Asianet Suvarna News Asianet Suvarna News

Belagavi Assembly Session: ‘ಕೃಷ್ಣಾ ಮೇಲ್ಡಂಡೆ ರಾಷ್ಟ್ರೀಯ ಯೋಜನೆ’ಗೆ ವ್ಯಾಜ್ಯ ತೊಡಕು: ಕಾರಜೋಳ

*   ಕಾನೂನು ತಕರಾರುಗಳ ನಿವಾರಣೆಗೆ ರಾಜ್ಯ ಸರ್ಕಾರದ ಕ್ರಮ
*   ಕೇಂದ್ರ ಸಚಿವರ ಜತೆ ಚರ್ಚಿಸಿ ಪರಿಹಾರ: ಸಚಿವ ಕಾರಜೋಳ
*   ಕಾಂಗ್ರೆಸ್‌ ಸದಸ್ಯ ಪ್ರಕಾಶ್‌ ರಾಥೋಡ್‌ ಪ್ರಶ್ನೆಗೆ ಉತ್ತರಿಸಿದ ಸಚಿವರು 
 

Complication of Legal Disputes to Upper Krishna National Project Says Govind Karjol grg
Author
Bengaluru, First Published Dec 24, 2021, 9:07 AM IST

ಬೆಳಗಾವಿ(ಡಿ.24):  ಕೃಷ್ಣಾ ಮೇಲ್ದಂಡೆ ಯೋಜನೆಯ(Upper Krishna Project) 3ನೇ ಹಂತವನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿ ಕೇಂದ್ರದಿಂದ ನೆರವು ಪಡೆಯುವುದು ಸೇರಿದಂತೆ ಯೋಜನೆ ಸಂಬಂಧ ಇರುವ ಎಲ್ಲ ಕಾನೂನು ತಕರಾರುಗಳ ನಿವಾರಣೆಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ(Govind Karjol) ಹೇಳಿದ್ದಾರೆ.

ಗುರುವಾರ ಕಾಂಗ್ರೆಸ್‌(Congress) ಸದಸ್ಯ ಪ್ರಕಾಶ್‌ ರಾಥೋಡ್‌(Prakash Rathod) ಅವರ ಪ್ರಶ್ನೆಗೆ ವಿಧಾನ ಪರಿಷತ್‌ನಲ್ಲಿ ಉತ್ತರಿಸಿದ ಸಚಿವರು, ರಾಷ್ಟ್ರೀಯ ಯೋಜನೆ(National Project) ಎಂದು ಘೋಷಣೆಯಾಗಲು ಯಾವುದೇ ವ್ಯಾಜ್ಯ ಇರಬಾರದು ಎಂಬ ನಿಯಮವಿದೆ. ಆದರೆ ಈ ಯೋಜನೆಗೆ ಬೇರೆ ರಾಜ್ಯಗಳ ತಕರಾರು ಇದೆ. ಹೀಗಾಗಿ ರಾಷ್ಟ್ರೀಯ ಯೋಜನೆ ಎಂದು ಘೋಷಿಸುವಲ್ಲಿ ತಡವಾಗುತ್ತಿದೆ. ರಾಷ್ಟ್ರೀಯ ಯೋಜನೆ ಎಂದು ಘೋಷಿಸುವ ಸಂಬಂಧ ಮುಖ್ಯಮಂತ್ರಿ(Chief Minister Basavaraj Bommai) ಸೇರಿದಂತೆ ತಾವು ಕೇಂದ್ರದ ವಿವಿಧ ಸಚಿವರನ್ನು ಭೇಟಿ ಮಾಡಿ ಚರ್ಚಿಸಿದ್ದೇವೆ ಎಂದರು.

ಕೃಷ್ಣಾ ಮೇಲ್ದಂಡೆಗೆ ನೀವು ಹಣ ನೀಡಲಿಲ್ಲ, ಈಗ ಕೇಳ್ತಿದ್ದೀರಾ?: ಬಿಎಸ್‌ವೈ ತಿರುಗೇಟು

3ನೇ ಹಂತದ ಯೋಜನೆಗಾಗಿ ಕೃಷ್ಣಾ ನ್ಯಾಯಾಧಿಕರಣ-2ರ ತೀರ್ಪಿನಡಿ 130 ಟಿಎಂಸಿ ನೀರಿನ ಹಂಚಿಕೆ ಆಗಿದ್ದು, ಸದರಿ ನೀರಿನ ಬಳಕೆಯು ನ್ಯಾಯಾಧಿಕರಣದ ತೀರ್ಪಿನ ಗೆಜೆಟ್‌ ಅಧಿಸೂಚನೆಗೆ ಒಳಪಟ್ಟಿರುತ್ತದೆ. ಸದರಿ ತೀರ್ಪಿಗೆ ಇನ್ನೂ ಕೇಂದ್ರ ಸರ್ಕಾರದಿಂದ(Central Government) ಗೆಜೆಟ್‌ ಅಧಿಸೂಚನೆ ಆಗಬೇಕಾಗಿದೆ. ಹೀಗಾಗಿ ಗೆಜೆಟ್‌ ಪ್ರಕಟಣೆ ಸಂಬಂಧ ಸುಪ್ರೀಂ ಕೋರ್ಟ್‌ಗೆ(Supreme Court) ಅನುಮತಿ ಕೋರಿ ಸೂಕ್ತ ಪ್ರಮಾಣ ಪತ್ರ ಸಲ್ಲಿಸಲು ಕೇಂದ್ರ ಸರ್ಕಾರವನ್ನು ಕೋರಲಾಗಿದೆ. ಈಗಾಗಲೇ ಯೋಜನೆಯ ಭೂ ಸ್ವಾಧೀನ, ಪುನರ್‌ ವಸತಿ ಮತ್ತು ಪುನರ್‌ ನಿರ್ಮಾಣಕ್ಕೆ ಪ್ರಸಕ್ತ ಆಯವ್ಯಯದಲ್ಲಿ 970 ಕೋಟಿ ರು. ಒದಗಿಸಲಾಗಿದೆ. ಇದಲ್ಲದೇ ಇತ್ತೀಚೆಗೆ 2500 ಕೋಟಿ ರು.ಗಳನ್ನು ಹೆಚ್ಚುವರಿ ಕೊಡಲಾಗಿದೆ ಎಂದು ಸಚಿವರು ವಿವರಿಸಿದರು.

