Asianet Suvarna News Asianet Suvarna News

3 ದಿನಗಳ ಹಂಪಿ ಉತ್ಸವಕ್ಕೆ ಇಂದು ಸಿಎಂ ಸಿದ್ದರಾಮಯ್ಯ ಚಾಲನೆ

 ದಕ್ಷಿಣ ಭಾರತದ ರಾಜಧಾನಿ ಹಂಪಿಯ ನೆಲದಲ್ಲೀಗ ಉತ್ಸವ ಕಳೆ ಗರಿಗೆದರಿದೆ. ತುಂಗಭದ್ರಾ ನದಿ ತಟದಲ್ಲಿ ಉತ್ಸವ ಸಾಂಗವಾಗಿ ನೆರವೇರಿಸಲು ತುಂಗಾರತಿ ನೆರವೇರಿದೆ. ಫೆ. 2ರಿಂದ ಮೂರು ದಿನಗಳವರೆಗೆ ವಿಜಯನಗರ ಸಾಮ್ರಾಜ್ಯದ ಗತವೈಭವ ಮರುಕಳಿಸಲಿದೆ.

CM Siddaramaiah drive for 3 days Hampi Utsav 2024 today rav
Author
First Published Feb 2, 2024, 5:03 AM IST

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ: ದಕ್ಷಿಣ ಭಾರತದ ರಾಜಧಾನಿ ಹಂಪಿಯ ನೆಲದಲ್ಲೀಗ ಉತ್ಸವ ಕಳೆ ಗರಿಗೆದರಿದೆ. ತುಂಗಭದ್ರಾ ನದಿ ತಟದಲ್ಲಿ ಉತ್ಸವ ಸಾಂಗವಾಗಿ ನೆರವೇರಿಸಲು ತುಂಗಾರತಿ ನೆರವೇರಿದೆ. ಫೆ. 2ರಿಂದ ಮೂರು ದಿನಗಳವರೆಗೆ ವಿಜಯನಗರ ಸಾಮ್ರಾಜ್ಯದ ಗತವೈಭವ ಮರುಕಳಿಸಲಿದೆ.

ಫೆ. 2ರಂದು ಗಾಯತ್ರಿ ಪೀಠ ವೇದಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾರ್ಯಕ್ರಮಕ್ಕೆ ವಿಧ್ಯುಕ್ತ ಚಾಲನೆ ನೀಡಲಿದ್ದಾರೆ. ಹಂಪಿ ನೆಲದ ವೈಭವವನ್ನು ಜಗತ್ತಿಗೆ ಮತ್ತೊಮ್ಮೆ ಸಾರಲು ಉತ್ಸವಕ್ಕೆ ಸಕಲ ಸಿದ್ಧತೆ ಮಾಡಲಾಗಿದೆ. ಹಂಪಿಯಲ್ಲಿ ನಾಲ್ಕು ವೇದಿಕೆಗಳನ್ನು ನಿರ್ಮಿಸಲಾಗಿದೆ. ಈ ವೇದಿಕೆಗಳಲ್ಲಿ ಹಾಗೂ ಜಾನಪದವಾಹಿನಿ ಮತ್ತು ಧ್ವನಿ ಮತ್ತು ಬೆಳಕು ಕಾರ್ಯಕ್ರಮದಲ್ಲಿ ಐದು ಸಾವಿರ ಕಲಾವಿದರು ಈ ನೆಲದ ಸಂಸ್ಕೃತಿಯನ್ನು ಇಡೀ ಜಗತ್ತಿಗೆ ಉಣಬಡಿಸಲಿದ್ದಾರೆ.

 

ಹಂಪಿ ಉತ್ಸವ: ಆಗಸದಲ್ಲಿ ಲೋಹದ ಹಕ್ಕಿಗಳ ಹಾರಾಟ..!

10 ಲಕ್ಷ ಜನ ಆಗಮನದ ನಿರೀಕ್ಷೆ: ಹಂಪಿ ಉತ್ಸವದ ಮೂರು ದಿನಗಳಲ್ಲಿ ಅಂದಾಜು 10 ಲಕ್ಷ ಜನರು ಆಗಮಿಸುವ ನಿರೀಕ್ಷೆ ಇಡಲಾಗಿದೆ. ಈಗಾಗಲೇ ಜಿಲ್ಲಾಡಳಿತ ಈ ನಿರೀಕ್ಷೆಯೊಂದಿಗೆ ವ್ಯವಸ್ಥೆ ಮಾಡಿದೆ. ಟ್ರಾಫಿಕ್‌ ಜಾಮ್‌ ತಪ್ಪಿಸಲು ಹಂಪಿಯಲ್ಲಿ 100ಕ್ಕೂ ಅಧಿಕ ಎಕರೆ ಪ್ರದೇಶದಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ. ಕಲಾವಿದರಿಗೆ ಎಲ್ಲ ಬಗೆಯ ವ್ಯವಸ್ಥೆ ಮಾಡಲಾಗಿದ್ದು, ಗಣ್ಯರು ಹಾಗೂ ಗಣ್ಯಾತಿಗಣ್ಯರು ವೇದಿಕೆಗೆ ನೇರ ತೆರಳಲು ಪೊಲೀಸ್‌ ಇಲಾಖೆ ವ್ಯವಸ್ಥೆ ಮಾಡಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಹಿನ್ನೆಲೆಯಲ್ಲಿ ಪೊಲೀಸ್‌ ಇಲಾಖೆ 2000 ಸಿಬ್ಬಂದಿಯನ್ನು ಭದ್ರತೆಗೆ ನಿಯೋಜನೆ ಮಾಡಿದೆ.ವೈಭವದ ಮೆರವಣಿಗೆ:

