Asianet Suvarna News Asianet Suvarna News

ನಾವು ಸರ್ಕಾರವನ್ನು ಮುಗಿಸ್ತೇವೆ: ಈಶ್ವರಪ್ಪ

ಸಮ್ಮಿಶ್ರ ಸರ್ಕಾರ ರೈತರನ್ನು ಮುಗಿಸುತ್ತಿದೆ| ಯಾವುದೇ ಕಾರಣಕ್ಕೂ ನಿಮ್ಮನ್ನು ಬಿಡೋದಿಲ್ಲ!| ‘ಸುಳ್ಳು ಹೇಳುವ ವಿಚಾರದಲ್ಲಿ ಸರ್ಕಾರಕ್ಕೆ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು’

we will finish the govt says KS Eshwarappa
Author
Belagavi, First Published Dec 13, 2018, 11:14 AM IST

ಬೆಳಗಾವಿ[ಡಿ.13]: ಬರ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರುವ ಮೂಲಕ ಸರ್ಕಾರ ರೈತರನ್ನು ಮುಗಿಸುತ್ತಿದೆ. ನಾವು ನಿಮ್ಮ ಸಮ್ಮಿಶ್ರ ಸರ್ಕಾರವನ್ನು ಮುಗಿಸುತ್ತೇವೆ. ಯಾವುದೇ ಕಾರಣಕ್ಕೂ ನಿಮ್ಮನ್ನು ಬಿಡುವುದಿಲ್ಲ ಎಂದು ಬಿಜೆಪಿ ಸದಸ್ಯ ಕೆ.ಎಸ್‌. ಈಶ್ವರಪ್ಪ ಎಚ್ಚರಿಕೆ ನೀಡಿದ್ದಾರೆ.

ಬುಧವಾರ ವಿಧಾನಸಭೆಯಲ್ಲಿ ಬರ ನಿರ್ವಹಣೆ ವೈಫಲ್ಯದ ಬಗ್ಗೆ ಮಾತನಾಡಿದ ಅವರು, ಜೆಡಿಎಸ್‌ನ ಅಪ್ಪ-ಮಕ್ಕಳು ತಮ್ಮನ್ನು ಮಣ್ಣಿನ ಮಕ್ಕಳು ಎಂದು ಕರೆದುಕೊಂಡು ಅಧಿಕಾರ ಪಡೆದರು. ಇದೀಗ ನಿಜವಾದ ಮಣ್ಣಿನ ಮಕ್ಕಳಾದ ರೈತರು ಸಾಯುತ್ತಿದ್ದರೂ ಕುಮಾರಸ್ವಾಮಿ ಅವರ ಸರ್ಕಾರ ತಿರುಗಿ ನೋಡುತ್ತಿಲ್ಲ. ಮುಖ್ಯಮಂತ್ರಿ ಸೇರಿ ಯಾವೊಬ್ಬ ಸಚಿವರೂ ಬರ ಎದುರಿಸುತ್ತಿರುವ ಪ್ರದೇಶಗಳ ಸ್ಥಳ ಪರಿಶೀಲನೆ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪÜಡಿಸಿದರು.

ಸರ್ಕಾರವು ಸಾಲಮನ್ನಾ ಸೇರಿದಂತೆ ಪ್ರತಿ ವಿಚಾರದಲ್ಲಿ ಸುಳ್ಳು ಹೇಳುತ್ತಿದೆ. ಸುಳ್ಳು ಹೇಳುವ ವಿಚಾರದಲ್ಲಿ ಸರ್ಕಾರಕ್ಕೆ ‘ರಾಜ್ಯೋತ್ಸವ ಪ್ರಶಸ್ತಿ’ ನೀಡಬೇಕು. ಜಾನುವಾರುಗಳು, ರೈತರು ಸಾಯುತ್ತಿದ್ದರೂ ಪರಿಹಾರ ಕ್ರಮಕ್ಕೆ ಮುಂದಾಗಿಲ್ಲ. ಕೇಂದ್ರ ಸರ್ಕಾರದ ಹಣಕ್ಕೆ ಕಾಯುವ ಬದಲು ಮೊದಲು ರಾಜ್ಯ ಸರ್ಕಾರದ ಹಣದಿಂದ ಪರಿಹಾರ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು.

