ಶಿರೂರು ಗುಡ್ಡ ಕುಸಿತ ಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ; ಕೇಂದ್ರ ಸರ್ಕಾರದ ಭ್ರಷ್ಟಾಚಾರ ಕಾರಣವೆಂದ ಕಾಂಗ್ರೆಸ್!
ಶಿರೂರು ಗುಡ್ಡ ಕುಸಿತಕ್ಕೆ ಕೇಂದ್ರ ಸರ್ಕಾರದ ಭ್ರಷ್ಟಾಚಾರವೇ ಕಾರಣ ಆಗಿರಬಹುದು ಎಂದು ಕರ್ನಾಟಕ ಕಾಂಗ್ರೆಸ್ ಆರೋಪ ಮಾಡಿದೆ. ಸ್ಥಳ ಭೇಟಿಗೆ ಬಂದ ಸಿಎಂ ವಿರುದ್ಧ ಮೃತರ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ಜ.21): ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಬಳಿಯ ಶಿರೂರು ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ ಮೇಲೆ ಗುಡ್ಡ ಕುಸಿತ ಉಂಟಾಗಿದ್ದು, ಇದಕ್ಕೆ ಕೇಂದ್ರ ಸರ್ಕಾರದ ಭ್ರಷ್ಟಾಚಾರವೇ ಕಾರಣ ಆಗಿರಬಹುದು ಎಂದು ಕರ್ನಾಟಕ ಕಾಂಗ್ರೆಸ್ ಆರೋಪ ಮಾಡಿದೆ.
ಶಿರೂರು ಗುಡ್ಡ ಕುಸಿತ ಘಟನೆಯ ಬಗ್ಗೆ ಕರ್ನಾಟಕ ಕಾಂಗ್ರೆಸ್ ಅಧಿಕೃತ ಸಾಮಾಜಿಕ ಜಾಲತಾಣದ ಎಕ್ಸ್ ಖಾತೆಯಿಂದ ಪೋಸ್ಟ್ ಹಂಚಿಕೊಂಡಿದೆ. ಇದರಲ್ಲಿ ಅಂಕೋಲದ ಶಿರೂರು ಬಳಿಯ ಗುಡ್ಡ ಕುಸಿತ ಪ್ರಕರಣದಲ್ಲಿ 10ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ, ಈ ಸಾವಿಗೆ, ಈ ಅನಾಹುತಕ್ಕೆ ಕೇಂದ್ರ ಸರ್ಕಾರದ ಭ್ರಷ್ಟಾಚಾರ ಕಾರಣವೇ? ರಾಷ್ಟ್ರೀಯ ಹೆದ್ದಾರಿ 66ರ ಅಗಲೀಕರಣ ಕಾಮಗಾರಿ ನಡೆಸಿದ್ದ (ಐಆರ್‌ಬಿ) IRB ಕಂಪೆನಿ ರಸ್ತೆಯ ತಡೆಗೋಡೆಯನ್ನು ಸಮರ್ಪಕವಾಗಿ ಮಾಡಿಲ್ಲ, ಆ ಸ್ಥಳದ ಮಣ್ಣಿನ ಗುಣಧರ್ಮವನ್ನು ಅಧ್ಯಯನ ನಡೆಸಿ ರಸ್ತೆ ನಿರ್ಮಿಸಿಲ್ಲ ಎಂದು ಸ್ಥಳೀಯ ನಾಗರಿಕರು ಆರೋಪಿಸಿದ್ದಾರೆ.
ಶಿರೂರು ಗುಡ್ಡ ಕುಸಿತ ಪ್ರಕರಣ: ಹತ್ತು ಜನ ಕಣ್ಮರೆ ಬಗ್ಗೆ ದೂರು
ಈ ಐಆರ್‌ಬಿ (IRB) ಕಂಪೆನಿ ಮಾಡಿದ ಕಾಮಗಾರಿಗಳಿಗೆ ಯಾವುದೇ ನೀತಿ ನಿಯಮ ಅನ್ವಯಿಸುವುದಿಲ್ಲ! ಏಕೆಂದರೆ ಈ ಕಂಪೆನಿಗೂ ಕೇಂದ್ರ ಸಚಿವ ನಿತಿನ್ ಗಡ್ಕರಿಗೂ ಆಪ್ತ ಸಂಬಂಧವಿದೆ. 8 ವರ್ಷದ ಹಿಂದೆಯೆಯೇ ಐಆರ್‌ಬಿ ಕಂಪೆನಿಯಿಂದ ನಿತಿನ್ ಗಡ್ಕರಿಯವರು 100 ಕೋಟಿ ಹಣ ಪಡೆದಿರುವ ಬಗ್ಗೆ ಆರೋಪಗಳು ಕೇಳಿಬಂದಿದ್ದವು. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಳಪೆ ಕಾಮಗಾರಿ ನಡೆಸಿದ್ದರಿಂದಲೇ ಈ ಗುಡ್ಡ ಕುಸಿತದ ಅನಾಹುತ ಸಂಭವಿಸಿದೆಯೇ? ಈ ಬಗ್ಗೆ ತನಿಖೆ ನಡೆಸಲು ಕೇಂದ್ರ ಸರ್ಕಾರ ಹಿಂದೇಟು ಹಾಕುತ್ತಿರುವುದೇಕೆ? ಎಂದು ಟೀಕೆ ಮಾಡಿದ್ದಾರೆ.
