Asianet Suvarna News Asianet Suvarna News

ಇಂದು 3 ಗ್ಯಾರಂಟಿ: ಅನ್ನಭಾಗ್ಯ, ಶಕ್ತಿ, ಗೃಹಜ್ಯೋತಿ ಘೋಷಣೆ ಸಂಭವ

ವಿದ್ಯುತ್‌ ಬಳಕೆ 200 ಯುನಿಟ್‌ ದಾಟಿದರೆ ಪೂರ್ತಿ ಬಿಲ್‌ ಕಟ್ಟಿ, - ಗರಿಷ್ಠ 200 ಯುನಿಟ್‌ ವಿದ್ಯುತ್‌ ಮಾತ್ರ ಉಚಿತ, 200 ಯುನಿಟ್‌ಗಿಂತ ಹೆಚ್ಚು ಬಳಸುವವರು ಪೂರ್ತಿ ಬಿಲ್‌ ಪಾವತಿಸಬೇಕು 

Congress 3 Guarantees Likely Implement in Karnataka On June 2nd grg
Author
First Published Jun 2, 2023, 5:17 AM IST

ಬೆಂಗಳೂರು(ಜೂ.02):  ರಾಜ್ಯಾದ್ಯಂತ ಜನರು ಕಾತುರದಿಂದ ಕಾಯುತ್ತಿರುವ ಪಂಚ ಗ್ಯಾರಂಟಿ ಯೋಜನೆಗಳ ಜಾರಿ ಬಗ್ಗೆ ಶುಕ್ರವಾರ ಮಹತ್ವದ ಸಚಿವ ಸಂಪುಟ ಸಭೆ ನಡೆಯಲಿದ್ದು, ಐದು ಯೋಜನೆಗಳ ಅಧಿಕೃತ ಆರಂಭ ಕುರಿತು ಘೋಷಣೆ ಹೊರಬೀಳುವ ನಿರೀಕ್ಷೆಯಿದೆ.

ಸರ್ಕಾರದ ಉನ್ನತ ಮೂಲಗಳ ಪ್ರಕಾರ, ಈ ಐದು ಯೋಜನೆಗಳಲ್ಲಿ ಅನ್ನಭಾಗ್ಯ, ಗೃಹ ಜ್ಯೋತಿ ಹಾಗೂ ಮಹಿಳೆಯರ ಉಚಿತ ಬಸ್‌ ಪ್ರಯಾಣದ ‘ಶಕ್ತಿ’ ತಕ್ಷಣ ಜಾರಿಯಾಗಲಿದ್ದು, ಗೃಹ ಲಕ್ಷ್ಮೇ ಹಾಗೂ ಯುವನಿಧಿ ಯೋಜನೆಗಳ ಫಲಾನುಭವಿಗಳ ಆಯ್ಕೆಗೆ ನಿಗದಿತ ಪ್ರಕ್ರಿಯೆ ಇರಲಿದೆ. ಅಂದರೆ, ಈ ಯೋಜನೆ ತಕ್ಷಣವೇ ಜಾರಿ ಎಂದಿಟ್ಟುಕೊಂಡರೂ ಯೋಜನೆಯ ಪ್ರಯೋಜನ ಪಡೆಯಲು ಅರ್ಜಿ ಆಹ್ವಾನ ಹಾಗೂ ಅರ್ಜಿ ಪರಿಷ್ಕರಣೆಯಂತಹ ಪ್ರಕ್ರಿಯೆ ನಡೆಯುವ ಅಗತ್ಯವಿದೆ. ಹೀಗಾಗಿ ವಾಸ್ತವವಾಗಿ ಈ ಯೋಜನೆ ಫಲಾನುಭವಿಗಳಿಗೆ ದೊರೆಯುವುದು ತಡವಾಗಲಿದೆ.

ಅತ್ತೆ, ಸೊಸೆ ಇಬ್ಬರಿಗೂ ಗೃಹಲಕ್ಷ್ಮಿ ಯೋಜನೆ ಕೊಡುವಂತೆ ಒತ್ತಾಯ!

