Asianet Suvarna News Asianet Suvarna News

ಸಾಮೂಹಿಕ ಅತ್ಯಾಚಾರ ಪ್ರಕರಣ: ಅಪ್ರಾಪ್ತನ ಬಿಡುಗಡೆಗೆ ತಾಯಿಗೆ ಹೈಕೋರ್ಟ್ ಷರತ್ತು

ಕಾಲೇಜು ವಿದ್ಯಾರ್ಥಿನಿ (ಅಪ್ರಾಪ್ತೆ) ಜೊತೆ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿದ ಮತ್ತು ಆ ದೃಶ್ಯಗಳನ್ನು ವಿಡಿಯೋ ಮಾಡಿ ಕೊಲೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಅಪ್ರಾಪ್ತನಿಗೆ ಆತನ ತಾಯಿಗೆ ಷರತ್ತು ಹಾಕಿ ಹೈಕೋರ್ಟ್ ಜಾಮೀನು ನೀಡಿದೆ.

Condition for the release of the rapist minor karnataka highcourt rav
Author
First Published Jul 18, 2023, 12:46 PM IST

ಬೆಂಗಳೂರು (ಜು.18) :  ಕಾಲೇಜು ವಿದ್ಯಾರ್ಥಿನಿ (ಅಪ್ರಾಪ್ತೆ) ಜೊತೆ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿದ ಮತ್ತು ಆ ದೃಶ್ಯಗಳನ್ನು ವಿಡಿಯೋ ಮಾಡಿ ಕೊಲೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಅಪ್ರಾಪ್ತನಿಗೆ ಆತನ ತಾಯಿಗೆ ಷರತ್ತು ಹಾಕಿ ಹೈಕೋರ್ಟ್ ಜಾಮೀನು ನೀಡಿದೆ. ಆರೋಪಿ ಭವಿಷ್ಯದಲ್ಲಿ ಅಪರಾಧಿಕ ಹಿನ್ನೆಲೆಯುಳ್ಳವರೊಂದಿಗೆ ಸಂಪರ್ಕ ಬೆಳೆಸದಂತೆ ಮತ್ತು ಅಪರಾಧ ಕೃತ್ಯದಲ್ಲಿ ಭಾಗಿಯಾಗದಂತೆ ನೋಡಿಕೊಂಡು ಪ್ರತಿ ಮೂರು ತಿಂಗಳಿಗೊಮ್ಮೆ ಬಾಲ ನ್ಯಾಯಮಂಡಳಿಗೆ ವರದಿ ಸಲ್ಲಿಸಬೇಕು ಎಂದು ತಾಯಿಗೆ ಷರತ್ತು ವಿಧಿಸಿದೆ.

ಪ್ರಕರಣ ಸಂಬಂಧ ಜಾಮೀನು ಕೋರಿ ಧಾರವಾಡದ ಅಪ್ರಾಪ್ತನೊಬ್ಬ ತನ್ನ ತಾಯಿ ಮೂಲಕ ಸಲ್ಲಿಸಿದ್ದ ಕ್ರಿಮಿನಲ್‌ ಮರು ಪರಿಶೀಲನಾ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಅನಿಲ್‌ ಬಿ.ಕಟ್ಟಿಅವರ ಪೀಠ ಈ ಆದೇಶ ಮಾಡಿದೆ.

ಗ್ಯಾಂಗ್‌ರೇಪ್‌: ಅಪ್ರಾಪ್ತ ಗೆಳೆಯನೊಂದಿಗೆ ಮನೆ ಬಿಟ್ಟು ಓಡಿ ಬಂದ ಬಾಲಕಿ ಸಿಲುಕಿದ್ದು ಕಾಮುಕರ ಕೈಗೆ

ಬಾಲ ನ್ಯಾಯ (ಆರೈಕೆ ಮತ್ತು ಸಂರಕ್ಷಣೆ) ಕಾಯ್ದೆ-2015ರ ಸೆಕ್ಷನ್‌ 12 ಅಡಿ ಜಾಮೀನು ಕೋರಿ ಅಪ್ರಾಪ್ತ ಆರೋಪಿಯ ಅರ್ಜಿಯನ್ನು ನಿರ್ಧರಿಸುವಾಗ ಅಪರಾಧ ಪ್ರಕರಣದ ಗಂಭೀರತೆ ಪರಿಗಣಿಸುವ ಅಗತ್ಯವಿಲ್ಲ ಎಂಬ ಆರೋಪಿ ಪರ ವಕೀಲರ ವಾದ ಪುರಸ್ಕರಿಸಿದ ಹೈಕೋರ್ಚ್‌, ಆರೋಪಿಯ ದೈಹಿಕ, ಮಾನಸಿಕ, ಶೈಕ್ಷಣಿಕ, ಸಾಮಾಜಿಕ ಸ್ಥಿತಿಗತಿಯ ಬಗ್ಗೆ ಧಾರವಾಡದ ನಿಮ್ಹಾನ್ಸ್‌ ಆಸ್ಪತ್ರೆಯಿಂದ ವರದಿ ತರಿಸಿಕೊಂಡು ಪರಿಶೀಲನೆ ನಡೆಸಿತು. ಜತೆಗೆ, ಘಟನೆ ನಡೆದಾಗ ಅರ್ಜಿದಾರನಿಗೆ 17 ವರ್ಷವಾಗಿದ್ದು, ಮತ್ತು ಆರೋಪಿಯನ್ನು ತನ್ನ ಸುಪರ್ದಿಯಲ್ಲಿಟ್ಟುಕೊಳ್ಳಲು ತಾಯಿ ಸಮರ್ಥಳಾಗಿರುವ ಅಂಶವನ್ನು ಪರಿಗಣಿಸಿ ಜಾಮೀನು ನೀಡಿದೆ.

