ಬರ ಪರಿಹಾರಕ್ಕೆ ನೀತಿ ಸಂಹಿತೆ ಅಡ್ಡಿ ಇಲ್ಲ: ಚುನಾವಣಾಧಿಕಾರಿ ವೆಂಕಟೇಶ್ ಕುಮಾರ್
ಲೋಕಸಭೆ ಚುನಾವಣೆ ಸಂಬಂಧ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಬರ ಪರಿಹಾರ ವಿತರಣೆಗೆ ಯಾವುದೇ ಅಡ್ಡಿ ಇಲ್ಲ. ಆದರೆ, ಈಗಾಗಲೇ ಘೋಷಣೆಯಾಗಿರುವ ತಾಲೂಕುಗಳನ್ನು ಹೊರತುಪಡಿಸಿ ಹೊಸದಾಗಿ ಬರಪೀಡಿತ ತಾಲೂಕುಗಳನ್ನು ಘೋಷಣೆ ಮಾಡಲು ಅವಕಾಶ ಇಲ್ಲ ಎಂದು ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ವೆಂಕಟೇಶ್ ಕುಮಾರ್ ತಿಳಿಸಿದ್ದಾರೆ.
ಬೆಂಗಳೂರು (ಮಾ.21): ಲೋಕಸಭೆ ಚುನಾವಣೆ ಸಂಬಂಧ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಬರ ಪರಿಹಾರ ವಿತರಣೆಗೆ ಯಾವುದೇ ಅಡ್ಡಿ ಇಲ್ಲ. ಆದರೆ, ಈಗಾಗಲೇ ಘೋಷಣೆಯಾಗಿರುವ ತಾಲೂಕುಗಳನ್ನು ಹೊರತುಪಡಿಸಿ ಹೊಸದಾಗಿ ಬರಪೀಡಿತ ತಾಲೂಕುಗಳನ್ನು ಘೋಷಣೆ ಮಾಡಲು ಅವಕಾಶ ಇಲ್ಲ ಎಂದು ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ವೆಂಕಟೇಶ್ ಕುಮಾರ್ ತಿಳಿಸಿದ್ದಾರೆ. ಲೋಕಸಭಾ ಚುನಾವಣೆ ಅಂಗವಾಗಿ ಬುಧವಾರ ಮಾಧ್ಯಮ ಪ್ರತಿನಿಧಿಗಳಿಗೆ ಹಾಗೂ ಜಿಲ್ಲಾ ವಾರ್ತಾಧಿಕಾರಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಚುನಾವಣೆ ಕುರಿತು ಕಾರ್ಯಾಗಾರ ಹಾಗೂ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಅಧಿಕಾರದಲ್ಲಿರುವ ಪಕ್ಷಗಳು ಯಾವುದೇ ಹೊಸ ಯೋಜನೆಗಳನ್ನು ಘೋಷಣೆ ಮಾಡುವಂತಿಲ್ಲ. ಸರ್ಕಾರದ ಕಾಮಗಾರಿಗಳಿಗೆ ಚಾಲನೆ ನೀಡುವಂತಿಲ್ಲ. ಆದರೆ ಬರ ಪರಿಹಾರದ ತುರ್ತು ಸೇವೆಗಳು, ಪ್ರಕೃತಿ ವಿಕೋಪಗಳ ಪರಿಹಾರ, ವೈದ್ಯಕೀಯ ಚಿಕಿತ್ಸೆ, ಮುಖ್ಯಮಂತ್ರಿಗಳ ಪರಿಹಾರ ನಿಧಿ ಜಾರಿಗೆ ಯಾವುದೇ ಅಡೆತಡೆ ಇರುವುದಿಲ್ಲ. ಆದರೆ, ಈಗಾಗಲೇ ಘೋಷಣೆಯಾಗಿರುವ ಬರಪೀಡಿತ ತಾಲೂಕುಗಳನ್ನು ಹೊರತುಪಡಿಸಿ ಇತರೆ ಹೊಸ ತಾಲೂಕುಗಳನ್ನು ಘೋಷಣೆ ಮಾಡಲು ಅವಕಾಶ ಇಲ್ಲ. ಒಂದು ವೇಳೆ ಘೋಷಣೆ ಮಾಡಬೇಕಾದರೆ ಆಯೋಗದ ಅನುಮತಿ ಪಡೆದುಕೊಳ್ಳಬೇಕು ಎಂದು ಹೇಳಿದರು.
