Asianet Suvarna News Asianet Suvarna News

ಜೂನ್‌ 1ರಂದೇ ಗ್ಯಾರಂಟಿ ಜಾರಿಗೆ ಸಿಎಂ ಸಿದ್ದು ಸಿದ್ಧತೆ..!

ಅಧಿಕಾರಿಗಳ ಜತೆ ಸಿಎಂ ಚರ್ಚೆ ಗ್ಯಾರಂಟಿಗೆ ಬೇಕು 57,000 ಕೋಟಿ, ಗ್ಯಾರಂಟಿ ಜಾರಿಗೆ ನಾಡಿದ್ದು ಸಂಪುಟ ಸಭೆ, ನಾಳೆ ಸಚಿವರ ಸಿದ್ದು ಜತೆ ಮಹತ್ವದ ಚರ್ಚೆ

CM Siddaramaiah Preparing to Implement the Congress Guarantee on June 1 in Karnataka grg
Author
First Published May 30, 2023, 7:01 AM IST

ಬೆಂಗಳೂರು(ಮೇ.30):  ರಾಜ್ಯದ ಜನರಿಗೆ ಕೊಟ್ಟಮಾತಿನಂತೆ ತನ್ನ ‘ಗ್ಯಾರಂಟಿ’ ಯೋಜನೆ ಜಾರಿಗೊಳಿಸುವ ಗಂಭೀರ ಪ್ರಕ್ರಿಯೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಆರಂಭಿಸಿದ್ದು, ಸೋಮವಾರ ಇಡೀ ದಿನ ಈ ಕುರಿತ ಎಲ್ಲ ಇಲಾಖೆಗಳ ಉನ್ನತ ಅಧಿಕಾರಿಗಳೊಂದಿಗೆ ಸುದೀರ್ಘ ಸಭೆ ನಡೆಸಿದರು. ಈ ವೇಳೆ ಆರ್ಥಿಕ ಇಲಾಖೆ ಐದೂ ಯೋಜನೆಗಳಿಗೆ ಒಟ್ಟು 57 ಸಾವಿರ ಕೋಟಿ ರು. ಅನುದಾನ ಬೇಕೆಂದು ಅಂದಾಜು ವರದಿ ನೀಡಿದೆ.

ಸಭೆಯಲ್ಲಿ ಬಿಪಿಎಲ್‌ ಕಾರ್ಡುದಾರರಿಗೆ ಪ್ರತಿ ವ್ಯಕ್ತಿಗೆ 10 ಕೆ.ಜಿ. ಅಕ್ಕಿ ನೀಡುವ ಅನ್ನಭಾಗ್ಯ ಬಿಟ್ಟು ಉಳಿದ ನಾಲ್ಕೂ ಯೋಜನೆಗಳ ಜಾರಿಗೆ ಸಾಕಷ್ಟುಗೊಂದಲ, ತೊಡಕುಗಳು ಎದುರಾಗುತ್ತಿರುವ ಬಗ್ಗೆ ಅಧಿಕಾರಿಗಳು ವಿವರಿಸಿದಾಗ ಅವುಗಳಿಗೆ ಸಾಧ್ಯವಾದಷ್ಟೂ ಮಟ್ಟಿನ ಪರಿಹಾರ ಸೂತ್ರ ಸಿದ್ಧಪಡಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ.

ಗ್ಯಾರಂಟಿ ಅನುಷ್ಠಾನ ಖಚಿತ: ಪರಮೇಶ್ವರ್‌

ಇನ್ನು ಜೂ.1ರ ಸಚಿವ ಸಂಪುಟ ಸಭೆಗೂ ಮುನ್ನ ಬುಧವಾರ ಎಲ್ಲ ಸಚಿವರೊಂದಿಗೆ ಐದು ಗ್ಯಾರಂಟಿಗಳ ಜಾರಿಗಾಗಿ ಸಭೆ ನಡೆಸಲಾಗುವುದು. ಪರಿಹಾರ ಸೂತ್ರಗಳೊಂದಿಗೆ ಅಧಿಕಾರಿಗಳು ಈ ಸಭೆಗೆ ಹಾಜರಾಗಬೇಕೆಂದು ಮುಖ್ಯಮಂತ್ರಿ ಸೂಚಿಸಿದ್ದಾರೆ.

ಸುದೀರ್ಘ ಸಭೆ:

ಸೋಮವಾರ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರ ಸಮ್ಮುಖದಲ್ಲಿ ಆರ್ಥಿಕ ಇಲಾಖೆ, ಇಂಧನ, ಆಹಾರ ಮತ್ತು ನಾಗರಿಕ ಪೂರೈಕೆ, ಸಾರಿಗೆ, ಕೌಶಲ್ಯಾಭಿವೃದ್ಧಿ, ಯೋಜನೆ ಮತ್ತು ಸಾಂಖ್ಯಿಕ ಇಲಾಖೆಗಳ ಅಪರ ಮುಖ್ಯಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳೊಂದಿಗೆ ರೇಸ್‌ಕೋರ್ಸ್‌ ರಸ್ತೆಯ ಶಕ್ತಿ ಭವನದಲ್ಲಿ ಸಭೆ ನಡೆಸಿದ ಸಿದ್ದರಾಮಯ್ಯ ಅವರು, ಯಾವ್ಯಾವ ಗ್ಯಾರಂಟಿ ಯೋಜನೆಗಳಡಿ ಎಷ್ಟುಫಲಾನುಭವಿಗಳು ಬರಬಹುದು, ಇವುಗಳ ಜಾರಿಗೆ ಎದುರಾಗುವ ತೊಡಕು, ಗೊಂದಲಗಳೇನು? ಸರ್ಕಾರದ ಹಣಕಾಸಿನ ಇತಿ ಮಿತಿಯಲ್ಲಿ ಯೋಜನೆಗಳ ಜಾರಿಗೆ ಏನೆಲ್ಲಾ ಷರತ್ತುಗಳನ್ನು ಅನ್ವಯಿಸಬಹುದು. ಬಿಪಿಎಲ್‌ ಕಾರ್ಡುದಾರರಿಗೆ ಮಾತ್ರ ಅನ್ವಯಿಸಿದರೆ ತಗಲುವ ವೆಚ್ಚವೆಷ್ಟುಹೀಗೆ ಪ್ರತಿಯೊಂದು ದಿಕ್ಕಿನಲ್ಲೂ ಚರ್ಚೆಗಳನ್ನು ನಡೆಸಿ ಸವಿವರವಾದ ಮಾಹಿತಿ ಪಡೆದರು.

ಅಧಿಕಾರಿಗಳು ಪ್ರಾತ್ಯಕ್ಷಿಕೆ ಮೂಲಕ ನೀಡಿದ ಪ್ರತಿಯೊಂದು ಅಂಶವನ್ನೂ ಗಮನಿದ ಸಿಎಂ, ತಮ್ಮಲ್ಲಿ ಉದ್ಭವಿಸಿದ ಪ್ರಶ್ನೆಗಳನ್ನು ಅಧಿಕಾರಿಗಳ ಮುಂದಿಟ್ಟರು. ಯೋಜನೆಗಳ ಜಾರಿಗೆ ಎದುರಾಗಬಹುದಾದ ಸವಾಲುಗಳನ್ನು ಪರಿಹರಿಸಲು ಇರುವ ಮಾರ್ಗೋಪಾಯಗಳ ಬಗ್ಗೆ ಚರ್ಚಿಸಿದರು ಆದರೆ, ಯಾವುದೇ ನಿರ್ಧಾರ ಕೈಗೊಳ್ಳಲಿಲ್ಲ.

ಬದಲಿಗೆ, ‘ಗ್ಯಾರಂಟಿ ಯೋಜನೆಗಳ ಜಾರಿ ಮಹತ್ವದ್ದು. ನಾನೊಬ್ಬನೇ ಯಾವುದೇ ತೀರ್ಮಾನ ಕೈಗೊಳ್ಳುವುದು ಸೂಕ್ತ ಅಲ್ಲ. ಇದಕ್ಕೆ ಪಕ್ಷ ಹಾಗೂ ಸರ್ಕಾರದ ಎಲ್ಲ ಸಚಿವರೊಂದಿಗೂ ಚರ್ಚಿಸಿ ಸ್ಪಷ್ಟತೀರ್ಮಾನ ಮಾಡಬೇಕಾಗುತ್ತದೆ. ಬುಧವಾರ ಸಂಬಂಧಿಸಿದ ಸಚಿವರೊಂದಿಗೆ ಮತ್ತೊಂದು ಸುತ್ತಿನ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳೋಣ ಎಂದರು ಎಂದು ಮೂಲಗಳು ಖಚಿತಪಡಿಸಿವೆ.

ಇಲಾಖಾವಾರು ಮಾಹಿತಿ ಏನು?

*‘ಗೃಹಲಕ್ಷ್ಮಿ’ಗೆ ಬೇಕು 30,000 ಕೋಟಿ ರು.

ಮನೆಯೊಡತಿಗೆ ಮಾಸಿಕ 2000 ರು. ಸಹಾಯಧನ ನೀಡುವ ‘ಗೃಹಲಕ್ಷ್ಮಿ’ ಯೋಜನೆಯನ್ನು ಷರತ್ತು ವಿಧಿಸಿ ಕೇವಲ ಹಾಲಿ ಇರುವ 1.27 ಕೋಟಿ ಬಿಪಿಎಲ್‌ ಕುಟುಂಬಗಳಿಗೆ ಜಾರಿಗೊಳಿಸಿದರೂ ಮಾಸಿಕ 2,540 ಕೋಟಿ ರು.ನಂತೆ ವಾರ್ಷಿಕ 30,480 ಕೋಟಿ ರು.ಗಳಷ್ಟುಅನುದಾನ ಬೇಕಾಗುತ್ತದೆ. ಒಂದು ವೇಳೆ ಸರ್ಕಾರ ಬಿಪಿಎಲ್‌ ಜತೆಗೆ 46 ಲಕ್ಷ ಎಪಿಎಲ್‌ ಕಾರ್ಡುದಾರರಿಗೂ ನೀಡಲು ಮುಂದಾದರೆ ಇನ್ನೂ 11 ಸಾವಿರ ಕೋಟಿ ರು. ಹೆಚ್ಚುವರಿ ಅನುದಾನ ಬೇಕಾಗುತ್ತದೆ ಎಂದು ಆರ್ಥಿಕ ಇಲಾಖೆ ವಿವರಿಸಿದೆ.

ಇನ್ನು ಮನೆಯೊಡತಿ ಎಂದರೆ ಸಾಮಾನ್ಯವಾಗಿ ಅಪ್ಪ, ಅಮ್ಮ, ಮಕ್ಕಳು ಇರುವೆಡೆ ತಾಯಿಯನ್ನು ಪರಿಗಣಿಸಬಹುದು. ಅತ್ತೆ-ಸೊಸೆ ಇದ್ದರೆ ಯಾರನ್ನು ಪರಿಗಣಿಸುವುದು? ಅತ್ತೆ ಹಾಸಿಗೆ ಹಿಡಿದಿದ್ದರೆ ಸೊಸೆಯನ್ನು ಪರಿಗಣಿಸುವುದೇ? ಅತ್ತೆ, ಇಲ್ಲವೇ ಸೊಸೆಗೆ ಸರ್ಕಾರಿ ನೌಕರಿ, ಪಿಂಚಣಿ ಬರುತ್ತಿದ್ದರೆ ಅವರನ್ನು 2000 ರು. ಸಹಾಯಧನಕ್ಕೆ ಪರಿಗಣಿಸುವ ಅಗತ್ಯವಿದೆಯೇ? ಈಗಾಗಲೇ ಸಂಧ್ಯಾಸುರಕ್ಷಾ, ವಿಧವಾ ವೇತನ ಪಡೆಯುತ್ತಿರುವವರನ್ನು ಗೃಹಲಕ್ಷ್ಮಿಯೊಳಗೆ ವಿಲೀನಗೊಳಿಸುವುದಾ? ಹೀಗೆ ಹತ್ತಾರು ಪ್ರಶ್ನೆಗಳು ಉದ್ಭವಿಸಿವೆ.

*‘ಗೃಹ ಜ್ಯೋತಿ’ಗೆ 8000 ಕೋಟಿ ರು.

200 ಯೂನಿಟ್‌ ಉಚಿತ ವಿದ್ಯುತ್‌ ನೀಡುವ ‘ಗೃಹ ಜ್ಯೋತಿ’ ಯೋಜನೆಗೆ ಒಟ್ಟು 8008 ಕೋಟಿ ರು. ಅನುದಾನ ಅಗತ್ಯವಿದೆ ಎಂದು ಇಂಧನ ಇಲಾಖೆ ಅಧಿಕಾರಿಗಳು ವಿವರಿಸಿದ್ದಾರೆ. ಈ ಯೋಜನೆಯಡಿ ಒಟ್ಟು 2.14 ಕೋಟಿ ಕುಟುಂಬಗಳು ಬರಲಿವೆ. ಈ ಕುಟುಂಬಗಳ ವಾರ್ಷಿಕ ವಿದ್ಯುತ್‌ ಬಳಕೆ ಸುಮಾರು 13,575 ದಶಲಕ್ಷ ಯೂನಿಟ್‌ ಎಂದು ಅಂದಾಜಿಸಿದೆ. ಒಂದು ವೇಳೆ ಇದನ್ನು ಬಿಪಿಎಲ್‌ ಕಾರ್ಡುದರಾರರಿಗೆ ಮಾತ್ರ ಅನ್ವಯಿಸಿದರೆ 4750 ಕೋಟಿ ರು. ಅನುದಾನ ಬೇಕಾಗುತ್ತದೆ ಎಂದು ವಿವರಿಸಿದ್ದಾರೆ. ಇಲ್ಲಿಯೂ ಕೂಡ 200 ಯೂನಿಟ್‌ಗಿಂತ ಹೆಚ್ಚು ಬಳಸಿದರೆ ಪೂರ್ಣ ಪ್ರಮಾಣದ ಬಳಕೆಗೆ ಬಿಲ್‌ ಪಾವತಿಸಬೇಕಾ? 200 ಯುನಿಟ್‌ ನಂತರ ಬಳಸಿದ ಹೆಚ್ಚುವರಿ ವಿದ್ಯುತ್‌ಗೆ ಮಾತ್ರ ಬಿಲ್‌ ನೀಡಬೇಕಾ ಎಂಬ ಬಗ್ಗೆ ಚರ್ಚೆ ನಡೆದಿದೆ.

* ಮಹಿಳೆಯರ ಉಚಿತ ಪ್ರಯಾಣಕ್ಕೆ 3200 ಕೋಟಿ ರು.

ಸಾರಿಗೆ ಬಸ್ಸುಗಳಲ್ಲಿ ಮಹಿಳೆಯರ ಉಚಿತ ಪ್ರಯಾಣ ಗ್ಯಾರಂಟಿ ಯೋಜನೆ ಜಾರಿಗೆ ನಿಗಮಗಳಿಗೆ 3200 ಕೋಟಿ ರು.ಗಳಷ್ಟುಸಹಾಯಧನ ನೀಡಬೇಕಾಗುತ್ತದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇಲ್ಲಿಯೂ ಕೂಡ ಉಚಿತ ಪ್ರಯಾಣಕ್ಕೆ ಟಿಕೆಟ್‌ ನೀಡುವುದಾ, ಪಾಸ್‌ ನೀಡುವುದಾ, ಯೋಜನೆ ಜಾರಿ ಬಳಿಕ ಮಹಿಳೆಯರ ಪ್ರಯಾಣದ ಪ್ರಮಾಣವೂ ಹೆಚ್ಚಾಗಬಹುದು. ಹಾಗಾಗಿ ಸಂಚಾರಕ್ಕೆ ನಿತ್ಯ ಕಿ.ಮೀ. ಮಿತಿ ವಿಧಿಸುವುದಾ? ತೆರಿಗೆದಾರರು, ಸರ್ಕಾರಿ ನೌಕರರು ಎಲ್ಲರಿಗೂ ನೀಡುವ ಅಗತ್ಯವಿದೆಯಾ? ಎಂಬ ಗೊಂದಲದ ಬಗ್ಗೆ ಚರ್ಚೆ ನಡೆದಿದೆ.

* ನಿರುದ್ಯೋಗ ಭತ್ಯೆಗೆ 3000 ಕೋಟಿ ರು. ಬೇಕು

ಕೌಶಲ್ಯಾಭಿವೃದ್ಧಿ ಇಲಾಖೆ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಪ್ರತೀ ವರ್ಷ ಪದವಿ, ಸ್ನಾತಕೋತ್ತರ ಪದವಿ, ಎಂಜಿನಿಯರಿಂಗ್‌, ವೈದ್ಯಕೀಯ ಪದವಿ ವಿಭಾಗಗಳಿಂದ ಸುಮಾರು 4.50 ಲಕ್ಷ ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಿದ್ದಾರೆ. ಸುಮಾರು 50 ಸಾವಿರ ವಿದ್ಯಾರ್ಥಿಗಳು ಡಿಪ್ಲೊಮಾ ಪಾಸಾಗುತ್ತಿದ್ದಾರೆ. ಇವರಲ್ಲಿ ಯುವನಿಧಿ ಗ್ಯಾರಂಟಿಯಡಿ ಮಾಸಿಕ 3000 ರು. ನಿರುದ್ಯೋಗ ಭತ್ಯೆಗೆ ಕೇವಲ ಪದವೀಧರರನ್ನು ಪರಿಗಣಿಸುವುದಾ? ಹಾಗೆ ಮಾಡಿದರೆ ಉಳಿದವರು ಪ್ರಶ್ನೆ ಮಾಡುತ್ತಾರೆ. ಎಲ್ಲರನ್ನೂ ಪರಿಗಣಿಸುವುದಾದರೆ ವಾರ್ಷಿಕ ಸುಮಾರು 3000 ಕೋಟಿ ರು.ವರೆಗೆ ಅನುದಾನ ಬೇಕಾಗುತ್ತದೆ. ಸರ್ಕಾರ ಈಗಾಗಲೇ ಈ ವರ್ಷ ಉತ್ತೀರ್ಣರಾದ ಪದವೀಧರರಿಗೆ ಮಾತ್ರ ಈ ಗ್ಯಾರಂಟಿ ಅನ್ವಯಿಸುವುದಾಗಿ ಹೇಳಿರುವುದರಿಂದ ಇನ್ನೂ ಪ್ರಸಕ್ತ ಸಾಲಿನ ಫಲಿತಾಂಶ ಬಂದಿಲ್ಲ. ಬಂದ ನಂತರ ನೋಡೋಣ ಎನ್ನುವ ಲೆಕ್ಕಾಚಾರ ನಡೆದಿದೆ.

5 ವರ್ಷ ಸಿದ್ದರಾಮಯ್ಯ ಸಿಎಂ ಎಂದು ಗ್ಯಾರಂಟಿ ನೀಡಲಿ: ವಿಜಯೇಂದ್ರ ಟಾಂಗ್

*10 ಕೆ.ಜಿ ಅಕ್ಕಿ ನೀಡಲು ಸಮಸ್ಯೆ ಇಲ್ಲ

ಬಿಪಿಎಲ್‌ ಹಾಗೂ ಅಂತ್ಯೋದಯ ಕಾರ್ಡುದಾರ ಕುಟುಂಬಗಳ ಸದಸ್ಯರಿಗೆ ತಲಾ 10 ಕೆ.ಜಿ. ಅಕ್ಕಿ ನೀಡುವ ಅನ್ನಭಾಗ್ಯ ಜಾರಿಗೆ ಮಾತ್ರ ಯಾವುದೇ ಸಮಸ್ಯೆ ಇಲ್ಲ. ಹಾಲಿ ಇರುವ 1.27 ಕೋಟಿ ಕಾರ್ಡಿದಾರರಿಗೆ ಕೂಡಲೇ ಯೋಜನೆ ಜಾರಿ ಮಾಡಬಹುದು. ಇದಕ್ಕೆ ವಾರ್ಷಿಕ ಸುಮಾರು 10,000 ಕೋಟಿ ರು.ನಷ್ಟುಹೆಚ್ಚುವರಿ ವೆಚ್ಚ ಭರಿಸಬೇಕಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಯಾವುದಕ್ಕೆ ಎಷ್ಟು ವೆಚ್ಚ?

1. ಗೃಹ ಲಕ್ಷ್ಮಿ
30000 ಕೋಟಿ
ಪ್ರತಿ ಮನೆಯೊಡತಿಗೆ ಮಾಸಿಕ 2000 ರು. ನೆರವು ನೀಡುವ ಯೋಜನೆ
2. ಗೃಹ ಜ್ಯೋತಿ
8000 ಕೋಟಿ
ಪ್ರತಿ ಮನೆಗೂ 200 ಯುನಿಟ್‌ವರೆಗೆ ಉಚಿತ ವಿದ್ಯುತ್‌ ನೀಡುವ ಸ್ಕೀಂ
3. ಉಚಿತ ಪ್ರಯಾಣ
3200 ಕೋಟಿ
ಸಾರಿಗೆ ಬಸ್‌ಗಳಿಗೆ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ಯೋಜನೆ
4. ಯುವನಿಧಿ
3000 ಕೋಟಿ
ನಿರುದ್ಯೋಗಿ ಪದವೀಧರರಿಗೆ ಮಾಸಿಕ 3000 ರು. ಭತ್ಯೆ ನೀಡುವ ಯೋಜನೆ
5. ಅನ್ನಭಾಗ್ಯ
10000 ಕೋಟಿ
ಬಿಪಿಎಲ್‌, ಅಂತ್ಯೋದಯ ಕಾರ್ಡುದಾರರಿಗೆ 10 ಕೆ.ಜಿ. ಅಕ್ಕಿ ನೀಡುವ ಸ್ಕೀಂ

ಏನೇನು ಚರ್ಚೆ?

- ಗೃಹಲಕ್ಷ್ಮಿ ಯೋಜನೆಯಡಿ ಮನೆಯೊಡತಿ ಎಂದು ಯಾರನ್ನು ಪರಿಗಣಿಸುವುದು?
- ಸರ್ಕಾರಿ ನೌಕರಿ, ಪಿಂಚಣಿ ಪಡೆಯುತ್ತಿರುವವರನ್ನೂ ಯೋಜನೆಗೆ ಸೇರಿಸಬೇಕಾ?
- ಸಂಧ್ಯಾಸುರಕ್ಷಾ, ವಿಧವಾ ವೇತನ ಪಡೆಯುತ್ತಿರುವವರನ್ನು ವಿಲೀನಗೊಳಿಸಬೇಕಾ?
- ‘ಗೃಹಜ್ಯೋತಿ’ಯಡಿ 200 ಯುನಿಟ್‌ಗಿಂತ ಹೆಚ್ಚು ಬಳಸಿದವರಿಗೆ ಏನು ಮಾಡಬೇಕು?
- ಅವರು ಪೂರ್ಣ ಬಿಲ್‌ ಪಾವತಿಸಬೇಕಾ? ಹೆಚ್ಚುವರಿ ಬಿಲ್‌ ಮಾತ್ರ ಕಟ್ಟಿದರೆ ಸಾಕಾ?
- ಮಹಿಳೆಯರ ಉಚಿತ ಪ್ರಯಾಣಕ್ಕೆ ಟಿಕೆಟ್‌ ನೀಡುವುದಾ, ಬಸ್‌ ಪಾಸ್‌ ನೀಡುವುದಾ?
- ದಿನದ ಮಿತಿ ನಿಗದಿಪಡಿಸುವುದಾ? ತೆರಿಗೆದಾರರು, ಸರ್ಕಾರಿ ಸಿಬ್ಬಂದಿಗೂ ನೀಡಬೇಕಾ?
- ನಿರುದ್ಯೋಗ ಭತ್ಯೆಗೆ ಪದವೀಧರರನ್ನು ಮಾತ್ರ ಪರಿಗಣಿಸುವುದಾ? ಎಲ್ಲರಿಗೂ ಕೊಡಬೇಕಾ?

Follow Us:
Download App:
  • android
  • ios