ಬೆಂಗಳೂರು [ಡಿ.31]:  ಮಹಾಜನ್‌ ಆಯೋಗದ ವರದಿ ಪ್ರಕಾರ ಈಗಾಗಲೇ ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿ ನಿಗದಿಯಾಗಿದೆ. ಹೀಗಾಗಿ ಕರ್ನಾಟಕದ ಒಂದು ಇಂಚು ಜಾಗವನ್ನೂ ನಾವು ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಗಡಿ ವಿಷಯದಲ್ಲಿ ರಾಜಕೀಯದ ಬೇಳೆ ಬೇಯಿಸಿಕೊಳ್ಳಲು ಹೋಗಬೇಡಿ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಮಹಾರಾಷ್ಟ್ರದ ರಾಜಕೀಯ ಪಕ್ಷಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಯಡಿಯೂರಪ್ಪ ಜತೆಗೆ ಸಚಿವರಾದ ಜಗದೀಶ್‌ ಶೆಟ್ಟರ್‌, ಆರ್‌. ಅಶೋಕ್‌, ಬಿ. ಶ್ರೀರಾಮುಲು, ಸಿ.ಟಿ. ರವಿ ಅವರೂ ಮಹಾರಾಷ್ಟ್ರದ ಸರ್ಕಾರ ಹಾಗೂ ಅಲ್ಲಿನ ರಾಜಕೀಯ ಪಕ್ಷಗಳ ಧೋರಣೆಯನ್ನು ಖಂಡಿಸಿದ್ದಾರೆ.

ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ಆರಂಭಕ್ಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಗಡಿ ವಿಚಾರದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೋಗಬಾರದು. ಕರ್ನಾಟಕದ ಒಂದು ಇಂಚು ಜಾಗ ಕೂಡ ಕೊಡುವ ಪ್ರಶ್ನೆಯೇ ಇಲ್ಲ. ಕನ್ನಡಿಗರು ಯಾರೂ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ರಾಜ್ಯದ ನೆಲ, ಜಲ, ಭಾಷೆ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ. ಮಹಾರಾಷ್ಟ್ರ ಸರ್ಕಾರ ರಾಜಕೀಯ ಕಾರಣಗಳಿಗೆ ಕ್ಯಾತೆ ತೆಗೆಯುತ್ತಿದೆ. ಕನ್ನಡಿಗರು ಹಾಗೂ ಮಹಾರಾಷ್ಟ್ರದವರ ನಡುವೆ ಜಗಳ ಹಚ್ಚಲು ಪ್ರಯತ್ನಿಸಲಾಗುತ್ತಿದೆ. ಅಲ್ಲಿರುವವರು ಶಾಂತಿ ಹಾಗೂ ಸೌಹಾರ್ದತೆ ಕಾಪಾಡಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾಂಗ್ರೆಸ್‌ ನಿಲುವು ಸ್ಪಷ್ಟಪಡಿಸಲಿ- ಶೆಟ್ಟರ್‌:

ಬೃಹತ್‌ ಕೈಗಾರಿಕೆ ಸಚಿವ ಜಗದೀಶ್‌ ಶೆಟ್ಟರ್‌ ಮಾತನಾಡಿ, ಉದ್ಧವ್‌ ಠಾಕ್ರೆ ಮುಖ್ಯಮಂತ್ರಿ ಆದ ನಂತರ ಗಡಿ ಗಲಾಟೆ ಪ್ರಾರಂಭವಾಗಿದೆ. ಗಡಿಯಲ್ಲಿ ಅಶಾಂತಿ ವಾತಾವರಣ ನಿರ್ಮಾಣವಾಗಿದೆ. ರಾಜಕೀಯ ಲಾಭ ಮಾಡಿಕೊಳ್ಳಲು ಶಿವಸೇನೆ ಹೊರಟಿದೆ. ಶಿವಸೇನೆ ಜತೆ ಕಾಂಗ್ರೆಸ್‌ ನಿಂತಿದ್ದು, ರಾಜ್ಯ ಕಾಂಗ್ರೆಸ್‌ ನಾಯಕರು ಇದರ ಬಗ್ಗೆ ಮಾತನಾಡಬೇಕು ಎಂದು ಒತ್ತಾಯಿಸಿದರು.

BSY ಸರ್ಕಾರದ ಪ್ರಸಕ್ತ ಅವಧಿಯ ಚೊಚ್ಚಲ ಬಜೆಟ್‌ಗೆ ಮುಹೂರ್ತ ಫಿಕ್ಸ್...

