ಬೆಂಗಳೂರು(ಡಿ.14):ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮುಷ್ಕರ ನಡೆಸುತ್ತಿರುವ ಸಾರಿಗೆ ನೌಕರರನ್ನು ದಿಕ್ಕು ತಪ್ಪಿಸುತ್ತಿರುವ ನಕಲಿ ನಾಯಕರಿಗೆ ತಕ್ಕ ಶಾಸ್ತಿ ಕಾದಿದೆ ಎಂದು ಕೋಡಿಹಳ್ಳಿ ಚಂದ್ರಶೇಖರ್‌ ಅವರಿಗೆ ಉಪ ಮುಖ್ಯಮಂತ್ರಿ ಡಾ. ಸಿ.ಎನ್‌.ಅಶ್ವತ್ಥನಾರಾಯಣ ಅವರು ನೇರ ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಸಾರಿಗೆ ನೌಕರ ಸಂಘಟನೆಯ ಮುಖಂಡರು, ಮುಖ್ಯಮಂತ್ರಿಗಳ ಎದುರು ಮುಷ್ಕರ ವಾಪಸ್‌ ಪಡೆಯುವುದಾಗಿ ಒಪ್ಪಿಕೊಂಡು ಹೋದ ಬಳಿಕ ವರಸೆ ಬದಲಿಸಿದ್ದು ಯಾಕೆ? ಅವರ ಹಿಂದೆ ಯಾರಿದ್ದಾರೆ ಎಂದು ಪ್ರಶ್ನಿಸಿದರು.

ಸಿಎಂ ಬಿಎಸ್ ಯಡಿಯೂರಪ್ಪಗೆ ತಿರುಗೇಟು ಕೊಟ್ಟ ಕೋಡಿಹಳ್ಳಿ ಚಂದ್ರಶೇಖರ್‌

ಕಾಣದ ಶಕ್ತಿಗಳು ನೌಕರರನ್ನು ದಾರಿ ತಪ್ಪಿಸಲಾಗುತ್ತಿದೆ. ರೈತ ನಾಯಕರ ಸೋಗಿನಲ್ಲಿದ್ದವರು ಇದ್ದಕ್ಕಿದ್ದ ಹಾಗೆ ಸಾರಿಗೆ ನೌಕರರ ಮುಖಂಡರಾಗಿದ್ದು ಹೇಗೆ? ಇದರಲ್ಲಿ ಅಡಗಿರುವ ಹಿತಾಸಕ್ತಿ ಏನು? ಮುಂದೆ ಕಾರ್ಮಿಕರನ್ನು ಬಿಟ್ಟು ಹಿಂದೆ ಯಾರೆಲ್ಲ ಆಟ ಆಡುತ್ತಿದ್ದಾರೆ? ಅವರ ದುರುದ್ದೇಶವೇನಿದೆ? ಎಂಬುದು ಎಲ್ಲರಿಗೂ ಅರ್ಥವಾಗುತ್ತಿದೆ. ಸರಕಾರಕ್ಕೂ ಈ ಬಗ್ಗೆ ಗೊತ್ತಿದೆ ಎಂದು ಕೋಡಿಹಳ್ಳಿ ಚಂದ್ರಶೇಖರ್‌ ಅವರು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯದ ಜನರು ಬಸ್‌ ಸೌಕರ್ಯವಿಲ್ಲದೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಬಿಕ್ಕಟ್ಟು ಸೃಷ್ಟಿಸುವುದು ಸರಿಯಲ್ಲ. ಮುಖ್ಯಮಂತ್ರಿಗಳು ಸಾಧ್ಯವಾಗುವ ಎಲ್ಲ ಬೇಡಿಕೆಗಳನ್ನು ಈಡೇರಿಸುವುದಾಗಿ ಸ್ಪಷ್ಟವಾಗಿ ಹೇಳಿದ್ದಾರೆ. ಮುಖ್ಯಮಂತ್ರಿಗಳ ಮಾತಿಗೆ ಓಗೊಟ್ಟು ಸಾರಿಗೆ ನೌಕರರು ಕರ್ತವ್ಯಕ್ಕೆ ಮರಳಬೇಕು. ಸಾರಿಗೆ ಸಿಬ್ಬಂದಿ ಬೇಡಿಕೆಗಳ ಬಗ್ಗೆ ಸರ್ಕಾರಕ್ಕೆ ಗಮನವಿದೆ. ಸಾರ್ವಜನಿಕರು ಇನ್ನೂ ತೊಂದರೆ ಅನುಭವಿಸುವುದನ್ನು ನೋಡಿಕೊಂಡಿರಲು ಸಾಧ್ಯವಿಲ್ಲ. ಕೂಡಲೇ ಸಾರಿಗೆ ನೌಕರರು ಕರ್ತವ್ಯ ಹಾಜರಾಗಬೇಕು ಎಂದು ಮನವಿ ಮಾಡಿದ್ದಾರೆ.