ಕಾಂಗ್ರೆಸ್ ಇಲ್ಲದಿದ್ದರೆ ದೇವೇಗೌಡರನ್ನು ದೇಶ ನೆನೆಸಿಕೊಳ್ತಿರಲಿಲ್ಲ: ಸಂಸದ ಡಿ.ಕೆ.ಸುರೇಶ್
ಅಧಿಕಾರದಲ್ಲಿರುವ ಪಕ್ಷದ ರಾಜಕೀಯ ವ್ಯಕ್ತಿಗಳು ಚುನಾವಣಾ ಪ್ರಚಾರಕ್ಕೆ ಸರ್ಕಾರಿ ವಾಹನ, ಅಧಿಕಾರಿ ಮತ್ತು ಸಿಬ್ಬಂದಿಯನ್ನು ಬಳಕೆ ಮಾಡುವಂತಿಲ್ಲ. ಸರ್ಕಾರಿ ನೌಕರಿಗೆ ಸಂಬಂಧಿಸಿದಂತೆ ಹೊಸ ಅಧಿಸೂಚನೆ, ನೇಮಕ, ವರ್ಗಾವಣೆ ಮಾಡುವಂತಿಲ್ಲ. ಇನ್ನು ಇತರೆ ರಾಜಕೀಯ ಪಕ್ಷಗಳು ಸರ್ಕಾರದ ಯೋಜನೆಗಳ ಬಗ್ಗೆ ಟೀಕೆ ಮಾಡಬಹುದೇ ಹೊರತು ಯಾವುದೇ ರೀತಿಯಲ್ಲಿಯೂ ವೈಯಕ್ತಿಕ ನಿಂದನೆ ಮಾಡುವಂತಿಲ್ಲ. ರ್‍ಯಾಲಿಯಲ್ಲಿ ಒಟ್ಟಿಗೆ 10ಕ್ಕಿಂತ ಹೆಚ್ಚು ವಾಹನಗಳು ತೆರಳುವಂತಿಲ್ಲ. ಒಂದು ವೇಳೆ ತೆರಳಬೇಕಾದರೆ 100 ಮೀಟರ್ ಅಂತರ ಕಾಯ್ದುಕೊಂಡಿರಬೇಕು. ಇಲ್ಲವಾದರೆ ವಾಹನಗಳನ್ನು ಜಪ್ತಿ ಮಾಡಲಾಗುತ್ತದೆ ಎಂದರು.
ಕಾಸಿಗಾಗಿ ಸುದ್ದಿ ಬಗ್ಗೆ ಆಯೋಗ ನಿಗಾ ವಹಿಸಿದ್ದು, ಈ ಬಗ್ಗೆ ದೂರುಗಳು ಬಂದರೆ ಚುನಾವಣಾಧಿಕಾರಿಗಳು ಸಂಬಂಧಿಸಿದ ಅಭ್ಯರ್ಥಿಗಳಿಗೆ 48 ಗಂಟೆಗಳೊಳಗೆ ನೋಟಿಸ್ ಜಾರಿ ಮಾಡಲಿದ್ದಾರೆ. ಚುನಾವಣೆಗೆ ಮುದ್ರಣಗೊಳ್ಳುವ ಕರಪತ್ರ, ಕಾಸಿಗಾಗಿ ಸುದ್ದಿ, ಸುಳ್ಳುಸುದ್ದಿ, ಕೋಮುವಾದ ಪ್ರಚೋದಿಸುವ ಇತ್ಯಾದಿ ಸುದ್ದಿಗಳ ಮೇಲೆ ಆಯೋಗವು ಹದ್ದಿನ ಕಣ್ಣಿಟ್ಟಿದೆ. ಇದನ್ನು ಹಬ್ಬಿಸುವವರ ವಿರುದ್ಧ ಸಹ ಕ್ರಮ ಜರುಗಿಸಲಾಗುವುದು ಎಂದರು.
