'ಎಂಟಿಬಿ ಎದೆಯಲ್ಲಿ ಆಗ ಸಿದ್ದು, ಈಗ ಬಿಎಸ್‌ವೈ, ಸೋತ ಮೇಲೆ ಯಾರು?'
ಎಂಟಿಬಿ ಎದೆಯಲ್ಲಿ ಆಗ ಸಿದ್ದು, ಈಗ ಬಿಎಸ್‌ವೈ| ಎಂಟಿಬಿಗೆ ದುಡ್ಡಿನ ಮದ ಹೋಗಿಲ್ಲ| ಸೋತ ಮೇಲೆ ಯಾರು?: ವ್ಯಂಗ್ಯ| ಕಾಂಗ್ರೆಸ್ 12 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬರಲಿದೆ: ಮಾಜಿ ಸಿಎಂ
ಸೂಲಿಬೆಲೆ[ನ.25]: ವಾಯುಪುತ್ರ ಆಂಜನೇಯನ ಎದೆಯಲ್ಲಿ ಶ್ರೀರಾಮ ಇದ್ದ. ಬಿಜೆಪಿ ಅಭ್ಯರ್ಥಿ ಎಂ.ಟಿ.ಬಿ.ನಾಗರಾಜ್ ಅವರ ಎದೆಯಲ್ಲಿ ಈ ಹಿಂದೆ ಸಿದ್ದರಾಮಯ್ಯ ಇದ್ದ. ಇದೀಗ ಯಡಿಯೂರಪ್ಪ ಇದ್ದಾನೆ. ಚುನಾವಣೆಯಲ್ಲಿ ಸೋತರೇ ಯಾರು ಬಂದು ಕೂರುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಎಂಟಿಬಿಗೆ ಕುಟುಕಿದರು.
ಇಲ್ಲಿನ ಸಂತೆ ಮೈದಾನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಸುರೇಶ್ ಪರ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಎಂಟಿಬಿ ಕಾಂಗ್ರೆಸ್‌ಲ್ಲಿದ್ದಾಗ ನನ್ನ ಬಂಟನೇನೋ ಎಂದುಕೊಂಡಿದ್ದೆ. ಆದರೆ, ಡೋಂಗಿ ಅಂತಾ ಗೊತ್ತಾಯಿತು. ಇಂತವರನ್ನು ಜನರು ನಂಬಬೇಕಾ?. ಚುನಾವಣೆಯಲ್ಲಿ ನಾಗರಾಜ್ ಮೂರನೇ ಸ್ಥಾನ ಪಡೆಯುವುದು ಖಚಿತ ಎಂದು ಹೇಳಿದರು.
ನಾವು ಕಟ್ಟಿದ ಹುತ್ತಕ್ಕೆ 'ನಾಗರಾಜ' ಬಂದು ಸೇರಿದ: ಶರತ್
ಸಿದ್ದರಾಮಯ್ಯಗೆ ನಾನೇ ಸಾಲ ಕೊಟ್ಟಿದ್ದೀನಿ ಅಂತ ಹೇಳುತ್ತಾರೆ. ದುಡ್ಡಿನ ಮದದಲ್ಲಿ ಈ ಮಾತು ಆಡುತ್ತಿದ್ದಾರೆ. ಆಸ್ತಿ, ಅಧಿಕಾರ ಶಾಶ್ವತ ಅಲ್ಲ. ಎಂಟಿಬಿಗೆ ಇನ್ನೂ ಸಣ್ಣತನ ಹೋಗಿಲ್ಲ. ಪಕ್ಷಾಂತರ ಮಾಡಿದ ಇವರನ್ನು ಸುಪ್ರೀಂಕೋರ್ಟ್ ಕೂಡ ಅನರ್ಹ ಎಂದಿದೆ. ಈ ಬಾರಿ ಚುನಾವಣೆಯಲ್ಲಿ ಕ್ಷೇತ್ರದ ಜನರು ಅನರ್ಹ ಮಾಡಿ ಮನೆಗೆ ಕಳುಹಿಸಬೇಕು ಎಂದು ಹೇಳಿದರು.
