ಕುದೂರು[ಜ.26]: ಹಾವನ್ನು ಕಂಡಾಕ್ಷಣ ದೂರ ಸರಿಯುವವರೇ ಹೆಚ್ಚು. ಅಂತಹದರಲ್ಲಿ ಇಲ್ಲೊಂದು ದಂಪತಿ ತನ್ನ ಪುಟ್ಟ ಮಕ್ಕಳೊಂದಿಗೆ ಹಾಸಿಗೆಯಲ್ಲಿ ನಾಗರ ಹಾವಿನೊಂದಿಗೆ ಇಡೀ ರಾತ್ರಿ ನೆಮ್ಮದಿಯಿಂದ ನಿದ್ದೆ ಮಾಡಿರುವ ಘಟನೆ ಮಾಗಡಿ ತಾಲೂಕು ಸುಗ್ಗನಹಳ್ಳಿ ಗ್ರಾಮದ ಬನದಪಾಳ್ಯದಲ್ಲಿ ನಡೆದಿದೆ.

ಗ್ರಾಮದ ಗಂಗರಾಜು ತನ್ನ ಪತ್ನಿ ವಿಜಯಲಕ್ಷ್ಮಿ ಮತ್ತು ಇಬ್ಬರು ಮಕ್ಕಳೊಂದಿಗೆ ಹಾವಿನ ಜತೆಯಲ್ಲಿ ರಾತ್ರಿ ಕಳೆದವರು. ಗುರುವಾರ ರಾತ್ರಿ ಪತಿ ಪತ್ನಿ, ಮಕ್ಕಳು ಊಟ ಮಾಡಿ ಹಾಸಿಗೆ ಹಾಸಿಕೊಂಡು ಮಲಗಿದ್ದಾರೆ. ಚಳಿಗಾಲವಾದ್ದರಿಂದ ಬೆಚ್ಚನೆ ಹೊದಿಕೆ ಹೊದ್ದಿದ್ದಾರೆ. ತಡರಾತ್ರಿಯಲ್ಲಿ ಹಾಸಿಗೆಯಲ್ಲಿ ಏನೋ ಹರಿದಾಡಿದ ಅನುಭವವಾಗಿದೆ. ಹೊದ್ದಿರುವ ಹೊದಿಕೆ ಸರಿದಿರಬಹುದು ಎಂದು ಸುಮ್ಮನಾಗಿದ್ದಾರೆ. ಆದರೆ, ಬೆಳಗ್ಗೆ ಎಂದು ಮಕ್ಕಳ ಹಾಸಿಗೆ ಮೇಲಿದ್ದ ಹೊದಿಕೆಯನ್ನು ಪಕ್ಕಕ್ಕೆ ಸರಿಸಿದಾಗ ಹಾವಿನ ಬಾಲ ಕಂಡಿದೆ.

ಹೆದರಿದ ದಂಪತಿ ಜೋಪಾನವಾಗಿ ಮಕ್ಕಳನ್ನು ಹಾಸಿಗೆಯಿಂದ ಎತ್ತುಕೊಂಡು ಹೊರಗೆ ಬಂದಿದ್ದಾರೆ. ಉರಗ ಪ್ರೇಮಿ ಅರುಣ್ ಕುಮಾರ್ ಬಂದು ಬೃಹತ್ ಆಕಾರದ ನಾಗರ ಹಾವನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.