ಈಗಾಗಲೇ ಮಹಾಜನ್‌ ವರದಿ ಅಂತಿಮವಾಗಿದೆ. ಹೀಗಾಗಿ ಪ್ರಚೋದನೆ ಮಾಡುವುದು ಸರಿಯಲ್ಲ. ಕೊಲ್ಹಾಪುರದಲ್ಲಿ ನಮ್ಮ ಮುಖ್ಯಮಂತ್ರಿಗಳ ಪ್ರತಿಕೃತಿ ದಹನ ಮಾಡುವ ಅಗತ್ಯವಿಲ್ಲ. ಅಗತ್ಯವಿದ್ದರೆ ಕಾನೂನು ಹೋರಾಟ ಮಾಡಲಿ. ನಾವು ಕಾನೂನು ಹೋರಾಟ ಮುಂದುವರೆಸುತ್ತೇವೆ. ದೇವೇಂದ್ರ ಫಡ್ನವಿಸ್‌ ಐದು ವರ್ಷ ಮುಖ್ಯಮಂತ್ರಿಯಾಗಿದ್ದರು. ಆಗ ಅವರು ಇಂತಹ ಗಡಿ ತಂಟೆ ಎಲ್ಲೂ ತರಲಿಲ್ಲ ಎಂದು ಹೇಳಿದರು.

ಪುಂಡಾಟಿಕೆಗೆ ತಕ್ಕ ಉತ್ತರ- ಶ್ರೀರಾಮುಲು:

ಆರೋಗ್ಯ ಸಚಿವ ಬಿ. ಶ್ರೀರಾಮುಲು ಮಾತನಾಡಿ, ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು. ಆದರೆ ರಾಜಕೀಯ ಕಾರಣಗಳಿಗೆ ಮಹಾರಾಷ್ಟ್ರ ಸರ್ಕಾರ ಕ್ಯಾತೆ ತೆಗೆಯುತ್ತಿದೆ. ಅದಕ್ಕೆ ನಾವು ಹೆದರಬೇಕಾದ ಅಗತ್ಯವಿಲ್ಲ. ಶಿವಸೇನೆಯ ಪುಂಡಾಟಿಕೆಗೆ ತಕ್ಕ ಉತ್ತರ ನೀಡುತ್ತೇವೆ. ಅಲ್ಲಿ ಶಿವಸೇನೆಗೆ ಕಾಂಗ್ರೆಸ್‌ ಬೆಂಬಲ ಕೊಟ್ಟು ಉದ್ಧವ್‌ ಠಾಕ್ರೆ ಅವರನ್ನು ಮುಖ್ಯಮಂತ್ರಿ ಮಾಡಿದೆ. ಹೀಗಾಗಿ ಇಲ್ಲಿನ ರಾಜ್ಯ ಕಾಂಗ್ರೆಸ್‌ ನಾಯಕರ ನಿಲುವು ಏನು ಎಂದು ಸ್ಪಷ್ಟಪಡಿಸಬೇಕು ಎಂದರು.

ಸಚಿವ ಸಿ.ಟಿ. ರವಿ ಮಾತನಾಡಿ, ಬೆಳಗಾವಿ, ಕಾರವಾರ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಿದ್ದು ಎಂಬ ಮಹಾರಾಷ್ಟ್ರ ಮುಖ್ಯಮಂತ್ರಿ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದರು. ಈ ರೀತಿಯ ಹೇಳಿಕೆ ಬಾಲಿಶ ಎನಿಸುತ್ತದೆ. ಅಕ್ಕಲಕೋಟೆ, ಸಾಂಗ್ಲಿ, ಕೊಲ್ಲಾಪುರ ಮೊದಲಾದ ಕಡೆಗಳಲ್ಲಿ ಕನ್ನಡಿಗರ ಸಂಖ್ಯೆ ಹೆಚ್ಚಾಗಿದೆ. ಹಾಗೆಂದು ಆ ಪ್ರದೇಶಗಳನ್ನು ಮಹಾರಾಷ್ಟ್ರ ವಶಪಡಿಸಿಕೊಂಡಿದೆ ಎಂದು ಹೇಳಲಾಗದು. ಪಾಕ್‌ ಆಕ್ರಮಿತ ಕಾಶ್ಮೀರವನ್ನು ವಾಪಸು ಪಡೆದು ಅಖಂಡ ಭಾರತ ನಿರ್ಮಾಣ ಮಾಡಬೇಕೆಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರಯತ್ನಿಸುತ್ತಿದ್ದಾರೆ. ಇಂತಹ ವೇಳೆಯಲ್ಲಿ ನಮ್ಮ ನೆರೆ ರಾಜ್ಯಗಳು ಭಾಷೆ ಆಧಾರದ ಮೇಲೆ ಭಾರತ ವಿಭಜನೆಗೆ ಯತ್ನಿಸುವುದು ಸರಿಯಲ್ಲ ಎಂದರು.