ಬೆಂಗಳೂರು (ಡಿ.14):  ಸರ್ಕಾರದ ಸಂಧಾನ ಸಭೆ ಬಳಿಕ ಮುಷ್ಕರ ಕೈಬಿಡಲು ಒಪ್ಪಿದ ದಾಟಿಯಲ್ಲಿ ಹೇಳಿಕೆ ನೀಡಿ ಹೋದ ರಾಜ್ಯ ಸಾರಿಗೆ ನೌಕರರ ಒಕ್ಕೂಟದ ಪ್ರತಿನಿಧಿಗಳು ಫ್ರೀಡಂ ಪಾರ್ಕ್ನಲ್ಲಿ ಉಲ್ಟಾಹೊಡೆಯುತ್ತಿದ್ದಂತೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಾಗೂ ಅವರ ಸಂಪುಟದ ಹಲವು ಸಚಿವರು ಮುಷ್ಕರದ ನೇತೃತ್ವ ವಹಿಸಿರುವ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್‌ ವಿರುದ್ಧ ಮುಗಿಬಿದ್ದು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮುಖ್ಯಮಂತ್ರಿಯಲ್ಲದೇ ಸಚಿವರಾದ ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ, ಆರ್‌.ಅಶೋಕ್‌, ಎಸ್‌.ಟಿ.ಸೋಮಶೇಖರ್‌, ಡಾ.ಕೆ.ಸುಧಾಕರ್‌, ಬಿ.ಸಿ.ಪಾಟೀಲ್‌ ಮತ್ತಿತರ ಸಚಿವರು ಮಾಧ್ಯಮ ಹೇಳಿಕೆ ಹಾಗೂ ಟ್ವೀಟ್‌ ಮೂಲಕ ಕೋಡಿಹಳ್ಳಿ ಚಂದ್ರಶೇಖರ್‌ ತಮ್ಮ ಸ್ವಾರ್ಥಕ್ಕಾಗಿ ಕುಮ್ಮಕ್ಕು ನೀಡಿ ಸಾರಿಗೆ ನೌಕರರು ಮುಷ್ಕರ ಕೈಬಿಡದಂತೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಸಿಎಂ ಗರಂ:  ‘ಸಾರಿಗೆ ನೌಕರರ ಬೇಡಿಕೆಗಳಿಗೆ ಸಭೆಯಲ್ಲಿ ಒಪ್ಪಿಕೊಂಡು ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರಕಟಿಸುವುದಾಗಿ ಹೇಳಿದ ಸಾರಿಗೆ ನೌಕರರ ಸಂಘದ ಮುಖಂಡರು, ಕೋಡಿಹಳ್ಳಿ ಚಂದ್ರಶೇಖರ್‌ ಜತೆಗೂಡಿ ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ಕೋಡಿಹಳ್ಳಿ ಅವರು ಅನಗತ್ಯವಾಗಿ ನೌಕರರ ದಾರಿ ತಪ್ಪಿಸುತ್ತಿರುವುದು ಸರಿಯಲ್ಲ. ಅವರ ದುರುದ್ದೇಶಪೂರಿತ ನಡೆ ಖಂಡನೀಯ. ಮುಷ್ಕರದಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ, ಸಾರಿಗೆ ನೌಕರರಿಗೂ ಸಮಸ್ಯೆಯಾಗುತ್ತದೆ. ನೌಕರರು ಮುಷ್ಕರವನ್ನು ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಬೇಕು’ ಎಂದು ಯಡಿಯೂರಪ್ಪ ಮನವಿ ಮಾಡಿದ್ದಾರೆ.