ಇನ್ನು ತಕ್ಷಣದಿಂದ ಜಾರಿಯಾಗಲಿರುವ ಶಕ್ತಿ ಯೋಜನೆಯಡಿ ರಾಜ್ಯದ ಮಹಿಳೆಯರು ಸಾಮಾನ್ಯ ಕೆಂಪು ಬಸ್ಸು ಹಾಗೂ ಹವಾನಿಯಂತ್ರಿತ ವ್ಯವಸ್ಥೆ (ನಾನ್‌-ಎಸಿ) ಹೊಂದಿಲ್ಲದ ಬಸ್‌ಗಳಲ್ಲಿ ರಾಜ್ಯಾದ್ಯಂತ ಉಚಿತ ಪ್ರಯಾಣದ ಪ್ರಯೋಜನ ಪಡೆಯಬಹುದು. ಇದಕ್ಕಾಗಿ ಮಹಿಳೆಯರು ಪಾಸ್‌ ಪಡೆಯಬೇಕಾದ ಅಗತ್ಯವಿದೆ.

200 ಯುನಿಟ್‌ ಮೀರಿದರೆ ಪೂರ್ಣ ಶುಲ್ಕ:

ಗೃಹ ಜ್ಯೋತಿ ಯೋಜನೆಯಡಿ ಗರಿಷ್ಠ 200 ಯುನಿಟ್‌ ಉಚಿತ ವಿದ್ಯುತ್‌ ನೀಡಲಾಗುವುದು. ಆದರೆ, 200 ಯುನಿಟ್‌ ಮಿತಿಗಿಂತ ಹೆಚ್ಚು ವಿದ್ಯುತ್‌ ಬಳಸುವವರಿಗೆ ಈ ಯೋಜನೆಯ ಲಾಭ ದೊರೆಯುವುದಿಲ್ಲ. ಅಂಥವರು ಪೂರ್ಣ ಪ್ರಮಾಣದ ಶುಲ್ಕ ಭರಿಸಬೇಕಾಗುವ ಸಾಧ್ಯತೆಯಿದೆ.

ಇನ್ನು 200 ಯುನಿಟ್‌ಗಿಂತ ಕಡಿಮೆ ವಿದ್ಯುತ್‌ ಬಳಸುವವರು ಈ ಯೋಜನೆಯ ವ್ಯಾಪ್ತಿಗೆ ಬರುತ್ತಾರೆ. ಈ ಗ್ರಾಹಕರ ಈ ಹಿಂದಿನ ವರ್ಷದ ಸರಾಸರಿ ವಿದ್ಯುತ್‌ ಬಳಕೆಯನ್ನು ಆಧರಿಸಿ ಅವರಿಗೆ ಎಷ್ಟುವಿದ್ಯುತ್‌ ಉಚಿತ ನೀಡಬೇಕು ಎಂಬುದನ್ನು ತೀರ್ಮಾನಿಸುವ ಸಾಧ್ಯತೆಯಿದೆ. ಉದಾಹರಣೆಗೆ ಕಳೆದ ವರ್ಷದ ಸರಾಸರಿಯಂತೆ 50 ಯುನಿಟ್‌ ಬಳಸುವ ಗ್ರಾಹಕ ಈ ಯೋಜನೆಯ ವ್ಯಾಪ್ತಿಗೆ ಬಂದರೂ ಆತ ಸಂಪೂರ್ಣ 200 ಯುನಿಟ್‌ಗೆ ಅರ್ಹನಾಗುವುದಿಲ್ಲ. ತಾನು ಸರಾಸರಿ ಬಳಸುವ ವಿದ್ಯುತ್‌ ಪ್ರಮಾಣವಾದ 50 ಯುನಿಟ್‌ ಜತೆಗೆ ಹೆಚ್ಚುವರಿಯಾಗಿ ಶೇ.10ರಷ್ಟುವಿದ್ಯುತ್‌ಗೆ ಉಚಿತ ಸೌಲಭ್ಯ ಪಡೆಯಬಹುದು.