ಇದಕ್ಕೂ ಮುನ್ನ ಮಾತನಾಡಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್‍ಕುಮಾರ್ ಮೀನಾ, ಟಿವಿ, ಕೇಬಲ್, ಪತ್ರಿಕೆಗಳಲ್ಲಿ ಪ್ರಕಟಗೊಳ್ಳುವ ರಾಜಕೀಯ ಜಾಹೀರಾತುಗಳಿಗೆ ಮಾಧ್ಯಮ ಪ್ರಮಾಣೀಕರಣ ಮೇಲುಸ್ತುವಾರಿ ಸಮಿತಿಯಿಂದ ಪೂರ್ವಾನುಮತಿ ಕಡ್ಡಾಯವಾಗಿದೆ. ಅಲ್ಲದೇ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರಗೊಳ್ಳುವ ರಾಜಕೀಯ ಪಕ್ಷ, ವ್ಯಕ್ತಿಗಳ ಜಾಹೀರಾತುಗಳ ಮೇಲೂ ನಿಗಾ ವಹಿಸಿದ್ದು, ಇವುಗಳಿಗೆ ಸಹ ಕೇಂದ್ರ ಚುನಾವಣಾ ಆಯೋಗದ ಅನುಮತಿ ಪಡೆದುಕೊಳ್ಳಬೇಕು. ಈ ನಿಯಮ ಚುನಾವಣಾ ಸಂದರ್ಭಕ್ಕೆ ಮಾತ್ರ ಸೀಮಿತವಾಗದೆ ವರ್ಷದುದ್ದಕ್ಕೂ ಅನ್ವಯಿಸುತ್ತದೆ ಎಂದು ತಿಳಿಸಿದರು.
ಬೆಳಗಾವಿಗೆ ಜಗದೀಶ್ ಶೆಟ್ಟರ್ ಹೆಸರೇ ಮುಂಚೂಣಿಯಲ್ಲಿದೆ: ಪ್ರಲ್ಹಾದ್ ಜೋಶಿ
ಕಾರ್ಯಕ್ರಮದಲ್ಲಿ ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ಕೂರ್ಮಾರಾವ್, ಆಯೋಗದ ಐಟಿ ಮತ್ತು ಮಾಧ್ಯಮ ವಿಭಾಗದ ವಿಶೇಷಾಧಿಕಾರಿ ಸೂರ್ಯಸೇನ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಹೇಮಂತ್ ಎಂ. ನಿಂಬಾಳ್ಕರ್, ಹಿರಿಯ ಪತ್ರಕರ್ತ ಈಶ್ವರ್ ದೈತೋಟ ಉಪಸ್ಥಿತರಿದ್ದರು. ಪ್ರಜಾಪ್ರಭುತ್ವ ವ್ಯವಸ್ಥೆಯ ಚುನಾವಣೆಯಲ್ಲಿ ಮಾಧ್ಯಮಗಳ ಭಾಗವಹಿಸುವಿಕೆ ಬಹುಮುಖ್ಯ ಪಾತ್ರ ವಹಿಸುತ್ತದೆ. ಜನತೆಯಲ್ಲಿ ಅರಿವು ಮೂಡಿಸುವಲ್ಲಿ ಮಾಧ್ಯಮಗಳ ಅಗತ್ಯತೆ ಬಹಳ ಮುಖ್ಯವಾಗಿರುತ್ತದೆ. ಹೀಗಾಗಿ ಮಾಧ್ಯಮಗಳು ಮತದಾನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಆಯೋಗದ ಜತೆ ಕೈ ಜೋಡಿಸಬೇಕು ಎಂದರು.