ಹೇಳಿದ್ದು 50 ಸಾವಿರ ಕೋಟಿ, ಕೊಟ್ಟಿದ್ದು 7728 ಕೋಟಿ ರು.

ಕೃಷ್ಣಾ ಮೇಲ್ದಂಡೆ ಯೋಜನೆಗೆ ವರ್ಷಕ್ಕೆ 10 ಸಾವಿರ ಕೋಟಿ ರು.ನಂತೆ ಐದು ವರ್ಷಕ್ಕೆ 50 ಸಾವಿರ ಕೋಟಿ ರು. ನೀಡುವುದಾಗಿ ಘೋಷಣೆ ಮಾಡಿದ್ದ ಕಾಂಗ್ರೆಸ್‌ ಐದು ವರ್ಷದಲ್ಲಿ ಕೇವಲ 7728 ಕೋಟಿ ರು. ನೀಡಿದೆ ಎಂದು ಜಲಸಂಪನ್ಮೂಲ ಸಚಿವ ಕಾರಜೋಳ ತಿರುಗೇಟು ನೀಡಿದರು.

ಕೃಷ್ಣಾ ಯೋಜನೆಗೆ ಕಡಿಮೆ ಹಣ ನೀಡಲಾಗಿದೆ ಎಂಬ ಕಾಂಗ್ರೆಸ್‌ ಸದಸ್ಯ ಪ್ರಕಾಶ್‌ ರಾಥೋಡ್‌ ಅವರ ಮಾತಿಗೆ ಪ್ರತಿಕ್ರಿಯಿಸಿದ ಅವರು, ಈ ಯೋಜನೆ ವಿಷಯದಲ್ಲಿ ನೀವು ಅಪರಾಧಿ ಸ್ಥಾನದಲ್ಲಿದ್ದೀರಿ ಎಂದರು.

ಕೃಷ್ಣಾ ಮೇಲ್ದಂಡೆಗೆ 10000 ಕೋಟಿ ರು. ಅನುದಾನ

ಕೊಪ್ಪಳ ಏತ ನೀರಾವರಿ ಯೋಜನೆಗೆ 2,715 ಕೋಟಿ ವೆಚ್ಚ

ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದಲ್ಲಿ ಕೊಪ್ಪಳ ಏತ ನೀರಾವರಿ ಯೋಜನೆಯನ್ನು(Koppal Lift Irrigation Scheme) ಅಂದಾಜು 8860 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ಈ ವರೆಗೆ 2715 ಕೋಟಿ ವೆಚ್ಚ ಮಾಡಲಾಗಿದೆ. ಪ್ರಥಮ ಹಂತದಲ್ಲಿ ಪ್ರೆಷರ್‌ ಪೈಪ್‌ಲೈನ್‌ ಡಿಸ್ಟ್ರಿಬ್ಯೂಷನ್‌ ಮೂಲಕ ಅಚ್ಚುಕಟ್ಟು ವ್ಯಾಪ್ತಿಯ 77 ಕೆರೆ ತುಂಬಿಸಿ, ಹನಿ ನೀರಾವರಿ ಅಳವಡಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ(Govind Karjol) ತಿಳಿಸಿದ್ದರು. 

ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ(Belagavi Session) ಶಾಸಕ ಅಮರೇಗೌಡ ಪಾಟೀಲ ಭಯ್ಯಾಪುರ(Amaregoda Patil Bayyapur) ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದ್ದಾರೆ. ಇದು ಪ್ರಮುಖ ಏತ ನೀರಾವರಿ ಯೋಜನೆಯಾಗಿದೆ. ನಾರಾಯಣಪುರ ಜಲಾಶಯದ(Narayanapura Dam) ಹಿನ್ನೀರಿನ ಆರ್‌.ಎಲ್‌. 487 ಮೀಟರಿನಿಂದ ಆರ್‌.ಎಲ್‌. 660 ಮೀಟರ್‌ ವರೆಗೆ ಎರಡು ಹಂತಗಳಲ್ಲಿ ನೀರು ಲಿಫ್ಟ್‌ ಮಾಡಿ ಹನಿ ನೀರಾವರಿ ಪದ್ಧತಿ ಮೂಲಕ ಕೊಪ್ಪಳ, ಬಾಗಲಕೋಟೆ ಹಾಗೂ ಗದಗ ಜಿಲ್ಲೆಗಳ ಒಟ್ಟು 2.77 ಲಕ್ಷ ಎಕರೆ ಅಚ್ಚುಕಟ್ಟು ಕ್ಷೇತ್ರಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಯೋಜನೆಯಾಗಿದೆ ಎಂದು ಮಾಹಿತಿ ನೀಡಿದ್ದರು. 
 

Follow Us:
Download App:
  • android
  • ios