ಉಪ ಚುನಾವಣೆಯಲ್ಲಿ ಕಾಂಗ್ರೆಸ್ 12 ಸ್ಥಾನ ಗೆಲ್ಲಲಿದೆ. ಬಿಜೆಪಿ ಸರ್ಕಾರ ಪತನವಾಗಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ. ಅನ್ನಭಾಗ್ಯ ಯೋಜನೆಯ ಅಕ್ಕಿ ಪ್ರಮಾಣವನ್ನು ಬಿಜೆಪಿ ಸರ್ಕಾರ ಕಡಿಮೆ ಮಾಡಿದೆ. ನಾವು ಮತ್ತೆ ಅಧಿಕಾರಕ್ಕೆ ಬಂದರೆ ಹತ್ತು ಕೆಜಿ ಕೊಡುತ್ತೇವೆ ಎಂದು ಭರವಸೆ ನೀಡಿದರು.
ನನ್ನಿಂದ ಹಣ ಪಡೆದಿದ್ದಾರೆಂದ ಎಂಟಿಬಿಗೆ ಸಿದ್ದರಾಮಯ್ಯ ತಿರುಗೇಟು!
ಬಿಜೆಪಿ ಕೋಮುವಾದಿ ಪಕ್ಷ. ಬಿಜೆಪಿಗೆ ಯಾರು ವೋಟ್ ಹಾಕ್ಬೇಡಿ. ಕಾಂಗ್ರೆಸ್ ಸರ್ಕಾರದ ಆಡಳಿತವಧಿಯಲ್ಲಿ ಸಮಾಜಕ್ಕೆ ಕೊಡುಗೆ ಕೊಟ್ಟಮಹನೀಯರ, ದಾರ್ಶನಿಕರ ಜಯಂತಿ ಆಚರಣೆ ಮಾಡಿತ್ತು. ಬಿಜೆಪಿ ಸರ್ಕಾರ ಟಿಪ್ಪು ಜಯಂತಿಯನ್ನು ರದ್ದು ಮಾಡಿದೆ. ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿದ್ದಾಗ ಇದೇ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಶೋಭಾ ಕರಂದ್ಲಾಜೆ, ಟಿಪ್ಪು ಪೇಟ ತೊಟ್ಟು ಟಿಪ್ಪುರನ್ನು ಹೊಗಳಿದ್ದರು. ಈಗ ಟಿಪ್ಪು ಜಯಂತಿಯನ್ನು ರದ್ದು ಮಾಡಿದ್ದಾರೆ ಎಂದು ಟೀಕಿಸಿದರು.
ನಾನು ಏಕಾಂಗಿಯಲ್ಲ:
ಕೋಟ್ಯಂತರ ಕಾರ್ಯಕರ್ತರು ನನ್ನ ಜೊತೆಗೆ ಇರುವಾಗ ನಾನು ಹೇಗೆ ಏಕಾಂಗಿಯಾಗುತ್ತೇನೆ. ಪಕ್ಷದ ಎಲ್ಲ ನಾಯಕರೂ ನನ್ನೊಂದಿಗಿದ್ದಾರೆ. ಕಾರ್ಯಕರ್ತರು ಇರುವವರೆಗೂ ನಾನು ಏಕಾಂಗಿಯಲ್ಲ ಎಂದು ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್ ಹೇಳಿಕೆಗೆ ತಿರುಗೇಟು ನೀಡಿದರು.
ಟಿಕೆಟ್ ನೀಡದ ಕಾರಣ ಶರತ್ ಬಚ್ಚೇಗೌಡ ಬಿಜೆಪಿಯಿಂದ ದೂರವಾಗಿದ್ದಾರೆ. ಒಂದು ವೇಳೆ ಶರತ್ ಗೆದ್ದರೆ ಮತ್ತೆ ಬಿಜೆಪಿ ಸೇರುತ್ತಾನೆ. ಬಚ್ಚೇಗೌಡ ಮತ್ತು ಶರತ್ ಬಚ್ಚೇಗೌಡ ಇಬ್ಬರು ಬೇರೆಯಲ್ಲ. ಇವರ ಬಗ್ಗೆ ಎಚ್ಚರದಿಂದಿರಿ. ಇವರ ಮಾತುಗಳಿಗೆ ಯಾಮಾರಬೇಡಿ ಎಂದು ನಂದಗುಡಿಯಲ್ಲಿ ಪ್ರಚಾರ ವೇಳೆ ಸಿದ್ದರಾಮಯ್ಯ ಹೇಳಿದರು.