Asianet Suvarna News Asianet Suvarna News

ಸರ್ಕಾರಿ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಕೊರತೆ: 1.25 ಲಕ್ಷ ರು. ಸಂಬಳ ನೀಡಿದರೂ ಡಾಕ್ಟರ್‌ ಸಿಗುತ್ತಿಲ್ಲ!

ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಕೊರತೆ ಇದೆ. ಇದರಿಂದಾಗಿ, ಗಂಭೀರ ಕಾಯಿಲೆಗಳಿಂದ ಆಸ್ಪತ್ರೆಗೆ ಬರುವವರಿಗೆ ಸಮಸ್ಯೆಯಾಗುತ್ತಿದ್ದು, ತಜ್ಞ ವೈದ್ಯರ ಕೊರತೆ ನೀಗಿಸಲು ಅಗತ್ಯ ತಜ್ಞ ವೈದ್ಯರ ನೇಮಕಾತಿಗೆ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. 

CM Siddaramaiah instructs to solve the shortage of specialist doctors in government hospitals gvd
Author
First Published Oct 8, 2023, 12:58 PM IST

ಬೆಂಗಳೂರು (ಅ.08): ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಕೊರತೆ ಇದೆ. ಇದರಿಂದಾಗಿ, ಗಂಭೀರ ಕಾಯಿಲೆಗಳಿಂದ ಆಸ್ಪತ್ರೆಗೆ ಬರುವವರಿಗೆ ಸಮಸ್ಯೆಯಾಗುತ್ತಿದ್ದು, ತಜ್ಞ ವೈದ್ಯರ ಕೊರತೆ ನೀಗಿಸಲು ಅಗತ್ಯ ತಜ್ಞ ವೈದ್ಯರ ನೇಮಕಾತಿಗೆ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. 

ಶನಿವಾರ ವಿಧಾನಸೌಧದಲ್ಲಿ ಆರೋಗ್ಯ ಇಲಾಖೆ ಹಾಗೂ ಹಣಕಾಸು ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಗ್ರಾಮೀಣ ಭಾಗದಲ್ಲಿ ವೈದ್ಯರ ಸೇವೆ ಹಾಗೂ ಆರೋಗ್ಯ ಇಲಾಖೆ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚೆ ನಡೆಸಿದರು. ಗ್ರಾಮೀಣ ಭಾಗದಲ್ಲಿ ವೈದ್ಯರ ಕೊರತೆ ಆಗದಂತೆ ಎಚ್ಚರ ವಹಿಸಬೇಕು. ವೈದ್ಯಕೀಯ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದ ವಿದ್ಯಾರ್ಥಿಗಳ ಗ್ರಾಮೀಣ ಸೇವೆ ಕಡ್ಡಾಯದಿಂದ 3 ಸಾವಿರ ಮಂದಿ ವೈದ್ಯರು ಸೇವೆಗೆ ಲಭ್ಯವಾಗುತ್ತಿದ್ದಾರೆ. ಆದರೆ ತಜ್ಞ ವೈದ್ಯರ ಕೊರತೆ ಬಗ್ಗೆ ದೂರುಗಳು ಬರುತ್ತಿವೆ. 

ಈ ಬಗ್ಗೆ ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು. ಇದಕ್ಕೆ ಅಧಿಕಾರಿಗಳು, 1 ಲಕ್ಷದಿಂದ 1.25 ಲಕ್ಷ ರು.ವರೆಗೆ ವೇತನ ನೀಡಿದರೂ ಗುತ್ತಿಗೆ ಆಧಾರದ ಮೇಲೆ ತಜ್ಞ ವೈದ್ಯರು ಸೇವೆಗೆ ಬರುತ್ತಿಲ್ಲ. ಈ ಬಗ್ಗೆ ಈಗಾಗಲೇ ನೇಮಕಾತಿಗೆ ಆಹ್ವಾನ ನೀಡಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಸ್ಪಂದನೆ ಸಿಕ್ಕಿಲ್ಲ ಎಂದು ಹೇಳಿರುವುದಾಗಿ ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು, ಕಾಯಂ ವೈದ್ಯರು ಹಾಗೂ ತಜ್ಞರ ನೇಮಕದ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಹಣಕಾಸು ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಾರ್‌ಗೆ ಹೊಸ ಲೈಸೆನ್ಸ್‌ ಕೊಡ್ತೇವಂತ ಡಿಸಿಎಂ ಹೇಳಿಲ್ಲ: ಸಿದ್ದರಾಮಯ್ಯ

ಗೃಹ ಆರೋಗ್ಯ, ಆಶಾಕಿರಣ ಬಗ್ಗೆ ಚರ್ಚೆ: ರಾಜ್ಯದಲ್ಲಿ ಸದ್ಯದಲ್ಲೇ ಮನೆ-ಮನೆಗೂ ಭೇಟಿ ನೀಡಿ ಅನಾರೋಗ್ಯ ಸಮಸ್ಯೆಗಳ ಬಗ್ಗೆ ಪತ್ತೆ ಹಚ್ಚಿ ಚಿಕಿತ್ಸೆ ನೀಡುವ ಗೃಹ ಆರೋಗ್ಯ ಯೋಜನೆಯನ್ನು ಜಾರಿಗೊಳಿಸಲು ಚಿಂತನೆ ನಡೆಸಲಾಗಿದೆ. ಈ ಬಗ್ಗೆ ಯಾವ್ಯಾವ ಸಿದ್ಧತೆ ಮಾಡಿಕೊಳ್ಳಲಾಗಿದೆ? ಯೋಜನೆಯ ರೂಪುರೇಷೆಗಳೇನು ಎಂಬುದರ ಬಗ್ಗೆ ಮುಖ್ಯಮಂತ್ರಿಗಳು ಮಾಹಿತಿ ಪಡೆದರು. ಜತೆಗೆ ಮನೆ-ಮನೆಗೂ ಭೇಟಿ ನೀಡಿ ಕಣ್ಣಿನ ಸಮಸ್ಯೆಗಳ ಬಗ್ಗೆ ಪರೀಕ್ಷೆ ನಡೆಸುವ ‘ಆಶಾಕಿರಣ’ ಯೋಜನೆಯ ಪ್ರಗತಿ ಬಗ್ಗೆ ಚರ್ಚೆ ನಡೆಸಿದರು ಎಂದು ತಿಳಿದುಬಂದಿದೆ. ಸಭೆಯಲ್ಲಿ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಸೇರಿದಂತೆ ಹಲವು ಅಧಿಕಾರಿಗಳು ಹಾಜರಿದ್ದರು.

Follow Us:
Download App:
  • android
  • ios