ವಿದ್ಯುತ್‌ ಬಳಕೆದಾರರು ಪೂರ್ಣ ಪ್ರಮಾಣದ ವಿದ್ಯುತ್‌ ಶುಲ್ಕವನ್ನು ಪಾವತಿಸಿ ಬಳಿಕ ಸರ್ಕಾರದಿಂದ ಡಿಬಿಟಿ (ಡೈರೆಕ್ಟ್ ಬ್ಯಾಂಕ್‌ ಟ್ರಾನ್ಸ್‌ಫರ್‌) ಮಾದರಿಯಲ್ಲಿ ಸಹಾಯಧನ ಹಿಂಪಡೆಯಬೇಕು. ಜತೆಗೆ ಉಚಿತ ವಿದ್ಯುತ್‌ ಅಗತ್ಯವಿಲ್ಲದ ಶ್ರೀಮಂತರು ಉಚಿತ ಕೊಡುಗೆಯನ್ನು ಬಡವರ ಅನುಕೂಲಕ್ಕಾಗಿ ಬಿಟ್ಟುಕೊಡಬಹುದು (ಗಿವ್‌ ಅವೇ).

‘ಅನ್ನಭಾಗ್ಯ’ದಲ್ಲಿ ರಾಗಿ, ಗೋಧಿ, ಜೋಳ:

ಇನ್ನು ಅನ್ನಭಾಗ್ಯ ಅಕ್ಕಿ ಯೋಜನೆಯಡಿ ಪ್ರತಿ ಸದಸ್ಯರಿಗೆ 10 ಕೆ.ಜಿ. ಅಕ್ಕಿ ಘೋಷಿಸಲಾಗಿದೆ. ಅಕ್ಕಿ ಕೊರತೆ ನೀಗಿಸಲು ಅಕ್ಕಿ ಅಥವಾ ರಾಗಿ, ಜೋಳ ಹಾಗೂ ಗೋಧಿಯನ್ನೂ ಆಯ್ಕೆಯಾಗಿ ವಿತರಿಸಲು ನಿರ್ಧರಿಸಲಾಗಿದೆ.

ಗೃಹ ಲಕ್ಷ್ಮೇಯದ್ದೇ ಗೊಂದಲ:

ಗೃಹ ಲಕ್ಷ್ಮೇ ಯೋಜನೆಯಡಿ ಮನೆಯೊಡತಿಗೆ ಸೀಮಿತವಾಗಿ ಮಾಸಿಕ 2 ಸಾವಿರ ರು. ಪರಿಹಾರ ನೀಡುವುದಾಗಿ ಹೇಳಲಾಗಿದೆ. ಮನೆಯೊಡತಿಯನ್ನು ನಿರ್ಧರಿಸುವ ಕೆಲಸಕ್ಕೆ ಸರ್ಕಾರ ಮುಂದಾಗುವುದು ಬೇಡ. ಈ ಆಯ್ಕೆಯನ್ನು ಮನೆಯವರೇ ನಿರ್ಧರಿಸಿ ಅರ್ಜಿ ಸಲ್ಲಿಸಬೇಕು ಎಂಬ ನಿಲುವು ಇದೆ. ಅರ್ಹರನ್ನು ಪರಿಶೀಲಿಸಿ ಸರ್ಕಾರ ಸಹಾಯಧನ ನೀಡಲಿದೆ. ಇದಕ್ಕಾಗಿ ನಿಯಮಾವಳಿ ರೂಪಿಸಲಿದೆ.

‘ಯುವ ನಿಧಿ’ ಜಾರಿ ತುಸು ವಿಳಂಬ:

