Asianet Suvarna News Asianet Suvarna News

ಸರ್ಕಾರಿ ಆಸ್ಪತ್ರೆಗಳಿಗೆ ಜನ ಬರಬೇಕೋ, ಬೇಡ್ವೋ?: ಅಧಿಕಾರಿಗಳ ವಿರುದ್ಧ ಹರಿಹಾಯ್ದ ಸಿದ್ದು

ಇನ್ನು ಮೂರು ತಿಂಗಳು ಬಿಟ್ಟು ಮತ್ತೊಮ್ಮೆ ಪ್ರಗತಿ ಪರಿಶೀಲನೆ ಮಾಡುತ್ತೇನೆ. ಆಗಲೂ ಇದೇ ರೀತಿಯ ವೈಫಲ್ಯಗಳು ಕಂಡುಬಂದರೆ ಸಂಬಂಧಿಸಿದ ಅಧಿಕಾರಿಗಳನ್ನೇ ಹೊಣೆಯಾಗಿಸಿ ಕ್ರಮ ಜರುಗಿಸುವುದಾಗಿಯೂ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ 

CM Siddaramaiah Anger on Government Health Officials grg
Author
First Published Jun 14, 2023, 10:13 AM IST

ಬೆಂಗಳೂರು(ಜೂ.14):  ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಅನುದಾನ ಲಭ್ಯವಿದ್ದರೂ ಸಕಾಲದಲ್ಲಿ ಬಳಸಿಲ್ಲ. ಹೀಗಾದರೆ ಈ ಯೋಜನೆಯ ಉದ್ದೇಶ ಹೇಗೆ ಈಡೇರುತ್ತದೆ? ಜಿಲ್ಲಾ ಆಸ್ಪತ್ರೆಗಳಲ್ಲಿ ಶೇ.52ರಷ್ಟುತಜ್ಞ ವೈದ್ಯರ ಕೊರತೆ ಇದೆ. ತಾಲ್ಲೂಕು ಆಸ್ಪತ್ರೆಗಳಲ್ಲಿ ಎಂಆರ್‌ಐ ಹಾಗೂ ಡಯಾಲಿಸಿಸ್‌ ಯಂತ್ರಗಳನ್ನು ಸಮರ್ಪಕವಾಗಿ ಅಳವಡಿಕೆ ಮಾಡಿಲ್ಲ. ಸರ್ಕಾರಿ ಆಸ್ಪತ್ರೆಗಳಿಗೆ ಜನರು ಬರಬೇಕೋ ಬೇಡವೋ? ಅವುಗಳನ್ನು ಮುಚ್ಚಬೇಕು ಎಂದುಕೊಂಡಿದ್ದೀರಾ?
ಇದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಪರಿ. ಅಲ್ಲದೆ, ಇನ್ನು ಮೂರು ತಿಂಗಳು ಬಿಟ್ಟು ಮತ್ತೊಮ್ಮೆ ಪ್ರಗತಿ ಪರಿಶೀಲನೆ ಮಾಡುತ್ತೇನೆ. ಆಗಲೂ ಇದೇ ರೀತಿಯ ವೈಫಲ್ಯಗಳು ಕಂಡುಬಂದರೆ ಸಂಬಂಧಿಸಿದ ಅಧಿಕಾರಿಗಳನ್ನೇ ಹೊಣೆಯಾಗಿಸಿ ಕ್ರಮ ಜರುಗಿಸುವುದಾಗಿಯೂ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಮಂಗಳವಾರ ಮುಖ್ಯಮಂತ್ರಿ ಅವರು ರಾಷ್ಟ್ರೀಯ ಆರೋಗ್ಯ ಅಭಿಯಾನ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌, ಆರೋಗ್ಯ ಸೇವೆಯ ಲಭ್ಯತೆ ಕುರಿತಂತೆ ಪ್ರತ್ಯೇಕವಾಗಿ ಪ್ರಗತಿ ಪರಿಶೀಲನೆ ನಡೆಸಿದರು. ಈ ವೇಳೆ, ರಾಷ್ಟ್ರೀಯ ಆರೋಗ್ಯ ಮಿಷನ್‌ನ ಅನುದಾನ ಸಕಾಲದಲ್ಲಿ ವೆಚ್ಚವಾಗದಿರುವುದನ್ನು ಗುರುತಿಸಿದರು. ಸರ್ಕಾರಿ ಆಸ್ಪತ್ರೆಗಳಲ್ಲಿ ಶೇ.52ರಷ್ಟು ತಜ್ಞ ವೈದ್ಯರು, ಶೇ.31ರಷ್ಟು ಎಂಬಿಬಿಎಸ್‌ ವೈದ್ಯರು ಹಾಗೂ ಶೇ. 18ರಷ್ಟು ನರ್ಸ್‌ ಸಿಬ್ಬಂದಿ ಕೊರತೆ ಇದೆ. ತಾಲೂಕು ಆಸ್ಪತ್ರೆಗಳಲ್ಲಿ ಎಂಆರ್‌ಐ, ಡಯಾಲಿಸಿಸ್‌ ಯಂತ್ರಗಳನ್ನು ಸಮರ್ಪಕವಾಗಿ ಅಳವಡಿಸುವ ಕೆಲಸ ಆಗಿಲ್ಲ. ಸರ್ಕಾರಿ ಆಸ್ಪತ್ರೆಗಳಿಗೆ ಜನರು ಬರಬೇಕಾ, ಬೇಡವಾ? ಸರ್ಕಾರಿ ಆಸ್ಪತ್ರೆಗಳಲ್ಲಿ ಈ ವಿಶೇಷ ಸೇವೆಗಳನ್ನು ಒದಗಿಸದಿದ್ದರೆ ಬಡ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಹಜ್‌ ಭವನಕ್ಕೆ ಸಿದ್ದರಾಮಯ್ಯ 5000 ಕೋಟಿ ನೀಡಿಲ್ಲ: ಜಮೀರ್‌ ಅಹಮದ್‌ ಖಾನ್‌

