ನರೇಗಾ ಯೋಜನೆಯ ಹೆಸರು ಮತ್ತು ಸ್ವರೂಪ ಬದಲಿಸಿದ ಕೇಂದ್ರ ಸರ್ಕಾರದ ನಡೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರವಾಗಿ ಖಂಡಿಸಿದ್ದಾರೆ. ಈ ನಿರ್ಧಾರವು ಬಡವರ 'ದುಡಿಮೆಯ ಹಕ್ಕನ್ನು' ಕಸಿದುಕೊಳ್ಳುವ ಸರ್ವಾಧಿಕಾರಿ ಧೋರಣೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ಜ.03): ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಯೋಜನೆಯ ಹೆಸರು ಮತ್ತು ಸ್ವರೂಪವನ್ನು ಬದಲಾವಣೆ ಮಾಡಿರುವ 'ಕೇಂದ್ರದ ಈ ನಡೆ ಸರ್ವಾಧಿಕಾರಿ ಧೋರಣೆಯ ಪ್ರದರ್ಶನ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 20 ವರ್ಷಗಳ ಹಿಂದೆ ಡಾ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ಕಾಲದಲ್ಲಿ 'ದುಡಿಮೆಯ ಹಕ್ಕು' ನೀಡುವ ಉದ್ದೇಶದಿಂದ ನರೇಗಾ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಬಡವರಿಗೆ ಆರ್ಥಿಕ ಭದ್ರತೆ ನೀಡುವ ಈ ಕಾಯಿದೆಯನ್ನು ಈಗ 'ವಿಬಿ ರಾಮ್ ಜೀ' ಕಾಯಿದೆ ಎಂದು ಬದಲಾಯಿಸಲಾಗಿದೆ. ಈ ಮಹತ್ವದ ಬದಲಾವಣೆ ಮಾಡುವ ಮುನ್ನ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳ ಜೊತೆಗಾಗಲಿ ಅಥವಾ ಜನರ ಜೊತೆಗಾಗಲಿ ಯಾವುದೇ ಚರ್ಚೆ ನಡೆಸಿಲ್ಲ' ಎಂದು ಸಿಎಂ ಅಸಮಾಧಾನ ವ್ಯಕ್ತಪಡಿಸಿದರು.

ಬಡವರ ಹಕ್ಕು ಕಸಿದ ಬಿಜೆಪಿ

ದೇಶದಲ್ಲಿ ಸುಮಾರು 12 ಕೋಟಿ 16 ಲಕ್ಷ ನರೇಗಾ ಕಾರ್ಮಿಕರಿದ್ದಾರೆ. ಇದರಲ್ಲಿ 6 ಕೋಟಿ 21 ಲಕ್ಷ ಮಹಿಳೆಯರು, ಶೇ. 17ರಷ್ಟು ಎಸ್‌ಸಿ ಮತ್ತು ಶೇ. 11ರಷ್ಟು ಎಸ್‌ಟಿ ಸಮುದಾಯದವರಿದ್ದಾರೆ. ಕರ್ನಾಟಕವೊಂದರಲ್ಲೇ 71.18 ಲಕ್ಷ ಸಕ್ರಿಯ ಕಾರ್ಮಿಕರಿದ್ದು, ಅದರಲ್ಲಿ ಶೇ. 51.6 ರಷ್ಟು (36.75 ಲಕ್ಷ) ಮಹಿಳೆಯರೇ ಇದ್ದಾರೆ. 'ಜನರು ನೆಮ್ಮದಿಯಿಂದ ಜೀವಿಸಲು ಪೂರಕವಾಗಿದ್ದ ಕಾನೂನನ್ನು ನಾಶ ಮಾಡುವುದೇ ಬಿಜೆಪಿಯ ಕೆಲಸ. ಇದಕ್ಕೆ ಆರ್‌ಎಸ್‌ಎಸ್ ಮಾರ್ಗದರ್ಶನ ನೀಡುತ್ತಿದೆ. ಈ ಬದಲಾವಣೆಯಿಂದ ಬಡವರಿಗಲ್ಲ, ಕಾರ್ಪೊರೇಟ್ ಕಂಪನಿಗಳಿಗೆ ಲಾಭವಾಗಲಿದೆ' ಎಂದು ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದರು.