ಪ್ರಣಾಳಿಕೆಯಲ್ಲಿ ಪದವಿ ಮುಗಿಸಿ 180 ದಿನಗಳಾದರೂ ಉದ್ಯೋಗ ಲಭಿಸದ 18ರಿಂದ 25 ವರ್ಷ ವರ್ಷದೊಳಗಿನ ಪದವಿ (ಮಾಸಿಕ 3 ಸಾವಿರ ರು.), ಡಿಪ್ಲೊಮಾ (1,500 ರು.) ಪದವೀಧರರಿಗೆ ನಿರುದ್ಯೋಗ ಭತ್ಯೆ ಎಂದು ಘೋಷಿಸಲಾಗಿದೆ. ಇದರಡಿ ಪ್ರಸಕ್ತ ಅವಧಿಯಲ್ಲಿ ಉತ್ತೀರ್ಣರಾದವರು ಮಾತ್ರ 6 ತಿಂಗಳ ಬಳಿಕವೂ ನಿರುದ್ಯೋಗಿಯಾಗಿದ್ದರೆ 6 ತಿಂಗಳ ನಂತರ ನಿರುದ್ಯೋಗ ಭತ್ಯೆ ಲಭ್ಯವಾಗಲಿದೆ. ಹೀಗಾಗಿ ನಿರುದ್ಯೋಗಿಗಳ ಗುರುತಿಸುವ ಪ್ರಕ್ರಿಯೆಗಾಗಿ ಅನುಷ್ಠಾನ ತುಸು ವಿಳಂಬವಾಗುವ ಸಾಧ್ಯತೆಯಿದೆ.

ಇನ್ನು ಬಿಎ, ಬಿಕಾಂ, ಬಿಎಸ್ಸಿ, ಎಂಜಿನಿಯರಿಂಗ್‌, ಎಂಬಿಬಿಎಸ್‌ ಸೇರಿದಂತೆ ಎಲ್ಲಾ ರೀತಿಯ ಪದವಿ, ಮಾನ್ಯತೆ ಪಡೆದ ಡಿಪ್ಲೊಮಾ ಪದವೀಧರರಿಗೂ ಯೋಜನೆ ಅನ್ವಯವಾಗಲಿದೆ.

ಇಡೀ ದಿನ ಸಿಎಂ ಸಭೆ:

ಈ ಯೋಜನೆಗಳ ಯಶಸ್ವಿಯಾಗಿ ಜಾರಿಗೊಳಿಸುವ ಸಂಬಂಧ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಸಚಿವರು ಹಾಗೂ ಇಲಾಖಾ ಅಧಿಕಾರಿಗಳೊಂದಿಗೆ ಪೂರ್ವ ಸಿದ್ಧತಾ ಸಭೆ ನಡೆಸಿದ್ದರು. ಜತೆಗೆ ಗುರುವಾರವೂ ಇಂಧನ ಸಚಿವ ಕೆ.ಜೆ. ಜಾಜ್‌ರ್‍ ಸೇರಿದಂತೆ ಹಲವು ಸಚಿವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತುಕತೆ ನಡೆಸಿ ರೂಪರೇಷೆ ಸಿದ್ಧಪಡಿಸಿದರು.

ಮಹಿಳೆಯರಿಗೆ ರಾಜ್ಯದ ಎಲ್ಲೆಡೆ ಉಚಿತ ಪ್ರಯಾಣ

ತಕ್ಷಣದಿಂದ ಜಾರಿಯಾಗಲಿರುವ ಶಕ್ತಿ ಯೋಜನೆಯಡಿ ರಾಜ್ಯದ ಮಹಿಳೆಯರು ಸಾಮಾನ್ಯ ಕೆಂಪು ಬಸ್ಸು ಹಾಗೂ ಹವಾನಿಯಂತ್ರಿತ ವ್ಯವಸ್ಥೆ (ನಾನ್‌-ಎಸಿ) ಹೊಂದಿಲ್ಲದ ಬಸ್‌ಗಳಲ್ಲಿ ರಾಜ್ಯಾದ್ಯಂತ ಉಚಿತ ಪ್ರಯಾಣದ ಪ್ರಯೋಜನ ಪಡೆಯಬಹುದು. ಇದಕ್ಕಾಗಿ ಮಹಿಳೆಯರು ಪಾಸ್‌ ಪಡೆಯಬೇಕಾದ ಅಗತ್ಯವಿದೆ ಎಂದು ಮೂಲಗಳು ಹೇಳಿವೆ.

