ಬೆಂಗಳೂರು (ನ. 25): ಶಿವಾಜಿನಗರವೂ ಸೇರಿದಂತೆ ರಾಜ್ಯದಲ್ಲಿ ಉಪಚುನಾವಣೆ ನಡೆಯುತ್ತಿರುವ 15 ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಖಚಿತ ಎಂದು ಭವಿಷ್ಯ ನುಡಿದಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಗೆಲುವಿನ ಅಂತರವಷ್ಟೇ ನಿರ್ಧಾರವಾಗಬೇಕಿರುವ ಅಂಶ ಎಂದು ತಿಳಿಸಿದ್ದಾರೆ. ಇದು ಕಲ್ಪನೆಯ ಮಾಹಿತಿಯಲ್ಲ, ಗುಪ್ತಚರ ಇಲಾಖೆಯ ಮಾಹಿತಿ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಭಾನುವಾರದಂದು ಯಲ್ಲಾಪುರ ಕ್ಷೇತ್ರದ ಬನವಾಸಿ, ಹಿರೇಕೆರೂರು ಕ್ಷೇತ್ರದ ರಟ್ಟೀಹಳ್ಳಿ, ರಾಣೇಬೆನ್ನೂರುಗಳಲ್ಲಿ ಬಿಜೆಪಿ ಪರ ಬಿರುಸಿನ ಮತಪ್ರಚಾರ ನಡೆಸಿದ ಅವರು, ಮತದಾರರು ಬಿಜೆಪಿಗೆ ಮತ ಹಾಕಿರುವುದನ್ನು ನೋಡಿ ಡಿ.9ರಂದು ಎಣಿಕೆ ಕೇಂದ್ರದಿಂದ ಏಜೆಂಟರು ಓಡಿ ಹೋಗಬೇಕು ಎಂದು ವ್ಯಂಗ್ಯವಾಡಿದರು.

'ಎಂಟಿಬಿ ಎದೆಯಲ್ಲಿ ಆಗ ಸಿದ್ದು, ಈಗ ಬಿಎಸ್‌ವೈ, ಸೋತ ಮೇಲೆ ಯಾರು?'

ಉಪಚುನಾವಣೆ ನಡೆಯುತ್ತಿರುವ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ನಿಶ್ಚಿತ. ಎಷ್ಟುಮತಗಳ ಅಂತರದಿಂದ ಎಂಬುದಷ್ಟೇ ಈಗಿರುವ ಯೋಚನೆ. ನಾನು ಎಂದೂ ಕಲ್ಪನೆ ಮಾಡಿಕೊಂಡು ಯಾವುದೇ ಹೇಳಿಕೆ ಕೊಡುವುದಿಲ್ಲ. ಗುಪ್ತಚರ ಮಾಹಿತಿ ಆಧರಿಸಿಯೇ ಹೇಳುತ್ತಿದ್ದು, 15 ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ. ಕಳೆದ ಲೋಕಸಭಾ ಚುನಾವಣೆಯಲ್ಲಿ 23 ಸೀಟು ಪಡೆಯುತ್ತೇವೆ ಎಂದಾಗ ಎಲ್ಲರೂ ತಮಾಷೆ ಮಾಡುತ್ತಿದ್ದರು. ಸುಮಲತಾ ಸೇರಿದಂತೆ ಒಟ್ಟು 26 ಸ್ಥಾನಗಳನ್ನು ನಾವು ಗೆದ್ದೆವು ಎಂದರು.

ಮೈತ್ರಿ ಸರ್ಕಾರದ ದುರಾಡಳಿತದಿಂದ ಬೇಸತ್ತು 17 ಶಾಸಕರು ರಾಜೀನಾಮೆ ನೀಡಿದ್ದರಿಂದ ರೈತ ಪರ ಸರ್ಕಾರ ರಚನೆಗೊಂಡಿದೆ. ಆ 17 ಶಾಸಕರಿಂದಲೇ ನಾನು ಮುಖ್ಯಮಂತ್ರಿಯಾಗಿರುವೆ, ಕಾರಜೋಳ ಉಪಮುಖ್ಯಮಂತ್ರಿ ಆಗಿದ್ದಾರೆ. ಅವರ ಋುಣ ತೀರಿಸಲು ಸಾಧ್ಯವಿಲ್ಲ.