ನರೇಗಾ ಕೆಲಸದಲ್ಲಿ ಮಹಿಳೆಯರೇ ಮಹಾಲಕ್ಷ್ಮಿಯರು!

ರಾಜ್ಯದ ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬಾಗಿರುವ ನರೇಗಾ ಯೋಜನೆಯಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಸಕ್ರಿಯರಾಗಿದ್ದಾರೆ ಎಂಬುದು ವಿಶೇಷ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಂಚಿಕೊಂಡಿರುವ ಅಂಕಿಅಂಶಗಳ ಒಂದು ನೋಟ ಇಲ್ಲಿದೆ.

ಕರ್ನಾಟಕದ ಕಾರ್ಮಿಕ ಶಕ್ತಿ:

  • ಒಟ್ಟು ಸಕ್ರಿಯ ಕಾರ್ಮಿಕರು: 71.18 ಲಕ್ಷ
  • ಮಹಿಳಾ ಕಾರ್ಮಿಕರ ಸಂಖ್ಯೆ: 36.75 ಲಕ್ಷ
  • ಮಹಿಳೆಯರ ಪಾಲು: 51.6% (ಅರ್ಧಕ್ಕಿಂತ ಹೆಚ್ಚು)

ಗ್ರಾಮೀಣ ಆರ್ಥಿಕತೆಗೆ ಪೆಟ್ಟು

ರೈತರು ತಮ್ಮ ಹಳ್ಳಿಗಳಲ್ಲೇ ಕೃಷಿ ಕೆಲಸದ ಜೊತೆಗೆ ನರೇಗಾ ಅಡಿಯಲ್ಲಿ ಕೆಲಸ ಮಾಡುತ್ತಾ ಆರ್ಥಿಕ ವ್ಯವಸ್ಥೆಯನ್ನು ಕಟ್ಟಿಕೊಂಡಿದ್ದರು. ತಮ್ಮ ಮಕ್ಕಳಿಗೆ ಸ್ಥಳೀಯವಾಗಿ ಶಿಕ್ಷಣ ಕೊಡಿಸುತ್ತಿದ್ದರು. ಉದ್ಯೋಗ ಕೇಳಿ ಪಡೆಯುವ ಹಕ್ಕು ಅವರಿಗಿತ್ತು. ಆದರೆ, ನರೇಗಾ ಆರಂಭವಾದಾಗಿನಿಂದಲೂ ಬಿಜೆಪಿ ಇದನ್ನು ವಿರೋಧಿಸುತ್ತಲೇ ಬಂದಿದೆ. ಈ ಹಿಂದೆ ಆಹಾರದ ಹಕ್ಕು ತಂದಾಗಲೂ ಮುರುಳಿ ಮನೋಹರ್ ಜೋಶಿ ಅವರು ಇದು 'ಫುಡ್ ಗ್ಯಾರಂಟಿ ಅಲ್ಲ, ವೋಟ್ ಗ್ಯಾರಂಟಿ' ಎಂದು ಲೇವಡಿ ಮಾಡಿದ್ದರು ಎಂಬುದನ್ನು ಸಿಎಂ ನೆನಪಿಸಿದರು.

'ಬಿಜೆಪಿ ಸರ್ಕಾರದ ಸಾಧನೆ ಎಂದರೆ ಕೇವಲ ಹೆಸರು ಬದಲಾವಣೆ ಮಾಡುವುದು ಮಾತ್ರ. ಈಗಾಗಲೇ ಸುಮಾರು 30 ಯೋಜನೆಗಳ ಹೆಸರು ಬದಲಾವಣೆ ಮಾಡಿದ್ದಾರೆ' ಎಂದು ಲೇವಡಿ ಮಾಡಿದ ಮುಖ್ಯಮಂತ್ರಿಗಳು, ಕೇಂದ್ರದ ಈ ಜನವಿರೋಧಿ ನೀತಿಯನ್ನು ಸಂಪುಟ ಸಭೆಯಲ್ಲಿ ಚರ್ಚಿಸಿರುವುದಾಗಿ ತಿಳಿಸಿದರು.