ತೆರಿಗೆ ಸಂಗ್ರಹ ಕುಸಿತ: ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ತರಾಟೆ
ಸಭೆಯಲ್ಲಿ ಪ್ರಮುಖವಾಗಿ ತೆರಿಗೆ ಬೆಳವಣಿಗೆ ಪ್ರಮಾಣದ ಇಳಿಕೆಯಾಗಿರುವುದಕ್ಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ತೆರಿಗೆ ಸಂಗ್ರಹಣೆಯ ಬೆಳವಣಿಗೆಯಲ್ಲಿ ಇಳಿಕೆಯಾಗಿದೆ. ಕೆಲವು ಜಿಲ್ಲೆಯಲ್ಲಿ ಬೆಳವಣಿಗೆಯ ಪ್ರಮಾಣ ಶೇ.5 ಕ್ಕಿಂತ ಕಡಿಮೆ ಇದೆ. ಇದನ್ನು ಸುಧಾರಿಸಲು ಕ್ರಮ ವಹಿಸಬೇಕು ಎಂದು ಸೂಚಿಸಿದರು.

ಬೆಂಗಳೂರು(ಸೆ.14): ಆಡಳಿತ ಚುರುಕುಗೊಳಿಸಲು ಬುಧವಾರ ಎರಡನೇ ದಿನವೂ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಸಿಇಒಗಳ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ವಾಣಿಜ್ಯ ಮತ್ತು ತೆರಿಗೆ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಧ್ಯಾಹ್ನದ ಬಳಿಕ ನಡೆದ ಸಭೆಯಲ್ಲಿ ಪ್ರಮುಖವಾಗಿ ತೆರಿಗೆ ಬೆಳವಣಿಗೆ ಪ್ರಮಾಣದ ಇಳಿಕೆಯಾಗಿರುವುದಕ್ಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಮುಖ್ಯಮಂತ್ರಿ ಅವರು, ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ತೆರಿಗೆ ಸಂಗ್ರಹಣೆಯ ಬೆಳವಣಿಗೆಯಲ್ಲಿ ಇಳಿಕೆಯಾಗಿದೆ. ಕೆಲವು ಜಿಲ್ಲೆಯಲ್ಲಿ ಬೆಳವಣಿಗೆಯ ಪ್ರಮಾಣ ಶೇ.5 ಕ್ಕಿಂತ ಕಡಿಮೆ ಇದೆ. ಇದನ್ನು ಸುಧಾರಿಸಲು ಕ್ರಮ ವಹಿಸಬೇಕು ಎಂದು ಸೂಚಿಸಿದರು.
ವಿಜಯಪುರ: ಕರ ವಸೂಲಿಗೆ ತಮಟೆ ಮೊರೆ ಹೋದ ಪುರಸಭೆ ಅಧಿಕಾರಿಗಳು..!
ಆಸ್ತಿ ಮತ್ತು ವಾಣಿಜ್ಯ ತೆರಿಯನ್ನು ಯಾರೂ ಉಳಿಸಿಕೊಳ್ಳದಂತೆ ಎಚ್ಚರ ವಹಿಸಬೇಕು. ತೆರಿಗೆ ಕಟ್ಟದಿದ್ದವರಿಗೆ ತಕ್ಷಣ ನೋಟಿಸ್ ನೀಡಿ ತೆರಿಗೆ ಪಾವತಿಗೆ ಕಾಲಮಿತಿ ನಿಗದಿ ಮಾಡಿಬೇಕು. ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಆಯುಕ್ತರಿಗೆ ಬಾಕಿ ಇರುವ ಎಲ್ಲ ತೆರಿಗೆ ವಸೂಲಿಗೆ ಕ್ರಮ ವಹಿಸಬೇಕು. ಈ ಸಂಬಂಧ ವಾಣಿಜ್ಯ ಮತ್ತು ತೆರಿಗೆ ಇಲಾಖೆಯಿಂದ ಅಧಿಕೃತವಾಗಿ ಎಲ್ಲಾ ಡಿಸಿ, ಸಿಇಒಗಳಿಗೆ ಪತ್ರ ಬರೆಯುವಂತೆ ಸೂಚಿಸಿದರು.
ಗಂಗಾಕಲ್ಯಾಣ:
ಇನ್ನು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಗಂಗಾ ಕಲ್ಯಾಣ ಯೋಜನೆಯಡಿ ಬೋರ್ ವೆಲ್ ಕೊರೆಯುವುದು ಮತ್ತು ವಿದ್ಯುದೀಕರಣಕ್ಕೆ ಬಾಕಿ ಇರುವ ಅರ್ಜಿಗಳನ್ನು ಇನ್ನೆರಡು ತಿಂಗಳಲ್ಲಿ ಪೂರ್ಣಗೊಳಿಸಿ ಫಲಾನುಭವಿಗಳಿಗೆ ಅನುಕೂಲ ಮಾಡಿಕೊಡಲು ಅಧಿಕಾರಿಗಳಿಗೆ ತಾಕೀತು ಮಾಡಿದರು. ಇಂತಹ ಜನ ಕಲ್ಯಾಣ ಕಾರ್ಯಕ್ರಮಗಳಲ್ಲಿ ಅನಗತ್ಯವಾಗಿ ವಿಳಂಬ ಮಾಡಬಾರದು. ವಿಳಂಬ ನೀತಿ ಕೂಡ ಒಂದು ಅಪರಾಧ ಎಂದು ಮುಖ್ಯಮಂತ್ರಿಗಳು ಇದೇ ವೇಳೆ ಎಚ್ಚರಿಕೆ ನೀಡಿದ್ದಾರೆ.