ನಯಾಪೈಸೆ ಸಾಲಮನ್ನಾ ಮಾಡಿಲ್ಲ:

ಸರ್ಕಾರವು ಕೇವಲ ಕುಡಿಯುವ ನೀರು ಮಾತ್ರವಲ್ಲ ಮೇವು ಪೂರೈಕೆ ಹಾಗೂ ಬೆಳೆ ನಷ್ಟಪರಿಹಾರಕ್ಕೂ ಕ್ರಮ ಕೈಗೊಳ್ಳಬೇಕು. ಪ್ರತಿ ವರ್ಷ ಗೋಶಾಲೆ ತೆಗೆಯುತ್ತಾರೆ. ಆದರೆ, ಎಷ್ಟುಮೇವು ಬೇಕು ಎಂಬ ಲೆಕ್ಕ ಮಾತ್ರ ಇಲಾಖೆ ಬಳಿ ಇರುವುದಿಲ್ಲ. ರಾಜ್ಯದಲ್ಲಿ ಎಷ್ಟುದನಕರುಗಳಿವೆ ಎಂಬ ಸಮೀಕ್ಷೆ ನಡೆಸಿಲ್ಲ. ಜತೆಗೆ ಸಾಲದ ಸುಳಿಗೆ ಸಿಲುಕಿ ಜನರು ಆತ್ಮಹತ್ಯೆಗೆ ಶರಣಾಗುತ್ತಿದ್ದರೂ, ಸರ್ಕಾರವು ಸಾಲಮನ್ನಾ ಮಾಡುತ್ತಿಲ್ಲ. ಪತ್ರಿಕೆಗಳಲ್ಲಿ ಸಾಲಮನ್ನಾ ಮಾಡಿರುವುದಾಗಿ ಸುಳ್ಳು ಪ್ರಚಾರ ನೀಡುತ್ತಿದೆ. ಈವರೆಗೂ ನಯಾಪೈಸೆ ಮನ್ನಾ ಮಾಡಿಲ್ಲ ಎಂದರು.

ಈ ವೇಳೆ ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್‌, ಸದನಕ್ಕೆ ತಪ್ಪು ಮಾಹಿತಿ ನೀಡಬೇಡಿ ಈಶ್ವರಪ್ಪ ಅವರೇ. ಸಹಕಾರ ಇಲಾಖೆ ಅಡಿ ಬರುವ ಬ್ಯಾಂಕ್‌ಗಳಲ್ಲಿ 8 ಸಾವಿರ ಕೋಟಿ ರು. ಮನ್ನಾ ಮಾಡಲಾಗಿದೆ. ಈ ಪೈಕಿ 3 ಸಾವಿರ ಕೋಟಿ ರು. ಬಿಡುಗಡೆ ಮಾಡಿದ್ದೇವೆ. ನವೆಂಬರ್‌ ತಿಂಗಳಲ್ಲಿ ಪಾವತಿಸಬೇಕಿರುವ ಕಂತಿನ 1,300 ಕೋಟಿ ರು. ಪೈಕಿ ಬುಧವಾರ ಬೆಳಗ್ಗೆ ಅಪೆಕ್ಸ್‌ ಬ್ಯಾಂಕ್‌ಗೆ 800 ಕೋಟಿ ರು. ವರ್ಗಾವಣೆ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡರು.

ಇದಕ್ಕೆ ಒಪ್ಪದ ಕೆ.ಎಸ್‌. ಈಶ್ವರಪ್ಪ ಅವರು, ಪಕ್ಕದ ಮನೆಯಲ್ಲಿ ಗಂಡು ಮಗು ಜನಿಸಿದರೆ ನಮಗೆ ಹುಟ್ಟಿದೆ ಎಂದು ಈ ಸರ್ಕಾರ ಹೇಳಿಕೊಳ್ಳುತ್ತದೆ. ಇಂತಹ ಸುಳ್ಳು ಹೇಳುವ ಸರ್ಕಾರ ಜೀವನದಲ್ಲಿ ನೋಡಿಲ್ಲ ಎಂದರು. ಈ ವೇಳೆ ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್‌, ಪಂಚರಾಜ್ಯ ಚುನಾವಣೆಯ ಸಿಟ್ಟು ನಮ್ಮ ಮೇಲೆ ಹಾಕುತ್ತಿದ್ದಾರೆ ಎಂದು ಈಶ್ವರಪ್ಪ ಅವರ ಕಾಲೆಳೆದರು.

Follow Us:
Download App:
  • android
  • ios