ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಮಳೆಯ ಅವಾಂತರ: ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ
ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದಲೂ ಭರ್ಜರಿ ಮಳೆಯಾಗುತ್ತಿದೆ. ತಗ್ಗು ಪ್ರದೇಶಗಳಲ್ಲಿ ಒಂದೆಡೆ ನೀರು ನಿಲ್ಲಲಾರಂಭಿಸಿದರೆ, ಮತ್ತೊಂದೆಡೆ ರಾಷ್ಟ್ರೀಯ ಹೆದ್ದಾರಿಯಲ್ಲೇ ಗುಡ್ಡ ಕುಸಿತಗಳು ಕಾಣಲಾರಂಭಿಸಿದೆ.
ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಾರವಾರ
ಉತ್ತರ ಕನ್ನಡ (ಜೂ.29): ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದಲೂ ಭರ್ಜರಿ ಮಳೆಯಾಗುತ್ತಿದೆ. ತಗ್ಗು ಪ್ರದೇಶಗಳಲ್ಲಿ ಒಂದೆಡೆ ನೀರು ನಿಲ್ಲಲಾರಂಭಿಸಿದರೆ, ಮತ್ತೊಂದೆಡೆ ರಾಷ್ಟ್ರೀಯ ಹೆದ್ದಾರಿಯಲ್ಲೇ ಗುಡ್ಡ ಕುಸಿತಗಳು ಕಾಣಲಾರಂಭಿಸಿದೆ. ಇದರೊಂದಿಗೆ ಹೊನ್ನಾವರದ ಕಾಸರಗೋಡಿನ ಕಳಸಿನಮೊಟೆ ಸರಕಾರಿ ಶಾಲೆಗೂ ಮಳೆ ನೀರು ಹೊಕ್ಕುವ ಭೀತಿ ಎದುರಾಗುತ್ತಿದ್ದು, ಶಾಲಾ ಮಕ್ಕಳಿಗೆ ಸಮಸ್ಯೆಯಾಗುತ್ತಿದೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ ನೋಡಿ. ಹೌದು, ಕಳೆದ ನಾಲ್ಕು ದಿನಗಳಿಂದ ಉತ್ತರಕನ್ನಡ ಜಿಲ್ಲೆಯ ಕರಾವಳಿ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ.
ಜಿಲ್ಲೆಯ ಮಲೆನಾಡು ಭಾಗದಲ್ಲಿ ಅಲ್ಪ ಮಳೆಯಾದರೇ ಕರಾವಳಿಯ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ಭಾಗದಲ್ಲಿ ಸುರಿದ ಮಳೆ ಜನಜೀವನವನ್ನೇ ಅಸ್ತವ್ಯಸ್ತಗೊಳಿಸಿದೆ. ಮಳೆಯಿಂದಾಗಿ ನಿನ್ನೆ ಕುಮಟಾದ ತಂಡ್ರಕುಳಿಯಲ್ಲಿ ಗುಡ್ಡ ಕುಸಿದು ಮನೆಯ ಗೋಡೆಗೆ ಅಪ್ಪಳಿಸಿದ ಪ್ರಕರಣ ವರದಿಯಾದ್ರೆ, ಜೋರು ಮಳೆಯಾದ್ರೆ ಸಾಕು ಹೊನ್ನಾವರದ ಕಾಸರಕೋಡ ಗ್ರಾಮದ ಕಳಸಿನಮೊಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೀರು ನುಗ್ಗಲಾರಂಭವಾಗುತ್ತದೆ. ಇದರಿಂದ ಕೊಠಡಿಯಲ್ಲಿ ವಿದ್ಯಾರ್ಥಿಗಳು ಕೂರಲಾಗದೇ ಪರದಾಟದಾಡುವಂತಾಗುತ್ತದೆ.
Uttara Kannada: ಮಕ್ಕಳ ಭವಿಷ್ಯ ನುಂಗುತ್ತಿದೆ ಕಲ್ಲಿನ ಕ್ವಾರಿ: ಕುಸಿದು ಬೀಳುವ ಭೀತಿಯಲ್ಲಿ ಶಿರಸಿಯ ಶಾಲೆ!