ಕೂಡಲೇ ರಾಷ್ಟ್ರೀಯ ಆರೋಗ್ಯ ಮಿಷನ್‌ನಡಿ ಖಾಲಿ ಇರುವ ಹುದ್ದೆಗಳ ಭರ್ತಿ, ನರ್ಸ್‌ಗಳಿಗೆ ವೇತನ ಹೆಚ್ಚಳ, ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಎಂಆರ್‌ಐ ಸ್ಕ್ಯಾ‌ನಿಂಗ್‌ ಹಾಗೂ ಡಯಾಲಿಸಿಸ್‌ ಯಂತ್ರಗಳನ್ನು ಅಳವಡಿಸಿ ತಂತ್ರಜ್ಞರ ನೇಮಿಸಿಕೊಳ್ಳುವುದು ಸೇರಿದಂತೆ ಆರೋಗ್ಯ ವ್ಯವಸ್ಥೆ ಬಲಪಡಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು. ಆಯುಕ್ತರು ನಿರಂತರವಾಗಿ ರಾಷ್ಟ್ರೀಯ ಆರೋಗ್ಯ ಅಭಿಯಾನದ ಪ್ರಗತಿ ಪರಿಶೀಲನೆ ಮಾಡಬೇಕು. ಇನ್ನು ಮೂರು ತಿಂಗಳಲ್ಲಿ ಮತ್ತೆ ಸಭೆ ಮಾಡುತ್ತೇನೆ. ಅಷ್ಟರಲ್ಲಿ ಎಲ್ಲ ವೈಫಲ್ಯಗಳನ್ನು ಸರಿಪಡಿಸಿರಬೇಕು. ನಿಗದಿತ ಗುರಿ ಸಾಧನೆಯನ್ನು ಖಾತರಿ ಪಡಿಸಬೇಕು ಹಾಗೂ ಅನುದಾನವನ್ನು ಸಕಾಲದಲ್ಲಿ ವೆಚ್ಚ ಮಾಡಬೇಕು ಎಂದು ಸೂಚಿಸಿದರು.

