ಶ್ರೀ ಕೃಷ್ಣ ಜನ್ಮಾಷ್ಟಮಿಗೆ ಸಿಎಂ ಸಿದ್ದರಾಮಯ್ಯನವರಿಗೆ ಪುತ್ತಿಗೆ ಮಠದಿಂದ ವಿಶೇಷ ಆಹ್ವಾನ. ಕನಕಗೋಪುರ ವಿವಾದದ ಹಿನ್ನೆಲೆಯಲ್ಲಿ ಮಠದೊಂದಿಗೆ ಅಂತರ ಕಾಯ್ದುಕೊಂಡಿದ್ದ ಸಿಎಂ ಈ ಬಾರಿ ಉಡುಪಿಗೆ ಭೇಟಿ ನೀಡುವರೇ ಎಂಬ ಕುತೂಹಲ ಮೂಡಿದೆ.
ಉಡುಪಿ(ಜೂ.29): ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪುತ್ತಿಗೆ ಮಠದಿಂದ ವಿಶೇಷ ಆಹ್ವಾನ. ಪರ್ಯಾಯ ಪೀಠವಹಿಸಿರುವ ಶ್ರೀ ಸುಗುಣೇಂದ್ರ ತೀರ್ಥರು, ಶ್ರೀ ಕೃಷ್ಣ ಮುಖ್ಯಪ್ರಾಣರ ಪ್ರಸಾದದೊಂದಿಗೆ ಸಿಎಂಗೆ ಆಹ್ವಾನ ನೀಡಿದ್ದಾರೆ.
ಆಗಸ್ಟ್ 1 ರಿಂದ ಸೆಪ್ಟೆಂಬರ್ 15 ರವರೆಗೆ ನಡೆಯಲಿರುವ 48 ದಿನಗಳ ಮಂಡಲ ಉತ್ಸವದ ಉದ್ಘಾಟನಾ ಕಾರ್ಯಕ್ರಮಕ್ಕೆ ಈ ಆಹ್ವಾನವನ್ನು ಬೆಂಗಳೂರು ಶಾಖಾ ಮಠದ ಎ.ಬಿ. ಕುಂಜಾರ್ ಹಾಗೂ ಪುತ್ತಿಗೆ ಶ್ರೀಗಳ ಕಾರ್ಯದರ್ಶಿ ರತೀಶ್ ತಂತ್ರಿ ನೀಡಿದ್ದಾರೆ.
ಆದರೆ, ದಶಕಗಳ ಹಿಂದೆ ಕನಕಗೋಪುರ ವಿವಾದದಲ್ಲಿ ಶ್ರೀ ಕೃಷ್ಣ ಮಠದ ವಿರುದ್ಧ ಪ್ರತಿಭಟನೆಗೆ ನೇತೃತ್ವ ವಹಿಸಿದ್ದ ಸಿದ್ದರಾಮಯ್ಯ, ಇದುವರೆಗೂ ಮಠದೊಂದಿಗೆ ಯಾವುದೇ ಭಾಂದವ್ಯ ಹೊಂದಿಲ್ಲ. ಈ ಹಿಂದೆಯೂ ಕೃಷ್ಣ ಮಠದಿಂದ ಹಲವು ಕಾರ್ಯಕ್ರಮಗಳಿಗೆ ಆಹ್ವಾನ ನೀಡಲಾಗಿದ್ದರೂ, ಉಡುಪಿಗೆ ಭೇಟಿ ನೀಡಿದಾಗಲೂ ಸಿಎಂ ಅಂತರ ಕಾಯ್ದುಕೊಂಡಿದ್ದಾರೆ.
ಈ ಬಾರಿಯ ಶ್ರೀ ಕೃಷ್ಣ ಜನ್ಮಾಷ್ಟಮಿಗೆ ಸಿದ್ದರಾಮಯ್ಯ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡುತ್ತಾರಾ? ಇದು ರಾಜ್ಯದ ರಾಜಕೀಯ ಹಾಗೂ ಧಾರ್ಮಿಕ ವಲಯದಲ್ಲಿ ಕುತೂಹಲ ಮೂಡಿಸಿದೆ.
