ಶಿರೂರು ಗುಡ್ಡ ಕುಸಿತ ಪ್ರಕರಣ: ಹತ್ತು ಜನ ಕಣ್ಮರೆ ಬಗ್ಗೆ ದೂರು
ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ಒಟ್ಟು 10 ಜನರು ಕಣ್ಮರೆಯಾಗಿರುವ ಬಗ್ಗೆ ಅವರ ಕುಟುಂಬಸ್ಥರಿಂದ ಜಿಲ್ಲಾಡಳಿತಕ್ಕೆ ದೂರುಗಳು ಬಂದಿದೆ.
ಕಾರವಾರ (ಜು.20): ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ಒಟ್ಟು 10 ಜನರು ಕಣ್ಮರೆಯಾಗಿರುವ ಬಗ್ಗೆ ಅವರ ಕುಟುಂಬಸ್ಥರಿಂದ ಜಿಲ್ಲಾಡಳಿತಕ್ಕೆ ದೂರುಗಳು ಬಂದಿದೆ. ಈಗಾಗಲೆ 7 ಜನರ ಕಳೆ ಬರ ಪತ್ತೆಯಾಗಿದೆ. ಉಳಿದವರಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಕೆ. ತಿಳಿಸಿದರು.
ನಗರದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿ, ಘಟನೆಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿ ಹೋಟೆಲ್ ಇಟ್ಟುಕ್ಕೊಂಡಿದ್ದ ಒಂದೇ ಕುಟುಂಬದ ಐದು ಜನ, ಉಳುವರೆಯ ಒಬ್ಬ ಮಹಿಳೆ ಹಾಗೂ ಮೂರು ಟ್ಯಾಂಕರ್‌ಗಳ ಚಾಲಕರು ಹಾಗೂ ಒಬ್ಬ ಕಟ್ಟಿಗೆ ಸಾಗಾಟ ಮಾಡುವ ಲಾರಿ ಚಾಲಕ ಕಾಣೆಯಾದ ಬಗ್ಗೆ ದೂರುಗಳು ಬಂದಿತ್ತು. ಒಂದೇ ಕುಟುಂಬದ 4 ಜನರ ಮೃತದೇಹ ಪತ್ತೆಯಾಗಿದ್ದು, ಉಳಿದ ಒಬ್ಬರಿಗಾಗಿ ಹುಡುಕಾಟ ನಡೆಯುತ್ತಿದೆ. ಇಬ್ಬರು ಚಾಲಕರ ಕಳೆಬರ ಸಿಕ್ಕಿದ್ದು, ಇದರಲ್ಲಿ ಒಬ್ಬರ ಮೃತದೇಹದ ಗುರುತು ಪತ್ತೆಯಾಗಿದೆ. ಟ್ಯಾಂಕರ್ ಲಾರಿ ಚಾಲಕ ತಮಿಳುನಾಡು ಮೂಲದ ಚಿಣ್ಣನ್(56) ಮೃತಪಟ್ಟವರಾಗಿದ್ದಾರೆ. ಮೃತರ ಕುಟುಂಬಕ್ಕೆ ₹5 ಲಕ್ಷ ಪರಿಹಾರದ ಆದೇಶ ವಿತರಿಸಲಾಗಿದೆ ಎಂದರು.