ಕಳೆದ ಒಂದು ವರ್ಷದಲ್ಲಿ ನಿಗಮಕ್ಕೆ 5 ಎಂ.ಡಿ. ನೇಮಕ ಮಾಡಿರುವುದರಿಂದ ಸಮಸ್ಯೆ ಆಗಿರುವುದನ್ನು ಅಧಿಕಾರಿಗಳಿಂದ ಕೇಳಿ ತಿಳಿದ ಮುಖ್ಯಮಂತ್ರಿಗಳು, ನಮ್ಮ ಸರ್ಕಾರದ ಅವಧಿಯಲ್ಲಿ ಈ ರೀತಿ ಆಗುವುದಿಲ್ಲ ಎಂದು ಭರವಸೆ ನೀಡಿದ್ದಲ್ಲದೆ, ನಿಗಮದ ವ್ಯವಸ್ಥಾಪಕ ನಿರ್ದೇಶಕರು ಕನಿಷ್ಠ 2 ವರ್ಷ ಸೇವೆ ಸಲ್ಲಿಸಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್‌ ಗೋಯಲ್‌, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ಕೆ. ಅನಿಲ್‌ ಕುಮಾರ್‌, ಆರ್ಥಿಕ ಇಲಾಖೆ ಕಾರ್ಯದರ್ಶಿ ಪಿ.ಸಿ. ಜಾಫರ್‌, ಮುಖ್ಯಮಂತ್ರಿಯವರ ಕಾರ್ಯದರ್ಶಿ ಎನ್‌. ಜಯರಾಂ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

News Hour: ಕಾಂಗ್ರೆಸ್‌ ಗ್ಯಾರಂಟಿಗೆ ದಿನಕ್ಕೆ ಒಂದೊಂದು ನಿಯಮ!

ತ.ನಾಡು, ರಾಜಸ್ಥಾನ ವಿಮೆ ಮಾದರಿ ಅಧ್ಯಯನಕ್ಕೆ ಸೂಚನೆ

ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ವ್‌ಗೆ ಸಿಎಂ ಇದೇ ವೇಳೆ 5 ಸೂಚನೆ ನೀಡಿದರು. ಆಯುಷ್ಮಾನ್‌ ಭಾರತ್‌- ಆರೋಗ್ಯ ಕರ್ನಾಟಕ ಯೋಜನೆಯು ಭರವಸೆಯ ರೀತಿಯಲ್ಲಿದೆ (ಅಶುರೆನ್ಸ್‌ ಮೋಡ್‌). ಇದರಲ್ಲಿ ಬದಲಾವಣೆ ತರಬೇಕಿದೆ. ಹಾಗಾಗಿ ತಮಿಳುನಾಡು ಹಾಗೂ ರಾಜಸ್ಥಾನದಲ್ಲಿ ಜಾರಿಯಲ್ಲಿರುವ ವಿಮಾ ಮಾದರಿಯನ್ನು ಅಧ್ಯಯನ ಮಾಡಿ ವರದಿ ನೀಡುವಂತೆ ಇದೇ ವೇಳೆ ಮುಖ್ಯಮಂತ್ರಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ಬಡ ರೋಗಿಗಳಿಗೆ ಸರ್ಕಾರದಿಂದ ಚಿಕಿತ್ಸಾ ವೆಚ್ಚ ಪಾವತಿಸುವ ಅವಧಿ 14 ದಿನಕ್ಕೆ ಇಳಿಕೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗಳ ಸ್ಥಿತಿ ಸುಧಾರಿಸುವ ನಿರೀಕ್ಷೆ ಇದೆ. ಇಲಾಖಾ ಪ್ರಧಾನ ಕಾರ್ಯದರ್ಶಿ ಹಾಗೂ ಆಯುಕ್ತರು ನಿರಂತರ ಪ್ರಗತಿ ಪರಿಶೀಲನೆ ಮಾಡಿ, ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಲ್ಯಾಬ್‌ ತಂತ್ರಜ್ಞರು ಮತ್ತಿತರ ಅತಿ ಅಗತ್ಯವಿರುವ ಅರೆ ವೈದ್ಯಕೀಯ ಸಿಬ್ಬಂದಿ ನೇಮಕಕ್ಕೆ ಆದ್ಯತೆ ನೀಡಲು ಹಣಕಾಸು ಇಲಾಖೆ ಅಧಿಕಾರಿಗಳು ಕ್ರಮ ವಹಿಸಬೇಕು. ಔಷಧ ಖರೀದಿ ಪ್ರಕ್ರಿಯೆ ನಿರಂತರವಾಗಿ ನಡೆಯಲು ಅನುವಾಗುವಂತೆ ಎರಡು ವರ್ಷಕ್ಕೊಮ್ಮೆ ಟೆಂಡರ್‌ ಕರೆಯಲು ಇಲಾಖೆಯು ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು.

Latest Videos
Follow Us:
Download App:
  • android
  • ios