'ರಾಜ್ಯದ ಜನತೆ ಉಪಚುನಾವಣೆ ಬೇಕಿರಲಿಲ್ಲ, ಸ್ವಾರ್ಥ ರಾಜಕಾರಣದಿಂದ ಇದೆಲ್ಲಾ ಆಗಿದ್ದು'

ಸುಭದ್ರ ಸರ್ಕಾರ, ಅಭಿವೃದ್ಧಿಗಾಗಿ ತ್ಯಾಗ ಮಾಡಿದ ಎಲ್ಲ ಹದಿನೇಳು ಶಾಸಕರೂ ಮಂತ್ರಿಗಳಾಗುತ್ತಾರೆ ಎಂದು ಹೇಳಿದರು. ಕಳೆದ ಬಾರಿ ಇಲ್ಲಿ ಗೆದ್ದಿದ್ದ ಆರ್‌.ಶಂಕರ್‌ ಅವರನ್ನು ಎಂಎಲ್‌ಸಿ ಮಾಡಿ ಮಂತ್ರಿ ಮಾಡುವೆ ಎಂದು ತಿಳಿಸಿದ ಅವರು ಕಳೆದ ಬಾರಿ ಬಿಜೆಪಿ ಅಭ್ಯರ್ಥಿಯಾಗಿದ್ದ ಡಾ.ಬಸವರಾಜ ಕೇಲಗಾರ ಅವರಿಗೆ ಸೂಕ್ತ ಸ್ಥಾನ ನೀಡಲಾಗುವುದು ಎಂದು ತಿಳಿಸಿದರು.

ಮೂರೂವರೆ ವರ್ಷದಲ್ಲಿ ಮನೆ:

ಇದೇವೇಳೆ ವಿಪಕ್ಷವಾದ ಕಾಂಗ್ರೆಸ್‌ ಮೇಲೆ ವಾಗ್ದಾಳಿ ನಡೆಸಿದ ಯಡಿಯೂರಪ್ಪ, ದೇಶದಲ್ಲಿ 70 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್‌ ಸರ್ಕಾರ ಗರೀಬಿ ಹಟಾವೋ ಮಾಡಲಿಲ್ಲ, ರೈತರಿಗೆ ವೈಜ್ಞಾನಿಕ ಬೆಲೆ, ನೀರಾವರಿಗೆ ಆದ್ಯತೆ ಹಾಗೂ ಕೆರೆ ಕಟ್ಟೆತುಂಬಿಸುವ ಕೆಲಸ ಮಾಡಲಿಲ್ಲ, ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಯಾವುದೇ ಯೋಜನೆ ಜಾರಿಗೆ ತರಲಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಕನಕ ಪೀಠ, ಕಾಗಿನೆಲೆ ಅಭಿವೃದ್ಧಿಗೆ ಯಾವೊಬ್ಬ ಮುಖ್ಯಮಂತ್ರಿಯೂ ಪ್ರಯತ್ನ ಮಾಡಿರಲಿಲ್ಲ.

ನಾನು ಮುಖ್ಯಮಂತ್ರಿಯಾದ ಮೇಲೆ ಕನಕ, ವಾಲ್ಮೀಕಿ ಜಯಂತಿ ಆಚರಣೆ ಜಾರಿಗೆ ತಂದಿದ್ದೇನೆ. ಬಂಜಾರ, ಭೋವಿ ಸಮಾಜಗಳ ಅಭಿವೃದ್ಧಿಗೆ ಒತ್ತು ನೀಡುವ ಮೂಲಕ ಸಬ್‌ ಕೆ ಸಾಥ್‌ ಸಬ್‌ ಕಾ ವಿಕಾಸ ಎಂಬ ಮೋದಿ ಚಿಂತನೆಯನ್ನು ಜಾರಿಗೆ ತರಲಾಗಿದೆ. ಅದರಂತೆ ಮುಂದಿನ ಮೂರೂವರೆ ವರ್ಷದ ಅವಧಿಯಲ್ಲಿ ರಾಜ್ಯದ ಪ್ರತಿಯೊಬ್ಬರಿಗೂ ಸ್ವಂತ ಸೂರು ಒದಗಿಸಲಾಗುವುದು ಎಂದರು.

ದೇಶ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್‌ ತೀರಾ ಅಧೋಗತಿಗೆ ತಲುಪಿದೆ. ಕೇಂದ್ರದಲ್ಲಿ ಅಧಿಕೃತ ವಿರೋಧ ಪಕ್ಷವಾಗಿಯೂ ನಿಲ್ಲುವ ಯೋಗ್ಯತೆ ಆ ಪಕ್ಷಕ್ಕೆ ಇಲ್ಲದೇ ತಬ್ಬಲಿಯಂತೆ ಅಲೆದಾಡುತ್ತಿದೆ. ಉಪಚುನಾವೆಯಲ್ಲಿ ಸೋಲು ಖಚಿತ ಅನ್ನುವುದು ಕಾಂಗ್ರೆಸ್‌ ಮುಖಂಡ ಸಿದ್ದರಾಮಯ್ಯ ಅವರಿಗೂ ಈಗಲೇ ಸ್ಪಷ್ಟವಾಗಿದೆ ಎಂದರು.