ಮಗನ ಜಾಮೀನಿಗಾಗಿ ತಾಯಿಗೆ ಷರತ್ತುಗಳು:

ಧಾರವಾಡದ ಬಾಲ ನ್ಯಾಯಮಂಡಳಿಗೆ ಮಗನ ಪರವಾಗಿ ಒಂದು ಲಕ್ಷ ರು. ಮೊತ್ತದ ವೈಯಕ್ತಿಕ ಬಾಂಡ್‌ ಹಾಗೂ ಒಬ್ಬರ ಭದ್ರತಾ ಖಾತರಿ ಒದಗಿಸಬೇಕು. ಮಗ ಯಾವುದೇ ಕ್ರಿಮಿನಲ್‌ ಹಿನ್ನೆಲೆಯುಳ್ಳ ವ್ಯಕ್ತಿಗಳೊಂದಿಗೆ ಆರೋಪಿ ಸಂಪರ್ಕ ಬೆಳೆಸಲು ಬಿಡಬಾರದು ಹಾಗೂ ಅಪರಾಧ ಕೃತ್ಯದಲ್ಲಿ ಭಾಗಿಯಾಗದಂತೆ ನೋಡಿಕೊಳ್ಳಬೇಕು. ಆತ ವ್ಯಾಸಂಗ ಮುಂದುವರಿಸುವ ಅಥವಾ ರಚನಾತ್ಮಕ ಚಟುವಟಿಕೆಗಳನ್ನು ಪಾಲ್ಗೊಳ್ಳುವುದನ್ನು ಖಾತರಿಪಡಿಸಬೇಕು. ಅನುತ್ಪಾದಕ ಮತ್ತು ಮನರಂಜನಾ ಚಟುವಟಿಕೆಗಳಲ್ಲಿ ಹೆಚ್ಚಿನ ಸಮಯ ವ್ಯರ್ಥಮಾಡದಂತೆ ನೋಡಿಕೊಳ್ಳಬೇಕು. ಅದನ್ನು ದೃಢಪಡಿಸಿ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಅಪ್ರಾಪ್ತನ ತಾಯಿಗೆ ಹೈಕೋರ್ಟ್ ಷರತ್ತು ವಿಧಿಸಿದೆ.

ಅಲ್ಲದೆ, ಈ ಕುರಿತಂತೆ ಅಪ್ರಾಪ್ತ ಮತ್ತು ತಾಯಿ 2023ರ ಆಗಸ್ಟ್‌ 1ರಿಂದ ಪ್ರತಿ ಮೂರು ತಿಂಗಳಿಗೆ ಒಮ್ಮೆ ಬಾಲ ನ್ಯಾಯಮಂಡಳಿ ಪ್ರೊಬೆಷನರಿ ಅಧಿಕಾರಿಗೆ ವರದಿ ಸಲ್ಲಿಸಬೇಕು. ಪ್ರೊಬೆಷನರಿ ಅಧಿಕಾರಿ ಸಹ ಅಪ್ರಾಪ್ತನ ಚಟುವಟಿಕೆ ಮೇಲೆ ದೃಷ್ಟಿಹರಿಸಬೇಕು. ನಿರಂತರವಾಗಿ ಆತನ ಕುರಿತು ಸಾಮಾಜಿಕ ತನಿಖಾ ವರದಿ ಸಿದ್ಧಪಡಿಸಿ ಬಾಲ ನ್ಯಾಯಮಂಡಳಿಗೆ ಸಲ್ಲಿಸಬೇಕು ಎಂದು ಹೈಕೋರ್ಚ್‌ ಷರತ್ತು ವಿಧಿಸಿದೆ.

 

ಪ್ರಾಥಮಿಕ ಶಾಲೆ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: 20 ವರ್ಷ ಜೈಲು ಶಿಕ್ಷೆ ನೀಡಿದ ನ್ಯಾಯಾಲಯ

ಪ್ರಕರಣದ ವಿವರ:

ಆರೋಪಿ ತನ್ನ ಏಳು ಮಂದಿ ಸ್ನೇಹಿತರ ಜೊತೆಗೂಡಿ ಧಾರವಾಡದ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯೋರ್ವಳನ್ನು ಬಲವಂತವಾಗಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕವಾಗಿ ಲೈಂಗಿಕ ಕ್ರಿಯೆ ನಡೆಸಿದ್ದ. ಆ ದೃಶ್ಯಗಳನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದರು. ಘಟನೆ ಬಹಿರಂಗ ಪಡಿಸಿದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಮಾಡುವುದಲ್ಲದೆ ಕೊಲೆ ಮಾಡುವುದಾಗಿ ಬೆದರಿಕೆ ಸಹ ಹಾಕಿದ್ದರು. ಘಟನೆ ಸಂಬಂಧ ಧಾರವಾಡ ಟೌನ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪೊಲೀಸರು ತನಿಖೆ ನಡೆಸಿ ಅಪ್ರಾಪ್ತ ಸೇರಿ ಎಲ್ಲ ಆರೋಪಿಗಳನ್ನು ಬಂಧಿಸಿದ್ದರು. ಬಾಲನ್ಯಾಯ ಮಂಡಳಿ ಮತ್ತು ಧಾರವಾಡ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಜಾಮೀನು ನಿರಾಕರಿಸಿದ್ದರಿಂದ ಅಪ್ರಾಪ್ತ ತನ್ನ ತಾಯಿ ಮೂಲಕ ಹೈಕೋರ್ಚ್‌ ಮೊರೆ ಹೋಗಿದ್ದ.

Latest Videos
Follow Us:
Download App:
  • android
  • ios