ದೇವರಾಜ ಅರಸು ನಿಗಮ, ಲಿಂಗಾಯತ ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ಸಮುದಾಯಗಳ ಅಭಿವೃದ್ಧಿ ನಿಗಮಗಳಡಿ ಗಂಗಾ ಕಲ್ಯಾಣ ಇನ್ನಿತರೆ ಬೇರೆ ಬೇರೆ ಹೆಸರಿನಲ್ಲಿ ಕೊಳವೆ ಬಾವಿ ಕೊರೆಸಿಕೊಡುವ ಯೋಜನೆಗಳಿಗೆ ಪ್ರತಿ ಶಾಸಕರುಗಳಿಂದ ಕ್ಷೇತ್ರವಾರು ಫಲಾನುಭವಿಗಳ ಆಯ್ಕೆ ಪಟ್ಟಿ ಬಂದಿದ್ದರೂ ವಿಳಂಬವಾಗುತ್ತಿದೆ ಎಂಬ ದೂರುಗಳಿವೆ. ಶಾಸಕರು ನನ್ನ ಬಳಿಗೆ ಬರುತ್ತಿದ್ದಾರೆ. ಇನ್ನೆರಡು ತಿಂಗಳಲ್ಲಿ ಬಾಕಿ ಇರುವ ಎಲ್ಲ ಅರ್ಜಿಗಳನ್ನು ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ಗಂಗಾ ಕಲ್ಯಾಣ ಕೊಳವೆ ಬಾವಿ ವಿದ್ಯುದೀಕರಣಕ್ಕೆ 1948 ಅರ್ಜಿಗಳು ಬಾಕಿ ಉಳಿದಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು ಆದಷ್ಟು ಬೇಗ ಇವುಗಳನ್ನು ಪೂರ್ಣಗೊಳಿಸಬೇಕು. ಎಸ್ಕಾಂಗಳು ವಿದ್ಯುಚ್ಛಕ್ತಿ ಸಂಪರ್ಕ ಒದಗಿಸುವುದಕ್ಕೆ ಅನಗತ್ಯ ವಿಳಂಬ ಮಾಡಕೂಡದು. ಶುಲ್ಕ ಪಾವತಿಸಿಲ್ಲ ಎಂದು ಬಾಕಿ ಉಳಿಸಿಕೊಳ್ಳಬಾರದು. ಇದಕ್ಕೆ ಟ್ರಾನ್ಸ್‌ಫಾರ್ಮರ್ ಗಳು ಇಲ್ಲ, ಕಂಬಗಳಿಲ್ಲ ಎಂಬ ನೆಪಗಳನ್ನು ಹೇಳಬಾರದು ಎಂದು ಇಂಧನ ಇಲಾಖೆ ಅಧಿಕಾರಿಗಳಿಗೆ ತಾತೀಕು ಮಾಡಿದರು. ಜೆಸ್ಕಾಂ ಮತ್ತು ಹೆಸ್ಕಾಂ ಗಳಲ್ಲಿ ಬಾಕಿ ಅರ್ಜಿಗಳ ಸಂಖ್ಯೆ ಹೆಚ್ಚಿರುವುದನ್ನು ಪರಿಶೀಲಿಸಿದ ಮುಖ್ಯಮಂತ್ರಿಗಳು ಅಭಿಯಾನ ಕೈಗೆತ್ತಿಕೊಂಡು ವಿದ್ಯುದೀಕರಣ ಕೈಗೊಳ್ಳಲು ಸೂಚಿಸಿದರು.
ಅರ್ಜಿ ಇಟ್ಕೊಂಡು ಏನ್ ಮಾಡ್ತಾ ಇದೀರಾ?:
ವಿದ್ಯುತ್ ಉಪಕೇಂದ್ರ ಆರಂಭಿಸಲು ಮತ್ತು ಟ್ರಾನ್ಸ್ ಫಾರ್ಮರ್ ಲೈನ್ ಗೆ ಭೂಮಿ ಒದಗಿಸುವಂತೆ ಎಷ್ಟು ಅರ್ಜಿಗಳು ಬಂದಿವೆ ಎಂಬ ಪ್ರಶ್ನೆಗೆ ಅಧಿಕಾರಿಗಳು ನೀಡಿದ ಉತ್ತರದಿಂದ ಅಸಮಾಧಾನಗೊಂಡ ಮುಖ್ಯಮಂತ್ರಿ ಅವರು, ಅರ್ಜಿಗಳನ್ನು ಜೇಬಿನಲ್ಲಿ ಇಟ್ಕೊಂಡು ಏನ್ ಮಾಡ್ತಾ ಇದೀರ ಮೊದಲು ಅವುಗಳನ್ನು ಬೇಡಿಕೆಗೆ ಅನುಸಾರ ಪೂರ್ಣಗೊಳಿಸಿ ಎಂದು ಸೂಚಿಸಿದರು.
