ರಾಜ್ಯದಲ್ಲಿ ಕೊರೋನಾ ಹೆಚ್ಚಳ: ಮಹತ್ವದ ಸಭೆ ಕರೆದ ಸಿಎಂ
ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಮತ್ತೆ ಕೊರೋನಾ ಪಾಸಿಟಿವ್ ಕೇಸ್‌ಗಳು ಹೆಚ್ಚಾಗುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಇನ್ನು ಈ ಸಂಬಂಧ ಸಿಎಂ ಸಭೆ ಕರೆದಿರುವುದು ಕುತೂಹಲ ಮೂಡಿಸಿದೆ.
ಬೆಂಗಳೂರು, (ಮಾ.14): ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ನಾಳೆ ಅಂದ್ರೆ ಮಾ.14 ಸಂಜೆ 5 ಗಂಟೆಗೆ ವಿಧಾನ ಸೌಧದಲ್ಲಿ ಮಹತ್ವದ ಸಭೆ ಕರೆದಿದ್ದಾರೆ.
ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಈ ಮಹತ್ವದ ಸಭೆ ನಡೆಯಲಿದ್ದು, ಕೊರೋನಾ ತಡೆಗೆ ಸರ್ಕಾರದಿಂದ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುತ್ತದೆ. ಸಭೆಯಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗಿಯಾಗಲಿದ್ದಾರೆ.
ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಏರುತ್ತಿರುವ ಕೊರೋನಾ: ಮತ್ತಷ್ಟು ಆತಂಕ
ನೆರೆ ರಾಜ್ಯಗಳಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಎರಡನೇ ಅಲೆ ಬರದಂತೆ ನಿಯಂತ್ರಿಸಲು ಕೆಲ ಜಿಲ್ಲೆಗಳಲ್ಲಿ ಕೋವಿಡ್ ಪರೀಕ್ಷೆಯ ಗುರಿಯನ್ನು ಹೆಚ್ಚಿಸಲಾಗಿದೆ. ಹೆಚ್ಚಿನ ಜನಸಂದಣಿ ತಡೆಗಟ್ಟಲು ಮದುವೆ ಇನ್ನಿತರ ಆಚರಣೆ, ಧಾರ್ಮಿಕ, ರಾಜಕೀಯ ಸಭೆ-ಸಮಾರಂಭಗಳಿಗೆ ನೂತನ ನಿಯಮಗಳನ್ನು ಜಾರಿ ಮಾಡಲಾಗಿದೆ.
ಇನ್ನು ಸಭೆಯಲ್ಲಿ ನೈಟ್ ಕರ್ಫ್ಯೂ ಅಥವಾ ವೀಕ್ಲಿ ಲಾಕ್‌ಡೌನ್ ಏನಾದರೂ ಜಾರಿಯಾಗುತ್ತಾ ಎನ್ನುವ ಗುಸು-ಗುಸು ಸುದ್ದಿ ಹಳ್ಳಿಗಳಲ್ಲಿ ಹರಿದಾಡುತ್ತಿದೆ.
ಇನ್ನು ಈ ಸುದ್ದಿ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ, ಮತ್ತೆ ಲಾಕ್‌ಡೌನ್ ಆಗಬಾರದು ಅಂದರೆ ಜನ ಸಹಕರಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಲಾಕ್‌ಡೌನ್ ಬಗ್ಗೆ ಚಿಂತನೆ ಇಲ್ಲ. ಆದರೆ ಜನ ಸಹಕರಿಸಬೇಕು. ಈಗಾಗಲೇ ಸಾಕಷ್ಟು ನಷ್ಟ ಆಗಿದೆ. ಈ ಸಂಬಂಧ ನಾಳೆ ಸಭೆ ಕರೆದಿದ್ದೇನೆ, ಮಹತ್ವದ ಚರ್ಚೆಗಳು ಆಗುತ್ತದೆ. ಕೊರೊನಾ ಕೈಮೀರಿ ಹೋಗುತ್ತಿದೆ, ದಿನೇ ದಿನೇ ಹೆಚ್ಚಾಗುತ್ತಿದೆ. ಮಾಸ್ಕ್ ಹಾಕಬೇಕು. ಕೋವಿಡ್ ನಿಯಮ ಪಾಲಿಸಬೇಕು ಈ ಮೂಲಕ ಅದನ್ನ ನಾವು ಕಂಟ್ರೋಲ್ ಮಾಡಬಹುದು ಎಂದು ಹೇಳಿದ್ದಾರೆ.