50 ಸಾವಿರ ವರ್ಷಗಳ ನಂತರ ಧೂಮಕೇತು ಆಗಮನ: ಬರಿಗಣ್ಣಿಗೂ ಕಾಣಲಿದೆ ಎಂದ ಅತುಲ್‌ ಭಟ್‌

ಖಗೋಳದಲ್ಲಿ ನಡೆಯುತ್ತಿದೆ ಅಪರೂಪದ ವಿದ್ಯಮಾನ
ಇನ್ನೂ ಮೂರ್ನಾಲ್ಕು  ದಿನ ಧೂಮಕೇತು ಗೋಚರ ಆಗಲಿದೆ ಎಂದ ಖಗೋಳ ಶಾಸ್ತ್ರಜ್ಞ ಅತುಲ್‌ ಭಟ್  
ಸಹಾರಾ ಮರುಭೂಮಿಯು ಹಸಿರಾಗಿದ್ದ, ಆದಿ ಮಾನವರ ಕಾಲದಲ್ಲಿ ಗೋಚರ

Comet arrival after 50 thousand years Atul Bhatt says it will be visible to eye sat

ವರದಿ- ಶಶಿಧರ್‌ ಮಾಸ್ತಿಬೈಲು, ಏಷ್ಯಾನೆಟ್‌ ಸುವರ್ಣ ನ್ಯೂಸ್

ಉಡುಪಿ (ಫೆ.05): ಆದಿ ಮಾನವರಾದ ನಿಯಾಂಡರ್ಥಾಲ್ಸ್ ಭೂಮಿಯ ಮೇಲೆ ವಾಸಿಸುತ್ತಿದ್ದರು ಹಾಗೂ ಸಹಾರಾ ಮರುಭೂಮಿಯು ಹಸಿರಿನಿಂದ ಸಮೃದ್ಧವಾಗಿ ಫಲವತ್ತಾಗಿದ್ದ ಸಮಯದಲ್ಲಿ (ಸುಮಾರು 50 ಸಾವಿರ ವರ್ಷಗಳ ಹಿಂದೆ ಕಾಣಿಸಿಕೊಂಡಿದ್ದ ಧುಮಕೇತುವು ಇತ್ತೀಚೆಗೆ ಭೂಮಿಯ ಬಳಿ ಹಾದು ಹೋಗುತ್ತಿದೆ ಎಂದು ಉಡುಪಿಯ ಖಗೋಳ ಶಾಸ್ತ್ರಜ್ಞ ಅತುಲ್ ಭಟ್ ತಿಳಿಸಿದ್ದಾರೆ. ಖಗೋಳದ ಅಪರೂಪದ ಅತಿಥಿಯೊಂದು ನಮಗೆಲ್ಲ ವಿದಾಯ ಹೇಳಲು ಸಿದ್ಧವಾಗುತ್ತಿದೆ ಎಂದು ಹೇಳಿದ್ದಾರೆ. ಮತ್ತೊಮ್ಮೆ ಪುನಃ ಇದರ ಭೇಟಿ ಬರೋಬ್ಬರಿಗೆ 50,000 ವರ್ಷಗಳ ಬಳಿಕ! ಎಂಬ ಕುತೂಹಲಕಾರಿ ಅಂಶ ತಿಳಿಸಿದ್ದಾರೆ.

ಹಸಿರು ಬಣ್ಣದ C/2022 E3,  ದಿನದಿಂದ ದಿನಕ್ಕೆ ಪ್ರಕಾಶಮಾನವಾಗುತ್ತಾ ಬರಿಗಣ್ಣಿಗೆ ಮಂದವಾಗಿ ಗೋಚರಿಸಲಿದೆ. ಧೂಮಕೇತುವು ಗ್ರಹದ ಹಾಗೆಯೇ ಸೂರ್ಯನ ಸುತ್ತ ಚಲಿಸುವ ಶಿಲೆಯ ತುಣುಕು. ಈ ಕಾಯಗಳು ಹಿಮದ ಶಿಲೆಗಳಾಗಿರುತ್ತವೆ. ಸಾಮಾನ್ಯವಾಗಿ ಇವುಗಳು ದೀರ್ಘ ವೃತ್ತಾಕಾರದ ಕಕ್ಷೆಗಳಾಗಿರುತ್ತವೆ. ದೀರ್ಘ ವೃತ್ತಾಕಾರದ ಕಕ್ಷೆಯೆಂದರೆ, ಉದ್ದವಾಗಿರುವ ವೃತ್ತ.  ಕಕ್ಷೆಯು ಯಾವ ರೀತಿಯಲ್ಲಿ ರೂಪುಗೊಂಡಿದೆ ಎಂಬುದರ ಮೇಲೆ ಅವಲಂಬಿತವಾಗಿ ಧೂಮಕೇತುವನ್ನು ಆವರ್ತನೀಯ ಅಥವಾ ಆವರ್ತಕವಲ್ಲದ ಧೂಮಕೇತು ಎಂದು ವರ್ಗೀಕರಿಸಬಹುದು. 

