Asianet Suvarna News Asianet Suvarna News

ಹೈ-ಕ ಅನುದಾನ 500 ಕೋಟಿ ಹೆಚ್ಚಳಕ್ಕೆ ಸಿಎಂ ಒಪ್ಪಿಗೆ

2 ಸಾವಿರ ಕೋಟಿ ರು. ಕ್ರಿಯಾಯೋಜನೆ ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚನೆ| ಸುವರ್ಣಸೌಧದಲ್ಲಿ ಹೈ-ಕ ಶಾಸಕರ ಜೊತೆ ಸಭೆ ನಡೆಸಿದ ನಂತರ ಹೇಳಿಕೆ

CM Kumaraswamy agrees to increase the hyderabad karnataka development fund to 500 crore
Author
Belagavi, First Published Dec 13, 2018, 12:27 PM IST

ಬೆಳಗಾವಿ[ಡಿ.13]: ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ (ಎಚ್‌ಕೆಡಿಬಿ) ಅನುದಾನವನ್ನು ಪ್ರಸ್ತುತವಿರುವ ಒಂದೂವರೆ ಸಾವಿರ ಕೋಟಿ ರು.ಗಳಿಂದ ಎರಡು ಸಾವಿರ ಕೋಟಿ ರು.ಗಳಿಗೆ ಹೆಚ್ಚಿಸಬೇಕು ಎಂದು ಆ ಭಾಗದ ಶಾಸಕರು ಮಾಡಿದ ಮನವಿಗೆ ಮುಖ್ಯಮಂತ್ರಿ ಅವರು ಸಕರಾತ್ಮಕವಾಗಿ ಸ್ಪಂದಿಸಿದ್ದು, ಎರಡು ಸಾವಿರ ಕೋಟಿ ರು.ಗೆ ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಬುಧವಾರ ಸುವರ್ಣ ವಿಧಾನಸೌಧದ ಸಭಾಂಗಣದಲ್ಲಿ ಹೈದರಾಬಾದ್‌ ಕರ್ನಾಟಕ ಭಾಗದ ಶಾಸಕರೊಂದಿಗೆ ಆ ಭಾಗದ ಸಮಸ್ಯೆಗಳ ಬಗ್ಗೆ ಸಮಾಲೋಚನಾ ಸಭೆ ನಡೆಸಿ ಮಾತನಾಡಿದರು.

ಎಚ್‌ಕೆಡಿಬಿಗೆ ಪ್ರಸ್ತುತ ಬಜೆಟ್‌ನಲ್ಲಿ 1500 ಕೋಟಿ ರು. ಅನುದಾನ ನಿಗದಿಪಡಿಸಲಾಗಿದೆ. ಆದರೆ ಒಂದು ಸಾವಿರ ರು. ಕಾಮಗಾರಿಗಳಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಿ ಅನುದಾನ ಬಿಡುಗಡೆ ಮಾಡಲಾಗಿದೆ. ಈ ಅನುದಾನವನ್ನು ಮುಂದಿನ ಬಜೆಟ್‌ನಲ್ಲಿ 2 ಸಾವಿರ ಕೋಟಿ ರು.ಗಳಿಗೆ ಹೆಚ್ಚಿಸಬೇಕು ಎಂದು ಶಾಸಕರು ಮುಖ್ಯಮಂತ್ರಿ ಅವರನ್ನು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಅವರು, 2 ಸಾವಿರ ಕೋಟಿ ರು.ಗಳಿಗೆ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ಸಲ್ಲಿಸಿ. ಪ್ರಸ್ತುತ ಸಾಲಿನಲ್ಲಿ ಇದುವರೆಗೆ ಹೈದ್ರಬಾದ್‌ ಕರ್ನಾಟಕ ಪ್ರದೇಶಾಭಿವೃದ್ಧಿಗಾಗಿ 692 ಕೋಟಿ ರು. ವೆಚ್ಚ ಮಾಡಲಾಗಿದೆ. ಮುಂದಿನ ಮೂರು ತಿಂಗಳ ಅವಧಿಯಲ್ಲಿ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಿ ಹಣ ಬಳಕೆ ಪ್ರಮಾಣ ಪತ್ರ ಸಲ್ಲಿಸಿದಂತೆ ಉಳಿದ ಅನುದಾನವನ್ನು ಬಿಡುಗಡೆ ಮಾಡಲು ಸಿದ್ಧ ಎಂದು ಉತ್ತರಿಸಿದರು.