ಹಂಪಿ ಉತ್ಸವಕ್ಕೆ ಹೊಸಪೇಟೆ ನಗರಿ ಸಿಂಗಾರಗೊಂಡಿದೆ. ನಗರ ಸಂಪರ್ಕಿಸುವ ಪ್ರಮುಖ ರಸ್ತೆಗಳು ವಿದ್ಯುತ್ ದೀಪಾಲಂಕಾರದಿಂದ ಅಲಂಕೃತವಾಗಿವೆ. ಬೀದಿಗಳಿಗೆ ಅಳವಡಿಸಿರುವ ಬೆಳಕಿನ ತೋರಣ ಹಂಪಿ ಉತ್ಸವಕ್ಕೆ ಸರ್ವರನ್ನು ಸ್ವಾಗತಿಸುತ್ತಿದೆ. ಫೆ. 2ರಂದು ಹಂಪಿಯ ಗಾಯಿತ್ರಿ ಪೀಠ ವೇದಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉತ್ಸವಕ್ಕೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ನಗರದ ಪ್ರಮುಖ ವೃತ್ತಗಳಲ್ಲಿ ಎಲ್ಐಡಿ ವಾಲ್‌ಗಳ ಮೂಲಕ ಹಂಪಿ ಉತ್ಸವದ ಮಹತ್ವ ಸಾರುವುದರೊಂದಿಗೆ, ಸಾರ್ವಜನಿಕರು ಉತ್ಸವದಲ್ಲಿ ಪಾಲ್ಗೊಂಡು ಸಾಂಸ್ಕೃತಿಕ ರಸದೌತಣ ಸವಿಯುವಂತೆ ಮನವಿ ಮಾಡಲಾಗುತ್ತದೆ. ಹಂಪಿ ಉತ್ಸವಕ್ಕೆ ಸ್ವಾಗತಿಸುವ ಫ್ಲೆಕ್ಸ್ ಹಾಗೂ ಬಂಟಿಂಗ್‌ಗಳು ಎಲ್ಲೆಡೆ ರಾರಾಜಿಸುತ್ತಿವೆ.

ವಸಂತ ವೈಭವ:

ಹಂಪಿ ಉತ್ಸವದ ಕ್ಷಣಗಣನೆ ನಡುವೆ, ಗುರುವಾರ ಹೊಸಪೇಟೆ ನಗರದ ವಡಕರಾಯನ ದೇವಸ್ಥಾನದ ಬಳಿ, ವಸಂತ ವೈಭವ ಮೆರವಣಿಗೆ ಶಾಸಕ ಎಚ್.ಆರ್. ಗವಿಯಪ್ಪ ಚಾಲನೆ ನೀಡಿದರು.ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿರುವ ನೂರಕ್ಕೂ ಹೆಚ್ಚು ಕಲಾತಂಡಗಳು, ಕಂಸಾಳೆ, ಪೂಜಾಕುಣಿತ, ಕರಡಿ ಮಜಲು, ಲಂಬಾಣಿ ನೃತ್ಯ, ಚಿಲಿಪಿಲಿ ಗೊಂಬೆ, ಆಲಾಯಿ ಹೆಜ್ಜೆಮೇಳ, ಸೋಮನ ಕುಣಿತ, ಮಹಿಳಾ ವೀರಗಾಸೆ, ಕೊಂಬು ಕಹಳೆ, ಚಂಡೆ ವಾದನ, ಝಾಂಜ್ ಮೇಳ, ಮೋಜಿನ ಗೊಂಬೆ, ಜಗ್ಗಲಿಗಿ, ಖಡ್ಗವರಸೆ, ನವಿಲು ಕುಣಿತ, ಮರಗಾಲು ಬೀಸು, ಕಂಸಾಳೆ, ಸಿಂಧೋಳ ಕುಣಿತ, ಸಮಾಳ ಮತ್ತು ನಂದಿಕೋಲು, ಕುದುರೆ ಕುಣಿತ, ನಾದಸ್ವರ, ಡೊಳ್ಳುಕುಣಿತ, ಕೋಲಾಟ, ಹಗಲು ವೇಷ, ತಾಷಾರಂಡೋಲ್, ಗೊಂದಲಿಗರಹಾಡು, ಗೊರವರ ಕುಣಿತ, ಹೀಗೆ ಹಲವಾರು ನೃತ್ಯ ಪ್ರಕಾರಗಳು ಆನೆ ಹಾಗೂ ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ತಾಯಿ ಭುವನೇಶ್ವರಿ ದೇವಿ ಮೂರ್ತಿಯನ್ನು ಅಲಂಕೃತಗೊಂಡ ಟ್ರ್ಯಾಕ್ಟರ್‌ನಲ್ಲಿ ಇರಿಸಿ ನಗರದ ಡಾ. ಪುನೀತ್ ರಾಜ್‌ಕುಮಾರ್ ಜಿಲ್ಲಾ ಕ್ರೀಡಾಂಗಣದವರೆಗೆ ಅದ್ಧೂರಿ ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು.

 

ವಿಜಯನಗರ: ಹಂಪಿ ಉತ್ಸವದಲ್ಲಿ ಧ್ವನಿ, ಬೆಳಕಿನ ರಸದೌತಣ..!

ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್‌, ಜಿಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಸದಾಶಿವಪ್ರಭು ಬಿ., ಉಪವಿಭಾಗಧಿಕಾರಿ ಮಹದ್‌ಅಲಿ ಅಕ್ರಂ ಷಾ, ತಹಸೀಲ್ದಾರ್ ವಿಶ್ವಜಿತ್ ಮೆಹ್ತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ್ ರಂಗಣ್ಣವರ್ ಸೇರಿದಂತೆ ಮತ್ತಿತರರು ಇದ್ದರು.

Follow Us:
Download App:
  • android
  • ios