ನಾಳೆ ಭೂಮಿ ಸನಿಹಕ್ಕೆ ಬರಲಿದೆ ಹಸಿರು ಧೂಮಕೇತು

50,000 ವರ್ಷಗಳ ಕಕ್ಷಾವಧಿಯ ಧೂಮಕೇತು: ಆವರ್ತಕ ಧೂಮಕೇತುಗಳು ನಿರ್ದಿಷ್ಟ ಕಕ್ಷಾವಧಿಯೊಂದಿಗೆ ಸೂರ್ಯನ ಸುತ್ತ ಪುನರಾವರ್ತಿತವಾಗಿ ಸುತ್ತುತ್ತವೆ. ಪ್ರಸಿದ್ಧ ಹ್ಯಾಲಿ ಧೂಮಕೇತು ಆವರ್ತನೀಯ ಧೂಮಕೇತುವಾಗಿದ್ದು, ಪ್ರತಿ 76 ವರ್ಷಗಳಿಗೊಮ್ಮೆ ಸೂರ್ಯನ ಸುತ್ತ ಒಂದು ಸುತ್ತನ್ನು ಪೂರ್ಣಗೊಳಿಸುತ್ತದೆ.  ಪ್ರಸ್ತುತ C/2022 E3 ಕೂಡಾ ಆವರ್ತಕ ಧೂಮಕೇತುವಾಗಿದ್ದು, ಸುದೀರ್ಘವಾದ 50,000 ವರ್ಷಗಳ ಕಕ್ಷಾವಧಿಯನ್ನು ಹೊಂದಿರುವ ಧೂಮಕೇತುವಾಗಿದೆ. ಅಂದರೆ, ಹಿಂದಿನ ಬಾರಿ ಈ ಧೂಮಕೇತುವು ಭೂಮಿಯನ್ನು ಭೇಟಿ ಮಾಡಿದಾಗ ಆದಿ ಮಾನವರಾದ ನಿಯಾಂಡರ್ಥಾಲ್ಸ್ ಭೂಮಿಯ ಮೇಲೆ ವಾಸಿಸುತ್ತಿದ್ದರು ಹಾಗೂ ಸಹಾರಾ ಮರುಭೂಮಿಯು ಹಸಿರಿನಿಂದ ಸಮೃದ್ಧವಾಗಿ ಫಲವತ್ತಾಗಿದ್ದ ಸಮಯ. 

ಧೂಮಕೇತುವಿಗೆ ಬಾಲ ಬರುವುದು ಹೇಗೆ.? ಧೂಮಕೇತುವು ಸೂರ್ಯನನ್ನು ಸಮೀಪಿಸುತ್ತಿದ್ದಂತೆ, ಅದರ ಹಿಮದ ಮೇಲ್ಮೈಯು ಕರಗಲು ಪ್ರಾರಂಭಿಸಿ, 'ಕೊಮಾ' ಎಂಬ ವಾತಾವರಣದ ನಿರ್ಮಾಣವಾಗುತ್ತದೆ ಹಾಗೂ ಅದರೊಂದಿಗೆ ಬಾಲವೂ ಸಹ ರೂಪುಗೊಳ್ಳುತ್ತದೆ. ಈ ರೀತಿಯ ರಚನೆಯಿಂದಾಗಿ ಧೂಮಕೇತು ಮತ್ತು ಕ್ಷುದ್ರಗ್ರಹಗಳನ್ನು ಪ್ರತ್ಯೇಕವಾಗಿ ವರ್ಗೀಕರಿಸಲಾಗಿದೆ. ಧೂಮಕೇತುವಿನ ಚಲನೆಯು ಯಾವುದೇ ದಿಕ್ಕಿನಲ್ಲಿರಲಿ, ಅದರ ಬಾಲವು ಯಾವಾಗಲೂ ಸೂರ್ಯನ ವಿರುದ್ಧ ದಿಕ್ಕಿನೆಡೆಗೆ ಇರುತ್ತದೆ. C/2022 E3 ಧೂಮಕೇತುವು, 2023 ಜನವರಿ 12 ರಂದು ಪುರರವಿ ಬಿಂದುವನ್ನು ತಲುಪಿ, ಅಂದರೆ ಸೂರ್ಯನ ಸಮೀಪ ತನ್ನ ಚಲನೆಯನ್ನು ಪೂರ್ಣಗೊಳಿಸಿದೆ. ಅಂತೆಯೇ ತನ್ನ ಕಕ್ಷೆಯಲ್ಲಿ ಮರಳಿ ಹೋಗುವಾಗ ಭೂಮಿಯ ಸಮೀಪಕ್ಕೆ ಬರಲಿದ್ದು, ಇದೇ ಫೆಬ್ರವರಿ ಆರಂಭದಲ್ಲಿ ಭೂಮಿಯಿಂದ 42.63 ಮಿಲಿಯ ಕಿ.ಮೀ.ಗಳಷ್ಟು ಸಮೀಪದಿಂದ ಹಾದು ಹೋಗಲಿದೆ. 