ಎಲ್ಲೆಲ್ಲಿಂದಲೋ ಬರುವ ಗಲೀಜು ನೀರು ಶಾಲೆಯೊಳಗೆ ಬರುತ್ತಿರುವುದರಿಂದ ಸ್ಚಚ್ಛಗೊಳಿಸಿದರೂ ವಾಸನೆ ಹೋಗುವುದಿಲ್ಲ. ಸೊಳ್ಳೆ ಕಾಟವೂ ಹೆಚ್ಚಿದ್ದು, ಸಮಸ್ಯೆಯಾಗುತ್ತಿದೆ. ಇಲ್ಲಿ 55 ವಿದ್ಯಾರ್ಥಿಗಳಿದ್ದು, ಮೂರು ಶಿಕ್ಷಕರಿದ್ದಾರೆ. ಈ ಶಾಲೆಯ ಎರಡು ಕಟ್ಟಡಗಳಿಗೆ ತಗಡು ಶೀಟು ಹಾಕಿದ್ರೆ, ಒಂದು ಮಾತ್ರ ಟೆರೇಸ್. ಮಳೆಗಾಲದಲ್ಲಿ ಜೋರಾಗಿ ತಗಡಿಗೆ ನೀರು ಬೀಳುವುದರಿಂದ ಭಾರೀ ಕರ್ಕಶ ಶಬ್ದ ಉಂಟಾಗುತ್ತದೆ. ಇದರಿಂದ ಶಿಕ್ಷಕರು ಪಾಠ ಮಾಡುವ ಶಬ್ದವಾಗಲೀ, ಮಕ್ಕಳು ಮಾತನಾಡುವ ಶಬ್ದವಾಗಲೀ ಕೇಳಿಸುವುದೇ ಇಲ್ಲ. ಇದರಿಂದ ಮಕ್ಕಳ ಶಿಕ್ಷಣದ ಭವಿಷ್ಯದ ಮೇಲೆ ಭಾರೀ ಪರಿಣಾಮ ಬೀರುತ್ತಿದೆ.
ಶಾಲಾ ಕಟ್ಟಡ ಸ್ಥಳಾಂತರವಾಗಬೇಕಿದ್ದು, ದಾನಿಗಳು ನೀಡಿದ 29 ಗುಂಟೆ ಜಾಗದಲ್ಲಿ ನಿರ್ಮಾಣವಾಗಬೇಕಿದೆ. ಸದ್ಯಕ್ಕೆ ಕರಾರು ಪತ್ರದಲ್ಲಿದ್ದು, ಅಧಿಕೃತವಾಗಬೇಕಷ್ಟೇ ಅಂತಾರೆ ಶಾಲಾ ಮುಖ್ಯೋಪಾಧ್ಯಾಯರು. ಇನ್ನು ಕಾರವಾರ -ಗೋವಾ ಗಡಿಯ ಮಾಜಾಳಿಯಿಂದ ಮಂಗಳೂರುವರೆಗೆ ಐಆರ್‌ಬಿಯ ಚತುಷ್ಪಥ ಕಾಮಗಾರಿ ಆಮೆ ಗತಿಯಲ್ಲಿ ಸಾಗಿದೆ. ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಅಲ್ಲಲ್ಲಿ ಗುಡ್ಡ ಕುಸಿತದ ಭೀತಿ ಎದುರಾಗಿದೆ. ಇದರಿಂದಾಗಿ ಜನರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವಾಗಲೂ ಜೀವ ಕೈಯಲ್ಲಿ ಹಿಡಿದುಕೊಂಡೇ ಸಂಚಾರ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.
ಅಕ್ಕಿ ವಿಚಾರದಲ್ಲಿ ಸಿ.ಟಿ.ರವಿ ಯಾಕೆ ಮೈ ಪರಿಚಿಕೊಳ್ಳುತ್ತಿದ್ದಾರೋ ಗೊತ್ತಿಲ್ಲ: ಸಚಿವ ಎಂ.ಸಿ.ಸುಧಾಕರ್
ಇನ್ನು ಎಲ್ಲೂ ನೀರು ಹರಿದು ಹೋಗಲು ವ್ಯವಸ್ಥೆಯಿರದ ಕಾರಣ ಬಿಡದೇ ಜೋರು ಮಳೆಯಾದರೆ ಕಾರವಾರ, ಕುಮಟಾ, ಭಟ್ಕಳ ತಾಲೂಕಿನ ಹೆದ್ದಾರಿ ಭಾಗದಲ್ಲಿ ಸಾಕಷ್ಟು ಮನೆಗಳಿಗೆ ನೆರೆ ನೀರು ನುಗ್ಗುವ ಆತಂಕವಿದೆ. ಚತುಷ್ಪಥ ಕಾಮಗಾರಿಯಿಂದ ಅಸಮರ್ಪಕವಾಗಿ ಗುಡ್ಡಗಳನ್ನು ಕೊರೆದಿರುವುದರಿಂದ ಜನರು ಈ ದಾರಿಯಲ್ಲಿ ಸಾಗುವುದಕ್ಕೆ ಹೆದರಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಮಳೆಗಾಲ ತಡವಾಗಿ ಪ್ರಾರಂಭಗೊಂಡರೂ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆ ಜನರಲ್ಲಿ ಸಮಸ್ಯೆ ಸೃಷ್ಠಿಸುತ್ತಿದೆ. ಕರಾವಳಿ ಭಾಗದಲ್ಲಿ ಮಳೆಯ ಖುಷಿಗಿಂತ ಹೆಚ್ಚಾಗಿ ಮಳೆಕಾಟ ಹಾಗೂ ಗುಡ್ಡ ಕುಸಿತದ ಭೀತಿ ಕಾಣಿಸಿಕೊಂಡಿದ್ದು, ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಬೇಕಿದೆ.