ಇಂದು  ರೇಣುಕಾ ಯಲ್ಲಮ್ಮ ದೇವಿ ದರ್ಶನ ಮಾಡಿದ್ದೇನೆ. ಸವದತ್ತಿ ಕ್ಷೇತ್ರದ ಅಭಿವೃದ್ಧಿಗೆ ನಮ್ಮ ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಬೆಳಗಾವಿ (ಅ.13): ಇಂದು ರೇಣುಕಾ ಯಲ್ಲಮ್ಮ ದೇವಿ ದರ್ಶನ ಮಾಡಿದ್ದೇನೆ. ಸವದತ್ತಿ ಕ್ಷೇತ್ರದ ಅಭಿವೃದ್ಧಿಗೆ ನಮ್ಮ ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಇಂದು ಸವದತ್ತಿಯಲ್ಲಿ ನಡೆದ ವಿವಿಧ ಕಾಮಗಾರಿಗಳ ಲೋಕಾರ್ಪಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಇದೊಂದು ಪೌರಾಣಿಕ ಹಿನ್ನಲೆ ಐತಿಹಾಸಿಕ ದೇವಸ್ಥಾನವಾಗಿದೆ. ದಕ್ಷಿಣ ‌ಭಾರತದಾದ್ಯಂತ ಭಕ್ತಗಣವನ್ನು ರೇಣುಕಾದೇವಿ ಹೊಂದಿದ್ದಾಳೆ. ಎತ್ತಿನ ಗಾಡಿಯಲ್ಲೂ ಬಹಳಷ್ಟು ‌ಭಕ್ತರು ಬರುತ್ತಾರೆ. ಎಳೆಂಟು ಸಾವಿರ ಭಕ್ತರ ಉಳಿದುಕೊಳ್ಳಲು ವ್ಯವಸ್ಥೆ ಮಾಡಬೇಕಿದೆ. ಸ್ವಚ್ಛತೆಗೂ ಆದ್ಯತೆ ನೀಡಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು. ದೇವಸ್ಥಾನ ಅಭಿವೃದ್ಧಿಗೆ ನಾವು ಸಿದ್ಧ, ಜನರ ಸಹಕಾರ ‌ಅತ್ಯಂತ ಅವಶ್ಯಕ ಇದೆ. ಕಾನೂನು ‌ಬಾಹೀರವಾಗಿ ಮಳಿಗೆ ಮಾಡಬೇಡಿ ಎಂದು ಸಿಎಂ ಮನವಿ ಮಾಡಿದರು.

ರೇಣುಕಾ ಯಲ್ಲಮ್ಮ ದೇವಿ ಸನ್ನಿದಿಗೆ ಬರುವ ಭಕ್ತರೆಲ್ಲರಿಗೂ ತಾಯಿಯ ದರ್ಶನ ಕಡ್ಡಾಯವಾಗಿ ಸಿಗುವ ವ್ಯವಸ್ಥೆಯನ್ನು ಪ್ರಥಮ ಆದ್ಯತೆಯಲ್ಲಿ ಒದಗಿಸಲು ವ್ಯವಸ್ಥೆ ಮಾಡಲಾಗುವುದು. ಭಕ್ತಾದಿಗಳ ಆರೋಗ್ಯಕ್ಕೆ ಪೂರಕವಾದ ವ್ಯವಸ್ಥೆಗಳನ್ನು ಕಲ್ಪಿಸಬೇಕು. ಶೌಚಾಲಯ, ಕುಡಿಯುವ ನೀರು, ವಿದ್ಯುತ್, ಉಳಿಯಲು ಅಚ್ಚುಕಟ್ಟಾದ ವ್ಯವಸ್ಥೆಯನ್ನು ಕಲ್ಪಿಸಬೇಕು. ತಿರುಪತಿ ಮಾದರಿಯಲ್ಲಿ ವ್ಯವಸ್ಥೆಗಳನ್ನು ಕಲ್ಪಿಸಬೇಕು ಆ ನಿಟ್ಟಿನಲ್ಲಿ ಈ ಕ್ಷೇತ್ರದ ಅಭಿವೃದ್ಧಿಗಾಗಿ ಈ ಎರಡೂ ಸಮಿತಿ ರಚಿಸಲಾಗಿದೆ. ಪ್ರವಾಸೋದ್ಯಮ ‌ಮಂಡಳಿ,‌ ರೇಣುಕಾದೇವಿ ಅಭಿವೃದ್ಧಿ ‌ಪ್ರಾಧಿಕಾರ‌ ಸಮಿತಿಗಳ ಸಭೆ ಮಾಡಿ ಚರ್ಚಿಸಿದ್ದೇನೆ ಎಂದರು.

ಮುಡಾ ಸಂಕಷ್ಟ ಬೆನ್ನಲ್ಲೇ ಸವದತ್ತಿ ಯಲ್ಲಮ್ಮ ದೇವಿ ಮೊರೆ ಹೋದ ಸಿಎಂ; ಪತ್ನಿ ಹೆಸರಲ್ಲಿ ಶಕ್ತಿ ದೇವತೆಗೆ ವಿಶೇಷ ಪೂಜೆ!

ಈ ಕ್ಷೇತ್ರಕ್ಕೆ ಪ್ರತಿವರ್ಷ ಒಂದೂವರೆ ಕೋಟಿ ಭಕ್ತರು ಭೇಟಿ ನೀಡುತ್ತಾರೆ. ಭಕ್ತರು ಬರುವ ದೇವಸ್ಥಾನದ ಮಾರ್ಗ ಮತ್ತು ಸುತ್ತಲ ಪ್ರದೇಶಗಳಲ್ಲಿ ಹಾಗೂ ಭಕ್ತರು ಉಳಿಯುವ ಜಾಗದಲ್ಲಿ ಬೀದಿ ದೀಪ, ವಿದ್ಯುತ್ ಸೌಲಭ್ಯ ಒದಗಿಸಬೇಕು. ಕ್ಷೇತ್ರಕ್ಕೆ ಬರುವ ಭಕ್ತರಿಗೆ ಮೂಲ ಸೌಕರ್ಯ ಕೊರತೆ ಆಗದಂತೆ ನೋಡಿಕೊಳ್ಳುವ ವ್ಯವಸ್ಥೆ ಮಾಡಲಾಗುವುದು. ರೋಪ್ ವೇ ಸವಲತ್ತು ಕಲ್ಪಿಸುವುದರಿಂದ ಅನುಕೂಲ ಆಗುತ್ತದೆಯೇ ಎನ್ನುವ ಬಗ್ಗೆ ಪರಿಶೀಲನೆ ನಡೆಸಿ, ಸರ್ಕಾರಕ್ಕೆ ವರದಿ ಸಲ್ಲಿಸಲು ಸೂಚಿಸಿದ್ದೇನೆ ಎಂದರು.

ಸುಮಾರು 1087 ಎಕರೆ ಜಮೀನು ದೇವಸ್ಥಾನದ ಸುತ್ತಲೂ ಇದೆ. ಕ್ಷೇತ್ರಕ್ಕೆ ಸೇರಿದ ಜಾಗ, ಜಮೀನನ್ನು ಮೊದಲು ಗುರುತಿಸಿ, ಒತ್ತುವರಿ ಆಗಿದ್ದರೆ ಬಿಡಿಸಿಕೊಳ್ಳಬೇಕು. ಸ್ಥಳದ ಸುತ್ತ ಕಾಂಪೌಂಡ್, ಫೆನ್ಸಿಂಗ್ ಹಾಕಿ ಜಾಗದ ಭದ್ರತೆ ಮಾಡಿಕೊಳ್ಳಬೇಕು ಎಂದರು.

ನಾಲ್ಕೈದು ಸಾವಿರ ಜನ ಏಕಕಾಲಕ್ಕೆ ಊಟ ಮಾಡಲು ದಾಸೋಹ ಕೋಣೆಗೆ ಬೇಡಿಕೆ ಇದೆ. ಮುಂದಿನ ವರ್ಷವೇ ಸರ್ಕಾರದಿಂದ ಈ ಕಾರ್ಯ ಆಗಲಿದೆ ಎಂದು ಭರವಸೆ ನೀಡಿದರು ಮುಂದುವರಿದು, ಉಚಿತ ಬಸ್ ಸೇವೆಯಿಂದ ಮಹಿಳಾ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಬರ್ತಿದ್ದಾರೆ. 300 ಕೋಟಿ ಮಹಿಳೆಯರು ಈವರೆಗೆ ಪ್ರಯಾಣ ಮಾಡಿದ್ದಾರೆ. ಕಾರ್ಮಿಕ ಮಹಿಳೆಯರಿಗೆ ಅನುಕೂಲ ಆಗಲಿ ಎಂದು ಶಕ್ತಿ ಯೋಜನೆ ತರಲಾಗಿದೆ. ಬಿಜೆಪಿಯವರು ಧರ್ಮ, ಆಚಾರ-ವಿಚಾರ ಬಗ್ಗೆ ಮಾತನಾಡ್ತಾರೆ, ಆದರೆ ನಮ್ಮಂಥ‌ ಯೋಜನೆ ತಂದಿಲ್ಲ ಚಾಮುಂಡೇಶ್ವರಿ ಟೆಂಪಲ್, ಹುಲಿಗಮ್ಮ ದೇಗುಲ, ಘಾಟಿ ಸುಬ್ರಮಣ್ಯ ದೇಗುಲಕ್ಕೆ ‌ಅಭಿವೃದ್ಧಿ ಪ್ರಾಧಿಕಾರ ಮಾಡಲಾಗಿದೆ. ಸವದತ್ತಿ ದೇಗುಲಕ್ಕೆ ಕೆಲ ವರ್ಗದ‌ ಜನರು, ರೈತರು, ಬಡವರು ಜಾಸ್ತಿ ಬರುತ್ತಾರೆ. ದೇಶ ವಿದೇಶಗಳಿಂದಲೂ ಭಕ್ತರು ರೇಣುಕಾದೇವಿ ದೇಗುಲಕ್ಕೆ ‌ಬರ್ತಾರೆ. ರೇಣುಕಾದೇವಿ ಶಕ್ತಿ ದೇವತೆ ಎಂಬುದು ನಮ್ಮ‌ ನಂಬಿಕೆ ಎಂದರು.

ಭೂ ಹಗರಣದ ಸೈಟ್ ರಿಟರ್ನ್ಸ್ ಸರ್ಕಾರ: ಸಿದ್ದು ಬೆನ್ನಲ್ಲೇ ಖರ್ಗೆಯಿಂದಲೂ 5 ಎಕರೆ ಸೈಟ್ ವಾಪಸ್!

ಯಾವ ದೇವರು ಇನ್ನೊಬ್ಬರಿಗೆ ಕೆಟ್ಟ ಮಾಡು ಎಂದು ಹೇಳಲ್ಲ. ಮನುಷ್ಯ- ಮನುಷ್ಯರನ್ನು ಪ್ರೀತಿಸಿ ಎಂದು ದೇವರು, ಧರ್ಮ ಹೇಳುತ್ತವೆ. ಬಸವಣ್ಣನವರನ್ನು ನಾವು ಸಾಂಸ್ಕೃತಿಕ ‌ನಾಯಕ ಎಂದು ಹೇಳಿದ್ದೇವೆ. ಸಮಾಜದಲ್ಲಿ ‌ಅಸಮಾನತೆ ಹೋಗಬೇಕೋ? ಬೇಡವೊ? ಬಸವಣ್ಣ, ಅಂಬೇಡ್ಕರ್ ಸಮ-ಸಮಾಜ ನಿರ್ಮಾಣದ‌‌ ಕನಸು ಕಂಡಿದ್ದರು. ಆ ಕಾರಣಕ್ಕೆ ‌ಶಕ್ತಿ ಸೇರಿ ಗ್ಯಾರಂಟಿ ‌ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಗೃಹ ಲಕ್ಷ್ಮಿ ಯೋಜನೆಯಿಂದ ಅತ್ತೆ ಸೊಸೆ ಜಗಳಾಡ್ತಾರೆ ಎಂದು‌ ಬಿಜೆಪಿಯವರು ಆರೋಪಿಸಿದ್ದರು ಗೃಹ ಲಕ್ಷ್ಮಿ ಯೋಜನೆಯಿಂದ ಅತ್ತೆ ಒಬ್ಬರು ಸೋಸೆಗೆ ಬಲೆ ಅಂಗಡಿ ಹಾಕಿ‌ಕೊಟ್ಟಿದ್ದಾರೆ. ಬಡವರಿಗೆ ಅಕ್ಕಿ ಕೊಟ್ಟವರು, ನಿರುದ್ಯೋಗಿಗಳಿ 3 ಸಾವಿರ ಕೊಟ್ಟಿದ್ದು ನಮ್ಮ ಸರ್ಕಾರ. ಬಿಜೆಪಿಯವರು ಏನೂ‌ ಮಾಡಲಿಲ್ಲ, ಹಿಂದೂ‌ ಧರ್ಮದ‌ ಹೆಸರಲ್ಲಿ ಜನರ ದಾರಿ ತಪ್ಪಿಸಿದ್ರು ಇಂಥ ಬಿಜೆಪಿಗರ ಬಗ್ಗೆ ಜಾಗೃತಿ‌ ವಹಿಸಬೇಕು, ಇಲ್ಲವಾದ್ರೆ ನಾಡು ಉಳಿಯಲ್ಲ, ದೇಶವೂ ಇರಲ್ಲ ಹೀಗಾಗಿ ಬಿಜೆಪಿಯವರನ್ನು ಅಧಿಕಾರದಿಂದ‌ ದೂರ ಇಡಬೇಕು. ನನ್ನ ಜನಪರ ಯೋಜನೆ ಸಹಿಸದೇ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಜನರ ಆಶೀರ್ವಾದ ಇರುವ ತನಕ ನಾನು ಸಿಎಂ ಸ್ಥಾನದಲ್ಲಿ ಮುಂದುವರಿಯುತ್ತೇನೆ ಎಂದರು.