ಬ್ಲಾಕ್‌ಮೇಲ್‌ ತಂತ್ರ:  ಬಸವರಾಜ ಬೊಮ್ಮಾಯಿ ಅವರು, ‘ಸಂಧಾನ ಸಭೆಯಲ್ಲಿ ಮುಷ್ಕರ ಕೈಬಿಡಲು ಒಪ್ಪಿಕೊಂಡ ಸಾರಿಗೆ ನೌಕರರು ಮುಷ್ಕರದ ಜಾಗಕ್ಕೆ ಹೋಗಿ ಕೋಡಿಹಳ್ಳಿ ಚಂದ್ರಶೇಖರ್‌ ಮಾತು ಕೇಳಿ ಬದಲಾಗುತ್ತಾರೆ ಎಂದರೆ ಏನರ್ಥ? ಸರ್ಕಾರವನ್ನು ಕೋಡಿಹಳ್ಳಿ ಚಂದ್ರಶೇಖರ್‌ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಾರೆ. ಅವರ ತಂತ್ರಕ್ಕೆ ಒಳಗಾಗಿ ಸಾರಿಗೆ ನೌಕರರು ಮುಷ್ಕರ ಮುಂದುವರೆಸಿದರೆ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದಾರೆ.

ನಕಲಿ ನಾಯಕರಿಗೆ ಶಾಸ್ತಿ ಕಾದಿದೆ: ಕೋಡಿಹಳ್ಳಿ ಚಂದ್ರಶೇಖರ್‌ಗೆ ಖಡಕ್‌ ಎಚ್ಚರಿಕೆ ಕೊಟ್ಟ ಸಚಿವ ..

ಬಿ.ಸಿ.ಪಾಟೀಲ್‌ ಟ್ವೀಟ್‌ ಮಾಡಿ, ‘ಕೋಡಿಹಳ್ಳಿ ಕಾಂಗ್ರೆಸ್‌ ಸೇರಿಕೊಂಡು ಧರಣಿ ಮಾಡಲಿ ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಫ್ರೀಡಂ ಪಾರ್ಕ್ನಲ್ಲಿ ಕೆಪಿಸಿಸಿ ಕಿಸಾನ್‌ ಸೆಲ್‌ ಅಧ್ಯಕ್ಷರಿಗೆ ಏನು ಕೆಲಸ. ಇದು ಕಾಂಗ್ರೆಸ್‌ ಪ್ರಾಯೋಜಿತವಲ್ಲವೇ? ಸಾರಿಗೆ ನೌಕರರು ಇದಕ್ಕೆ ಬಲಿಯಾಗಬಾರದು’ ಎಂದಿದ್ದಾರೆ.

ಶಾಪ ತಟ್ಟುತ್ತೆ:  ಆರ್‌.ಅಶೋಕ್‌ ಮಾತನಾಡಿ, ‘ಕೋಡಿಹಳ್ಳಿ ಚಂದ್ರಶೇಖರ್‌ ತಮ್ಮ ಸ್ವಾರ್ಥಕ್ಕಾಗಿ ದುರುದ್ದೇಶದಿಂದ ಸಾರಿಗೆ ನೌಕರರಿಗೆ ಕುಮ್ಮಕ್ಕು ನೀಡಿ ಹೋರಾಟ ಮುಂದುವರಿಯುವಂತೆ ಮಾಡಿದ್ದಾರೆ. ಒಂದು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿರುವ ನೌಕರರು ಮತ್ತು ಅವರ ಕುಟುಂಬದ ಜೊತೆ ಕೋಡಿಹಳ್ಳಿ ಚೆಲ್ಲಾಟವಾಡುತ್ತಿದ್ದಾರೆ. ಯಾವುದೋ ಒಬ್ಬ ವ್ಯಕ್ತಿಗಾಗಿ ಸಂಸ್ಥೆಯನ್ನು ಬಲಿಕೊಡುವುದು ಸರಿಯಲ್ಲ. ಇದರಿಂದ ಸಮಸ್ಯೆ ಅನುಭವಿಸುತ್ತಿರುವ ಸಾರ್ವಜನಿಕ ಶಾಪ ಕೋಡಿಹಳ್ಳಿಗೆ ತಟ್ಟುತ್ತದೆ’ ಎಂದಿದ್ದಾರೆ.