ಕೊಟ್ಟ ಮಾತಿನಂತೆ ಐದೂ ಗ್ಯಾರಂಟಿ ಈಡೇರಿಸೋದು ಗ್ಯಾರಂಟಿ: ಸಿಎಂ ಸಿದ್ದರಾಮಯ್ಯ

ಮಹಿಳೆಯರಿಂದ ಅರ್ಜಿ ಆಹ್ವಾನಿಸಿ 2000 ಜಾರಿ, ನಿರುದ್ಯೋಗ ಭತ್ಯೆಯೂ ವಿಳಂಬ

ಮನೆಯೊಡತಿಗೆ 2000 ರು. ಮಾಸಿಕ ನೆರವು ನೀಡುವ ಯೋಜನೆಗೆ ಮನೆಯವರೇ ಒಬ್ಬ ಮಹಿಳೆಯನ್ನು ನಿರ್ಧರಿಸಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡುವ ಸಾಧ್ಯತೆಯಿದೆ. ಬಳಿಕ ಅರ್ಹರನ್ನು ಪರಿಶೀಲಿಸಿ ಸಹಾಯಧನ ನೀಡಲಾಗುತ್ತದೆ. ಹೀಗಾಗಿ ಇದು ತುಸು ವಿಳಂಬವಾಗಲಿದೆ. ಇನ್ನು, ನಿರುದ್ಯೋಗ ಭತ್ಯೆ ನೀಡಲು ಪ್ರಸಕ್ತ ಸಾಲಿನಲ್ಲಿ ಪದವಿ ಉತ್ತೀರ್ಣರಾಗಿ 6 ತಿಂಗಳು ಕಳೆದರೂ ನಿರುದ್ಯೋಗಿಯಾಗಿರಬೇಕು ಎಂಬ ಮಾನದಂಡ ಹಾಕಿಕೊಳ್ಳಲಾಗಿದೆ. ಹೀಗಾಗಿ ಇವರನ್ನು ಗುರುತಿಸುವುದೂ ವಿಳಂಬವಾಗುವ ಸಾಧ್ಯತೆಯಿದೆ.

ಗೃಹಜ್ಯೋತಿ ಯೋಜನೆಗೆ ವಿಧಿಸಬಹುದಾದ ಷರತ್ತುಗಳು ಇಂತಿವೆ:

- ಗರಿಷ್ಠ 200 ಯುನಿಟ್‌ ವಿದ್ಯುತ್‌ ಮಾತ್ರ ಉಚಿತ
- 200 ಯುನಿಟ್‌ಗಿಂತ ಹೆಚ್ಚು ಬಳಸುವವರು ಪೂರ್ತಿ ಬಿಲ್‌ ಪಾವತಿಸಬೇಕು
- ಕಳೆದ ವರ್ಷದ ವಿದ್ಯುತ್‌ ಬಳಕೆ ಆಧರಿಸಿ ಎಷ್ಟುಉಚಿತ ವಿದ್ಯುತ್‌ ನೀಡಬೇಕು ಎಂದು ಸರ್ಕಾರದಿಂದಲೇ ನಿರ್ಧಾರ
- ಉದಾ: ಕಳೆದ ವರ್ಷ ಸರಾಸರಿ 50 ಯುನಿಟ್‌ ಬಳಸಿದ್ದರೆ 200 ಯುನಿಟ್‌ ಉಚಿತ ಸಿಗುವುದಿಲ್ಲ, ಬದಲಿಗೆ 10% ಹೆಚ್ಚುವರಿ ವಿದ್ಯುತ್‌ ಮಾತ್ರ ಉಚಿತ
- ಗ್ರಾಹಕರು ಮೊದಲು ಪೂರ್ಣ ಬಿಲ್‌ ಕಟ್ಟಿ, ಬಳಿಕ ಡಿಬಿಟಿ ಮೂಲಕ ಸರ್ಕಾರದಿಂದ ಮರುಪಾವತಿ ಪಡೆಯಬೇಕು
- ಉಚಿತ ವಿದ್ಯುತ್‌ನ ಅಗತ್ಯ ಇಲ್ಲದ ಶ್ರೀಮಂತರು ಯೋಜನೆ ತಿರಸ್ಕರಿಸಬಹುದು

Follow Us:
Download App:
  • android
  • ios