ದೆಹಲಿಯಲ್ಲಿ ನಡೆದ ಪ್ರತಿಭಟನೆ ವೇಳೆ ಪೊಲೀಸರ ಕಾರ್ಯಾಚರಣೆ ಕುರಿತು ಡಿಕೆ ಶಿವಕುಮಾರ್ ಸುದೀರ್ಘ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಶಾಂತಿಯುತ ಪ್ರತಿಭಟನೆ ಪ್ರತಿಯೊಬ್ಬರ ಹಕ್ಕಾಗಿದ್ದು, ಅನಗತ್ಯ ಬಲಪ್ರಯೋಗ ಮಾಡಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
ಬೆಂಗಳೂರು (ಅ.13): ನಿನ್ನೆ ದೆಹಲಿಯಲ್ಲಿ ನಡೆದ ಪ್ರತಿಭಟನೆಯ ವೇಳೆ ಸಂಭವಿಸಿದ ತಳ್ಳಾಟ-ನೂಕಾಟ ಹಾಗೂ ಮಾಧ್ಯಮ ಪ್ರತಿನಿಧಿಗಳು ಮತ್ತು ಪ್ರತಿಭಟನಾಕಾರರ ಮೇಲಿನ ಪೊಲೀಸ್ ಕಾರ್ಯಾಚರಣೆ ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಶಾಂತಿಯುತ ಪ್ರತಿಭಟನೆ ಪ್ರತಿಯೊಬ್ಬರ ಮೂಲಭೂತ ಹಕ್ಕಾಗಿದ್ದು, ಅದಕ್ಕೆ ಯಾವುದೇ ಧಕ್ಕೆ ಬರಬಾರದು ಎಂದು ಸಿಎಂ ತಮ್ಮ ಪ್ರಕಟಣೆಯಲ್ಲಿ ಪ್ರತಿಪಾದಿಸಿದ್ದಾರೆ.
ಸಿಎಂ ಪತ್ರಿಕಾ ಪ್ರಕಟಣೆಯ ಮುಖ್ಯಾಂಶಗಳು:
ಶಾಂತಿಯುತ ಪ್ರತಿಭಟನೆ ಪ್ರಜಾಸತ್ತಾತ್ಮಕ ಹಕ್ಕು: 'ಶಾಂತಿಯುತವಾಗಿ ಪ್ರತಿಭಟನೆ ನಡೆಸುವುದು ನಮ್ಮ ಪ್ರಜಾಪ್ರಭುತ್ವದ ಮೂಲಭೂತ ಹಕ್ಕಾಗಿದೆ. ಈ ಹಕ್ಕನ್ನು ನಾವು ದೆಹಲಿಯಲ್ಲಿ ಪ್ರತಿಪಾದಿಸುತ್ತಾ, ಬೆಂಗಳೂರಿನಲ್ಲಿ ಬೇರೆಯವರಿಗೆ ಅದನ್ನು ನಿರಾಕರಿಸಲು ಸಾಧ್ಯವಿಲ್ಲ' ಎಂದು ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ.
ಪೋಲಿಸ್ ಕಾರ್ಯಾಚರಣೆ ಕುರಿತು ವರದಿ: ಪ್ರತಿಭಟನಾಕಾರರು ಮತ್ತು ಮಾಧ್ಯಮ ಮಿತ್ರರನ್ನು ಒಳಗೊಂಡ ನಿನ್ನೆಯ ಘಟನೆಯನ್ನು ತಾವು ಗಮನಿಸಿದ್ದು, ಯಾವ ಸಂದರ್ಭದಲ್ಲಿ ಪೊಲೀಸ್ ಕಾರ್ಯಾಚರಣೆ ನಡೆಯಿತು ಎಂಬ ಕುರಿತು ಸಂಪೂರ್ಣ ವರದಿ ಕೇಳಿರುವುದಾಗಿ ಅವರು ತಿಳಿಸಿದ್ದಾರೆ.
ತಪ್ಪಿತಸ್ಥರ ವಿರುದ್ಧ ಕ್ರಮದ ಎಚ್ಚರಿಕೆ: 'ಒಂದು ವೇಳೆ ಈ ಘಟನೆಯಲ್ಲಿ ಅನಗತ್ಯ ಬಲಪ್ರಯೋಗ ಅಥವಾ ಅತಿಯಾದ ವರ್ತನೆ ನಡೆದಿರುವುದು ಕಂಡುಬಂದರೆ, ಅದಕ್ಕೆ ಹೊಣೆಗಾರರಾದ ಅಧಿಕಾರಿಗಳ ವಿರುದ್ಧ ತಕ್ಕ ಕ್ರಮ ಜರುಗಿಸಲಾಗುವುದು' ಎಂದು ಸಿಎಂ ಎಚ್ಚರಿಕೆ ನೀಡಿದ್ದಾರೆ.
ದ್ವಂದ್ವ ನೀತಿಗೆ ಆಸ್ಪದವಿಲ್ಲ:
ಚುನಾವಣಾ ಆಯೋಗದೊಂದಿಗಿನ ಭಿನ್ನಾಪ್ರಾಯವಾಗಲಿ, ರಾಜ್ಯ ಸರ್ಕಾರದೊಂದಿಗಿನ ಭಿನ್ನಾಪ್ರಾಯವಾಗಲಿ ಅಥವಾ ವೈಯಕ್ತಿಕವಾಗಿ ತಮ್ಮೊಂದಿಗಿನ ಭಿನ್ನಾಪ್ರಾಯವಾಗಲಿ—ಶಾಂತಿಯುತವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಯಾರೊಬ್ಬರ ಹಕ್ಕನ್ನೂ ಕುಗ್ಗಿಸಲು ಅವಕಾಶ ನೀಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ದೇಶದ ಇತರ ಭಾಗಗಳಿಂದ ನಾವು ನಿರೀಕ್ಷಿಸುವ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಕರ್ನಾಟಕವೂ ತನಗೂ ಅನ್ವಯಿಸಿಕೊಳ್ಳಬೇಕು. ಇಲ್ಲಿ ಯಾವುದೇ ದ್ವಿಮುಖ ನೀತಿಗೆ ಆಸ್ಪದವಿಲ್ಲ" ಎಂದು ಸಿಎಂ ಡಿಕೆ ಶಿವಕುಮಾರ್ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