ಗುಡ್ಡ ಕುಸಿತ ಸ್ಥಳಕ್ಕೆ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ:
ಇನ್ನು ಶಿರೂರು ಗುಡ್ಡ ಕುಸಿದು 10 ಜನರು ಮಣ್ಣಿನಡಿಗೆ ಸಿಲುಕಿ ಮೃತಪಟ್ಟಿದ್ದಾರೆಂಬ ಮಾಹಿತಿಯಿದೆ. ಆದರೆ, ಈವರೆಗೆ 7 ಮೃತದೇಹಗಳನ್ನು ಮಾತ್ರ ಹೊರಗೆ ತೆಗೆಯಲಾಗಿದೆ. ಇನ್ನು ಟ್ರಕ್ ಚಾಲಕ, ಸಣ್ಣ ಪೆಟ್ಟಿ ಅಂಗಡಿ ಮಾಲೀಕ ಸೇರಿದಂತೆ ಒಟ್ಟು 3 ಜನರ ಮೃತದೇಹ ಹುಡುಕಾಟ ಕಾರ್ಯಾಚರಣೆ ನಡೆಯುತ್ತಿದೆ. ಆದರೆ, ಭೀಕರ ಮಳೆಯಿಂದಾಗಿ ಮಣ್ಣು ತೆರವು ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದ್ದು, ನಿಧಾನಗತಿಯಲ್ಲಿ ತೆರವು ಕಾರ್ಯ ನಡೆಯುತ್ತಿದೆ. ಇನ್ನು ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘಟನೆ ನಡೆದ ಸ್ಥಳಕ್ಕೆ ತೆರಳು ಪರಿಶೀಲನೆ ಮಾಡಿದ್ದಾರೆ. ಆದರೆ, ಸಿದ್ದರಾಮಯ್ಯ ಭೇಟಿ ವೇಳೆಯೂ ಜೋರಾಗಿ ಮಳೆ ಬರುತ್ತಿದ್ದರಿಂದ ಕೆಲವೇ ನಿಮಿಷಗಳಲ್ಲಿ ಅಲ್ಲಿಂದ ಹೊರಟು ಹೋದರು.
ಬೃಹತ್ ಗುಡ್ಡ ಕುಸಿತ: ಬೇಗ ಮನೆಗೆ ಬಾ ಮಗ ಎಂದ ತಾಯಿ, ಮನೆಗೆ ಬಂದ ಮಗನಿಗೆ ಸಿಕ್ಕಿದ್ದು ತಾಯಿಯ ಸೀರೆ ಮಾತ್ರ!
ಮಣ್ಣು ತೆರವು ಕಾರ್ಚಾಚರಣೆಗೆ ಮಿಲಿಟರಿ ಪಡೆ ಆಗಮನ:
ಶಿರೂರು ಬಳಿಯ ಗುಡ್ಡ ಕುಸಿತದಲ್ಲಿ ಮೃತಪಟ್ಟ 7 ಜನರ ಮೃತದೇಹ ಹೊರಗೆ ತೆಗೆದಿದ್ದರೂ, ಇನ್ನೂ ಮೂವರ ಮೃತದೇಹ ಪತ್ತೆ ಮಾಡಬೇಕಿದೆ. ಇನ್ನು ರಾಜ್ಯ ಸರ್ಕಾರದ ನಿಯೋಜನೆ ಮಾಡಿದ್ದ ತಂಡದಿಂದ ಮರತದೇಹ ಪತ್ತೆ ಮಾಡಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಮರಾಠ ರೆಜಿಮೆಂಟಲ್ ಫೋರ್ಸ್‌ನ ಮಿಲಿಟರಿ ಪಡೆಯು ಗುಡ್ಡ ಕುಸಿತ ತೆರವು ಕಾರ್ಯಾಚರಣೆ ಕೈಗೊಳ್ಳಲು ಮುಂದಾಗಿದೆ. ಈ ಮೂಲಕ ಬಾಕಿ ಮೃತದೇಹ ಪತ್ತೆ ಕರ್ಯಾಚರಣೆಗೆ ವೇಗ ಸಿಗಲಿದೆ. ಸಂಬಂಧಿಕರನ್ನು ಕಳೆದುಕೊಂಡ ಕುಟುಂಬಗಳಿಗೆ ಅವರ ಮೃತದೇಹವಾದರೂ ಸಿಗುವ ನಿರೀಕ್ಷೆ ಬಂದಿದೆ.
ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ: ಶಿರೂರು ಗುಡ್ಡ ಕುಸಿತದ ಸ್ಥಳಕ್ಕೆ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ ವಿರುದ್ಧ ಮೃತರ ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ದಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಬಂದ್ರು ನಮ್ಮ ಮಾತುಗಳನ್ನು ಕೂಡಾ ಕೇಳದೆ ಸೀದಾ ಹೋಗಿದ್ದಾರೆ. ಮೃತರ ಕುಟುಂಬದ ಸದಸ್ಯರನ್ನು ಕಳೆದುಕೊಂಡ ನೋವಲ್ಲಿದ್ದೇವೆ. ಕುಟುಂಬದ ಸದಸ್ಯರ ಮೃತದೇಹ ಇನ್ನೂ ದೊರಕಿಲ್ಲ. ಮುಖ್ಯಮಂತ್ರಿ ಸಿದ್ರಾಮಯ್ಯ ಸ್ಥಳಕ್ಕೆ ಬಂದರೂ, ನಮ್ಮನ್ನು ಮಾತನಾಡಿಸದೇ ಸೀದಾ ತೆರಳಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.