ಗೋವಿಂದ ಕಾರಜೋಳ ಅವರು,‘ಪ್ರೊ.ನಂಜುಂಡಸ್ವಾಮಿ ಅವರು ರೈತ ಕಲ್ಯಾಣಕ್ಕಾಗಿ ಹೋರಾಡಿದ ರೈತ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಕೋಡಿಹಳ್ಳಿ ಚಂದ್ರಶೇಖರ್‌ ರೈತರ ಸಮಸ್ಯೆಗಳಿಗೆ ತಿಲಾಂಜಲಿ ಹಾಡಿ, ಸಂತೆಯಲ್ಲಿ ಬಣ್ಣದ ತುತ್ತೂರಿ ಊದುವಥರ ಭಾಷಣ ಮಾಡುತ್ತಿದ್ದಾರೆ. ಸ್ವಪ್ರತಿಷ್ಠೆಗಾಗಿ ಈ ರೀತಿ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ?’ ಎಂದು ಎಚ್ಚರಿಕೆ ನೀಡಿದ್ದಾರೆ.

ಬೆಂಕಿ ಹಚ್ಚುವ ಕೆಲಸ:  ಎಸ್‌.ಟಿ.ಸೋಮಶೇಖರ್‌ ಮಾತನಾಡಿ, ‘ಬಹುತೇಕ ಬೇಡಿಕೆಗಳನ್ನು ಈಡೇರಿಸಲು ಒಪ್ಪಿದ್ದರೂ ಕೋಡಿಹಳ್ಳಿ ಸಾರಿಗೆ ನೌಕರರನ್ನು ಎತ್ತಿಕಟ್ಟಿಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಅವರೇನು ಎಲ್ಲ ಹೋರಾಟಗಳ ಕಾಂಟ್ರ್ಯಾಕ್ಟ್ ಪಡೆದಿದ್ದಾರಾ? ಸರ್ಕಾರಕ್ಕೆ ಬೆದರಿಕೆ ಹಾಕುತ್ತಿದ್ದಾರಾ? ಇಂತಹ ಆರ್ಥಿಕ ಸಂಕಷ್ಟದ ಪರಿಸ್ಥಿತಿಯಲ್ಲಿ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸಬಾರದು’ ಎಂದು ಹೇಳಿದ್ದಾರೆ.

ಉತ್ತರ ಕೊಡಿ:  ಡಾ.ಕೆ.ಸುಧಾಕರ್‌ ಅವರು, ‘ರೈತ ನಾಯಕರೆನಿಸಿರುವ ಕೋಡಿಹಳ್ಳಿ ಚಂದ್ರಶೇಖರ್‌ ಅವರಿಗೆ ಸಾರಿಗೆ ವ್ಯವಸ್ಥೆ ಹಾಗೂ ಸಾರಿಗೆ ನೌಕರರ ಸಮಸ್ಯೆಗಳ ಬಗ್ಗೆ ಅರಿವಿಲ್ಲ. ತಮಗೆ ಅರಿವಿಲ್ಲದ ವಿಷಯಗಳ ಬಗ್ಗೆ ಮೂರು ತೂರಿಸುವುದು ಎಷ್ಟುಸಮಂಜಸ ಎಂದು ಜನರು ಪ್ರಶ್ನೆ ಕೇಳುತ್ತಿದ್ದಾರೆ. ಈ ಪ್ರಶ್ನೆಗೆ ಮೊದಲು ಅವರು ಉತ್ತರ ಕೊಡಬೇಕು. ಸಾರಿಗೆ ನೌಕರರಿಗೆ ಕುಮ್ಮಕ್ಕು ನೀಡಿ ದಾರಿ ತಪ್ಪಿಸುವುದನ್ನು ನಿಲ್ಲಿಸಬೇಕು’ ಎಂದು ಹೇಳಿದ್ದಾರೆ.