ರೈತರಿಗೆ ಸಾಲ ವಸೂಲಿ ಪಾವತಿ ಮಾಡಿಲ್ಲವೆಂದು ನೋಟಿಸ್ ನೀಡಿದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ. 

ಬೆಂಗಳೂರು :  ರೈತರು ಬೆಳೆಸಾಲ ಮರುಪಾವತಿಸಿಲ್ಲ ಎಂದು ನೋಟಿಸ್‌ ನೀಡುವ ಬ್ಯಾಂಕುಗಳ ವ್ಯವಸ್ಥಾಪಕರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ಬೆಳೆ ಸಾಲ ಮನ್ನಾ ವಿಚಾರದಲ್ಲಿ ಸಾಲ ನೀಡಿರುವ ಬ್ಯಾಂಕ್‌ಗಳಿಗೆ ಹಣ ಮರುಪಾವತಿ ಮಾಡಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಹೀಗಿದ್ದರೂ ವಿನಾಕಾರಣ ರೈತರಿಗೆ ನೋಟಿಸ್‌ ನೀಡಿ ತೊಂದರೆ ನೀಡಲಾಗುತ್ತಿದೆ. ಈ ರೀತಿಯಾಗಿ ತೊಂದರೆ ಕೊಡುವುದು ಬೇಕಾಗಿಲ್ಲ. ರೈತರ ಬೆಳೆ ಸಾಲ ಮನ್ನಾ ವಿಚಾರದಲ್ಲಿ ಯಾವುದೇ ಸಂಶಯ ಬೇಕಾಗಿಲ್ಲ. ಸಾಲಮನ್ನಾ ವಿಷಯಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳನ್ನು ಗಮನಿಸಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದೂ ಅವರು ಹೇಳಿದ್ದಾರೆ.

ಮಾಜಿ ಪ್ರಧಾನಿ ಪಂಡಿತ್‌ ಜವಾಹರಲಾಲ್‌ ನೆಹರು ಹುಟ್ಟುಹಬ್ಬದ ಅಂಗವಾಗಿ ಬುಧವಾರ ವಿಧಾನಸೌಧದ ಮುಂಭಾಗದಲ್ಲಿರುವ ನೆಹರು ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ರೈತರು ಬೆಳೆ ಸಾಲ ಮಾಡಿದ ಪ್ರಕರಣದಲ್ಲಿ ಬಂಧನ ವಾರಂಟ್‌ ನೀಡುವಂಥ ಬ್ಯಾಂಕ್‌ ವ್ಯವಸ್ಥಾಪಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ತಾಯಿ-ಮಗು ನೀರಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಜಿಲ್ಲಾಧಿಕಾರಿ ಮತ್ತು ಇನ್ಸ್‌ಪೆಕ್ಟರ್‌ಗೆ ಸೂಚನೆ ನೀಡಿ ನೋಟಿಸ್‌ ಜಾರಿಗೊಳಿಸಿದ ಬ್ಯಾಂಕ್‌ ವ್ಯವಸ್ಥಾಪಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿತ್ತು. ಆದರೆ, ಆತ್ಮಹತ್ಯೆ ಪ್ರಕರಣದಲ್ಲಿ ಅವರು ಮಾಡಿದ್ದು ಬೆಳೆ ಸಾಲವಲ್ಲ, ಮನೆ ಕಟ್ಟಲು ಅವರ ಮಾವ ಬ್ಯಾಂಕಿನಿಂದ ಸಾಲ ಪಡೆದಿದ್ದರು. ಇದಕ್ಕಾಗಿ ನೋಟಿಸ್‌ ನೀಡಲಾಗಿತ್ತು ಎಂಬ ವಿಷಯ ಗೊತ್ತಾಗಿದೆ ಎಂದರು.

ಕೃಷಿ ಸಾಲವಲ್ಲದ ಪ್ರಕರಣಗಳೇ ಹೆಚ್ಚಾಗಿ ಬರುತ್ತಿವೆ. ಬೇರೆ ಬೇರೆ ಉದ್ದೇಶಕ್ಕಾಗಿ ಮಾಡಿಕೊಂಡ ಸಾಲಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಬೆಳೆ ಸಾಲ ಮಾಡಿದವರಿಗೆ ನೋಟಿಸ್‌ ನೀಡಿದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.