಡುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದ್ದು, ಅಂತಿಮವಾಗಿ ಅದರ ನಿರ್ಧಾರ ತೆಗೆದುಕೊಳ್ಳುವ ಹೊಣೆಯನ್ನು ಮುಖ್ಯಮಂತ್ರಿ ಅವರಿಗೆ ನೀಡಲಾಯಿತು.