ಎಚ್‌ಕೆಡಿಬಿ ಅನುದಾನದಲ್ಲಿ ನಗರ ಪ್ರದೇಶಗಳಿಗೆ ತಾರತಮ್ಯ ಮಾಡಲಾಗುತ್ತಿದೆ ಎಂದು ಕೆಲವು ಶಾಸಕರು ತಿಳಿಸಿದ್ದು, ಇದನ್ನು ಸರಿಪಡಿಸಲಾಗುವುದು. ನಂಜುಂಡಪ್ಪ ವರದಿ ಅನುಷ್ಟಾನದ ಬಳಿಕ ಆ ಭಾಗದಲ್ಲಿ ಉಂಟಾಗಿರುವ ಅಭಿವೃದ್ಧಿಗಳನ್ನು ಪರಿಶೀಲಿಸಿ, ಇನ್ನೂ ಅಭಿವೃದ್ಧಿ ಹೊಂದಬೇಕಾದ ಪ್ರದೇಶಗಳಿಗೆ ಹೆಚ್ಚಿನ ಅನುದಾನ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ನಾವು ಸರ್ಕಾರವನ್ನು ಮುಗಿಸ್ತೇವೆ: ಈಶ್ವರಪ್ಪ

ಎಚ್‌ಕೆಡಿಬಿ ಕಾರ್ಯದರ್ಶಿ ಅವರು ಆ ಭಾಗದಲ್ಲಿ ಹಲವಾರು ಹುದ್ದೆಗಳು ಖಾಲಿಯಿರುವುದಾಗಿ ಪ್ರಸ್ತಾಪಿಸಿದ್ದು, ಅಗತ್ಯ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ಮುಂದಿನ ವರ್ಷದ ಬಜೆಟ್‌ನಲ್ಲಿ ಈ ಭಾಗದಲ್ಲಿ ಶಾಲೆ, ಪಿಯು ಹಾಗೂ ಪದವಿ ಕಾಲೇಜುಗಳ ಸ್ಥಾಪನೆಗೆ ಹೆಚ್ಚಿನ ಅನುದಾನನವನ್ನು ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಅವರು ಭರವಸೆ ನೀಡಿದರು.

ಲೋಕೋಪಯೋಗಿ ಇಲಾಖೆ ವತಿಯಿಂದ 2013ರಿಂದ 2018ರ ಮಾರ್ಚ್‌ವರೆಗೆ ರಸ್ತೆ ಕಾಮಗಾರಿಗಳಿಗೆ ಉತ್ತರ ಮತ್ತು ಈಶಾನ್ಯ ವಲಯಗಳಿಗೆ ಒಟ್ಟು 14369 ಕೋಟಿ ರು. ವೆಚ್ಚ ಮಾಡಲಾಗಿದೆ. ಪ್ರಸ್ತುತ ಸಾಲಿನಲ್ಲಿ ನವೆಂರ್ಬ ಅಂತ್ಯದವರೆಗೆ 3039 ಕೋಟಿ ರು. ವೆಚ್ಚ ಮಾಡಲಾಗಿದೆ. ಪ್ರಸ್ತುತ ಸಾಲಿನಲ್ಲಿ ಬಜೆಟ್‌ನಲ್ಲಿ 1375 ಕೋಟಿ ರು. ಒದಗಿಸಲಾಗಿದ್ದರೂ, ಈಗಾಗಲೇ 3173 ಕೋಟಿ ರು.ಗಳಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಅವರು ಹೇಳಿದರು.

ಕಣ್ಣೀರಿಡುತ್ತಾ ಸದನದಿಂದ ಹೊರನಡೆದ ಬಸವರಾಜ್ ಹೊರಟ್ಟಿ..!

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಎಚ್‌ಕೆಡಿಬಿ ಅಧ್ಯಕ್ಷ ಹಾಗೂ ಗಣಿ ಮತ್ತು ಭೂ ವಿಜ್ಞಾನ ಸಚಿವ ರಾಜಶೇಖರ ಪಾಟೀಲ…, ಸಚಿವರಾದ ಪ್ರಿಯಾಂಕ ಖರ್ಗೆ, ಹೆಚ್‌.ಡಿ.ರೇವಣ್ಣ, ಡಿ.ಕೆ.ಶಿವಕುಮಾರ್‌, ಬಂಡೆಪ್ಪ ಕಾಶೆಂಪುರ, ಆರ್‌.ಶಂಕರ್‌, ವೆಂಕಟರಾವ್‌ ನಾಡಗೌಡ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್‌, ಹೈದರಾಬಾದ್‌ ಕರ್ನಾಟಕ ಭಾಗದ ಎಲ್ಲಾ ಶಾಸಕರು ಸಭೆಯಲ್ಲಿ ಪಾಲ್ಗೊಂಡಿದ್ದರು.

Follow Us:
Download App:
  • android
  • ios