ಶಿರೂರು ಗುಡ್ಡ ಕುಸಿತ ಪ್ರದೇಶಕ್ಕೆ ಸಚಿವ, ಶಾಸಕರ ಭೇಟಿ: 'ಗುಡ್ಡ ಕುಸಿತ ಆಗುತ್ತೆ ಅಂತಾ ಮೊದಲೇ ಅಂದಾಜಿಸಲಾಗಿತ್ತು'
ಒಟ್ಟು ಮೂರು ಟ್ಯಾಂಕರ್‌ಗಳು ಹಾಗೂ ಒಂದು ಲಾರಿ ನಾಪತ್ತೆಯಾಗಿತ್ತು. ಇವುಗಳಲ್ಲಿ ಒಂದು ಎಚ್‌ಪಿ ಕಂಪನಿಯ ಟ್ಯಾಂಕರ್ ನೀರಲ್ಲಿ ಕೊಚ್ಚಿ ಹೋಗಿದೆ. ಉಳಿದ ಎರಡು ಭಾರತ್ ಪೆಟ್ರೋಲಿಯಂ ಟ್ಯಾಂಕರ್‌ಗಳು ದಡದಲ್ಲಿ ಸುರಕ್ಷಿತವಾಗಿವೆ. ಒಂದು ಟಿಂಬರ್ ಲಾರಿ ನಾಪತ್ತೆಯಾಗಿದ್ದು, ಜಿಪಿಎಸ್ ಲೊಕೇಶನ್ ನೋಡಿದಾಗ ಶಿರೂರು ಗುಡ್ಡ ಕುಸಿತದ ಪ್ರದೇಶದಲ್ಲಿದೆ ಎಂದು ಕಂಡುಬರುತ್ತಿದೆ. ಗಂಗಾವಳಿ ನದಿಯಲ್ಲಿರುವ ಗ್ಯಾಸ್ ಟ್ಯಾಂಕರ್ ಬಗ್ಗೆ ಆತಂಕ ಪಡುವ ಅವಶ್ಯಕತೆಯಿಲ್ಲ. ವಿಶೇಷ ತಂಡದಿಂದ ನಿಯಮದಂತೆ ಅನಿಲವನ್ನು ಗಾಳಿಯಲ್ಲಿಯೇ ಬಿಟ್ಟು ಖಾಲಿ ಮಾಡಲಾಗುತ್ತಿದೆ. ಸುತ್ತಮುತ್ತಲಿನ ಪ್ರದೇಶದ ಮನೆಗಳನ್ನು ಖಾಲಿ ಮಾಡಿಸಿದ್ದು, ಬೆಂಕಿ ಹಚ್ಚದಂತೆ, ಮೊಬೈಲ್ ಬಳಕೆ ಮಾಡದಂತೆ, ವಾಹನ ಓಡಾಟ ನಡೆಸದಂತೆ ಕಟ್ಟುನಿಟ್ಟಿನ ಸೂಚನೆ ಕೂಡ ನೀಡಲಾಗಿದೆ. ಸ್ಥಳದಲ್ಲಿ ವಿಶೇಷ ತಂಡದ ಅಧಿಕಾರಿಗಳು ಹೊರತು ಯಾರನ್ನು ಬಿಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಶಿರೂರು ಗುಡ್ಡ ಕುಸಿತ ಪ್ರಕರಣ: ಸ್ಥಳಕ್ಕೆ ಹೆಚ್‌ಡಿಕೆ ಭೇಟಿ.. ಮಾಧ್ಯಮಗಳಿಗೆ ಜಿಲ್ಲಾಡಳಿತದಿಂದ ತಡೆ
ಜಿಲ್ಲೆಯಲ್ಲಿ ಮಳೆ ಮತ್ತೆ ಹೆಚ್ಚಾದ ಹಿನ್ನೆಲೆ ವಿವಿಧೆಡೆ 18 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ಅದರಲ್ಲಿ 2055 ಜನರು ವಾಸ್ತವ್ಯ ಹೂಡಿದ್ದಾರೆ. ಕಾರವಾರ ತಾಲೂಕಿನಲ್ಲಿ 6, ಅಂಕೋಲಾ ತಾಲೂಕಿನಲ್ಲಿ 4, ಹೊನ್ನಾವರ ತಾಲೂಕಿನಲ್ಲಿ 8 ಸೇರಿದಂತೆ ಒಟ್ಟು 18 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಜಿಲ್ಲಾಡಳಿದ ಮೂಲಗಳು ತಿಳಿಸಿವೆ.
ಮತ್ತೊಂದು ಅಪರಿಚಿತ ಪುರುಷನ ಮೃತದೇಹ ಪತ್ತೆ:
ಅಂಕೋಲಾ: ಇಲ್ಲಿನ ಬೆಳಂಬಾರ ಬಳಿ ಸಮುದ್ರತೀರದಲ್ಲಿ ಅಪರಿಚಿತ ಪುರುಷನ ಅರ್ಧ ಮೃತದೇಹ ಗುರುವಾರ ಪತ್ತೆಯಾಗಿದೆ. ಸೊಂಟದ ಕೆಳಗಡೆ ಭಾಗ ಮಾತ್ರ ಇದ್ದು, ಮೇಲ್ಭಾಗ ನಾಪತ್ತೆಯಾಗಿದೆ. ಶಿರೂರು ಗುಡ್ಡ ಕುಸಿತ ದುರಂತದಲ್ಲಿ ನದಿ ಪಾಲಾದ ವ್ಯಕ್ತಿಯ ಶವ ಇರಬಹುದೇ ಅಥವಾ ಬೇರೆಯದೆ? ಎನ್ನುವುದು ತನಿಖೆಯಿಂದ ತಿಳಿದು ಬರಬೇಕಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.