Asianet Suvarna News Asianet Suvarna News

ನಿಮ್ಮ ಹಿನ್ನೆಲೆ ಏನು?: ಸಿದ್ದುಗೆ ಯಡಿಯೂರಪ್ಪ ತಿರುಗೇಟು

ನಾನು ಆರೆಸ್ಸೆಸ್‌ ಹಿನ್ನೆಲೆಯವ ಎಂಬ ಹೆಮ್ಮೆ ಇದೆ, ಹಾಗಿದ್ರೆ ನೀವು ಯಾವ ಹಿನ್ನೆಲೆಯಿಂದ ಬಂದವ್ರು?| ಎಲ್ಲದಕ್ಕೂ ಆರೆಸ್ಸೆಸ್‌ ಎಂದು ಹೇಳುವುದು ಕಾಂಗ್ರೆಸ್‌ ಚಟ| ಕಾಂಗ್ರೆಸ್‌ ನಾಯಕರು ಎಲ್ಲದಕ್ಕೂ ಆರ್‌ಎಸ್‌ಎಸ್‌ ಎಂದು ಹೇಳಿಕೊಂಡು ತಿರುಗಾಡುವುದು ಅಭ್ಯಾಸವಾಗಿ ಬಿಟ್ಟಿದೆ| ಸಿದ್ದರಾಮಯ್ಯಗೆ ಕೇವಲ ಟೀಕೆ ಮಾಡುವುದೇ ಕೆಲಸವಾಗಿದೆ: ಬಿಎಸ್‌ವೈ|  

CM BS Yediyurappa Slam Siddaramaiah grg
Author
Bengaluru, First Published Mar 6, 2021, 12:17 PM IST

ಬೆಂಗಳೂರು(ಮಾ.06): ಆರ್‌ಎಸ್‌ಎಸ್‌ ಬಗ್ಗೆ ಮಾತನಾಡುವ ಮುನ್ನ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಯಾವ ಹಿನ್ನೆಲೆಯಿಂದ ಬಂದಿದ್ದಾರೆ ಎಂಬುದನ್ನು ತಿಳಿದುಕೊಂಡು ಮಾತನಾಡಲಿ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಕಾಂಗ್ರೆಸ್‌ ನಾಯಕರು ಎಲ್ಲದಕ್ಕೂ ಆರ್‌ಎಸ್‌ಎಸ್‌ ಎಂದು ಹೇಳಿಕೊಂಡು ತಿರುಗಾಡುವುದು ಅಭ್ಯಾಸವಾಗಿ ಬಿಟ್ಟಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಕೇವಲ ಟೀಕೆ ಮಾಡುವುದೇ ಕೆಲಸವಾಗಿದೆ. ಆರ್‌ಎಸ್‌ಎಸ್‌ ಎಂದು ಬೊಬ್ಬೆ ಹೊಡಿಯುತ್ತಾರೆ. ಈ ಸ್ಥಾನಕ್ಕೆ ಬರಲು ನಾನು ಆರ್‌ಎಸ್‌ಎಸ್‌ ಕಾರಣ. ಅದರ ಸಿದ್ಧಾಂತ ಕಲಿತಿರುವುದಕ್ಕೆ ನನಗೆ ಹೆಮ್ಮೆ ಇದೆ. ಪ್ರಧಾನಿ ನರೇಂದ್ರ ಮೋದಿ ಅವರು ಸಹ ಆರ್‌ಎಸ್‌ಎಸ್‌ನಿಂದ ಬಂದವರೆಂದು ಹೇಳಿಕೊಂಡಿದ್ದಾರೆ. ಮೊದಲು ಸಿದ್ದರಾಮಯ್ಯ ಯಾವ ಹಿನ್ನೆಲೆಯಿಂದ ಬಂದಿದ್ದಾರೆ ಎಂಬುದನ್ನು ತಿಳಿದುಕೊಳ್ಳಲಿ? ಎಂದರು.