ಕುಡಿಯುವ ನೀರಿಗೆ 27 ಕೋಟಿ ಬಿಡುಗಡೆ!
ಕುಡಿಯುವ ನೀರಿಗಾಗಿ ಎಲ್ಲ ಜಿಲ್ಲೆಗಳಿಗೆ 27 ಕೋಟಿ ರು. ಬಿಡುಗಡೆ ಮಾಡಲಾಗಿದೆ. ನಗರ ಸ್ಥಳೀಯ ಸಂಸ್ಥೆಗಳ 1200 ವಾರ್ಡುಗಳಲ್ಲಿ ಮೂರು ದಿನಕ್ಕಿಂತ ಹೆಚ್ಚು ಅವಧಿಯಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ. ಅಗತ್ಯವಿರುವೆಡೆ ಬೋರ್‌ವೆಲ್‌ಗಳನ್ನು ಕೊರೆಯಲು, ದುರಸ್ತಿ ಮಾಡಲು ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.
ಕಟ್ಟುನಿಟ್ಟಾಗಿ ತೆರಿಗೆ ವಸೂಲಿ ಮಾಡಲು ಸೂಚನೆ: ಶಾಸಕಿ ರೂಪಕಲಾ
ಚರಂಡಿ ನೀರಿನ ಪೈಪ್ ಲೈನ್ , ಕುಡಿಯುವ ನೀರಿನ ಪೈಪ್ ಲೈನ್ ನೊಂದಿಗೆ ಸೇರುವ ಕಡೆಗಳಲ್ಲಿ ಪೈಪ್ ಲೈನ್ ಸ್ಥಳಾಂತರ ಗೊಳ್ಳಬೇಕು. ಕಾಂಕ್ರೀಟ್ ರಸ್ತೆಗಳನ್ನು ಹಾಕುವ ಸಂದರ್ಭದಲ್ಲಿ ಯುಜಿಡಿ ಲೈನ್ ಹಾಗೂ ನೀರಿನ ಲೈನ್ ಗಳನ್ನು ಹಾಕುವ ಮುನ್ನ ಜಿಲ್ಲಾಧಿಕಾರಿಗಳ ಅನುಮತಿ ಪಡೆಯಬೇಕು ಎಂದು ನಿರ್ದೇಶನ ನೀಡಿದರು.
ಹಾಸ್ಟೆಲ್‌ಗಳಿಗೆ ಭೇಟಿ ನೀಡಿ:
ಹಿಂದುಳಿದ ವರ್ಗಗಳ ಹಾಸ್ಟೆಲುಗಳಿಗೆ ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಂದ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಸಭೆಯಲ್ಲಿ ಸೂಚಿಸಲಾಯಿತು. 2443 ಹಾಸ್ಟೆಲುಗಳಲ್ಲಿ ಕೇವಲ 981 ಹಾಸ್ಟೆಲುಗಳಿಗೆ ಮಾತ್ರ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಉಳಿದ 1462 ಹಾಸ್ಟೆಲುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ ಎಂದರೆ ಏನರ್ಥ. ಪ್ರತಿ ತಿಂಗಳು ಹಾಸ್ಟೆಲುಗಳಿಗೆ ದಿಢೀರ್ ಭೇಟಿ ಮಾಡಬೇಕು. ಇದರಿಂದ ಹಾಸ್ಟೆಲುಗಳ ಕುಂದುಕೊರತೆ, ಆಹಾರದ ಗುಣಮಟ್ಟ ಮತ್ತಿತರ ಸಮಸ್ಯೆಗಳು ಅರಿವಿಗೆ ಬರುತ್ತವೆ. ನಗರ ಸ್ಥಳೀಯ ಸಂಸ್ಥೆಗಳು ಬಾಲಕಿಯರ ವಿದ್ಯಾರ್ಥಿನಿಲಯಗಳಿಗೆ ಹೀಟ್ ಪಂಪ್‌ಗಳನ್ನು ಒದಗಿಸಲು ಕ್ರಮ ವಹಿಸಬೇಕು. ಹಾಸ್ಟೆಲುಗಳ ಕಟ್ಟಡ ನಿರ್ಮಾಣಕ್ಕಾಗಿ 120 ನಿವೇಶನಗಳನ್ನು ಒದಗಿಸಲು ಕೂಡಲೇ ಕ್ರಮ ವಹಿಸಲು ಮುಖ್ಯಮಂತ್ರಿಗಳು ಸೂಚಿಸಿದರು.