ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಸುದ್ದಿ ಹೆಚ್ಚುತ್ತಿರುವುದಕ್ಕೆ ಸಿದ್ದು ಕಿಡಿ, ಫ್ಯಾಕ್ಟ್ ಚೆಕ್‌ ಮಾಡಿ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚನೆ

ಬೆಂಗಳೂರು(ಜೂ.21):  ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅವುಗಳ ಮೂಲ ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕಳೆದ 2013ರಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಆರಂಭದಿಂದಲೇ ಸುಳ್ಳು ಸುದ್ದಿಗಳ ಹಾವಳಿ ಹೆಚ್ಚಾಗಿತ್ತು, ಈಗ ಅದೇ ತಂತ್ರವನ್ನು ರಾಜಕೀಯ ವಿರೋಧಿಗಳು ಆರಂಭಿಸಿದ್ದಾರೆ. ಲೋಕಸಭಾ ಚುನಾವಣೆ ಹತ್ತಿರ ಬರುತ್ತಿರುವುದರಿಂದ ಇಂತಹ ಸುಳ್ಳು ಸುದ್ದಿ ಸೃಷ್ಟಿಸಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಸಾಧ್ಯತೆ ಹೆಚ್ಚಾಗಿದೆ. ಕಳೆದ ಬಾರಿ ಮಕ್ಕಳ ಕಳ್ಳರು, ಗೋಮಾಂಸ ಸಾಗಿಸುವವರು ಎಂಬುದು ಸೇರಿದಂತೆ ವಿವಿಧ ಬಗೆಯ ಸುಳ್ಳು ಸುದ್ದಿ ಹರಡಿಸಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಪ್ರಯತ್ನ ಮಾಡಿದ್ದರು. ಹಾಗಾಗಿ ಆರಂಭದಲ್ಲೇ ಇಂತಹ ಸುಳ್ಳು ಸುದ್ದಿಗಳ ಮೂಲವನ್ನು ಪತ್ತೆ ಹಚ್ಚಿ ಬೇರು ಸಮೇತ ಕತ್ತರಿಸುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ.

ಸಿದ್ದು ಸರ್ಕಾರದ ನಿಯಮ ಮೀರಿದ ನಡೆ, ಫ್ಯಾಕ್ಟ್ ಚೆಕ್ ಅಸಲಿಯತ್ತು ಬಹಿರಂಗಪಡಿಸಿದ ರಾಜೀವ್ ಚಂದ್ರಶೇಖರ್!

ಫ್ಯಾಕ್ಟ್ ಚೆಕ್‌:

ಈ ಹಿಂದೆ ಬೆಂಗಳೂರು ನಗರ ಪೊಲೀಸ್‌ ಕಮಿಷನರೇಟ್‌ ಮತ್ತು ಪೊಲೀಸ್‌ ಪ್ರಧಾನ ಕಚೇರಿಯಲ್ಲಿ ಒಂದು ತಾಂತ್ರಿಕ ತಂಡ ಸುಳ್ಳು ಸುದ್ದಿಗಳನ್ನು ಪತ್ತೆ ಹಚ್ಚಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿತ್ತು. ಆದರೆ ಹಿಂದಿನ ಸರ್ಕಾರದ ಅವಧಿಯಲ್ಲಿ ಕಾರ್ಯ ನಿರ್ವಹಿಸುತ್ತಿರಲಿಲ್ಲ. ಅದನ್ನು ಪುನಃ ಆರಂಭಿಸಬೇಕು. ಸೈಬರ್‌ ಪೊಲೀಸರನ್ನು ಸುಳ್ಳು ಸುದ್ದಿ ಪತ್ತೆಗೆ ಸಜ್ಜು ಮಾಡಬೇಕು. ಈ ಬಗ್ಗೆ ಪ್ರತಿ ತಿಂಗಳು ವರದಿಯನ್ನು ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಸಿದ್ದು ಸೂಚನೆ ಏನು?

- ಸುಳ್ಳು ಸುದ್ದಿಗಳು ಹರಡುವುದಕ್ಕಿಂತ ಮೊದಲೇ ಪತ್ತೆಹಚ್ಚಬೇಕು
- ಆರಂಭದಲ್ಲೇ ಸುಳ್ಳುಸುದ್ದಿ ಬೇರು ಕತ್ತರಿಸಲು ಸೈಬರ್‌ ಪೊಲೀಸರು ಕ್ರಮ ಕೈಗೊಳ್ಳಬೇಕು
- ಬೆಂಗಳೂರಿನ ಪೊಲೀಸ್‌ ಪ್ರಧಾನ ಕಚೇರಿಯಲ್ಲಿ ಸುಳ್ಳುಸುದ್ದಿ ಪತ್ತೆ ತಂಡ ಪುನಾರಂಭಿಸಬೇಕು
- ಸುಳ್ಳುಸುದ್ದಿ ಮಟ್ಟಹಾಕಿದ ಬಗ್ಗೆ ಪ್ರತಿ ತಿಂಗಳು ಪೊಲೀಸರು ವರದಿ ನೀಡಬೇಕು