‘ನಮ್ಮ ಪಕ್ಷದ ಬಗ್ಗೆ ಮಾತನಾಡುವ ಮೊದಲು ಅವರ ಪಕ್ಷದಲ್ಲಿನ ಹುಳುಕುಗಳನ್ನು ಮುಚ್ಚಿಕೊಳ್ಳಲಿ. ಕಾಂಗ್ರೆಸ್‌ ಪಕ್ಷವೇ ಆತಂರಿಕ ಗೊಂದಲದಲ್ಲಿದೆ. ಬೇರೆಯವರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಸಿದ್ದರಾಮಯ್ಯ ಅವರು ಪ್ರತಿಪಕ್ಷದ ನಾಯಕರಾಗಿದ್ದು, ಹಗುರವಾಗಿ ಮಾತನಾಡಬಾರದು. ಆರ್‌ಎಸ್‌ಎಸ್‌ ಬಗ್ಗೆ ಮಾತನಾಡಿದಷ್ಟು ಅದು ಬಲಿಷ್ಠವಾಗುತ್ತದೆ. ಟೀಕೆ-ಟಿಪ್ಪಣಿ ಮಾಡುವುದಕ್ಕೆ ಯಾವುದೇ ಅಭ್ಯಂತರ ಇಲ್ಲ. ಅದಕ್ಕೂ ಇತಿಮಿತಿ ಇರಬೇಕಲ್ಲವೇ?’ ಎಂದು ಖಾರವಾಗಿ ನುಡಿದರು.

ಮೈಸೂರು ಮೇಯರ್ ದಂಗಲ್: ಕುತೂಹಲ ಮೂಡಿಸಿದ ಮಧು ಯಷ್ಕಿ ಗೌಡ ವರದಿ

‘ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಡೀ ದೇಶವೇ ಮೆಚ್ಚಿದೆ. ಅವರು (ಮೋದಿ) ಗಡ್ಡ ಬಿಟ್ಟಿದ್ದಾರೆ, ಹಾಗೆ ಹೀಗೆ ಎಂದು ಹೇಳುತ್ತಾರೆ. ಪ್ರತಿಪಕ್ಷದ ನಾಯಕರು ಹೇಳುವ ಮಾತು ಇಡೀ ಕಾಂಗ್ರೆಸ್‌ ಪಕ್ಷ ಹೇಳಿದಂತಾಗುತ್ತದೆ. ಉತ್ತಮ ನಡೆದುಕೊಳ್ಳಬೇಕು’ ಎಂದು ಮುಖ್ಯಮಂತ್ರಿಗಳು ಸಲಹೆ ನೀಡಿದರು.

ಸದನದಲ್ಲಿ ಅಶಿಸ್ತಿನಿಂದ ವರ್ತನೆ ಮಾಡಿದ್ದಕ್ಕೆ ಕಾಂಗ್ರೆಸ್‌ ಶಾಸಕ ಬಿ.ಕೆ.ಸಂಗಮೇಶ್‌ ಅವರನ್ನು ಸಭಾಧ್ಯಕ್ಷರು ಅಮಾನತು ಮಾಡಿದ್ದಾರೆ. ಸಂಗಮೇಶ್‌ ಅವರಿಗೆ ಅನ್ಯಾಯವಾಗಿದ್ದರೆ ಸದನದಲ್ಲಿ ಚರ್ಚೆ ನಡೆಸಲಿ, ಅದನ್ನು ಬಿಟ್ಟು ಅನುಚಿತವಾಗಿ ವರ್ತಿಸುವುದು ಸರಿಯಲ್ಲ ಎಂದ ಯಡಿಯೂರಪ್ಪ, ಒಂದು ದೇಶ-ಒಂದು ಚುನಾವಣೆ ವಿಚಾರ ಸಂಬಂಧ ಕಾಂಗ್ರೆಸ್‌ನ 19 ಸದಸ್ಯರು ಹೆಸರು ನೀಡಿದ್ದಾರೆ. ನಂತರ ಏಕಾಏಕಿ ವಿರೋಧಿಸುವುದು ಸಮಂಜಸವಲ್ಲ. ರಮೇಶ್‌ ಕುಮಾರ್‌ ಅವರು ಸಭಾಧ್ಯಕ್ಷರಾಗಿ ಕೆಲಸ ಮಾಡಿದ್ದು, ಹೇಗೆ ವರ್ತಿಸಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಕಿಡಿಕಾರಿದರು.
 

Follow Us:
Download App:
  • android
  • ios