ರಾಜ್ಯದಲ್ಲಿ ಇಳಿಕೆಯಾಗಿರುವ ಕೋವಿಡ್ ಸೋಂಕಿನ ಪ್ರಕರಣ ರಾಜ್ಯ ಅನ್‌ಲಾಕ್ ಮಾಡುವತ್ತ ಸರ್ಕಾರದ ಚಿತ್ತ 11 ಜಿಲ್ಲಾಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಸಭೆ

ಬೆಂಗಳೂರು (ಜೂ.09): ರಾಜ್ಯದಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಆರ್ಥಿಕ ಚಟುವಟಿಕೆಯತ್ತ ಗಮನಹರಿಸಿದ್ದು, ಹಂತ ಹಂತವಾಗಿ ಸೆಮಿಲಾಕ್‌ಡೌನ್‌ ನಿರ್ಬಂಧಗಳನ್ನು ಸಡಿಲಗೊಳಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದಾರೆ.

 ರಾಜ್ಯದಲ್ಲಿ ಅನ್‌ಲಾಕ್‌ ಮಾಡುವ ಕುರಿತು ಗುರುವಾರ ಸರಣಿ ಸಭೆ ನಡೆಸಲು ನಿರ್ಧರಿಸಿದ್ದಾರೆ. ಕೊರೋನಾ ಸೋಂಕು ಹೆಚ್ಚಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಸಚಿವರ ಜತೆ ಪ್ರತ್ಯೇಕವಾಗಿ ಎರಡು ಮಹತ್ವದ ಸಭೆ ನಡೆಸಲಿದ್ದಾರೆ. ಅಂದು ಬೆಳಗ್ಗೆ ರಾಜ್ಯದ 11 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆ ಸಭೆ ನಡೆಸಲಿದ್ದಾರೆ. 

ನಾಳೆ ಸಚಿವರ ಜೊತೆ ಸಿಎಂ ಅನ್‌ಲಾಕ್ ಸಭೆ, ಯಾವುದಕ್ಕೆಲ್ಲಾ ಸಿಗಲಿದೆ ವಿನಾಯಿತಿ..?

ಕೋವಿಡ್‌ ಸೋಂಕು ಹೆಚ್ಚಿರುವ ಜಿಲ್ಲೆಯ ಜಿಲ್ಲಾಧಿಕಾರಿಗಳ ಸಭೆ ನಡೆಸಿ ಸದ್ಯದ ಪರಿಸ್ಥಿತಿ ಕುರಿತು ಮಾಹಿತಿ ಸಂಗ್ರಹಿಸಲಿದ್ದಾರೆ. ವಿಡಿಯೋ ಸಂವಾದ ಮೂಲಕ ಸಭೆ ನಡೆಸಿ ಮಾಹಿತಿ ಪಡೆದುಕೊಂಡ ಬಳಿಕ ಸಂಜೆ ಸಚಿವರು ಮತ್ತು ಹಿರಿಯ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಲಿದ್ದಾರೆ.

ಜಿಲ್ಲಾಧಿಕಾರಿಗಳಿಂದ ಪಡೆದ ಮಾಹಿತಿಯನ್ನು ಸಚಿವರ ಜತೆ ಹಂಚಿಕೊಂಡು ಜಾರಿಗೊಳಿಸಿರುವ ಸೆಮಿಲಾಕ್‌ಡೌನ್‌ ನಿರ್ಬಂಧಗಳನ್ನು ಸಡಿಲಗೊಳಿಸುವ ಕುರಿತು ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಈಗಿರುವ ಸೆಮಿ ಲಾಕ್‌ಡೌನ್‌ ನಿರ್ಬಂಧಗಳು ಈ ತಿಂಗಳ 14ರ ಬೆಳಗ್ಗೆ ಮುಕ್ತಾಯಗೊಳ್ಳಲಿವೆ. ಹೀಗಾಗಿ, ಅಂದಿನಿಂದ ಕೆಲವು ನಿರ್ಬಂಧಗಳನ್ನು ಸಡಿಲಿಸಿ ಆರ್ಥಿಕ ಚಟುವಟಿಕೆಗಳಿಗೆ ಒತ್ತು ನೀಡುವ ಸಂಭವವಿದೆ. ಆದರೆ, ಜಿಲ್ಲಾವಾರು ನಿರ್ಬಂಧಗಳನ್ನು ಕಠಿಣಗೊಳಿಸುವ ಅಥವಾ ಸಡಿಲಿಸುವ ಬಗ್ಗೆ ಚಿಂತನೆ ನಡೆದಿದೆ ಎನ್ನಲಾಗಿದೆ.