ಉಡುಪಿಯಲ್ಲಿ ಐಟಿಪಾರ್ಕ್‌ ನಿರ್ಮಿಸುವಂತೆ ಪೇಜಾವರ ಶ್ರೀಗಳ ಒತ್ತಾಯ : ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ಗೆ ಪತ್ರ

ಭೂಮಿಯ ಹತ್ತಿರದಲ್ಲಿ 5.4 ರಷ್ಟು ಕಾಂತಿಮಾನದಲ್ಲಿ ಪ್ರಕಾಶನ: ಅಂದರೆ, ಭೂಮಿ ಮತ್ತು ಸೂರ್ಯನ ನಡುವಿನ ಅಂತರದ ಸರಿಸುಮಾರು ಮೂರನೇ ಒಂದರಷ್ಟು. ಈ ಧೂಮಕೇತುವು ಭೂಮಿಯ ಹತ್ತಿರಕ್ಕೆ ಬಂದಂತೆ 5.4 ರಷ್ಟು ಕಾಂತಿಮಾನದಲ್ಲಿ ಪ್ರಕಾಶಿಸಲಿದೆ. ಕಾಂತಿಮಾನವು  ಕಾಯದ ಪ್ರಕಾಶಮಾನತೆಯನ್ನು ತಿಳಿಸುತ್ತದೆ. ಕಾಯದ ಕಾಂತಿಮಾನವು ಕಡಿಮೆಯಿದ್ದಷ್ಟು ಅದರ ಪ್ರಕಾಶಮಾನತೆಯು ಹೆಚ್ಚು. ಸೂರ್ಯನು -26 ರಷ್ಟು ಕಾಂತಿಮಾನವನ್ನು ಹೊಂದಿದ್ದು ಮತ್ತು ಶುಕ್ರ ಗ್ರಹವು -4 ರಷ್ಟು ಕಾಂತಿಮಾನದಲ್ಲಿ ಹೊಳೆಯುತ್ತದೆ.

ಭೂಮಿಯಿಂದ 42.63 ಮಿಲಿಯನ್ ಕಿ.ಮೀ. ದೂರದಲ್ಲಿ ದರ್ಶನ: 
ಆಕಾಶವು ಎಷ್ಟು ಶುಭ್ರವಾಗಿದೆಯೆಂಬುದರ ಮೇಲೆ ಅವಲಂಬಿತವಾಗಿ ಒಂದು ಕಾಯವು 6 ಅಥವಾ ಅದಕ್ಕಿಂತ ಕಡಿಮೆ ಕಾಂತಿಮಾನವನ್ನು ಹೊಂದಿದ್ದರೆ ಬರಿಗಣ್ಣಿಗೆ ಗೋಚರಿಸುತ್ತದೆ. ಹಾಗಾದರೆ ಫೆಬ್ರವರಿ ತಿಂಗಳ ಪ್ರಾರಂಭದ ಕೆಲವು ದಿನಗಳಲ್ಲಿ ಪ್ರಕಾಶಮಾನವಾಗಿ ಗೋಚರಿಸುವ C/2022 E3 ಧೂಮಕೇತುವನ್ನು ಭೂಮಿಯಿಂದ ವೀಕ್ಷಿಸಬಹುದು. ಈಗಾಗಲೇ ಫೆ.1ರಿಂದ ಭೂಮಿಯಿಂದ 42.63 ಮಿಲಿಯನ್ ಕಿ.ಮೀ. ದೂರದಲ್ಲಿ ಹಾದು ಹೋಗುತ್ತಿದ್ದು ಇನ್ನೂ ಮೂರ್ನಾಲ್ಕು ದಿನ ಗೋಚರವಾಗಲಿದೆ. 
- ಅತುಲ್ ಭಟ್, ಖಗೋಳ ಶಾಸ್ತ್ರಜ್ಞರು

Latest Videos
Follow Us:
Download App:
  • android
  • ios